Image default
Dance Reviews

Anushree Manjunath Rangapravesha Dance Review Article

ಹೃನ್ಮನ ತುಂಬಿದ ಅನುಶ್ರೀ ಮನೋಜ್ಞ ನೃತ್ಯ

ಖ್ಯಾತ ‘’ಶಾಂತಲಾ ಆರ್ಟ್ಸ್ ಅಕಾಡೆಮಿ’’ಯ ನಿರ್ದೇಶಕ, ನೃತ್ಯಸಂಸ್ಥೆಯ ನಾಟ್ಯಗುರು -ಖ್ಯಾತ ನಟುವನ್ನಾರ್ ಕಲಾಯೋಗಿ ಪುಲಿಕೇಶೀ ಕಸ್ತೂರಿ ಪ್ರತಿಬಾರಿ ತಮ್ಮ ಶಿಷ್ಯರ ರಂಗಪ್ರವೇಶದಲ್ಲೂ ಏನಾದರೊಂದು ಹೊಸ ಪ್ರಯೋಗ ಮಾಡುವ ಅನ್ವೇಷಕ ಪ್ರವೃತ್ತಿಯವರು. ಸಾಂಪ್ರದಾಯಕ ಕೃತಿಗಳಿಗೆ ಮಹತ್ವ ಕೊಟ್ಟು ಅವುಗಳ ಪುನರುಜ್ಜೀವನಗೊಳಿಸುವ ಮನೋಭಾವದವರು. ಚತುರ್ವಿಧ ಅಭಿನಯದಲ್ಲಿ ಕಲಾವಿದರ ಪ್ರಸ್ತುತಿಯಲ್ಲಿ ಕಾಣಸಿಗದ ವಾಚಿಕವನ್ನು ಪ್ರಯೋಗಕ್ಕೆ ತಂದು ಗಮನ ಸೆಳೆದವರು. ಇತ್ತೀಚಿಗೆ ಶ್ರೀಕೃಷ್ಣದೇವರಾಯ ಕಲಾಮಂದಿರದಲ್ಲಿ ಯಶಸ್ವಿಯಾಗಿ ನಡೆದ ಅವರ ಶಿಷ್ಯೆ ಅನುಶ್ರೀ ಮಂಜುನಾಥ್ ರಂಗಪ್ರವೇಶದಲ್ಲೂ ಅನೇಕ ಕೃತಿಗಳಲ್ಲಿ ಹೊಸತನ ತಂದರು.

ಉದಯೋನ್ಮುಖ ಕಲಾವಿದೆ ಅನುಶ್ರೀ, ಬಹು ಆತ್ಮವಿಶ್ವಾಸದಿಂದ ಎರಡೂವರೆ ಗಂಟೆಗಳ ಕಾಲ ರಂಗದ ಮೇಲೆ ಸೊಗಸಾಗಿ ಅಷ್ಟೇ ನಿರಾಯಾಸವಾಗಿ ನರ್ತಿಸಿ ಪ್ರೇಕ್ಷಕರ ಮನಗೆದ್ದಳು. ಶುಭಾರಂಭಕ್ಕೆ ಪುಲಿಕೇಶೀ ವಿರಚಿತ ‘ಪುರಪ್ಪಾಟ ಮಲ್ಲಾರಿ’ ಎಂದು ಜನಜನಿತವಾದ ಕಲಾತ್ಮಕ ವಿನ್ಯಾಸದ ನೃತ್ತಮೇಳಗಳಿಂದೊಡಗೂಡಿದ ಅತಿಶಯವಾದ ‘ಮಲ್ಲಾರಿ’ಯನ್ನು ತನ್ನ ಅಂಗಶುದ್ಧ ಆಂಗಿಕ-ಹಸ್ತಮುದ್ರೆಗಳಿಂದ ಸಮರ್ಪಿಸಿದಳು. ಆಕೆಯ ಅಸ್ಖಲಿತ ನೃತ್ತಸಲಿಲ ನೋಡಲು ರಮಣೀಯವಾಗಿತ್ತು.

ನಂತರ- ಮೈಸೂರು ವಾಸುದೇವಾಚಾರ್ಯ ರಚನೆಯ ಕದನಕುತೂಹಲ ರಾಗ- ಆದಿತಾಳದಲ್ಲಿದ್ದ  ಶುದ್ಧ ನೃತ್ತಭಾಗವಾದ ‘ಜತಿಸ್ವರ’(ರಾಗಾಂಗಯತಿ ನೃತ್ತ ) -ಕ್ಲಿಷ್ಟಕರ ಸ್ವರಸಂಯೋಜನೆಯಿಂದ ಕೂಡಿದ್ದು, ಕಲಾವಿದೆ ಅದನ್ನು ಸುಭಗವಾಗಿ ನಿರ್ವಹಿಸಿದಳು. ಆಕಾಶಚಾರಿಯಲ್ಲಿ ಸುಮನೋಹರ ನೃತ್ತಗಳು, ಅರೆಮಂಡಿ-ಭ್ರಮರಿಗಳು ಮತ್ತು ಖಚಿತ ಅಡವುಗಳ ಸೌಂದರ್ಯದಲ್ಲಿ ಪ್ರದರ್ಶಿತವಾದವು.

 ನಂತರ- ಕಾಖಂಡಕಿ ಕೃಷ್ಣದಾಸರು ರಾಗಮಾಲಿಕೆ-ಖಂಡಛಾಪು ತಾಳದಲ್ಲಿ ರಚಿಸಿದ ‘ಸರಸ್ವತಿ ಸ್ತುತಿ’ಯನ್ನು ಕಲಾವಿದೆ, ‘ಜಯ ಜಯ ಸರಸ್ವತಿ’ಎಂದು ವಿದ್ಯಾವರದಾಯಿನಿಯನ್ನು ಅನೇಕ ಬಗೆಯಲ್ಲಿ ವರ್ಣಿಸುತ್ತ ಸುಮನೋಹರ ಭಂಗಿಗಳ ಮೂಲಕ ಶಾರದೆಯ ಚಿತ್ರಣವನ್ನು ದೈವೀಕವಾಗಿ ಕಟ್ಟಿಕೊಟ್ಟಳು. ಅನನ್ಯಳ ಸಾತ್ವಿಕಾಭಿನಯ, ಸುಕೋಮಲ ಚಲನೆಗಳು ಮುದನೀಡಿದವು.

ಪ್ರಸ್ತುತಿಯ ಹೃದಯ ಭಾಗ-ಅಷ್ಟೇ ಹೃದ್ಯ ಪ್ರಸ್ತುತಿ ‘ವರ್ಣ’ ದೀರ್ಘಬಂಧವನ್ನು ಸಾಕಾರಗೊಳಿಸಲು ಕಲಾವಿದರಿಗೆ ಆಳವಾದ ನೆನಪಿನ ಶಕ್ತಿ, ತಾಳ-ಲಯಜ್ಞಾನಗಳು ಅತ್ಯವಶ್ಯ. ಅವುಗಳನ್ನು ಸಾಧಿಸಿದ ಕಲಾವಿದೆ ಅನನ್ಯ ಬಹು ಸುಮನೋಹರವಾಗಿ, ಬಾಲಸುಬ್ರಮಣ್ಯ ಶರ್ಮ ವಿರಚಿತ ಮೋಹನರಾಗ-ಆದಿತಾಳದ ‘ವರ್ಣ’-ಸಕಲರನ್ನೂ ಕಾಪಿಡುವ ಜಗನ್ಮಾತೆಯ ಕಾರುಣ್ಯನಿಧಿಯನ್ನು ವಿವಿಧ ಬಗೆಯ ಸಂಚಾರಿಗಳ ಮೂಲಕ ಸಾಕ್ಷೀಕರಿಸಿದಳು.

ಶಿವ-ಗಿರಿಜೆಯ ಪ್ರೇಮಪರೀಕ್ಷೆ ಮಾಡುವ ಪ್ರಸಂಗದ ಸಂಚಾರಿ ಚೇತೋಹಾರಿಯಾಗಿ ಮಿನುಗಿದರೆ, ಶುಂಭ-ನಿಶುಂಭ, ರಕ್ತಬೀಜಾಸುರ ಮುಂತಾದ ರಕ್ಕಸರನ್ನು ಸಂಹರಿಸುವ ದೇವಿಯ ಅದ್ಭುತ ಶಕ್ತಿ-ಮಹಿಮೆಗಳನ್ನು ಮೆರೆವ ಕಥಾನಕವನ್ನು ಕಲಾವಿದೆ, ತನ್ನ ಪರಿಣತ ಅಭಿನಯದ ಮೂಲಕ ಪರಿಣಾಮಕಾರಿಯಾಗಿ ಪ್ರದರ್ಶಿಸಿದಳು. ಕೋಪಾವಿಷ್ಟ ತ್ರಿಶಕ್ತಿಯ ರೋಷಾವೇಶ-ಹೋರಾಟದ ಮಹಿಷಾಸುರಮರ್ಧಿನಿಯ ಪಟ್ಟುಗಳು ಮೈನವಿರೇಳಿಸಿದವು. ನಡುನಡುವೆ ಮೊಳಗಿದ ಗುರು ಪುಲಿಕೇಶೀ ಅವರ ಅಸ್ಖಲಿತ ನಟುವಾಂಗದ ಝರಿಗೆ ಅನುಗುಣ ನರ್ತಿಸಿದ ಅನುಶ್ರೀಯ ನೃತ್ತಾಲೋಲ-ಆರ್ಭಟದ ಹರಿತ ಜತಿಗಳ ನೋಟ ಬೆರಗು ಮೂಡಿಸಿತು. 

ಭಾವಪೂರ್ಣ ಗಾಯನದ ಬಾಲಸುಬ್ರಮಣ್ಯ ಶರ್ಮರ ಕಂಚಿನ ಕಂಠ ಆನಂದ ನೀಡಿತು. ಜನಾರ್ಧನರ ಮೃದಂಗದ ನುಡಿಸಾಣಿಕೆ ಕಲಾವಿದೆಯ ಜತಿಗಳ ಝೇಂಕಾರವನ್ನು ಉನ್ನತೀಕರಿಸಿದರೆ, ಹೇಮಂತಕುಮಾರರ ವಿಶಿಷ್ಟ ವಯೋಲಿನ ವಾದನ ಮತ್ತು ಲಕ್ಷ್ಮೀನಾರಾಯಣರ ರಿದಂ ಪ್ಯಾಡ್ ಸಾಂದರ್ಭಿಕ ಧ್ವನಿ ಪರಿಣಾಮಗಳನ್ನು ನೀಡಿ ನೃತ್ಯ ಪ್ರಸ್ತುತಿಯ ತೀವ್ರತೆ ವೃದ್ಧಿಸಿತು. ಕಿಕ್ಕೇರಿ ಜಯರಾಂ ಅವರ ಮುರಳೀಗಾನ ದೈವೀಕ ಅನುಭವದ ನೆಲೆಯಲ್ಲಿ ರಸಾನುಭವ ನೀಡಿತು.    

ಮುಂದೆ- ಭದ್ರಾಚಲ ರಾಮದಾಸರ ಕೀರ್ತನೆ( ಖಂಡಚಾಪು ತಾಳ-ಕಾಂಭೋಜಿರಾಗ)ಗೆ ಜೀವತುಂಬಿ ನರ್ತಿಸಿದ ಅನುಶ್ರೀ, ‘ಏಮಯ್ಯ ರಾಮ…’ ಎಂದು ಶ್ರೀರಾಮಚಂದ್ರನಲ್ಲಿ ಆತ್ಮೀಯತೆಯಿಂದ ಸಂವಾದ ನಡೆಸುತ್ತ, ಸಾತ್ವೀಕ ಅಭಿನಯದ ಮಜಲಿನಲ್ಲಿ ರಾಮನ ಪಾದಕ್ಕೆ ತನ್ನ ಭಕ್ತಿತಾದಾತ್ಮ್ಯದ ಭಾವಸಮರ್ಪಣೆಯನ್ನು ಸಲ್ಲಿಸಿದಳು. ಮನಮೋಹಕ ಶ್ರೀರಾಮನ ಸೌಮ್ಯ ಉನ್ನತ ಭಂಗಿಯನ್ನು ಸುಮನೋಹರವಾಗಿ ಕಣ್ಮುಂದೆ ತಂದು ನಿಲ್ಲಿಸಿದಳು.

ಅನಂತರ ಅನುಶ್ರೀ ಪ್ರದರ್ಶಿಸಿದ್ದು ‘ಯಶೋದೆಯ ಸ್ವಗತ’ -ಎಂಬ ನಾಟಕೀಯ ಆಯಾಮ ತೆರೆದುಕೊಂಡ ಅನುಪಮವಾದ ಅಭಿನಯ ಸಾಕ್ಷಾತ್ಕಾರ. ಮಾಲಿನಿ ರವಿಶಂಕರ್ -ಕಾಪಿರಾಗ-ರೂಪಕತಾಳದಲ್ಲಿ ರಚಿಸಿದ ‘ಕಾಣದಾಗಿದೆ ಎನ್ನ ಕೃಷ್ಣನ ವದನ…’ಎಂದು ತಾಯ ಮಮತೆಯ ಹಂಬಲದಿಂದ ತನ್ನ ನೋವನ್ನು  ತೋಡಿಕೊಳ್ಳುವ ಯಶೋದೆಯ ವೇದನೆಯನ್ನು ಅನುಶ್ರೀ ಸೊಗಸಾಗಿ ಅಭಿವ್ಯಕ್ತಿಸಿದಳು. ಮನೆಗೆ ಬಂದೊಡನೆ ಮಗ ಬಾಲಕೃಷ್ಣನನ್ನು ಕಾಣದ ತಾಯಿ ವ್ಯಾಕುಳತೆಯಲ್ಲಿ ಮುಳುಗಿ ಅವನ ಸಾಹಸದ ಒಂದೊಂದು ಕಥೆಗಳು, ಪವಾಡಸದೃಶ ಪ್ರಸಂಗಗಳನ್ನು ನೆನಪಿಸಿಕೊಂಡು ಮತ್ಯಾವ ಸಾಹಸಕ್ಕೆ ಕೈಹಾಕಿ ತನ್ನ ಕಂದ ಅಪಾಯಕ್ಕೆ ಸಿಲುಕಿದನೋ ಎಂಬ ತುಮುಲ-ತೊಳಲಾಟ ಅವಳದು. ಅವಳ ಚಿತ್ತಭಿತ್ತಿಯಲ್ಲಿ ಹಾದುಹೋದ ಪ್ರಸಂಗಗಳನ್ನು ವೇದಿಕೆಯ ಮೇಲೆ ದೃಶ್ಯಗಳನ್ನಾಗಿ ಅರಳಿಸಿದ ಅಭಿನಯ ಚಾತುರ್ಯ ಕಲಾವಿದೆಯದು. ಕಣ್ಮರೆಯಾದ ಮಗನ ಕುರಿತು ಭಯ ಭೀತಳಾದ ಯಶೋದೆಯಾಗಿ, ಅನುಶ್ರೀ ರಂಗ ತುಂಬಾ ವಿಹ್ವಲತೆಯಿಂದ ತಾರಾಡುತ್ತ, ‘ನನ್ನ ಕೃಷ್ಣ ಎಲ್ಲಿದ್ದಾನೆ..ಅವನಿಗೇನಾಯ್ತು..’ ಎಂದು ಪುಂಖಾನುಪುಂಖವಾಗಿ ಸ್ವಗತದ ಚಿಂತಿತ  ಮಾತುಗಳನ್ನು ಅಭಿವ್ಯಕ್ತಿಸುತ್ತ, ಆರ್ತಕಂಠದಲ್ಲಿ ಒರಲುವ ದುಃಖಾರ್ತ ನುಡಿಗಳು ನೋಡುಗರನ್ನು ಕದಲಿಸಿದವು. ಗುರು ಪುಲಿಕೇಶಿಯವರ ‘ವಾಚಿಕಾಭಿನಯ’ದ ಸಂಯೋಜನೆ- ಪ್ರಯೋಗ ಶ್ಲಾಘನೀಯವಾಗಿತ್ತು.    

ಅನಂತರ ಕಲಾವಿದೆ- ದಾಸವರೇಣ್ಯರ ಸಂಕಲಿತ ನುಡಿ-ವಾಣಿಗಳ ಕ್ರೌಡ್ಹೀಕರಣದ ಸಾಂಗತ್ಯದಲ್ಲಿ ಶಿವದರ್ಶನ ( ರಾಗಮಾಲಿಕೆ-ತಾಳಮಾಲಿಕೆ) ವನ್ನು, ‘ನೀಲಕಂಠ ಮಹಾದೇವ’ನ ಚಿದಂಬರ ನಟರಾಜನ ಅದ್ಭುತರೂಪಗಳನ್ನು ಅನ್ಯಾದೃಶವಾಗಿ ಸಾಕ್ಷಾತ್ಕರಿಸಿ ಮನಮುಟ್ಟಿದಳು. ವಿವಿಧ ನಾಗವಿನ್ಯಾಸಗಳ ಜತಿಗಳ ಪೋಣಿಕೆ, ಪ್ರಖರ ನೃತ್ಯಾಭಿನಯ ವಿಶಿಷ್ಟವಾಗಿತ್ತು. ಅನೇಕ ದಾಸರುಗಳ ಭಕ್ತಿ ನಿವೇದನೆಯ ಸುಂದ ಸಮುಚ್ಛಯ ಇದಾಗಿತ್ತು. ಅಂತ್ಯದಲ್ಲಿ ಪುಲಿಕೇಶೀ ಕಸೂರಿ ಸಂಯೋಜನೆಯ ಮಧುವಂತಿ ರಾಗ- ಖಂಡ ಮಟ್ಯ ತಾಳದಲ್ಲಿ ಅನುಶ್ರೀ ಮಿಂಚಿನ ಸಂಚಾರದ ಗತಿಭೇದಗಳಿಂದ  ‘ತಿಲ್ಲಾನ’ವನ್ನು ಅನುಪಮವಾಗಿ-ಲವಲವಿಕೆಯಿಂದ ಅರ್ಪಿಸಿದ್ದು ಶ್ಲಾಘನೀಯವಾಗಿತ್ತು.

                             ***************

Related posts

ಉದಯೋನ್ಮುಖ ಕಲಾವಿದೆಯರ ಭರವಸೆಯ ನೃತ್ಯ ಪ್ರದರ್ಶನ

YK Sandhya Sharma

ಭರವಸೆ ಚೆಲ್ಲುವ ನೃತ್ಯ ಮಂದಾರ

YK Sandhya Sharma

ಕಣ್ಮನ ತುಂಬಿದ ಪವಿತ್ರ ಪ್ರಿಯಳ ಭಾವಸ್ಫುರಣ ನೃತ್ಯ

YK Sandhya Sharma

Leave a Comment

This site uses Akismet to reduce spam. Learn how your comment data is processed.