Image default
Dance Reviews

ಅಚ್ಚುಕಟ್ಟಾದ  ಕೃತಿಯ ಸುಂದರ ನರ್ತನ

ಈ ನಡುವೆ, ಕಲಾರಸಿಕರ ಸದಭಿರುಚಿಯನ್ನು ಉನ್ನತೀಕರಿಸುತ್ತಿರುವ ಶಾಸ್ತ್ರೀಯ ನೃತ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಾ ನಗರದಲ್ಲಿ ಸಾಂಸ್ಕೃತಿಕ ಕಲರವದ ಜನಪ್ರಿಯತೆಯನ್ನು ಪಸರಿಸುತ್ತಿದೆ ಎಂಬುದು ವಾಸ್ತವ ಸಂಗತಿ. ಈ ಪೈಕಿ ಇತ್ತೀಚಿಗೆ ಮಲ್ಲೇಶ್ವರದ ‘ಸೇವಾಸದನ’ದಲ್ಲಿ ನಡೆದ ಉದಯೋನ್ಮುಖ ಕಲಾವಿದೆ ಕೃತಿ ಕಣ್ಣನ್ ವಿದ್ಯುಕ್ತ ರಂಗಪ್ರವೇಶ ಶಾಸ್ತ್ರೀಯ ಚೌಕಟ್ಟಿನಲ್ಲಿ ಮೂಡಿ ಬಂದ ಭರತನಾಟ್ಯದ ಸೊಗಡು  ತನ್ನದೇ ಆದ ಸೌಂದರ್ಯದಿಂದ ನೋಡುಗರನ್ನು ಸೆಳೆಯಿತು. ಉತ್ತಮ ಆಯ್ಕೆಯ ಕೃತಿಗಳಿಂದ ವೈವಿಧ್ಯಪೂರ್ಣ ಆಯಾಮಗಳಿಂದ ಗಮನಾರ್ಹವೆನಿಸಿತು.

 ‘ನಾಟ್ಯ ಭೈರವಿ’ ನೃತ್ಯಶಾಲೆಯ ನಾಟ್ಯಗುರು ವಿದುಷಿ. ಮಂಜು ಭೈರವಿ ಪ್ರದೀಪ್ ಅವರ ನುರಿತ ಗರಡಿಯಲ್ಲಿ ತರಬೇತಿಗೊಂಡ ಕಲಾವಿದೆ ಕೃತಿ,  ಗುರುಗಳು ಹೇಳಿಕೊಟ್ಟದ್ದನ್ನು ಅಚ್ಚುಕಟ್ಟಾಗಿ ನಿರೂಪಿಸಿದಳು. ಮುಮ್ಮೇಳದಲ್ಲಿ ಗಾಯನ ದೀಪ್ತಿ ಶ್ರೀನಾಥ್, ಕೊಳಲು- ನಿತಿನ್ ಅಮ್ಮಣ್ಣಯ್ಯ, ಮೃದಂಗ- ಗಿರಿಧರ್ ಮತ್ತು ನಿಖರ ಧ್ವನಿಯ ಖಚಿತ ನಟುವಾಂಗ ನೀಡಿದ ಗುರು ಮಂಜು ಭೈರವಿ ಅವರುಗಳ ಪ್ರಧಾನ ಸಹಕಾರದಿಂದ ನೃತ್ಯ ಪ್ರದರ್ಶನಕ್ಕೆ ಸುವರ್ಣ ಪ್ರಭಾವಳಿ ದೊರೆಯಿತು.

ಶುಭಾರಂಭದಲ್ಲಿ ಸಾಂಪ್ರದಾಯಕ ‘ಪುಷ್ಪಾಂಜಲಿ’ (ರಾಗ-ನಾಟ, ಆದಿತಾಳ) – ದೇವಾನು ದೇವತೆಗಳಿಗೆ, ಗುರು ಹಿರಿಯರು-ಪ್ರೇಕ್ಷಕರಿಗೆ ಅಭಿವಂದನೆಗಳನ್ನು ಸಲ್ಲಿಸಿ, ತನ್ನ ಪದಾಘಾತವನ್ನು ಮನ್ನಿಸುವಂತೆ ಭೂದೇವಿಗೆ ಪ್ರಾರ್ಥನೆ ಸಲ್ಲಿಸಿ ಹಲವು ದೈಹಿಕ ವಿನ್ಯಾಸಗಳನ್ನು ಸುಂದರವಾಗಿ ಪ್ರದರ್ಶಿಸಿದಳು. ಅನಂತರ- ಮಹೇಶ್ವರ ಸ್ವಾಮಿಯವರು ರಚಿಸಿದ ‘ವಿಘ್ನಧ್ವಂಸಕಂ ವಿನಾಯಕಂ ಭಜಾಮ್ಯಹಂ …’ ಎಂದು ಸಿದ್ಧಿ ಬುದ್ಧಿ ಪ್ರದಾಯಕ, ಪ್ರಥಮ ವಂದಿತ ವಿನಾಯಕನ ವಿಶಿಷ್ಟ ರೂಪ-ಮಹಿಮೆಗಳನ್ನು ಬಣ್ಣಿಸುವ ‘ಗಣೇಶ ಸ್ತುತಿ’ (ವೃಷಭ ಪ್ರಯ ರಾಗ- ಆದಿತಾಳ) ಯನ್ನು ಸಾದರಪಡಿಸಿದಳು. ಕಲಾವಿದೆ, ಕಡೆಯಲ್ಲಿ ಮೈದೋರಿದ ಸುಮನೋಹರ ಭಂಗಿ ಆಕರ್ಷವಾಗಿತ್ತು.

ತೋಡಿ ರಾಗ, ಮಿಶ್ರಚಾಪು ತಾಳದ ಲಯಪ್ರಧಾನ ಭಾಗವಾದ ‘ಜತಿಸ್ವರ’ವನ್ನು ನೃತ್ತಗಳಾಮೋದದಲ್ಲಿ  ಲವಲವಿಕೆಯಿಂದ ಪ್ರಸ್ತುತಪಡಿಸಿದಳು. ಗುರು ಮಂಜು ಭೈರವಿಯವರ ಸ್ಫುಟವಾದ-ಅಸ್ಖಲಿತ ನಟುವಾಂಗ ಅವಳ ಸರಾಗವಾದ ಹೆಜ್ಜೆಗಳಿಗೆ ಉತ್ತೇಜನಕರವಾಗಿತ್ತು.

ಮುಂದೆ-ಶ್ರೀಮತಿ ದ್ವಾರಕೀ ಕೃಷ್ಣಸ್ವಾಮಿ ಅವರ ರಚನೆಯ ‘ಶಿವ ಕೃತಿ’(ನಾಗಸ್ವರಾವಳಿ ರಾಗ- ಆದಿತಾಳ)ಯಲ್ಲಿ ‘ಆನಂದ ತಾಂಡವೇಶ್ವರನ  ಕಂಡೆ ಇಂದು ’ ಎಂದು ಆನಂದತಾಂಡವದಲ್ಲಿ ತಲ್ಲೀನನಾದ ಶಿವನನ್ನು ಕಂಡು ವಾಗ್ಗೇಯಕಾರ್ತಿ ಅಚ್ಚರಿ ವ್ಯಕ್ತಪಡಿಸುತ್ತಾರೆ. ಅವನ ಸುಂದರ-ವಿಶಿಷ್ಟ ಅಲಂಕಾರ, ವಿವಿಧ ಸ್ವರೂಪಗಳನ್ನು ಕಂಡ ಆನಂದದಿಂದ, ಚಿದಂಬರದ ಕನಕಾಚಲ ಸಭಾಂಗಣದಲ್ಲಿ ಅನುಪಮವಾಗಿ ನರ್ತಿಸಿ ನವರಸಗಳನ್ನು ಸ್ಫುರಿಸುತ್ತಿರುವ ಶಿವನನ್ನು ಕಂಡು ಮೈಮರೆತು ಆವೇಶದಿಂದ ನರ್ತಿಸುತ್ತಾಳೆ ಕಲಾವಿದೆ. ಕಲಾವಿದೆಯ ಶಿವಾಷ್ಟಕದ ಮನೋಹರ ಭಂಗಿಗಳು, ಮಂಡಿ  ಅಡವು, ಆಕಾಶಚಾರಿಗಳು ಶಿವನನ್ನು ಸಾಕ್ಷಾತ್ಕರಿಸಿದವು.

ಪ್ರಸ್ತುತಿಯ ಕೇಂದ್ರ ಕೃತಿಯಾಗಿ ‘ವರ್ಣಗಳು’ ನಿರೂಪಿತವಾಗುತ್ತವೆ. ಉತ್ಕೃಷ್ಟ ಶಿಕ್ಷಣ ಪಡೆದರೆ ಮಾತ್ರ ಈ ದೀರ್ಘ ಬಂಧವನ್ನು ಸಮರ್ಥವಾಗಿ ಪ್ರಸ್ತುತಪಡಿಸಲು ಸಾಧ್ಯ. ಕಲಾವಿದರಿಗೆ ಅಗಾಧ ಸ್ಮರಣ ಶಕ್ತಿ, ತಾಳ-ಲಯಜ್ಞಾನಗಳನ್ನು ನಿರೀಕ್ಷಿಸುವ ಈ ನೃತ್ತ-ಅಭಿನಯಗಳ ಸಂಗಮವಾದ ಕೃತಿ ಒಂದು ಸವಾಲೇ ಸರಿ.

 ತಂಜಾವೂರು ಸಹೋದರರಲ್ಲಿ ಒಬ್ಬರಾದ ಶಿವಾನಂದರು ತೋಡಿ ರಾಗ- ಆದಿತಾಳದಲ್ಲಿ ರಚಿಸಿದ ‘ಮೋಹನಾಗಿರಿ ಕೊಂಡೆ ಕಂಡೆನ್ ಸ್ವಾಮಿ …’ ಎಂಬ ಸಾಲುಗಳಿಂದ ವಿಜ್ರುಂಭಿಸುವ ‘ವರ್ಣ’ ಪ್ರಸ್ತುತಪಡಿಸಿದಳು ಕೃತಿ . ಮನ್ನಾರ ಗುಡಿಯಲ್ಲಿ ನೆಲೆಗೊಂಡಿರುವ ವಾಸುದೇವ-ರಾಜಗೋಪಾಲನಲ್ಲಿ ಅನುರಕ್ತಳಾಗಿದ್ದಾಳೆ ನಾಯಕಿ. ಅವನ ಸಾಮೀಪ್ಯವಿಲ್ಲದೆ ಸೊರಗಿರುವ,  ಶೃಂಗಾರ ಭಾವನೆಗಳಿಂದ ಜರ್ಜರಿತಳಾಗಿರುವ ವಿರಹೋತ್ಖಂಠಿತ ನಾಯಕಿಯ ನಾನಾ ಬಗೆಯ ವಿರಹವೇದನೆಗಳನ್ನು ಕಲಾವಿದೆ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದಳು. ಝರಿಯಂತೆ ಭೋರ್ಗರೆದ ಸ್ಫುಟವಾದ ನಟುವಾಂಗದ ಜತಿಗಳಿಗೆ ಕೃತಿ, ನೃತ್ತಗಳಿಗೆ ಸಮರ್ಪಕವಾಗಿ ಹೆಜ್ಜೆ ಜೋಡಿಸಿದಳು.  

ಅನಂತರ- ರಾಗಮಾಲಿಕೆ-ಆದಿತಾಳದ ‘ದೇವಿ ಕೃತಿ’ಯನ್ನು ದೈವೀಕ ಆಯಾಮದಲ್ಲಿ ನಿರೂಪಿಸಿದಳು. ನವಾವರ್ಣಗಳ ನಡುವೆ ನರ್ತಿಸುವ ಶಿವಾನಿ ಶ್ರೀ ಚಕ್ರೇಶ್ವರಿಯನ್ನು ಭಕ್ತಿಪೂರ್ವಕವಾಗಿ ಆರಾಧಿಸಿ, ಶಾರ್ದೂಲವಾಹಿನಿ ದುರ್ಗೆಯ ರೌದ್ರಾಭಿನಯವನ್ನು ಸಮರ್ಪಕವಾಗಿ ಕಂಡರಿಸಿದಳು.

ಮುಂದೆ- ಪುರುಷರ ಜಾಲವ ಅರಿಯದೆ ಮೋಹಿಸಿ ಮೋಸ ಹೋದೆ ಸಖಿ ಎಂದು ಪಶ್ಚಾತ್ತಾಪ ಭಾವದಿಂದ ಶೋಕಿಸುವ ನಾಯಕಿಯ ಭಾವನೆಗಳನ್ನು ‘ಜಾವಳಿ’ (ರಾಗ ಫರಾಸ್, ತಾಳ ಆದಿ) ‘ಸರಸಪ್ರಿಯನ ಮರೆಯದೆ ಸಖಿ ತಿಳಿಯದೆ ನಾ ಮೋಸಹೋದೆ’ ( ರಚನೆ- ಶ್ರೀ ಸಾಲ್ಯಂ ನರಸಯ್ಯ)ಎಂದು ವಿಲಪಿಸುವ ನಾಯಕಿಯಾಗಿ ಕೃತಿ ಸುಂದರಾಭಿನಯ ನೀಡಿದಳು. ಕೊನೆಯಲ್ಲಿ ಬಾಲಮುರಳೀಕೃಷ್ಣ ಅವರು ಕದನ ಕುತೂಹಲ ರಾಗದಲ್ಲಿ ರಚಿಸಿದ ಉತ್ಸಾಹಭರಿತ ‘ತಿಲ್ಲಾನ’ದೊಂದಿಗೆ ಪ್ರಸ್ತುತಿ ಸಂಪನ್ನವಾಯಿತು.

                                      **********

Related posts

Daasa shreshtha – Rasaanubhavada Meru

YK Sandhya Sharma

ನತಾನಿಯಾ ಮನೋಜ್ಞ ಭಂಗಿಗಳ ಅದ್ಭುತ ನರ್ತನ

YK Sandhya Sharma

Natarang School of Dance-Nrityaavishkaar-

YK Sandhya Sharma

Leave a Comment

This site uses Akismet to reduce spam. Learn how your comment data is processed.