Image default
Dance Reviews

ಸಾಮರಸ್ಯದ ಸೌಂದರ್ಯ ಬೀರಿದ ಸಂಯುಕ್ತ-ಶ್ರುತಿಯ ವರ್ಚಸ್ವೀ ನೃತ್ಯ

ವೇದಿಕೆಯ ಮೇಲೆ ಏಕವ್ಯಕ್ತಿ ನೃತ್ಯ ಪ್ರದರ್ಶನ ನಡೆಯುವಾಗ ಕಲಾರಸಿಕರ ಗಮನವೆಲ್ಲಾ ಆಕೆಯ ಮೇಲೆಯೇ ಕೇಂದ್ರೀಕೃತವಾಗಿರುವುದು ಸಾಮಾನ್ಯ. ಆದರೆ ರಂಗದ ಮೇಲೆ ಇಬ್ಬರು ಜೋಡಿಯಾಗಿ ನೃತ್ತಾಭಿನಯಗಳನ್ನು ನಿರೂಪಿಸುವಾಗ ಇಬ್ಬರು ಕಲಾವಿದೆಯರನ್ನೂ ಗಮನಿಸುವುದು ಅನಿವಾರ್ಯವಾಗುತ್ತದೆ. ಇಬ್ಬರೂ ಒಬ್ಬರಿಗೊಬ್ಬರು ಪೂರಕವಾಗಿ,  ಕಣ್ಣೋಟಗಳನ್ನು ವಿನಿಮಯಗೊಳಿಸಿಕೊಳ್ಳುತ್ತ, ನಗುಮೊಗದ ಆನಂದ ಮಿನುಗಿಸುತ್ತ, ಪರಸ್ಪರ ಚಲನೆ-ಆಂಗಿಕಗಳನ್ನು ಪೂರಕವಾಗಿ ಪೋಷಿಸುತ್ತ ಸಾಮರಸ್ಯದಿಂದ ನರ್ತಿಸುವಾಗ ಅದರ ಚೆಂದವೇ ಬೇರೆ. ಅಂಥ ಒಂದು ಸುಂದರ ನೋಟ ಇತ್ತೀಚಿಗೆ ಕಲಾದ್ವಾರಕ ಮಂದಿರದಲ್ಲಿ ನಡೆದ ಶ್ರುತಿ-ಸಂಯುಕ್ತ ಅವರ ಭರತನಾಟ್ಯದ ಜೋಡಿ ರಂಗಪ್ರವೇಶದಲ್ಲಿ ಪ್ರಕಟವಾಯಿತು. ಅವರ ಉತ್ಸಾಹಭರಿತ ನರ್ತನಾಲಹರಿಗೆ ಅವರ ಗುರುಗಳಾದ ಲತಾ ರಮೇಶ್ ಅವರ ಬದ್ಧತೆಯ ತರಬೇತಿಯ ಪರಿಶ್ರಮ  ಎದ್ದು ಕಂಡಿತು. ಜೊತೆಗೆ ಸುಲಲಿತವಾಗಿ ಅವರು ನಡೆಸಿಕೊಡುತ್ತಿದ್ದ ನಟುವಾಂಗದ ಧಾಟಿಯಿಂದ ಶಿಷ್ಯರು ಪ್ರೇರಣೆಗೊಂಡಿದ್ದರು.

ಅಮೃತವರ್ಷಿಣಿ ರಾಗ-ಆದಿತಾಳ ( ರಚನೆ-ಎಂ. ಬಾಲಮುರಳೀಕೃಷ್ಣ) ದ ‘ಪುಷ್ಪಾಂಜಲಿ’ಯಿಂದ ಪ್ರಸ್ತುತಿ ಶುಭಾರಂಭಗೊಂಡಿತು. ದೃಷ್ಟಿ ಭೇದ-ಗ್ರೀವಭೇದಗಳೊಂದಿಗೆ ಲವಲವಿಕೆಯಿಂದ ಸಾಗಿದ ನೃತ್ತನಮನ-ಗಮನ ದೇವತಾ ಪ್ರಾರ್ಥನೆಯನ್ನು ಭಕ್ತಿಪೂರ್ವಕ ಸಲ್ಲಿಸಿತು. ತ್ರಿಶ್ರ ಜಾತಿ-ಏಕತಾಳದ ‘ಅಲ್ಲರಿಪು’ ಅಂಗಶುದ್ಧತೆಯನ್ನು ಕಾಪಾಡಿಕೊಂಡರೆ, ಪ್ರಥಮ ಪೂಜಿತ ‘ಗಣೇಶ ವಂದನೆ’( ಆರಭಿ ರಾಗ-ಆದಿತಾಳ) -ಆತನ ವಿವಿಧ ಆಕಾರ-ಸ್ವರೂಪ -ಮಹಿಮೆಗಳನ್ನು ಎತ್ತಿ ಹಿಡಿಯುವಲ್ಲಿ ಸಫಲವಾಯಿತು.

ಅನಂತರ ಶ್ರೀ ಹೆಚ್.ಆರ್. ಕೇಶವಮೂರ್ತಿ ವಿರಚಿತ ‘ಶಬ್ದಂ’ (ರಾಗಮಾಲಿಕೆ-ಮಿಶ್ರಛಾಪು ತಾಳ) ‘ಅಧರ ಸ್ಪರ್ಶದಿ ಮಧುರ ಗಾನದ ಸುಧೆಯ ಸುರಿಸುತ ..’- ಒಂದು ಅಪರೂಪದ ಕೃತಿ. ಶ್ರೀಕೃಷ್ಣನ ಲೀಲಾವಿನೋದಗಳನ್ನು ಸುಂದರವಾಗಿ ಕಟ್ಟಿಕೊಡುವ ವೈಶಿಷ್ಟ್ಯ ಹೊಂದಿದೆ.  ಕೃಷ್ಣನ ಮಾಂತ್ರಿಕಶಕ್ತಿಯುಳ್ಳ ಮುರಳೀಗಾನಕ್ಕೆ ಮನಸೋಲದವರಾರು? ಇಡೀ ಗೋಪಿಕಾ ಸಮೂಹ ತಮ್ಮ ದಿನನಿತ್ಯದ ಕೆಲಸ-ಕಾರ್ಯಗಳನ್ನೆಲ್ಲ ಮರೆತು ಮಂತ್ರಮುಗ್ಧರಾಗುವ ಸನ್ನಿವೇಶವನ್ನು ನರ್ತಕಿಯರು ತನ್ಮಯತೆಯಿಂದ ಮನೋಹರವಾಗಿ ಸಾದರಪಡಿಸಿದರು.

ಮುಂದಿನ ಪ್ರಧಾನ ಹಂತ ‘ವರ್ಣ’. ಕಲಾವಿದರ ದೇಹ ಸಾಮರ್ಥ್ಯ, ಸ್ಮರಣಶಕ್ತಿ, ತಾಳ-ಲಯಜ್ಞಾನಕ್ಕೆ ಕನ್ನಡಿ ಹಿಡಿಯುವ ಸವಾಲು ನೀಡುವ ಕ್ಲಿಷ್ಟಭಾಗ. ನೃತ್ತ ಅಭಿನಯಗಳೆರಡಕ್ಕೂ ಸಮಾನ ಪ್ರಾಧಾನ್ಯ. ನೃತ್ಯದ ವ್ಯಾಕರಣದ ಎಲ್ಲ ಆಯಾಮಗಳನ್ನೂ ಪ್ರದರ್ಶಿಸಲು ಅವಕಾಶವಿರುವ ಮುಖ್ಯವಾದ ಪ್ರಸ್ತುತಿ. ‘ವೇಲನೈ ಪೊಯ್  ಸೊಲ್ಲಡಿ…’ -ಪದವರ್ಣ (ರಚನೆ ಟಿ. ಸೇತುರಾಮನ್ ವಾಚಸ್ಪತಿ ರಾಗ- ಆದಿತಾಳ) ವನ್ನು ಕಲಾವಿದೆಯರು ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದರು. ತಿರುಚೆಂಡೂರಿನ ಅರಸ, ತನ್ನ ಮನಿದಿನಿಯ ಒಡೆಯ ಮುರುಗನ ಅಗಲಿಕೆಯಿಂದ ನಾಯಿಕಾ ವ್ಯಾಕುಳಲಾಗಿದ್ದಾಳೆ. ವಿರಹತಪ್ತ ನಾಯಿಕೆ, ತನ್ನ ಸಖಿಯ ಮುಂದೆ ತನ್ನ ಮನದಳಲನ್ನು ತೋಡಿಕೊಳ್ಳುತ್ತ, ಅವನ ನೆನಪಿನ ಬಾಧೆಯನ್ನು ಸಹಿಸೆ ಎಂದು ತನ್ನ ಪ್ರೇಮಿ ಮುರುಗನನ್ನು ಮಾವಿನ ತೋಪಿಗೆ ಕರೆತಾರೆ ಎಂದು ಅನುನಯದಿಂದ ಬೇಡುತ್ತಿದ್ದಾಳೆ. ತನ್ನ ವಿರಹವೇದನೆಯನ್ನು, ಅವನಿಲ್ಲದ ಜಗತ್ತಿನಲ್ಲಿ ಮೂಡಿರುವ ಅನಾಸಕ್ತಿಯನ್ನು ಆಕೆ ನಾನಾ ಬಗೆಯಲ್ಲಿ ತೋಡಿಕೊಳ್ಳುತ್ತಿದ್ದಾಳೆ. ವಿಪ್ರಲಂಭ ಶೃಂಗಾರದ ಭಾವನೆಗಳನ್ನು ಕಲಾವಿದೆಯರು ಸಮರ್ಥವಾಗಿ ಅಭಿನಯಿಸಿ ತಮ್ಮ ಅಭಿನಯ ಪ್ರಾವೀಣ್ಯವನ್ನು ತೋರಿದರು.

ನಡುನಡುವೆ ಕಾಣಿಸಿಕೊಂಡ ನವನವೀನ ನೃತ್ತಗಳ ಸಾಕಾರದಲ್ಲಿ ಸಮಾನ ಪರಿಣತಿ ತೋರಿದರು. ತಾಳ-ಲಯಗಳನ್ವಯದ ಪಾದಭೇದಗಳಲ್ಲಿ ಚೆಲುವನ್ನು, ನವಿರು ಚಲನೆ-ರಂಗಾಕ್ರಮಣದಲ್ಲಿ ರಮ್ಯತೆಯನ್ನು, ಆಂಗಿಕಾಭಿನಯದಲ್ಲಿ ಮೋಹಕತೆಯನ್ನು ಹೊರಸೂಸಿದರು. ವರ್ಣದಂಥ ದೀರ್ಘಬಂಧವನ್ನು ಅಚ್ಚುಕಟ್ಟಾಗಿ, ಅಂಗಶುದ್ಧವಾಗಿ ಪ್ರಸ್ತುತಪಡಿಸುವಲ್ಲಿ ಕನ್ಯಾದ್ವರು ಯಶಸ್ವಿಯಾದರು.

ಪ್ರಸ್ತುತಿಯ ಎರಡನೆಯ ಭಾಗದಲ್ಲಿ ಕಲಾವಿದೆಯರು ಮೈಚಳಿ ಬಿಟ್ಟು ಲಹರಿಯಿಂದ ನರ್ತಿಸಿದರು. ‘ಪದಂ’- ಅಭಿನಯಕ್ಕೆ ಹೆಚ್ಚು ಒತ್ತುಕೊಡುವ ಕೃತಿಗಳಾಗಿರುತ್ತವೆ. ಮಂದಗತಿಯಲ್ಲಿ ಸಾಗುವ ಕೃತಿಯಲ್ಲಿ ಭಾವಗಳನ್ನು ಸಮೃದ್ಧವಾಗಿ ಅಭಿವ್ಯಕ್ತಿಸುವ ಅವಕಾಶಗಳಿರುತ್ತವೆ. ಅಷ್ಟನಾಯಿಕಾ- ಎಂಟು ಬಗೆಯ ನಾಯಿಕೆಯರ ಮನಸ್ಥಿತಿಗಳನ್ನು ಬಿಂಬಿಸುವ, ನಾಯಕನೋಡನಾಟದ ಬಾಂಧವ್ಯ- ಸಂಬಂಧದ , ಎಂಟು ಅವಸ್ಥೆ- ಮನಸ್ಥಿತಿಗಳಿಗೆ ರೂಪಕವಾಗಿ ಒದಗುವ ವಿಶಿಷ್ಟ ಪ್ರಕಾರ.

ಮೂವನಲ್ಲೂರು ಸಭಾಪತಿ ಶಿವನ ವಿರಚಿತ  ‘ದಾರಿಜೂಚು ….’ –(ರಾಗ- ಶಂಕರಾಭರಣ, ಮಿಶ್ರಚಾಪು ತಾಳ) ಎಳೆ ವಯಸ್ಸಿನ ಪ್ರಣಯಿನಿ, ತನ್ನ ಇನಿಯನ ದಾರಿಯನ್ನು ಕಾತರದಿಂದ ಕಾಯುತ್ತ, ನಿರಾಸೆಗೊಳ್ಳುವ ವಾಸವಸಜ್ಜಿಕಾ ನಾಯಿಕಾ ಭಾವನೆಯ ‘ಪದಂ’ ಅನ್ನು ಶ್ರುತಿ, ತನ್ನ ನವಿರು ಆಂಗಿಕಾಭಿನಯದಿಂದ, ಸುಂದರ  ಭಾವಪೂರಿತ ಅಭಿನಯದಿಂದ ಸಾಕಾರಗೊಳಿಸಿದಳು. ಮುಂದೆ- ಇಬ್ಬರು ಕಲಾವಿದೆಯರು ಕಮಲಮನೋಹರಿ ರಾಗ-ಆದಿತಾಳದಲ್ಲಿ ಶ್ರೀ ಮುತ್ತುಸ್ವಾಮಿ ದೀಕ್ಷಿತರು ರಚಿಸಿದ ದೇವಿ ಕಾಮಾಕ್ಷಿಯ ರೂಪ-ಮಹಿಮೆಗಳನ್ನು ಬಣ್ಣಿಸುವ ‘ಕಂಜದಳಾಯತಾಕ್ಷಿ ಕಾಮಾಕ್ಷಿ…’ ದೈವೀಕ ಕೃತಿಯನ್ನು ಭಕ್ತಿಯುತವಾಗಿ ನಿರೂಪಿಸಿದರು. ಅಭಿವ್ಯಕ್ತವಾದ ಹರಿತವಾದ ಕಲಾತ್ಮಕ ನೃತ್ತಗಳು, ಸುಮನೋಹರ ಭಂಗಿಗಳು ಗಮನ ಸೆಳೆದವು.

ಅನಂತರ- ‘ಪದಂ’ನ ಕೊಂಚ ಲಘುವಾದ ಬಗೆ ಎನ್ನಬಹುದಾದ ‘ಜಾವಳಿ’ಯು  ಆಡುಮಾತಿನ ಸಾಹಿತ್ಯ ಹೊಂದಿದ್ದು, ಆಕರ್ಷಕ ಸಂಗೀತದಿಂದೊಡಗೂಡಿದ್ದು ಲೋಕಧರ್ಮೀಯ ರೀತಿಯಲ್ಲಿ ಅಭಿನಯಿಸಲ್ಪಡುವಂಥದ್ದು. ಕಲಾವಿದೆ ಸಂಯುಕ್ತ,  ವಿಪ್ರಲಬ್ಧ ನಾಯಿಕೆಯ ಭಾವವನ್ನು ಕಟ್ಟಿಕೊಡುವ ಆಕೆಯ ನೋವುಂಡ ಮನದ ವಿವಿಧ ತುಮುಲಗಳನ್ನು ಹೊರಗೆಡಹುವ ‘ಜಾವಳಿ’ಯನ್ನು ಪರಿಣಾಮಕಾರಿಯಾಗಿ ನಿರೂಪಿಸಿದಳು.  ತಾನು ಅತಿಯಾಗಿ ನಂಬಿದ್ದ ತನ್ನ ನಾಯಕ ಪಾರ್ಥಸಾರಥಿ, ತನ್ನ ಒಲವಿಗೆ ದ್ರೋಹ ಬಗೆದುದನ್ನು ತನ್ನ ಸಖಿಗೆ ‘ ವಾರಿಜಮುಖಿ….ನಿಜವ ತಿಳಿದೆನೆ’ ಎಂದು ಪಶ್ಚಾತ್ತಾಪ-ಖಿನ್ನತೆಯ ಭಾವದಲ್ಲಿ ಹತಾಶಳಾಗಿ, ತನ್ನ ದುಃಖವನ್ನು ಸಖಿಯ ಮುಂದೆ ಅಭಿವ್ಯಕ್ತಿಸುವಳು. ಶ್ರೀ ಪಾರ್ಥಸಾರಥಿ ವಿರಚಿತ ಈ ಜಾವಳಿ ರಾಗ ಕಮಾಚ್ ಮತ್ತು ರೂಪಕತಾಳದಲ್ಲಿತ್ತು.   

ಅಂತ್ಯದಲ್ಲಿ ಬಾಲಮುರಳೀ ಕೃಷ್ಣ ರಚಿಸಿದ ಕದನಕುತೂಹಲ ರಾಗದ ಕುಣಿಸುವ ಲಯದ ‘ತಿಲ್ಲಾನ’ವನ್ನು ಕಲಾವಿದೆಯರು ಅಷ್ಟೇ ಲವಲವಿಕೆ, ಚೈತನ್ಯಪೂರ್ಣವಾಗಿ ಮನೋಲ್ಲಾಸವಾಗಿ ನಿರೂಪಿಸಿದರು.  ದಶಾವತಾರದ ಮಂಗಳ ಮನನೀಯವಾಗಿತ್ತು.

ವಾದ್ಯ ಸಹಕಾರದಲ್ಲಿ ಸೊಗಸಾದ ಗಾಯನ-ಭಾರತೀ ವೇಣುಗೋಪಾಲ್, ಮೃದಂಗ- ಜನಾರ್ಧನ್ ರಾವ್, ಪಿಟೀಲು- ಹೇಮಂತ್ ಕುಮಾರ್ ಮತ್ತು ಕೊಳಲು- ನರಸಿಂಹ ಮೂರ್ತಿ, ನಟುವಾಂಗ- ಗುರು ಲತಾ ರಮೇಶ್ ನೃತ್ಯದ  ಚೈತನ್ಯವಾಗಿದ್ದರು.

                        ******************                    

Related posts

ಭಾವ ಸಾಗರದ ಸುಂದರ ನೃತ್ಯ ಸಂಹಿತೆ

YK Sandhya Sharma

ಆಹ್ಲಾದದ ಭಾವದುಂಬಿದ ಭರತನಾಟ್ಯದ ಮೆರುಗು

YK Sandhya Sharma

ಅಪೂರ್ವ ಭಂಗಿಗಳ ಚೇತೋಹಾರಿ ನೃತ್ತಾಭಿನಯ

YK Sandhya Sharma

Leave a Comment

This site uses Akismet to reduce spam. Learn how your comment data is processed.