ಬೆಂಗಳೂರಿನ ಖ್ಯಾತ ‘’ರಾವ್ಸ್ ಅಕಾಡೆಮಿ ಆಫ್ ಡಾನ್ಸ್‘’ ಸಂಸ್ಥೆಯ ಸಮರ್ಥಗುರು ಭರತನಾಟ್ಯ ವಿದುಷಿ ಶುಭ ಪ್ರಹ್ಲಾದ ರಾವ್ ನುರಿತ ಗರಡಿಯಲ್ಲಿ ತಯಾರಾದ ಐವರು ನೃತ್ಯವಿದ್ಯಾರ್ಥಿಗಳು ತಮ್ಮ ಕಲೆಯನ್ನು ಪ್ರದರ್ಶಿಸಲು ‘’ಗೆಜ್ಜೆಪೂಜೆ’’ಗೆ ಸನ್ನದ್ಧರಾಗಿದ್ದಾರೆ. ಈಗಾಗಲೇ ನೂರಾರು ಮಕ್ಕಳಿಗೆ ಬದ್ಧತೆಯಿಂದ ಉತಮ ನಾಟ್ಯಶಿಕ್ಷಣ ನೀಡುತ್ತ ಬಂದಿರುವ ಶುಭಾ ಉತ್ತಮ ಭರತನಾಟ್ಯ ಕಲಾವಿದೆ. ವಿಶಿಷ್ಟ ನೃತ್ಯ ಸಂಯೋಜನೆಗಳಿಂದ ಗಮನ ಸೆಳೆದ ಇವರು ಪ್ರತಿಬಾರಿಯೂ ವಿದ್ಯಾರ್ಥಿಗಳ ಗೆಜ್ಜೆಪೂಜೆಯ ನೈವೇದ್ಯವಾಗಿ ಹೊಸ ಅಷ್ಟೇ ವಿಶಿಷ್ಟ ಕೃತಿಗಳಿಂದ, ಅದರ ರಸಭಾವವನ್ನು ಎತ್ತಿ ಹಿಡಿವ ಸುಮನೋಹರ ನೃತ್ಯ ಸಂಯೋಜನೆಗಳಿಂದ ಕಾರ್ಯಕ್ರಮದ ರಂಗೇರಿಸುವುದು ಪರಿಪಾಠ. ಅದರಂತೆ ಈ ಬಾರಿ ಅವರ ನವ ಪ್ರಯೋಗದ ಕೃತಿಗಳು ರಸಿಕರ ಆಕರ್ಷಣೆಯಾಗಲಿದೆ.
ಶ್ರೀಮತಿ ವಿಜಯ ರಾವೂರ್ ಮತ್ತು ಗೀತಾ ಅವರ ಪುತ್ರಿಯಾದ ಅಮೃತಾ, ಶ್ರೀ ಸುಧೀರ್ ಬಾಬು ಮತ್ತು ಲಕ್ಷ್ಮೀ ಅವರ ಪುತ್ರಿಯಾದ ದಿಶಾ, ಶ್ರೀ ಮಂಜುನಾಥ್ ಮತ್ತು ಅಂಬುಜಾಕ್ಷಿ ಅವರ ಪುತ್ರಿಯಾದ ಅನುಷ್ಕ, ಶ್ರೀ ಅಶೋಕ್ ರಾಜ್-ನಿರ್ಮಲಾ ದಂಪತಿಗಳ ಮಗಳಾದ ಕಿರಣ್ಮಯಿ ಮತ್ತು ಶ್ರೀಕಾಂತ್ – ದೀಪ್ತಿ ಅವರ ಪುತ್ರಿಯಾದ ಶ್ರೀನಿಧಿ ಇದೇ ತಿಂಗಳ 30 ಶನಿವಾರದಂದು, ಸಂಜೆ 5.45 ಗಂಟೆಗೆ ಜಯನಗರದ ಎಂಟನೆಯ ಬ್ಲಾಕಿನಲ್ಲಿರುವ ಜೆ.ಎಸ್.ಎಸ್. ರಂಗಮಂದಿರದಲ್ಲಿ ತಮ್ಮ ಗೆಜ್ಜೆಯ ನಾದವನ್ನು ನಿನದಿಸಲಿದ್ದಾರೆ. ಈ ಮುದ್ದಾದ ಕಲಾವಿದೆಯರ ಸುಮನೋಹರ ನೃತ್ಯ ಸೊಬಗನ್ನು ಕಣ್ತುಂಬಿಕೊಳ್ಳಲು ಸರ್ವರಿಗೂ ಸುಸ್ವಾಗತ.