‘ನಾಟ್ಯೇಶ್ವರ’ -ವಾರ್ಷಿಕೋತ್ಸವದ ಕಣ್ಮನ ತುಂಬಿದ ವರ್ಣರಂಜಿತ ನೃತ್ಯ ವೈವಿಧ್ಯ

ಅದೊಂದು ವಿಶೇಷ ನೃತ್ಯವೈವಿಧ್ಯ ಕಾರ್ಯಕ್ರಮ. ಆಕರ್ಷಕ -ವರ್ಣರಂಜಿತವಾಗಿ ಸಾಗಿದ ‘ನಾಟ್ಯೇಶ್ವರ ನೃತ್ಯಶಾಲೆ’ಯ 16 ನೇ ವಾರ್ಷಿಕೋತ್ಸವದ ಅಂಗವಾಗಿ ನೃತ್ಯಗುರು ಮತ್ತು ಅದ್ಭುತ ಕಲಾವಿದ ಅಷ್ಟೇ ಪ್ರಸಾಧನ ನಿಪುಣರಾದ ಕೆ.ಪಿ. ಸತೀಶ್ ಬಾಬು ಆಯೋಜಿಸಿದ-ನರ್ತಿಸಿದ ಪ್ರತಿಯೊಂದು ಕೃತಿಗಳೂ ಕಣ್ಮನ ಸೆಳೆದವು.


ಶಾಲೆಯ ವಿದ್ಯಾರ್ಥಿಗಳು ಅರ್ಪಿಸಿದ ಸುಮನೋಹರ ಪುಷ್ಪಾಂಜಲಿ, ಜತಿಸ್ವರ ಮತ್ತು ದೈವಸ್ತುತಿಗಳು-ಮಹಿಷಾಸುರ ಮರ್ಧಿನಿಯ ದಿವ್ಯಪ್ರಸ್ತುತಿ, ‘ಕಾಂತಾರ’ ಚಿತ್ರದ ಜನಪ್ರಿಯ ಗೀತೆಗೆ ನರ್ತನ ಶಾಸ್ತ್ರೀಯ ಭರತನಾಟ್ಯದ ನೆಲೆಯಲ್ಲಿ ಹೃದಯ ತುಂಬಿದರೆ, ಹಾಗೂ ಗುರು – ಕಲಾವಿದ ಸತೀಶ್ ಬಾಬು ನಿರೂಪಿಸಿದ ‘ನವರಸಗಳು’- ಗಾಢ ಅಭಿವ್ಯಕ್ತಿಯಲ್ಲಿ ಪರಿಣಾಮ ಬೀರಿದವು. ಮುಂದೆ ಅವರ ನೃತ್ಯಗುರು ಡಾ. ಲಕ್ಷ್ಮೀಮೂರ್ತಿ ಅವರಿಂದ ತರಬೇತಿಗೊಂಡು ಅರ್ಪಿಸಿದ ‘ಹಚ್ಚೇವು ಕನ್ನಡದ ದೀಪ’- ಕವಿ ಡಿ.ಎಸ್. ಕರ್ಕಿ ವಿರಚಿತ ಕನ್ನಡಾಭಿಮಾನವನ್ನು ಮೆರೆದ ದೀಪಾರಾಧನೆ- ದೀಪಾಂಜಲಿ ಮತ್ತು ಗೊಂಬೆಗಳ ವಿಶಿಷ್ಟ ನೃತ್ಯಸಂಭ್ರಮ ಕಲಾರಸಿಕರನ್ನು ವಿಸ್ಮಿತಗೊಳಿಸಿತು. ಇಡೀ ಕಾರ್ಯಕ್ರಮದಲ್ಲಿ ಶಿಖರಪ್ರಾಯವಾಗಿದ್ದ ಈ ಅಮೋಘ ನೃತ್ಯಾರ್ಪಣೆಯನ್ನು ಕಲಾರಸಿಕರು ಕಣ್ಣೆವೆಯಿಕ್ಕದೆ ನೋಡುವಷ್ಟು ಸ್ವಾರಸ್ಯಪೂರ್ಣವಾಗಿತ್ತೆಂದರೆ ಅತಿಶಯೋಕ್ತಿಯಲ್ಲ.



ಯೋಗಪಟು, ಉತ್ತಮ ನರ್ತಕರಾದ ಸತೀಶ್ ಕುಚುಪುಡಿ ಥರದ ‘ತರಂಗಂ’ ಮಾದರಿಯಲ್ಲಿ ತಲೆಯ ಮೇಲೆ ಒಂದು, ಅದರ ಮೇಳೆ ಇನ್ನೊಂದು ನೀರು ತುಂಬಿದ ಹಿತ್ತಾಳೆ ತಂಬಿಗೆಗಳು, ಅದರ ಮೇಲೆ ಉರಿವ ಹಣತೆ, ಎರಡೂ ಕೈಗಳಲ್ಲಿ ಅದೇ ಬಗೆಯ ತಂಬಿಗೆಯ ಮೇಲೆ ಹಣತೆ ಇರಿಸಿಕೊಂಡು ಲೀಲಾಜಾಲವಾಗಿ ನೃತ್ಯದ ಹೆಜ್ಜೆ ಹಾಕುತ್ತ ಕುಣಿದ ಪರಿ ಬಣ್ಣಿಸಲಸದಳ. ಹಾಗೆಯೇ ಮಣ್ಣಿನ ಮಡಕೆಯ ಮೇಲೆ ನಿಂತು ಗೆಜ್ಜೆಗಳ ದನಿ ಮೊಳಗಿಸಿದ್ದು, ಜೊತೆಗೆ ಹಿತ್ತಾಳೆಯ ತಟ್ಟೆಯ ಮೇಲೆ ನಿಂತು ಜತಿಗಳಿಗೆ ಅಡವು ಜೋಡಿಸಿದ್ದು ಉಸಿರುಗಟ್ಟಿ ನೋಡುವಂತೆ ಮಾಡಿತು. ಮುಂದೆ ಅದೇ ದೀಪಗಳೊಂದಿಗೆ ಎರಡು ಸಣ್ಣ ತಂಬಿಗೆಗಳ ಮೇಲೆ ನಿಂತು ನರ್ತಿಸಿದ್ದಲ್ಲದೆ, ಯೋಗದ ಭಂಗಿಗಳನ್ನು ಪ್ರದರ್ಶಿಸಿ, ರಂಗದ ಮೇಲೆ ರಂಗಾಕ್ರಮಣವಾಗಿ ಮಂಡಿ ಅಡವುಗಳನ್ನು ಹಾಕಿ ರೋಚಕವಾಗಿ ನೃತ್ಯ ಮಾಡಿದ್ದು ನಿಜಕ್ಕೂ ಅಚ್ಚರಿ ಹುಟ್ಟಿಸಿತು. ಕಲಾವಿದರ ಅಮೋಘವಾದ ದೇಹ ಸಮತೋಲನಾ ಶಕ್ತಿ-ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯಿತು.





ಮತ್ತೊಂದು ಬೆಕ್ಕಸ ಬೆರಗಾಗಿಸಿದ ‘ಬೊಂಬೆ’ಗಳ ನೃತ್ಯದಿಬ್ಬಣ- ವಿವಾಹದ ದೃಶ್ಯ ವೈಭವವನ್ನು ಸತೀಶ್ ಬಾಬು ಮತ್ತು ವಾಣಿ ಸತೀಶ್ ಬಾಬು ಅವರ ಸಂಯೋಜನೆಯಲ್ಲಿ ಮೂಡಿಬಂದ, ಶಿಷ್ಯವೃಂದದೊಡನೆ ಸುಮನೋಹರವಾಗಿ ಕಟ್ಟಿಕೊಟ್ಟ, ಅಚ್ಚುಕಟ್ಟಾಗಿ ನಿರೂಪಿತವಾದ ಕೃತಿ. ಆಕರ್ಷಕ ವಸ್ತ್ರವಿನ್ಯಾಸ-ಪ್ರಸಾಧನ, ಸೂಕ್ತ ಹಿನ್ನಲೆಯ ವಾದ್ಯಗೋಷ್ಠಿ , ವಿಶಿಷ್ಟ ಮಾದರಿಯ ‘ಬೊಂಬೆ’ಲೋಕವನ್ನು ಚಿತ್ರಿಸಿದ ಅಪರೂಪದ ಮನನೀಯ ನೃತ್ಯರೂಪಕ ಹಿತ ಮಿತ ಸುಂದರಾಭಿನಯದೊಂದಿಗೆ ಪ್ರದರ್ಶಿತವಾಯಿತು.




ವಿವಾಹ ಬಂಧನದ ಒಂದು ಸಮಗ್ರ ನೋಟ ಹಾಗೂ ಅದರ ಎಲ್ಲ ವಿಧಿ-ವಿಧಾನ, ಸಂಪ್ರದಾಯಗಳನ್ನು ದರ್ಶನ ಮಾಡಿಸಿದ ಭಾರತೀಯ ಸಂಸ್ಕೃತಿಯ ನೋಟ ಬಿಂಬಿಸಿದ, ಸಂಕ್ಷಿಪ್ತ ನಡೆಯಲ್ಲಿ ಸ್ವಾರಸ್ಯಕರವಾಗಿ ಸಾಗಿದ, ಕಲಾತ್ಮಕ ಸಂಯೋಜನೆಯಲ್ಲಿ ಮೂಡಿಬಂದ ಮುದವಾದ ಅರ್ಪಣೆ. ಕಲಾವಿದ ಸತೀಶ್ ಅವರು ಚೆನ್ನೈನಲ್ಲಿ ನೃತ್ಯಗುರು ಪದ್ಮಾ ಅವರಿಂದ ಕಲಿತ ಈ ವಿಶೇಷ ನೃತ್ಯವನ್ನು ಇವರು ಈಗಾಗಲೇ ದೇಶ-ವಿದೇಶಗಳಲ್ಲಿ ನೂರಾರು ಪ್ರದರ್ಶನಗಳನ್ನು ನೀಡಿ ಮೆಚ್ಚುಗೆ ಪಡೆದಿದ್ದಾರೆ. ಕಲಶ-ಕನ್ನಡಿ ಹಿಡಿದ ಬಂಧು ಬಾಂಧವರು, ಹೆಂಗೆಳೆಯರು, ಬೊಂಬೆಗಳಂತೆ ಅಲಂಕರಿಸಿಕೊಂಡ, ಪುಟಾಣಿ ಹೆಜ್ಜೆಗಳಲ್ಲಿ ಸರಿದು ಬರುವ ವಧು-ವರರು, ಅವರ ಪೋಷಕರು-ನೆಂಟರು ಮುಂತಾದ ಎಲ್ಲರ ಜನಸಾಕ್ಷಿಯಾಗಿ ನೆರವೇರುವ ಮದುವೆಯ ಧಾರೆ, ಅಂತರಪಟ, ಸಪ್ತಪದಿ, ಹಾರ ವಿನಿಮಯ, ಚೆಂಡಾಟ, ಗಿರಗಿಟ್ಲೆ, ಉಂಗುರ ಹುಡುಕುವ-ಉಯ್ಯಾಲೆಯಾಡುವ, ಹೆಣ್ಣು ಒಪ್ಪಿಸಿಕೊಡುವ ಪ್ರತಿಯೊಂದು ಶಾಸ್ತ್ರಗಳೂ ಹಾಸ್ಯ-ಶೃಂಗಾರ ಮಿನುಗುಗಳೊಂದಿಗೆ ಪ್ರವಹಿಸಿತು. ಕುದುರೆಯ ಮೇಲೆ ರಾಜಕುಮಾರ-ಕುಮಾರಿಯರಂತೆ ಕುಳಿತ ನವ ವಿವಾಹಿತರ ಮೆರವಣಿಗೆಯ ದೃಶ್ಯ ಮುಂತಾದ ಅನೇಕ ನಲಿವಿನ ಹಂತಗಳನ್ನು ಮನೋಜ್ಞವಾಗಿ ಪ್ರದರ್ಶಿಸಿದ ಈ ‘ಬೊಂಬೆ’ ನೃತ್ಯದ ವಿವಾಹ ಸಂಭ್ರಮದ ಚಿತ್ರಣ ಚಿರಸ್ಮರಣೀಯವಾಗಿತ್ತು, ಯಾಂತ್ರಿಕತೆಯ ಬದುಕಿಗೊಂದು ಚೇತೋಹಾರಿ ಸ್ಪರ್ಶ ನೀಡಿತ್ತು.


