Image default
Dance Reviews

ದೀಕ್ಷಿತಾಳ ಪ್ರೌಢ ಅಭಿನಯದ ಮನೋಜ್ಞ ನೃತ್ಯವಲ್ಲರಿ

ಗಾಢವಾಗಿ ಕವಿದಿದ್ದ ‘ಕರೋನಾ’ದ ಕಾರ್ಮೋಡ ಇದೀಗ ಕೊಂಚ ಕರಗಿ ಆಶಾಭಾವನೆಯ ರಶ್ಮಿ ಪಸರಿಸುತ್ತ ಮೆಲ್ಲಮೆಲ್ಲನೆ ಸಾಂಸ್ಕೃತಿಕ ಚಟುವಟಿಕೆಗಳ ಚೇತನ ಪ್ರಫುಲ್ಲಿಸುತ್ತಿದೆ. ಕಳೆದ ಒಂಭತ್ತು ತಿಂಗಳುಗಳಿಂದ ಒಳಗೇ ಚಡಪಡಿಸುತ್ತಿದ್ದ ಕಲಾಕಾರಂಜಿ ಹೊರ ಪುಟಿಯಲಾರಂಭಿಸಿರುವುದು ಸ್ವಾಗತಾರ್ಹ ಮುನ್ನಡೆ. ಕರೋನಾ ಪಿಡುಗು ಇಡೀ ಜಗತ್ತನ್ನು ಆಕ್ರಮಿಸಿದ ಈ ಹೊತ್ತಿನಲ್ಲಿ, ಹಾಗೂ ಹೀಗೂ ಮೂರ್ನಾಲ್ಕು ತಿಂಗಳುಗಳು ಸ್ತಬ್ಧವಾಗಿದ್ದ ಕಲಾಚೈತನ್ಯಗಳು  ಆನಂತರ ಕಂಡುಕೊಂಡ ಪರ್ಯಾಯ ಮಾರ್ಗ ಅಂತರ್ಜಾಲದ ಮಾಧ್ಯಮ ವೇದಿಕೆ. ಇದೀಗ ಕೆಲವರು ಧೈರ್ಯ-ಆತ್ಮವಿಶ್ವಾಸಗಳಿಂದ ಪೂರ್ಣಪ್ರಮಾಣದ ರಂಗಪ್ರವೇಶಗಳ ಕಾರ್ಯಕ್ರಮಗಳಿಗೆ ಮುಂದಾಗಿರುವುದು ಸಂತಸದ ಸಂಗತಿ. ಈ ನಿಟ್ಟಿನಲ್ಲಿ ಇತ್ತೀಚಿಗೆ ಜಯನಗರದ ಜೆ.ಎಸ್.ಎಸ್.ರಂಗಮಂದಿರದಲ್ಲಿ ದೀಕ್ಷಿತಾಳ ವಿದ್ಯುಕ್ತ ‘ರಂಗಪ್ರವೇಶ’ ಯಶಸ್ವಿಯಾಗಿ ನಡೆಯಿತು.

ಅಂತರರಾಷ್ಟ್ರೀಯ ನೃತ್ಯಕಲಾವಿದೆ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್-ಆರ್ಟ್ ಅಂಡ್ ಮ್ಯೂಸಿಕ್’- ‘’ನಿದಂ ’’ ಸಂಸ್ಥೆಯ ಸಂಸ್ಥಾಪಕಿ ನಾಟ್ಯಗುರು ಪೂರ್ಣಿಮಾ ರಜಿನಿಯ ಗರಡಿಯಲ್ಲಿ ರೂಪುಗೊಂಡ ಕಲಾಶಿಲ್ಪ ದೀಕ್ಷಿತಾ ಜಗನ್ನಾಥನ್, ಸತತ ಹನ್ನೆರಡು ವರ್ಷಗಳ ನಾಟ್ಯಕಲಿಕೆ, ನಿಷ್ಠೆಯ ಅಭ್ಯಾಸಗಳಿಂದ ಸಾದರಪಡಿಸಿದ ಹೃನ್ಮನೋಹರ ನೃತ್ಯಪ್ರದರ್ಶನ ಕಲಾರಸಿಕರನ್ನು ಆಹ್ಲಾದಗೊಳಿಸಿತು.

 ‘ಪುಷ್ಪಾಂಜಲಿ’ಯ ಮೊದಲಹೆಜ್ಜೆಯ ನಾದದಲ್ಲೇ ದೀಕ್ಷಿತಾ, ತನ್ನ ಕಲಾಪ್ರೌಢಿಮೆಯ ಮಿಂಚಿನ ಸ್ಪರ್ಶವನ್ನು ಸಿಂಚನಗೊಳಿಸಿ ಅಂಗಶುದ್ಧಿಯ ಹಸ್ತಮುದ್ರೆ, ಖಚಿತ ಅಡವುಗಳ ಸೊಬಗಿನಲ್ಲಿ ಗುರು-ಹಿರಿಯರಿಗೆ ವಿನಮ್ರ ನಮನ ಸಲ್ಲಿಸಿದಳು. ಕಲಾವಿದೆಯ ಹಸನ್ಮುಖ-ಆತ್ಮವಿಶ್ವಾಸದ ಹುರುಪು ಮುಂದಿನ ಅವಳೆಲ್ಲ ಕೃತಿಗಳ ಪ್ರಸ್ತುತಿಗೆ ರಂಗು ನೀಡಿತ್ತು.

ವೈಶಿಷ್ಯಪೂರ್ಣವಾಗಿದ್ದ ‘ಮೈಸೂರು ಜತಿ’ಯ ನೃತ್ಯಸಂಯೋಜನೆ ಆಸ್ಥಾನ ವಿದುಷಿ ವೆಂಕಟಲಕ್ಷಮ್ಮನವರ ಮೂಲ ಸೊಗಡಿನಿಂದ ಕೂಡಿತ್ತು. ಗುರು ಪೂರ್ಣಿಮಾ ತಮ್ಮ ನಿಖರ ನಟುವಾಂಗದ ಖಾಚಿತ್ಯದ ಕೊನ್ನಕೋಲ್ ಜತಿಗಳಿಂದ ದೀಕ್ಷಿತಾಳ ಕರಾರುವಾಕ್ಕಾದ ನೃತ್ತಗಳ ಝೇಂಕಾರ ಮೆರುಗುಗೊಂಡಿತ್ತು. ಗಣಪತಿಯ ಗುಣ-ವಿಶೇಷಗಳನ್ನು ಸಾಕಾರಗೊಳಿಸಿದ ಕವಿತ್ವ ಮನೋಹರವಾಗಿತ್ತು.

ಮೈಸೂರು ವಾಸುದೇವಾಚಾರ್ಯ ವಿರಚಿತ-‘ಜತಿಸ್ವರ’ – ಶುದ್ಧನೃತ್ತದ ಕೃತಿ, ಯಾಂತ್ರಿಕತೆಯಿಲ್ಲದೆ ಸೊಬಗನ್ನು ಚೆಲ್ಲಿದ ನೃತ್ತ ಮೇಳ-ಸ್ವರಗಳ ನವಿರು, ನೋಡುಗರ ಗಮನವನ್ನು ಹಿಡಿದಿಟ್ಟುಕೊಂಡಿದ್ದು ವಿಶೇಷ. ಮುಂದೆ- ನೃತ್ಯದ ಪ್ರಧಾನ ಹಾಗೂ ಅಷ್ಟೇ ಕಠಿಣವಾದ ದೀರ್ಘ ನೃತ್ಯಬಂಧ ನಾಟಿಕುರಂಜಿ ರಾಗದ ಪಾಪನಾಶಂ ಶಿವಂ ರಚಿತ ‘ವರ್ಣ’ –‘ಸ್ವಾಮಿ ನಾನುನ್ದನ್ ಅಡಿಮೈ’ ಭಕ್ತಿಪೂರ್ಣವಾಗಿ ಸಮರ್ಪಣಾ ಭಾವದಲ್ಲಿ ಸಾಕ್ಷಾತ್ಕಾರಗೊಂಡಿತ್ತು. ನೃತ್ಯದ ಎಲ್ಲ ಆಯಾಮಗಳನ್ನು ಪ್ರದರ್ಶಿಸುವ ‘ವರ್ಣ’ದ ನಿರೂಪಣೆಯಲ್ಲಿ ಕಲಾವಿದೆಯ  ಚೈತನ್ಯ, ತಾಳ-ಲಯಜ್ಞಾನ ಮತ್ತು ಅಗಾಧ ನೆನಪಿನ ಶಕ್ತಿಗಳು ಪ್ರದರ್ಶಿತವಾಗುತ್ತವೆ..

           ಮಹಾಮಹಿಮ ಪರಶಿವನಿಗೆ ಭಕ್ತೆ ಸಂಪೂರ್ಣ ಶರಣಾಗಿದ್ದಾಳೆ. ಅನನ್ಯ ಭಕ್ತಿ-ತಾದಾತ್ಮ್ಯತೆಗಳಿಂದ ಅವನ ಗುಣ-ವೈಶಿಷ್ಟ್ಯ, ರೂಪ ಮಹಿಮಾತಿಶಯಗಳನ್ನು ಮನದುಂಬಿ ಸ್ತುತಿಸುತ್ತಿದ್ದಾಳೆ. ಹಲವಾರು ನಿದರ್ಶನಗಳ ಮೂಲಕ ಅವನ ಕಾರುಣ್ಯವನ್ನು ಮನಗಾಣಿಸುವ ನಿಟ್ಟಿನಲ್ಲಿ, ಭಕ್ತ ಮಾರ್ಕಂಡೇಯ ಮತ್ತು ಮನ್ಮಥ ದಹನ -ಪಾರ್ವತಿ ಕಲ್ಯಾಣದ ಸಂಚಾರಿ ಕಥಾನಕಗಳ ಸಾಕಾರ ಅನ್ಯಾದೃಶವಾಗಿತ್ತು. ಮುಗ್ಧಬಾಲಕನ ಶರಣ್ಯಭಾವ, ಯಮನ ಕ್ರೌರ್ಯದ ನಡವಳಿಕೆ ಕಂಡು ಪ್ರತ್ಯಕ್ಷನಾಗುವ ಶಿವ, ಈ ಮೂರು ಪಾತ್ರಗಳನ್ನು ದೀಕ್ಷಿತಾ, ತನ್ನ ಪ್ರೌಢ ಅಭಿನಯದ ರಸಪಾಕದಿಂದ ಪರಿಣಾಮಕಾರಿಯಾದ ಅನುಭವವನ್ನು ಕಟ್ಟಿಕೊಟ್ಟಳು. ಹಣೆಗಣ್ಣು ಬಿಚ್ಚಿದ ಮುಕ್ಕಣ್ಣನ ಕೋಪಾವಿಷ್ಟ ಭಾವದ ಪ್ರದರ್ಶನ, ಮರುಕ್ಷಣವೇ ಗಿರಿಜೆಗೊಲಿವ ಪ್ರೇಮಾನುರಾಗದ ಸುಂದರಮೂರ್ತಿಯನ್ನು ನೋಟಕ್ಕೆಟುಕಿಸಿದ ಕಲಾವಿದೆಯ ಅಭಿನಯ ಶ್ಲಾಘನೀಯ.

ಉತ್ತರಾರ್ಧದಲ್ಲಿ-ಹುಸೇನಿ ರಾಗದ ಸುಬ್ಬರಾಮ ಅಯ್ಯರ್ ಬರೆದ ‘ಪದಂ’ ಕೃತಿಯ ವಿಪ್ರಲಂಭ ನಾಯಕಿಯ ವಿರಹಾರ್ತ ಭಾವಗಳ ಭೋರ್ಗರೆತ, ದೀಕ್ಷಿತಾಳ  ಹೃದಯ ಕರಗಿಸುವ ಅಭಿನಯ ಪ್ರಾವೀಣ್ಯ ಮನದುಂಬಿತು. ಕಲಾವಿದೆಯ ಮಾಗಿದ ಅಭಿನಯ ಕಂಡಾಗ ಇದು ಈಕೆಯ ಮೊದಲ ನೃತ್ಯ ಪ್ರವೇಶವೆನಿಸಲಿಲ್ಲ. ಅನಂತರ- ‘ತಾಯಿ ಯಶೋದೆ’-ಕೀರ್ತನೆಯ ಸಾಕಾರದಲ್ಲಿ ದೀಕ್ಷಿತಾ, ಬಾಲಕೃಷ್ಣನ ತುಂಟಾಟಗಳನ್ನು ಬಹುಸೊಗಸಾಗಿ ಪಾತ್ರಗಳ ಪರಕಾಯ ಪ್ರವೇಶ ಮಾಡಿ ಅಭಿನಯಿಸಿ ಮನಸೂರೆಗೊಂಡಳು. ಕೃಷ್ಣ ಕಾಳಿಂಗಮರ್ಧನ ಮಾಡುವ ದೃಶ್ಯ, ರಂಗದ ತುಂಬಾ ಹೆಡೆಬಿಚ್ಚಿ ನಾಟ್ಯವಾಡಿದ ಕಾಳಿಂಗನ ರಭಸದ ಹೊರಳಾಟ, ಕೆರಳುವಿಕೆಯನ್ನು ಕಲಾವಿದೆ ತನ್ನ ವೇಗಗತಿಯ ಮಂಡಿ ಅಡವುಗಳ ವಿಜ್ರುಂಭಣೆ, ಹಸ್ತಚಲನೆಯ ತೀವ್ರತೆ, ಬಿರುಗಣ್ಣ ವೀರರಸದಿಂದ ಬಿಂಬಿಸಿದಳು.

ಕಡೆಯ ಪ್ರಸ್ತುತಿ-ಬಾಲಮುರಳಿ ಕೃಷ್ಣರ ಬೃಂದಾವನೀ ರಾಗದ ‘ತಿಲ್ಲಾನ’ ಲಯಾತ್ಮಕ ನಡೆಗಳಿಂದ ಪಾದಭೇದದ ಚೆಲುವಿನಿಂದ ಕಳೆಗಟ್ಟಿತು.

ನೃತ್ಯ ಪ್ರದರ್ಶನಕ್ಕೆ ಜೀವತುಂಬಿದ ಶ್ರೀವತ್ಸರ ಭಾವಪೂರ್ಣ ಗಾಯನ, ಜನಾರ್ಧನರಾವ್-ಮೃದಂಗ, ಕೆ.ಜಯರಾಂ-ಕೊಳಲು, ಹೇಮಂತಕುಮಾರ್-ವಯೊಲಿನ್ ಮತ್ತು ಪೂರ್ಣಿಮಾರ ಲವಲವಿಕೆಯ ನಟುವಾಂಗ ಪ್ರದರ್ಶನದ ಸಮಪಾಲು ಪಡೆಯಿತು.                             

ಇದೇ ಸಮಾರಂಭದಲ್ಲಿ ವಿದುಷಿ. ಪೂರ್ಣಿಮಾ ಅವರ ಪ್ರತಿಷ್ಟಿತ ” ನಿದಂ ” ನೃತ್ಯ ಮತ್ತು ಸಂಗೀತ ಸಂಸ್ಥೆಯಿಂದ ತಮ್ಮದೇ ಆದ ಕ್ಷೇತ್ರಗಳಲ್ಲಿ ಪ್ರಸಿದ್ಧ ಸಾಧಕಿಯರಾದ ನಾಟ್ಯಗುರು ರಾಧಾ ಶ್ರೀಧರ್, ಲೇಖಕಿ ವೈ.ಕೆ.ಸಂಧ್ಯಾ ಶರ್ಮ, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಸುಶೀಲಾ ಮತ್ತು ಆಕಾಶವಾಣಿಯ ನಿರ್ಮಲಾ ಎಲಿಗಾರ್ ಅವರಿಗೆ ‘ವುಮನ್ ಆಫ್ ಎಕ್ಸಲೆನ್ಸಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

Related posts

ಕಣ್ಮನ ಸೆಳೆದ ವೈವಿಧ್ಯಪೂರ್ಣ ‘ತಾಳ್-ತರಂಗ್ ’

YK Sandhya Sharma

ಸಾತ್ವಿಕಾಭಿನಯದ ನಿವೇದಿತಳ ಮನತಣಿಸಿದ ನೃತ್ಯ

YK Sandhya Sharma

ರಸಾನುಭವ ನೀಡಿದ ಕನ್ನಡ ಕೃತಿಗಳ ಝೇಂಕಾರ

YK Sandhya Sharma

2 comments

Poornima Rajini February 11, 2021 at 4:10 pm

Always grateful for your ever encouraging words mam🙏
It is indeed our good fortune that you graced the occasion & blessed us all. Thank you would a too small & formal word to express our feelings🙂

Reply
YK Sandhya Sharma February 11, 2021 at 7:24 pm

Thank you Poornima. Share Dikshitha dance link among your students and friends.give wide publicity for her talent and yours.

Reply

Leave a Comment

This site uses Akismet to reduce spam. Learn how your comment data is processed.