ಬೆಂಗಳೂರಿನ ನೃತ್ಯಗುರು ಮತ್ತು ಕಲಾವಿದೆ ವಿದುಷಿ ಫಣಿಮಾಲಾ ನೇತೃತ್ವದ ‘ನೃತ್ಯ ಸಂಜೀವಿನಿ ಅಕಾಡೆಮಿ’ ಅನೇಕ ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಮೂಲಕ ನೃತ್ಯಾಭಿವೃದ್ಧಿಯ ಚಟುವಟಿಕೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. ಪ್ರಸಕ್ತ ‘ಕರೋನಾ’ ಪಿಡುಗಿನ ದುರಿತ ಕಾಲದಲ್ಲೂ ಉತ್ಸಾಹ ಕಳೆದುಕೊಳ್ಳದೆ ರಾಜ್ಯಾದ್ಯಂತವಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲೂ ಸಕ್ರಿಯವಾಗಿರುವುದು ಪ್ರಶಂಸನೀಯ. ಕಳೆದೆರಡು ತಿಂಗಳುಗಳಿಂದ ‘ನಾಟ್ಯಾಂಜಲಿ ಉತ್ಸವ-2020’ ಕಾರ್ಯಕ್ರಮವನ್ನು ಅಂತರ್ಜಾಲದಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅನೇಕ ಜನ ಹೊಸ ಪ್ರತಿಭೆಗಳ ಪ್ರಕಾಶಕ್ಕೆ ಅನುವು ಮಾಡಿಕೊಟ್ಟು ಸಕ್ರಿಯರಾಗಿದ್ದಾರೆ.
ಅಮೆರಿಕೆಯ ಸಿಡರ್ ರ್ಯಾಪಿಡ್ ನಲ್ಲಿ ನೆಲೆಸಿದ್ದು, ತಮ್ಮ ‘ನೃತ್ಯ ಸಂಜೀವಿನಿ ಸ್ಕೂಲ್ ಆಫ್ ಆರ್ಟ್ಸ್’ ಮೂಲಕ ನೂರಾರು ಮಕ್ಕಳನ್ನು ಭರತನಾಟ್ಯ ಸಂಸ್ಕೃತಿಯತ್ತ ಸೆಳೆದಿರುವ ಅಪ್ಪಟ ಭಾರತೀಯ ಕನ್ನಡ ಮಹಿಳೆ ವಿದುಷಿ. ಪರಿಮಳಾ ವಾಸುಕಿ ಉತ್ತಮ ನೃತ್ಯ ಕಲಾವಿದೆ ಮತ್ತು ನಾಟ್ಯಶಿಕ್ಷಕಿ. ಅಕ್ಕ ಮತ್ತು ಗುರು ಫಣಿಮಾಲಾ ಅವರಲ್ಲಿ ನೃತ್ಯ ತರಬೇತಿ ಪಡೆದು ಅವರೊಂದಿಗೆ ನಾಡಿನಾದ್ಯಂತ ಕಾರ್ಯಕ್ರಮ ನೀಡಿ, ವಿವಾಹಾನಂತರ ವಿದೇಶದಲ್ಲಿ ನಮ್ಮ ಭಾರತೀಯ ಕಲೆಯನ್ನು ಉಜ್ವಲಗೊಳಿಸುತ್ತಿರುವ ಬದ್ಧತೆಯುಳ್ಳ ಕಲಾವಂತೆ.
ಇತ್ತೀಚಿಗೆ ‘ನೃತ್ಯ ಸಂಜೀವಿನಿ ಅಕಾಡೆಮಿ’ಒದಗಿಸಿದ ವೇದಿಕೆ ಮೇಲೆ ಆನ್ಲೈನ್ ನಲ್ಲಿ ಪರಿಮಳ, ತಮ್ಮ ಶಿಷ್ಯೆಯರ ನೃತ್ಯ ಪ್ರದರ್ಶನವನ್ನು ಏರ್ಪಡಿಸಿದ್ದರು. ಅಮೇರಿಕಾ-ಇಲಿನಾಯ್ ನಲ್ಲಿರುವ ಸಿಡರ್ ರ್ಯಾಪಿಡ್ಸ್ ,ರಾಕ್ ಫರ್ಡ್,ರಾಕ್ಟನ್, ರೋಸೆ, ವಿಚಿಟಾ ಮತ್ತು ಮಿಲ್ ವಾಕಿ ಮುಂತಾದ ವಿವಿಧ ಸ್ಥಳಗಳಿಂದ ವೇದಿಕೆ ಹಂಚಿಕೊಂಡ ನೃತ್ಯಾಕಾಂಕ್ಷಿಗಳು ಉತ್ಸುಕತೆಯಿಂದ ನರ್ತಿಸಿದ್ದು ಮುದನೀಡಿತ್ತು. ಕು. ವರ್ಷಿತಾ ಮತ್ತು ಕು. ಶ್ರೀಲೇಖಾ ಮೊದಲಿಗೆ ವಿಘ್ನನಿವಾರಕ ವಿನಾಯಕನನ್ನು ‘ಶ್ರೀ ವಿಘ್ನರಾಜಂ ಭಜೆ’ ಎಂದು ಭಕ್ತಿಭಾವದಿಂದ ಸ್ತುತಿಸಿದರು. ಸರಳ ಜತಿಗಳಿಂದೊಡಗೂಡಿದ ಅವರ ಸಾಮರಸ್ಯದ ನರ್ತನದಲ್ಲಿ ಗಣೇಶನ ವಿವಿಧ ರೂಪ-ಸ್ವರೂಪಗಳ ಭಂಗಿಗಳು ಅಭಿವ್ಯಕ್ತವಾದವು.
ಅನಂತರ- ರಾಕ್ ಫೋರ್ಡ್ನಿಂದ ಲಂಗ-ಪಾಲಕ ತೊಟ್ಟ ನಾಲ್ಕುಜನ ಪುಟಾಣಿಗಳಾದ ಅಶ್ವಿ ಹಿರೇಮಠ , ಗೃಹಿತ, ಅಕ್ಷಿತಾ ಮತ್ತು ಸಾತ್ವಿ, ವಿಷ್ಣುವಿನ ಅವತಾರಗಳನ್ನು ಮುದ್ದಾಗಿ ಸಾಕ್ಷಾತ್ಕರಿಸಿದರು. ‘ರಾಮ ರಾಮ ಜಯ ರಾಮಾರಾಂ’ -ಸುಶ್ರಾವ್ಯ ಹಿನ್ನಲೆ ಗಾಯನಕ್ಕೆ ತಕ್ಕಂತೆ ಅತ್ಯಾಸಕ್ತಿಯಿಂದ ಶ್ರೀರಾಮನ ಸುಂದರ ಭಂಗಿಗಳನ್ನು ಪ್ರದರ್ಶಿಸುತ್ತ ಮನವರಳಿಸಿದರು.
ಮುಂದೆ- ಅಕ್ಷಯ ಮತ್ತು ಖುಷಿ ‘ಹರಿ ಕುಣಿದ ನಮ್ಮ ಹರಿ ಕುಣಿದ’ಎಂದು ನಲಿವಿನಿಂದ ಹರಿಯ ಬಾಲಲೀಲೆಗಳನ್ನು ಅಚ್ಚುಕಟ್ಟಾಗಿ ಚಿತ್ರಿಸಿದರು.
ಅನಂತರ- ಅನನ್ಯ ಜೋಶಿ, ಮಾಹೀ ಪಾಟೀಲ್, ನಿವಿಯಾ ಥಾಮಸ್ ಮತ್ತು ನಿಷಿಕಾ ಬೇರೆ ಬೇರೆ ಸ್ಥಳಗಳಿಂದ ಒಂದು ಆವರಣದಲ್ಲಿ ನರ್ತನ ವೈಖರಿ ತೋರಿದ್ದು ಅವರಲ್ಲಿದ್ದ ಹೊಂದಾಣಿಕೆ ಮತ್ತು ಗುರು ಪರಿಮಳ ಅವರ ತರಬೇತಿಯ ಪರಿಶ್ರಮ ವ್ಯಕ್ತವಾಗಿತ್ತು.
‘ ತಾರಿತ ಝಂ…’ ಜತಿಗಳಿಗನುಗುಣ ಹೆಜ್ಜೆ ಹಾಕಿದರು.
ಮುಂದೆ- ಆನಿ, ಅವನಿ, ಅನು ಮೂರುಜನ ಕನ್ನಿಕೆಯರು ಸ್ವರಜತಿಯನ್ನು ಫ್ಯೂಶನ್ ಸಂಗೀತದ ಅಲೆಗಳ ನಾದದಲ್ಲಿ ಪಡಿಮೂಡಿಸಿದರು. ಗ್ರೀವ-ಶಿರೋಭೇದಗಳ ಪ್ರದರ್ಶನ, ಜತಿಗಳಲ್ಲಿ ಅನೇಕ ಭಂಗಿಗಳನ್ನು ತೋರಿದರು.
ಸಿಡರ್ ರ್ಯಾಪಿಡ್ನಿಂದ ನಿರುಪ ಮತ್ತು ಜೊಯನ್ನ ‘ಗೋವರ್ಧನ ಗಿರಿಧಾರಿ’ಯ ಅದ್ಭುತ ಬಾಲಲೀಲೆಗಳನ್ನು ಸುಂದರವಾಗಿ ಅಭಿನಯಿಸಿ ನಿರೂಪಿಸಿದರು.
ಅಂತ್ಯದಲ್ಲಿ ಪರಿಮಳ ವಾಸುಕಿ-‘ಜಯ ಜಾನಕಿ ರಮಣ’ ನನ್ನು ಭಕಿಭಾವದಿಂದ ಅರ್ಚಿಸಿದರು. ಖಚಿತ ಹಸ್ತ, ಅಡವು-ಆಕಾಶಚಾರಿಗಳಿಂದ ಕೂಡಿದ ಆಂಗಿಕಾಭಿನಯದಿಂದ ರಾಮನ ಮನಮೋಹಕ ಚಿತ್ರವನ್ನು ಕಟ್ಟಿಕೊಟ್ಟರು. ಶ್ರೀರಾಮನ ಗುಣ-ವಿಶೇಷಗಳನ್ನು ನಿರೂಪಿಸಿದ ಭಾವ-ಭಂಗಿಗಳು ಒಪ್ಪವಾಗಿದ್ದವು. ಸರಳವಾದ ನೃತ್ತಗಳು ನಡುನಡುವೆ ಝೇಂಕರಿಸಿದವು. ‘ಪವಮಾನ’ನ ಸ್ತುತಿಯ ಮಂಗಳದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
*************************