Image default
Dancer Profile

ಪ್ರಬುದ್ಧ ಅಭಿನಯ ಸರಿತಾ ಮಿಶ್ರ ವೈಶಿಷ್ಟ್ಯ

ಒಡಿಸ್ಸಿ ನೃತ್ಯಕಲಾವಿದೆ ಸರಿತಾ ಮಿಶ್ರಾ, ಇತ್ತೀಚಿಗೆ ನಡೆದ ‘’ಕಿಂಕಿಣಿ’’ ನೃತ್ಯೋತ್ಸವದಲ್ಲಿ ತಮ್ಮ ಪ್ರಬುದ್ಧ ಅಭಿನಯದ ಕೆಲಕೃತಿಗಳನ್ನು ತುಂಬಾ ಮನೋಹರವಾಗಿ ರಸಿಕರ ಮುಂದಿಟ್ಟರು. ವಯ್ಯಾರವೇ ಹೆಣ್ಣಾಗಿ ಬಂದಂತೆ ಕಲಾವಿದೆ ತಮ್ಮ ಬಳುಕುವ ಸೊಂಟವನ್ನು ತಿರುಗಿಸುತ್ತಾ ರಂಗವನ್ನು ಪ್ರವೇಶಿಸಿದ್ದು ಬಹು ಆಕರ್ಷಕವಾಗಿತ್ತು. ಮೊದಲಿಗೆ ಯಮನ್ ರಾಗದ ‘’ ಪುಷ್ಪಾಂಜಲಿ’’ ಯಲ್ಲಿ ತಮ್ಮ ಬಳುಕುವ ನಡುವನ್ನು ತ್ರಿಭಂಗಿಯಲ್ಲಿ ಕೊಂಕಿಸಿ, ಪ್ರಫುಲ್ಲ ಮುಖಭಾವದಲ್ಲಿ ನರ್ತಿಸುತ್ತಾ,  ಪ್ರಸ್ತುತಿಯ ಯಶಸ್ಸಿಗಾಗಿ ಜಗನ್ನಾಥಸ್ವಾಮಿಯನ್ನು ಪ್ರಾರ್ಥಿಸುತ್ತ, ಭೂಮಿಗೆ, ವಾದ್ಯಗೋಷ್ಠಿಗೆ ಮತ್ತು ಕಲಾರಸಿಕರಿಗೆ ಪ್ರಣಾಮ ಸಲ್ಲಿಸಿದರು.

          ಅನಂತರದ ಹಂಸಧ್ವನಿಯ ‘’ಪಲ್ಲವಿ’’- ಹೆಸರಿಗೆ ಅನ್ವರ್ಥಕವಾಗಿ ಹಲವು ವಿನ್ಯಾಸಗಳಲ್ಲಿ ಮನಸ್ಸನ್ನು ಆವರಿಸುತ್ತ ವಿಕಸಿತವಾಗುತ್ತದೆ. ನಿಗದಿತ ರಾಗದಲ್ಲಿ ಆರಂಭವಾಗುವ ಈ ಮೊಗ್ಗು  ಹಲವು ವಿನ್ಯಾಸಗಳಲ್ಲಿ ಅರಳುತ್ತ, ಶುದ್ಧನೃತ್ತದ ಸೌಂದರ್ಯವನ್ನು ಪಸರಿಸುತ್ತ ಆಕರ್ಷಕತೆಯನ್ನು ಪಡೆಯುತ್ತದೆ. ಪಕ್ವಾಜದ ಕಂಚಿನನಾದ ಕಿವಿತುಂಬುವ ಲಯದ ನಡೆಯಲ್ಲಿ ಕಲಾವಿದೆ, ಮಾದಕ ಆಂಗಿಕಾಭಿನಯದಲ್ಲಿ ನವಪಲ್ಲವಿಯನ್ನು ಅರಳಿಸುತ್ತಾರೆ. ಕುಂಚಿತ-ಅಕುಂಚಿತ ಮತ್ತು ಮೀನಪೂಚ ಪಾದದ ಭಂಗಿಗಳು ಅನುಪಮವಾಗಿ ಕಂಗೊಳಿಸಿದವು. ದುಂಬಿಗಳಂತೆ ಚಲಿಸುವ ಕಣ್ಣಾಲಿಗಳು, ಕಾಮನಬಿಲ್ಲಿನ ಹುಬ್ಬುಗಳ ಅರ್ಥಪೂರ್ಣ ಚಲನೆಯ  ಸೌಂದರ್ಯವನ್ನು ಅಭಿವ್ಯಕ್ತಿಸುತ್ತ ಸುಶ್ರಾವ್ಯಗಾನಕ್ಕೆ ಅನುಗುಣವಾಗಿ ಚೌಕ ಮತ್ತು ಅರ್ಧ ಚೌಕಗಳನ್ನು ರಚಿಸುತ್ತ, ತಮ್ಮ ನವಿರು ಹಸ್ತಚಲನೆಯ ಚೆಲುವಿನಲ್ಲಿ ಸೆಳೆಯುತ್ತಾರೆ ಕಲಾವಿದೆ ಸರಿತಾ. ವೇಗಗತಿಯ ಪದಗತಿಗಳ ನೃತ್ತಮೇಳ ಚೇತೋಹಾರಿಯಾಗಿತ್ತು.

ಮುಂದೆ, ಒರಿಯಾ ಭಾಷೆಯ ಅಭಿನಯ ಪ್ರಧಾನ ಕೃತಿ- ಕೃಷ್ಣನಲ್ಲಿ ಮೋಹಪರವಶಳಾದ ರಾಧೆಗೆ ಅವಳ ಸಖಿ ಬುದ್ಧಿ ಹೇಳಿ ಅವಳ ಪ್ರೀತಿಯನ್ನು ನಿಯಂತ್ರಿಸಿಕೊಳ್ಳಲು ಸಲಹೆ ಕೊಡುವ ಭಾವನಾತ್ಮಕ ಸನ್ನಿವೇಶ ದೃಶ್ಯವತ್ತಾಗಿ ಬಿಚ್ಚಿಕೊಳ್ಳುವ ಅನನ್ಯ ಸಂದರ್ಭ. ‘’ ಬಾಜೂಚಿ ಸಾಹೇ ಬಾಜ’’- ಎಂದು ಆರಂಭವಾಗುವ ಸಾಲುಗಳ ಸುಶ್ರಾವ್ಯ ಸಂಗೀತ ತಲೆದೂಗುವಂತಿತ್ತು. ಮನೆಯ ಮಾಡಿನ ಮೇಲೆ ನಿಂತು ತಲೆ ಒಣಗಿಸಿಕೊಳ್ಳುತ್ತ ಪಾರಿವಾಳಗಳಿಗೆ ಕಾಳು ಹಾಕುತ್ತ ಕನಸು ಕಾಣುವ ರಾಧೆಯಾಗಿ ಸರಿತಾ, ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರು. ಭಾವನಿಮೀಲಿತ ರಾಧೆ, ಯಮುನಾ ನದಿಯಲ್ಲಿ ಮೀಯುವ, ನೀರಿನಲ್ಲಿ ಕೃಷ್ಣನ ಪ್ರತಿಬಿಂಬ ಕಂಡು ಭಾವೊದ್ವೇಗಕ್ಕೊಳಗಾಗುವ ಚಿತ್ರಣವನ್ನು ಸರಿತಾ ತಮ್ಮ ಪ್ರಬುದ್ಧ ಅಭಿನಯದಿಂದ ಸುಂದರವಾಗಿ ಕಟ್ಟಿಕೊಟ್ಟರು.  

ರಾಮಾಯಣದ ಕಥೆಯ ವಿವಿಧ ಘಟನೆಗಳಲ್ಲಿ ನವರಸಗಳನ್ನು ಎತ್ತಿತೋರಿಸುವ ಕಲಾವಿದೆ ತಮ್ಮ ಅಭಿನಯ ಪ್ರಾವೀಣ್ಯವನ್ನು ಮೇರು ಸದೃಶವಾಗಿ ಬಿಂಬಿಸುತ್ತಾರೆ. ಪಂಚವಟಿಯಲ್ಲಿ ರಾಮ-ಸೀತೆಯರ ಸನ್ನಿವೇಶದಲ್ಲಿ ಶೃಂಗಾರರಸವನ್ನು ತಮ್ಮ ಸುಕೋಮಲ ಚಲನೆಯ ಆಂಗಿಕದಿಂದ ಅಭಿವ್ಯಕ್ತಿಸುತ್ತಾರೆ. ಸೀತಾ ಸ್ವಯಂವರದ ದೃಶ್ಯದಲ್ಲಿ ವೀರಪುರುಷ ರಾಮನ ಪ್ರತಾಪ ಪ್ರದರ್ಶನದಲ್ಲಿ ವೀರರಸ ಪ್ರವಹಿಸುತ್ತದೆ. ರಾವಣ, ಜಟಾಯುವಿನ ರೆಕ್ಕೆಗಳನ್ನು ತರಿದು ಹಾಕಿದ ವಿಷಾದದ ಸಂದರ್ಭದಲ್ಲಿ ಕರುಣರಸ, ಲಕ್ಷ್ಮಣ, ಶೂರ್ಪನಖಿಯ ಕಿವಿ-ಮೂಗುಗಳನ್ನು ಕತ್ತರಿಸಿ ಹಾಕಿದ ಸನ್ನಿವೇಶದಲ್ಲಿ ಸ್ಫುರಿಸಿದ ಹಾಸ್ಯ, ಸನ್ಯಾಸಿವೇಷದ ರಾವಣ, ಸೀತೆಯನ್ನು ಅಪಹರಿಸಿ ತನ್ನ ಭೀಕರರೂಪ ಪ್ರದರ್ಶಿಸಿದಾಗ ಮುಗ್ಧ ಸೀತೆ ಭಯಗೊಳ್ಳುವಲ್ಲಿ ಭಯಾನಕ ರಸ , ಕಪಿಗಳು ಅಗಾಧ ಕಡಲಿಗೆ ಕಲ್ಲುಗಳನ್ನು ಹಾಕಿ ಸೇತುಬಂಧ ನಿರ್ಮಿಸಿದಾಗ ಅದ್ಭುತರಸ ಜಿನುಗುತ್ತದೆ.ರಣಾಂಗಣದಲ್ಲಿ ಎಲ್ಲೆಂದರಲ್ಲಿ ಹೆಣಗಳ ರಾಶಿ, ರಕ್ತದ ಕೆಸರು, ರಣಹದ್ದುಗಳು ಹೆಣವನ್ನು ಕಿತ್ತುತಿನ್ನುವ ದೃಶ್ಯದಲ್ಲಿ ಭೀಭತ್ಸ ರಸ, ಕ್ರುದ್ಧನಾದ ರಾಮ ರಾವಣನತ್ತ ಭ್ರಮರಿಗಳಲ್ಲಿ ಸುತ್ತುತ್ತ, ಬಾಣದ ಮಳೆಗರೆವ ದೃಶ್ಯದಲ್ಲಿ ರೌದ್ರರಸ ಧುಮ್ಮಿಕ್ಕುತ್ತದೆ. ಕಡೆಯಲ್ಲಿ ರಾಮಕಥೆ ಎಲ್ಲೆಡೆ ಪಸರಿಸಿ ಮುನಿಗಳ ಸತ್ಸಂಗದಲ್ಲಿ ಶಾಂತತೆ ನೆಲಸಿ, ಮುಖದಲ್ಲಿ ಸ್ನಿಗ್ಧ ಭಾವ, ಶಾಂತವಾದ ವಾತಾವರಣ ಹರಡುವ ನೀರವತೆ ಮಡುಗಟ್ಟುವ ನವರಸಭಾವಗಳನ್ನು ಸರಿತಾ, ಬಹು ಅನುಪಮವಾಗಿ ಅಷ್ಟೇ ಪ್ರಬುದ್ಧವಾಗಿ ಮೆರೆದರು.

Related posts

ಕಥಕ್ ನೃತ್ಯ ಸಾಧಕ ಹರಿ

YK Sandhya Sharma

ಸೃಜನಶೀಲ ನೃತ್ಯಕಲಾವಿದೆ ಪೂರ್ಣಿಮಾ ರಜನಿ

YK Sandhya Sharma

ಅಭಿಜಾತ ನೃತ್ಯ ಕಲಾವಿದೆ ಐಶ್ವರ್ಯ ನಿತ್ಯಾನಂದ

YK Sandhya Sharma

Leave a Comment

This site uses Akismet to reduce spam. Learn how your comment data is processed.