Image default
Dance Reviews

ರಸಾನುಭವ ನೀಡಿದ ಮಧುಶ್ರೀ ನರ್ತನ

ಯಾವುದೇ ‘ರಂಗಪ್ರವೇಶ’ವಾಗಲಿ ನರ್ತನ ಪ್ರಸ್ತುತಿಯ ಮೊದಲರ್ಧ ಭಾಗ, ಕಲಾವಿದೆಯ ದೈಹಿಕವಿನ್ಯಾಸಗಳು, ಮೂಲಭೂತ ಅಡವುಗಳು, ಹಸ್ತಚಲನೆ ಮತ್ತು ನೃತ್ತಗಳ ಪ್ರದರ್ಶನಗಳಿಂದ ಕೂಡಿರುತ್ತವೆ. ಇವು ಪ್ರಸ್ತುತಿಯ ಮುಂದಿನ ಭಾಗಕ್ಕೆ ಸಿದ್ಧತೋಪಾದಿಯಲ್ಲಿ, ಅಭ್ಯಾಸದ ಪುನರ್ಮನನಕ್ಕೆ ಪೂರಕವಾಗಿರುತ್ತವೆ. ಸಾಮಾನ್ಯವಾಗಿ, ಉತ್ತರಾರ್ಧದ ಕೃತಿಗಳು ಅಭಿನಯಪ್ರಧಾನವಾಗಿ, ಕಲಾವಿದೆಯ ಕಲಾಪ್ರಾವೀಣ್ಯ ಮತ್ತು ಅಭಿನಯ ಪಕ್ವತೆಯನ್ನು ಹೊರಸೂಸುವಂತಿರುತ್ತವೆ. ಮೊದಲಭಾಗ ಕಣ್ಣಿಗೆಹಬ್ಬವಾದರೆ, ಎರಡನೆಭಾಗ ಹೃದಯವನ್ನಾವರಿಸಿ, ಮನಸ್ಸನ್ನು ಸ್ಪರ್ಶಿಸುತ್ತದೆ. ಸಮರ್ಥ ಕಲಾವಿದರಾದವರು ನೃತ್ತಾಭಿನಯ ಎರಡರಲ್ಲೂ ಗೆದ್ದು, ಕಲಾಪ್ರೇಮಿಗಳನ್ನು ಮೆಚ್ಚಿಸುವಂತಾದರೆ ಅವರ ಶ್ರಮ ಸಾರ್ಥಕ.

ಇತ್ತೀಚಿಗೆ ವಿಜಯನಗರದ `ಕಾಸಿಯಾ’ಭವನದಲ್ಲಿ ನಡೆದ ಮಧುಶ್ರೀ ದೇವರಾಜ್ ಅವರ ರಂಗಪ್ರವೇಶದಲ್ಲಿ ಸಾದರಪಡಿಸಿದ ಭಾವಪೂರ್ಣ ನೃತ್ಯ ಪ್ರದರ್ಶನಕ್ಕೆ ಈ ಮಾತು ಅನ್ವಯ. ಖ್ಯಾತ ‘ಭರತ ನೃತ್ಯ-ಸಂಗೀತ ಅಕಾಡೆಮಿ’ಯ ನಿರ್ದೇಶಕಿ ಮತ್ತು ನಾಟ್ಯಗುರು ಡಾ. ಶುಭಾರಾಣಿ ಬೋಳಾರ್ ಪಂದನಲ್ಲೂರು ಶೈಲಿಯ ಭರತನಾಟ್ಯದ ನೃತ್ಯಕಲಾವಿದೆಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಸೃಜನಶೀಲ ಪ್ರತಿಭಾವಂತೆ. ಇಂಥ ಗುರುಗಳ ಉತ್ತಮ ಮಾರ್ಗದರ್ಶನದಲ್ಲಿ ರೂಪುಗೊಂಡ ಮಧುಶ್ರೀ ದೇವರಾಜ್ ಕೂಡ ಸೂಕ್ಷ್ಮ ಸಂವೇದಿ ಕಲಾವಿದೆ. ಅಂದು ಅವಳು ಪ್ರದರ್ಶಿಸಿದ ಅಭಿನಯಪ್ರಧಾನ ಕೃತಿಗಳಲ್ಲಿ ಅವಳ ಅಭಿನಯಪ್ರಾವೀಣ್ಯ ಎದ್ದುತೋರಿತ್ತು.

ಮೊದಲಿಗೆ ಪಾಲಿನಿ ರಾಗದ ‘ಪುಷ್ಪಾಂಜಲಿ’ಯಲ್ಲಿ ಸಲ್ಲಿಸಿದ ಪ್ರಾರ್ಥನಾ ರೂಪದ ನೃತ್ಯದ ಆಂಗಿಕಚಲನೆಗಳು, ಖಚಿತಹಸ್ತ, ದೃಢವಾದ ಅಡವುಗಳ ಸೌಂದರ್ಯ ಕಲಾವಿದೆಯ ಅಂಗಶುದ್ಧಿಗೆ ಕನ್ನಡಿ ಹಿಡಿದವು. ಹೊಸವಿನ್ಯಾಸದ ನೃತ್ತಗಳ ನೇಯ್ಗೆ ಚೇತೋಹಾರಿಯಾಗಿತ್ತು. ಹಂಸಧ್ವನಿಯ ‘ ವಿನಾಯಕ ಸ್ತುತಿ’ ಯಲ್ಲಿ ಮೂಡಿಬಂದ ವಕ್ರತುಂಡ ಮಹಾಕಾಯನ ರೂಪ-ಭಂಗಿಗಳು ನವನವೀನವಾಗಿದ್ದವು. ಗುರು ಶುಭಾ ಅವರ ಶಕ್ತ ನಟುವಾಂಗಕ್ಕೆ ಮೂಡಿಬಂದ ಅವಳ ಚುರುಕಾದ ಜತಿಗಳು ಗಮನ ಸೆಳೆಯುವಂತಿದ್ದವು. ಭಾವ ಬೆರೆಸಿ ಮಾಡಿದ ಗಣೇಶನ ಪ್ರಾರ್ಥನೆ ಭಕ್ತಿಪುರಸ್ಸರವಾಗಿತ್ತು.  ಮುಂದಿನ ದೇವಿಸ್ತುತಿ -ರಚನೆ: ಮಹಾರಾಜ ಸ್ವಾತಿ ತಿರುನಾಳ್, ರಾಗ-ಕಾನಡ, ತಾಳ-ರೂಪಕ.  ‘ ಮಾಮವ ಸದಾ ಜನನಿ’ ಎಂದು ದೇವಿ ಕಾತ್ಯಾಯಿನಿಯ  ದಿವ್ಯ ಸೌಂದರ್ಯ ಮತ್ತು ಮಹಿಮೆಗಳನ್ನು ವಾಗ್ಗೇಯಕಾರ ಮನಸಾರೆ ಕೊಂಡಾಡುತ್ತಾನೆ. ಶಂಕರಿಯ ಸುಂದರ ನಾನಾ ಭಂಗಿಗಳನ್ನು ಮಧುಶ್ರೀ ತನ್ನ ಅನುಪಮ ಆಂಗಿಕಗಳಿಂದ, ಭಾವಪೂರ್ಣ ಮುಖಭಾವದಿಂದ ಕಣ್ಮನ ತುಂಬುವಂತೆ ಕಟ್ಟಿಕೊಟ್ಟಳು. ಆಕೆಯ ಪ್ರತಿಯೊಂದು ಚಲನೆಯೂ ಕಲಾತ್ಮಕವಾಗಿದ್ದವು. ನೃತ್ಯ ಸಂಯೋಜನೆಯಲ್ಲಿ ಗುರು ಶುಭಾ ಅವರ ತನ್ನತನದ ಅಸ್ಮಿತೆ ಮುದ ನೀಡಿತ್ತು.

ಪ್ರಸ್ತುತಿಯ ಕೇಂದ್ರಭಾಗದಲ್ಲಿ ಮನಸೆಳೆದ ‘ವರ್ಣ’ (ರಾಗ- ನಾಟಕುರಂಜಿ, ರಚನೆ- ಪಾಪನಾಶ ಶಿವಂ)  ಸಂಕೀರ್ಣ ನೃತ್ತಗಳಿಂದ ಕೂಡಿದ್ದು ಕಲಾವಿದೆಯ ಪ್ರತಿಭಾ ಸಾಮರ್ಥ್ಯ ಪ್ರದರ್ಶನಕ್ಕೆ ಸಂಪೂರ್ಣ ಅವಕಾಶ ಹಾಗೂ ಲಯ-ತಾಳಜ್ಞಾನಗಳಿಗೆ ಮತ್ತು ನೆನಪಿನಶಕ್ತಿಗೆ ಸವಾಲು ಒಡ್ಡುವಂತಿತ್ತು. ಮಧುಶ್ರೀ ತನ್ನ ಶಕ್ತಿಶಾಲಿ ನೃತ್ತ ಮಾಲೆಯ ಕೌಶಲ್ಯ ಪ್ರದರ್ಶನ ಹಾಗೂ ಹೃದಯಸ್ಪರ್ಶಿ ಅಭಿನಯದಿಂದ ಯಶಸ್ವಿಯಾದಳು. `ಸ್ವಾಮಿ ನಾನುಂಡನಡಿಮೈ’ ಎಂದು ನಟರಾಜನ ದರ್ಶನಕ್ಕಾಗಿ ಹಾತೊರೆದು ಹಂಬಲಿಸುವ ದಿಸೆಯಲ್ಲಿ , ಆ ಶಿವ ದಯೆ ತೋರಿದ ನಾನಾ ಉದಾಹರಣೆಗಳನ್ನು ಕೊಟ್ಟು, ಇಂಥ ದಯಾಪರನಾದ ನೀನು ನನ್ನನ್ನು ಉದಾಸೀನ ಮಾಡುವೆಯಾ ಎಂದು ಅವನ ಮನ ಕರಗುವಂತೆ ಭಕ್ತಿ ಅರ್ಚನೆ ಸಲ್ಲಿಸಿ ಬೇಡಿಕೊಳ್ಳುವ ನಾಯಕಿಯ ಅಂತರಂಗ ಹೊಕ್ಕು ಕಲಾವಿದೆ, ಆರ್ದ್ರಳಾಗಿ ಮೊರೆಯಿಟ್ಟಿದ್ದು ಅತ್ಯಂತ ಪರಿಣಾಮಕಾರಿಯಾಗಿತ್ತು.

ನೃತ್ಯಸಿದ್ಧಿಯ ದ್ಯೋತಕವಾಗಿ ಅವಳು ತೋರಿದ ಆಕಾಶಚಾರಿಗಳು, ಪಾದಭೇದಗಳು, ಹಸ್ತ ಖಾಚಿತ್ಯ, ಕರಣಗಳು ನಿಜಕ್ಕೂ ಒಟ್ಟಂದಕ್ಕೆ ಪೂರಕವಾಗಿದ್ದವು. ಯಾವ ಚಲನೆಯಲ್ಲೂ  ಪುನರಾವರ್ತನೆಯಿಲ್ಲದೆ, ವಿರಹಭಾವದ ಅಭಿವ್ಯಕ್ತಿಯಲ್ಲಿ, ಸೂಕ್ಷ್ಮ ಅಭಿನಯದಲ್ಲಿ ತನ್ಮಯತೆ ಹಾಗೂ ಭಾವತೀವ್ರತೆ ತುಳುಕಿಸಿದ್ದು ಕಲಾಪ್ರೇಮಿಗಳ ಮೆಚ್ಚುಗೆ ಪಡೆದಿತ್ತು. ಕಲಾವಿದೆಯ ನೃತ್ಯಪ್ರೀತಿ ಸಂಪೂರ್ಣ ವ್ಯಕ್ತಗೊಂಡು ನಟರಾಜನಿಗೆ ಶುದ್ಧ ಸಮರ್ಪಣೆಯಾಗಿತ್ತು ವರ್ಣದ ಪ್ರಸ್ತುತಿ.

ಮುಂದೆ ಹುಸೇನಿ ರಾಗದ `ಪದಂ’ ನಲ್ಲಿ ಖಂಡಿತಾ ನಾಯಕಿ ಪರಸ್ತ್ರೀ ವ್ಯಾಮೋಹದಲ್ಲಿ ಸಿಲುಕಿದ ಪತಿಯನ್ನು ಎಚ್ಚರಿಸಿ ಮತ್ತೆ ತನ್ನಲ್ಲಿಗೆ ಆಹ್ವಾನಿಸುವ ಮನನೀಯ ಪಾತ್ರದಲ್ಲಿ ಮಧುಶ್ರೀ ತನ್ನ ನವಿರು ಭಾವನೆಗಳ ತಳಮಳದ ನಿವೇದನೆಯನ್ನು ಸಮರ್ಥವಾಗಿ ಅಭಿನಯಿಸಿ ಮನದುಂಬಿದಳು. ವಿ. ಬಾಲಸುಬ್ರಹ್ಮಣ್ಯ ಶರ್ಮ ಅವರ ಕಂಚುಕಂಠದಲ್ಲಿ ಹರಿದುಬಂದ `ಶಿವಸ್ತುತಿ’ – ‘ನಟನಮನೋಹರ ನಾಗಾಭರಣ’ ( ರಚನೆ-ಜಿ.ಗುರುಮೂರ್ತಿ) ಅಪೂರ್ವ ಜತಿಗಳಲ್ಲಿ ರಸರೋಮಾಂಚನಗೊಳಿಸಿತು. ನಾಗನ ವಿವಿಧರೂಪಗಳು ಮಂಡಿ ಅಡವು, ಭ್ರಮರಿಗಳಲ್ಲಿ , ನಾಗನ ಬಳುಕಾಟಗಳು ವಿಶಿಷ್ಟ ಹಸ್ತಚಲನೆಯಲ್ಲಿ, ಯೋಗದ ವಿನೂತನ ಭಂಗಿಗಳಲ್ಲಿ ಅಮೋಘವಾಗಿ ಮೂಡಿಬಂತು. ಸಂಭ್ರಮದ ‘ತಿಲ್ಲಾನ’ದೊಂದಿಗೆ ಪ್ರಸ್ತುತಿ ಸಂಪನ್ನವಾಯಿತು.

Related posts

ಉದಯೋನ್ಮುಖ ಕಲಾವಿದೆಯರ ಭರವಸೆಯ ನೃತ್ಯ ಪ್ರದರ್ಶನ

YK Sandhya Sharma

ಅಪೂರ್ವ ವರ್ಚಸ್ವೀ ಅಭಿನಯದ ಸಾಕ್ಷಾತ್ಕಾರ

YK Sandhya Sharma

ತುಂಬಿ ಹರಿದ ಚೈತನ್ಯ- ಸಪ್ತ ಚಿಣ್ಣರ ರನ್ನದ ಹೆಜ್ಜೆಗಳು

YK Sandhya Sharma

Leave a Comment

This site uses Akismet to reduce spam. Learn how your comment data is processed.