Image default
Dancer Profile

ಪರಿಪೂರ್ಣ ನೃತ್ಯಗುರು ರಾಧಾ ಶ್ರೀಧರ್

ಬಹು ಸರಳ ಸ್ವಭಾವದ, ಬಹುಮುಖ ವ್ಯಕ್ತಿತ್ವದ, ಆಳವಾದ ಅನುಭವ ಹೊಂದಿದ ನಾಟ್ಯಗುರು ಶ್ರೀಮತಿ ರಾಧಾ ಶ್ರೀಧರ್ ನೃತ್ಯಕ್ಷೇತ್ರದ ಹಳೆಯ ಹೆಸರು. ನೃತ್ಯ ಕಲಿಕೆಯ ಬಗ್ಗೆ ನಿಜವಾದ ಆಸಕ್ತಿ ಹೊಂದಿ, ಸಾಧನೆಯ ಹಾದಿಯಲ್ಲಿ ಬಂದ ಅನೇಕ ಎಡರು ತೊಡರುಗಳನ್ನೆದುರಿಸಿ ತಾವೂ ಬೆಳೆದು, ತಮ್ಮ ಶಿಷ್ಯ ಕೋಟಿಯನ್ನೂ ಬೆಳೆಸಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಹಿರಿಮೆ ಅವರದು. ಐದುದಶಕಗಳ ನೃತ್ಯಶಿಕ್ಷಣ ದೀರ್ಘಾನುಭವವುಳ್ಳ ಎಂಭತ್ತು ದಾಟಿದ ವಯಸ್ಸಿನಲ್ಲೂ, ಹೊಸ ಪ್ರಯೋಗ-ಪರಿಕಲ್ಪನೆಯ ನೃತ್ಯನಾಟಕಗಳ ಸಂಯೋಜನೆ-ನಿರ್ಮಾಣಗಳಲ್ಲಿ ತೊಡಗಿಕೊಂಡಿರುವ ಉತ್ಸಾಹೀ ಚೇತನ ಇವರದು .

ಸುಮಾರು ಏಳೆಂಟು ವಯಸ್ಸಿನಲ್ಲೇ ರಾಧಾ ಅವರ ನೃತ್ಯಾಸಕ್ತಿ, ಅಭಿನಯ ಪ್ರತಿಭೆ ಮನೆಯವರ ಗಮನಕ್ಕೆ ಬಂದಿತ್ತಂತೆ. ಶಾಲೆಯಲ್ಲಿ ಪದ್ಯವಾಚನ ಮಾಡುವಾಗ, ನೃತ್ಯ- ಅಭಿನಯಗಳನ್ನು ಬೆರೆಸಿ ನಿರೂಪಿಸುತ್ತಿದ್ದ ಬಗೆ ಅವರು ನೃತ್ಯ ಕಲಿಯುವಂತೆ ಮಾಡಿತ್ತು. ಮೊದಲಿಗೆ ನಾಟ್ಯಾಚಾರ್ಯ ಹೆಚ್.ಆರ್. ಕೇಶವಮೂರ್ತಿಯವರಲ್ಲಿ ಭರತನಾಟ್ಯ ಮತ್ತು ಕಥಕ್ ನೃತ್ಯವನ್ನು ಹಲವಾರು ವರ್ಷಗಳು ಕಲಿತರು. ಅನಂತರ ಯು.ಎಸ್.ಕೃಷ್ಣರಾವ್ ಮತ್ತು ಚಂದ್ರಭಾಗಾದೇವಿ ದಂಪತಿಗಳ ಬಳಿ ಭರತನಾಟ್ಯಾಭ್ಯಾಸ ಮುಂದುವರಿಕೆ. ಮುಂದೆ ಮುತ್ತಯ್ಯ ಪಿಳ್ಳೈ, ವೆಂಕಟಲಕ್ಷಮ್ಮ  ಅವರಲ್ಲಿ ಹೆಚ್ಚಿನ ನೃತ್ಯ ಶಿಕ್ಷಣ. ಕೆಲವು ಕಾಲ ಆಚಾರ್ಯಲು ಅವರಿಂದ ಕುಚುಪುಡಿ ನೃತ್ಯಶೈಲಿಯನ್ನೂ ಅಭ್ಯಾಸ ಮಾಡಿದರು.  ಜೊತೆಜೊತೆಗೆ ಕರ್ನಾಟಕ ಸಂಗೀತವನ್ನು ಪಲ್ಲವಿ ಚಂದ್ರಸಿಂಗ್ ಅವರ ಬಳಿ ಹತ್ತಾರುವರ್ಷ ಕಲಿತು ಸೊಗಸಾಗಿ ಹಾಡಲು ಶಕ್ತರಾದರು. ಮೌಂಟ್ ಕಾರ್ಮಲ್ ಕಾಲೇಜಿನಿಂದ ಬಿ.ಎ. ಪದವೀಧರೆಯೂ ಆದರು. ಜೊತೆಗೆ ಬಿ.ಎಡ್.ಪದವಿಯೂ ಲಭ್ಯ. ಅಷ್ಟರಲ್ಲಿ ಮದುವೆಯೂ ಆಗಿ, ಮಕ್ಕಳಾದ ಮೇಲೂ ಪತಿಯ ಪ್ರೋತ್ಸಾಹದಿಂದ ನೃತ್ಯ ಕಲಿಕೆಯನ್ನು  ಮುಂದುವರಿಸಿದರು. ಪರಿಪೂರ್ಣ ಕಲಾವಿದರಾದವರಿಗೆ ಎಲ್ಲ ಕಲೆಗಳ ಪರಿಚಯವೂ ಅತ್ಯಗತ್ಯ ಎಂಬ ಅಭಿಪ್ರಾಯವುಳ್ಳ ಅವರು, ಪ್ರಸಿದ್ಧ ಮೃದಂಗ ವಿದ್ವಾನ್ ಟಿ.ಎ.ಎಸ್.ಮಣಿಯವರಿಂದ ಮೃದಂಗ ವಾದನವನ್ನೂ ಕಲಿತು ಸಂಪೂರ್ಣ ಲಯಜ್ಞಾನ-ತಾಳಜ್ಞಾನಗಳ ಮೇಲೆ ಹತೋಟಿ ಪಡೆದುಕೊಂಡರು.

ವಿದ್ಯಾರ್ಥಿ ದೆಸೆಯಲ್ಲಿಯೇ ನಾಡಿನ ಹಲವಾರು ಕಡೆ ಪ್ರತಿಷ್ಟಿತ ನೃತ್ಯೋತ್ಸವಗಳಲ್ಲಿ ಏಕವ್ಯಕ್ತಿ ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಕೆಲವೇ ಮಂದಿ ನುರಿತ ನೃತ್ಯಗುರುಗಳಿದ್ದ ಅಂದಿನ ಕಾಲಘಟ್ಟದಲ್ಲಿ, ಸಹಜವಾಗಿ, ರಾಧಾ ಶ್ರೀಧರ್ ಅವರಂಥ ಹಿರಿಯ-ನಿಷ್ಠ ಕಲಾವಿದರಿಗೆ ಸರ್ಕಾರದಿಂದ ಹಿಡಿದು ಖಾಸಗಿ ಸಂಸ್ಥೆಗಳವರೆಗೂ ಉತ್ತಮ ಪ್ರೋತ್ಸಾಹ ಮತ್ತು ಅವಕಾಶಗಳು ದೊರೆತವು. ಹಲವು ನೃತ್ಯಶೈಲಿಗಳ ಸಂಗಮವಾದ ಇವರು, 1969 ರಲ್ಲಿ ತಮ್ಮದೇ ಆದ `ವೆಂಕಟೇಶ ನಾಟ್ಯ ಮಂದಿರ’ ಎಂಬ ನೃತ್ಯಶಾಲೆಯನ್ನು ತೆರೆದು, ಶುದ್ಧ ಶಾಸ್ತ್ರೀಯ ಭರತನಾಟ್ಯವನ್ನು ಹೇಳಿಕೊಡತೊಡಗಿದರು. ಸುವರ್ಣ ಮಹೋತ್ಸವ ಆಚರಿಸಿರುವ ಇವರ ನಾಟ್ಯ ಶಾಲೆ, ಗುಣಮಟ್ಟದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು, ಇದುವರೆಗೂ ಸಾವಿರಾರು ನೃತ್ಯಪಟುಗಳನ್ನು ತಯಾರು ಮಾಡಿದ ಕೀರ್ತಿ ರಾಧಾ ಶ್ರೀಧರ್ ಅವರದು. ಇವರ ಅನೇಕ ಜನ ಶಿಷ್ಯರು ಉತ್ತಮ ಸಾಧನೆ ಮಾಡಿದ್ದು, ಪ್ರಖ್ಯಾತರಾಗಿದ್ದಾರೆ. ಜೊತೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಇವರ ಗುರು ಪರಂಪರೆಯ ಹೆಸರು ಉಳಿಸಿ, ಅಮೇರಿಕಾ, ಆಸ್ಟ್ರೆಲಿಯಾದ್ಯಂತ ನಾಟ್ಯಶಾಲೆಗಳನ್ನು ಸ್ಥಾಪಿಸಿ, ನೃತ್ಯಗುರುಗಳಾಗಿ ಸಕ್ರಿಯರಾಗಿ, ನೂರಾರು ನೃತ್ಯ ಪ್ರತಿಭೆಗಳನ್ನು ಬೆಳೆಸುತ್ತಿದ್ದಾರೆ.  

ಕರ್ನಾಟಕ ಸರ್ಕಾರದ ಪ್ರತಿಷ್ಟಿತ ‘ಶಾಂತಲಾ’ ಮತ್ತು ‘ರಾಜ್ಯೋತ್ಸವ’, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ‘ಕರ್ನಾಟಕ ಕಲಾತಿಲಕ’ , ಮೈಸೂರು ದಸರಾ ಪ್ರಶಸ್ತಿಗಳೊಡನೆ `ನಾಟ್ಯವಿಶಾರದೆ, ‘ಭರತ’, `ನಾಟ್ಯ  ಶಿರೋಮಣಿ’, `ಆರ್ಯಭಟ’ ಮುಂತಾದ ನೂರಾರು ಪ್ರಶಸ್ತಿ-ಗೌರವಗಳಿಂದ ಸನ್ಮಾನಿತರಾಗಿರುವ ರಾಧಾ ಶ್ರೀಧರ್ ಅವರಿಂದ ನೃತ್ಯರಂಗಕ್ಕೆ ಸಂದಿರುವ ಸೇವೆ ಅನುಪಮ.  ಇತ್ತೀಚಿಗೆ ಅವರ ಅಪೂರ್ವ ನೃತ್ಯ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ, ಸಂಗೀತ ನಾಟಕ ಅಕಾಡೆಮಿಯ ಉನ್ನತ ಪ್ರಶಸ್ತಿಯನ್ನು ಕೊಡಮಾಡಿರುವುದು ಅವರ ಗರಿಮೆಯ ಇನ್ನೊಂದು ಗರಿ.        

 ಹಲವಾರು ಬಾರಿ ಅಮೇರಿಕಾದ್ಯಂತ ತಮ್ಮ ತಂಡದೊಡನೆ ನೃತ್ಯ ಕಾರ್ಯಕ್ರಮಗಳನ್ನು ನೀಡಿದ ಹೆಗ್ಗಳಿಕೆ ಇವರದು. ಅಮೆರಿಕಾದ ಚಿಕಾಗೋ, ಪಿಟ್ಸ್ ಬರ್ಗ್, ಪೋರ್ಟ್ ಲ್ಯಾಂಡ್, ಸ್ಯಾನ್ಹೂಸೆ , ಹ್ಯೂಸ್ಟನ್, ಕ್ಲೀವ್ಸ್ ಲ್ಯಾಂಡ್, ವೆಸ್ಟ್ ವರ್ಜೀನಿಯಾ, ವಾಶಿಂಗ್ಟನ್ ಡಿ.ಸಿ., ಯು.ಎ.ಇ.-ಅಬುದಾಬಿ ಮತ್ತು ದುಬಾಯ್, ಗ್ರೇಟ್ ಬ್ರಿಟನ್ ಮ್ಯಾಂಚೆಸ್ಟರ್ ಮುಂತಾದ ಪ್ರದೇಶಗಳಲ್ಲಿ ಅನೇಕ ನೃತ್ಯ ಕಾರ್ಯಕ್ರಮ ಮತ್ತು ಅಮೆರಿಕಾದ ಹ್ಯೂಸ್ಟನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನಗಳಲ್ಲಿ, ನ್ಯೂಜರ್ಸಿಯಾ ಅಕ್ಕ ಸಮ್ಮೇಳನದಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಹಂಪಿ, ಕದಂಬ, ಪಟ್ಟದಕಲ್ಲು ,ಮೇಲುಕೋಟೆ, ಸರ್ವಧರ್ಮ ಸಮ್ಮೇಳನ, ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ, ಸ್ವಾತಂತ್ರ್ಯೋತ್ಸವ ಮುಂತಾಗಿ ಸರ್ಕಾರ ನಡೆಸುವ ಎಲ್ಲ ಉತ್ಸವಗಳಲ್ಲಿ, ಹಾಗೂ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಅಸಂಖ್ಯಾತ ಕಾರ್ಯಕ್ರಮಗಳನ್ನು ನೀಡಿದ್ದು, ಇವರ ಪ್ರತಿಭೆಗೆ ಅತ್ಯುತ್ತಮ ಗೌರವ, ಅನೇಕ ಅವಕಾಶಗಳು ಒದಗಿವೆ.

ದೂರದರ್ಶನದ ಐತಿಹಾಸಿಕ ಖ್ಯಾತಿ ಪಡೆದ  `ನೆಕ್ಟರ್ ಇನ್ ಸ್ಟೋನ್ ‘ ಮತ್ತು `ಸಾಂಗ್ಸ್ ಆಫ್ ಸೋಮನಾಥ್ ಪುರ್ ‘ ನೃತ್ಯ ಸಂಯೋಜನೆಯ ಹಿರಿಮೆ ಇವರದು. ದೂರದರ್ಶನದ  ಇಪ್ಪತ್ತು ಕಂತುಗಳ ಜನಪ್ರಿಯ ಧಾರಾವಾಹಿ ‘ ಕೃಷ್ಣ ನೀ ಬೇಗನೆ ಬಾರೋ’ ಗೆ ನೃತ್ಯ ನಿರ್ದೇಶನ ಇವರದೇ. ಚಂದನ ವಾಹಿನಿಗೆ `ಚಾಮುಂಡೆಶ್ವರಿ ಪಾಲಯಮಾಂ’ ಮುಂತಾದ ಅನೇಕ ನೃತ್ಯರೂಪಕಗಳನ್ನು ಪ್ರದರ್ಶಿಸಿದ್ದಾರೆ.

ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯ ಸದಸ್ಯೆಯಾಗಿ ಸೇವೆ ಸಲ್ಲಿಸಿದ ಇವರು, ಬೆಂಗಳೂರು ವಿಶ್ವ ವಿದ್ಯಾಲಯ ಮತ್ತು ಕರ್ನಾಟಕ ಸರ್ಕಾರದ ಅನೇಕ ನೃತ್ಯ ಪರೀಕ್ಷೆಗಳಿಗೆ ಪರೀಕ್ಷಕರು, ದಕ್ಷಿಣ ವಲಯದ ಕಲಾಕೇಂದ್ರ ನಾಗಪುರದ ಸಂಸ್ಥೆಗೆ ಸೇವೆ ಸಲ್ಲಿಸಿದ ಗೌರವ ಇವರ ವಿಶೇಷ.

ಶ್ರೀಮತಿ ರಾಧಾ ಶ್ರೀಧರ್ ನೃತ್ಯ ಸಂಯೋಜಿಸಿದ ಖ್ಯಾತ ನೃತ್ಯ ನಾಟಕಗಳು ಅನೇಕಾನೇಕ . ಅವುಗಳಲ್ಲಿ ಬಹು ಮುಖ್ಯವಾದವು – ಗೀತಗೋವಿಂದ, ಹನುಮದ್ವಿಲಾಸ, ರಾಮಾಯಣ, ನೀಲಾಂಜನೆ, ಶ್ರೀನಿವಾಸ ಕಲ್ಯಾಣ, ನವವಿಧ ಭಕ್ತಿ, ಬುದ್ಧ ಮತ್ತು ಆಮ್ರಪಾಲಿ, ವಿಕ್ರಮೋರ್ವಶೀಯ, ಛತ್ರಪತಿ ಶಿವಾಜಿ,ಅತ್ತಿಮಬ್ಬೆ, ಶಾಂತಲಾ, ಮೋಹಿನಿ ಭಸ್ಮಾಸುರ ಮುಂತಾದವು. ಈ ಹಿರಿ ವಯಸ್ಸಿನಲ್ಲೂ ಅವರ ಕ್ರಿಯಾಶೀಲತೆ, ಉತ್ಸಾಹದ ಮನೋಭಾವ ಸ್ತುತ್ಯಾರ್ಹ.

Related posts

ಪ್ರತಿಭಾವಂತ ಕಲಾಪ್ರಪೂರ್ಣೆ ಸುಷ್ಮಾ ಕೆ.ರಾವ್

YK Sandhya Sharma

ಭರವಸೆಯ ಕಥಕ್ ನರ್ತಕ ಅಶ್ವಿನ್ ಜೆ. ಪ್ರಭಾತ್

YK Sandhya Sharma

ಪ್ರತಿಭಾವಂತ ನೃತ್ಯಗುರು ವಿದುಷಿ ಕೆ.ಬೃಂದಾ

YK Sandhya Sharma

Leave a Comment

This site uses Akismet to reduce spam. Learn how your comment data is processed.