ಹೆಚ್ಚೂ ಕಡಿಮೆ ಅವಳಿ-ಜವಳಿಯರಂತೆ ಕಾಣುವರು ಈ ನೃತ್ಯ ಸಹೋದರಿಯರು. ಕೇವಲ ಎರಡು ವರ್ಷಗಳ ವ್ಯತ್ಯಾಸ. ಅಕ್ಕ ನಮ್ರತಾ, ತಂಗಿ ಜಗತಿ. ಪ್ರತಿಭಾನ್ವಿತೆಯರು. ಬಹುಮುಖ ಹವ್ಯಾಸವುಳ್ಳ ಉತ್ಸಾಹೀ ಯುವತಿಯರು. ಬೆಂಗಳೂರಿನಲ್ಲೇ ಹುಟ್ಟಿ ಬೆಳೆಯುತ್ತಿರುವವರು. ತಂದೆ ಸೇಂಟ್ ಜಾನ್ಸ್ ಆಸ್ಪತ್ರೆಯ ಪ್ರಸಿದ್ಧ ಮೂಳೆರೋಗ ತಜ್ಞರು- ಡಾ. ಎಸ್. ಶ್ರೀನಿವಾಸಲು. ತಾಯಿ ರೇಖಾ ಶ್ರೀನಿವಾಸಲು ಗೃಹಿಣಿ. ಮೂಲತಃ ಬೆಂಗಳೂರಿಗರಾದ ಶ್ರೀನಿವಾಸಲು ಕುಟುಂಬ ಕಲಾಪ್ರೀತಿಯನ್ನು ಹೊಂದಿದವರು. ಚಿಕ್ಕಂದಿನಿಂದ ಸಂಗೀತ , ನರ್ತನ, ಕ್ರೀಡೆ ಇತ್ಯಾದಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಬಂದ, ಓದಿನಲ್ಲೂ ಜಾಣರಾದ ಮಕ್ಕಳಿಗೆ ತಾಯಿಯದೇ ಮಾರ್ಗದರ್ಶನ-ಬೆಂಬಲ.
ಸಹೋದರಿಯರಿಬ್ಬರಿಗೂ ನೃತ್ಯ ಬಾಲ್ಯದ ಒಲವು. ಗುರುಗಳ ಮಾರ್ಗದರ್ಶನದಲ್ಲಿ ಎಂಟನೆಯ ವಯಸ್ಸಿಗೇ ಕಾಲಿಗೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದವರು. ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಗಮನಿಸಿದ ತಾಯಿ, ಅವರಿಗೆ ಶಾಸ್ತ್ರೀಯ ಮಾರ್ಗದರ್ಶನ-ತರಬೇತಿ ಅಗತ್ಯವೆಂದರಿತು, ನೃತ್ಯಕ್ಷೇತ್ರದಲ್ಲಿ ಪಾರಂಗತರಾದ ಗುರುಗಳನ್ನು ಅರಸತೊಡಗಿದರು. ಕುಚಿಪುಡಿ ನೃತ್ಯಪ್ರಕಾರದಲ್ಲಿ ತಜ್ಞರೆನಿಸಿಕೊಂಡ ಪ್ರಖ್ಯಾತ ಗುರು ಡಾ. ವೀಣಾ ಮೂರ್ತಿ ವಿಜಯ್ ಅವರ ಗರಡಿಯಲ್ಲಿ ಪುಟ್ಟ ಬಾಲಕಿಯರನ್ನು ನೃತ್ಯ ಶಿಕ್ಷಣ ಪಡೆಯಲು ಸೇರಿಸಿದರು.
ಬೆಂಗಳೂರಿನ ಪ್ರೆಸಿಡೆನ್ಸಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಇಬ್ಬರೂ ಎಸ್.ಎಸ್.ಎಲ್.ಸಿ.ಯಲ್ಲಿ ಡಿಸ್ಟಿಂಕ್ಷನ್ ಪಡೆದದ್ದಲ್ಲದೆ ಆಟೋಟ ಸ್ಪರ್ಧೆಗಳಲ್ಲೂ ಮುಂದು. ನಾಟಕಾಭಿನಯ, ಶಾಸ್ತ್ರೀಯ ಸಂಗೀತ, ನೃತ್ಯ, ಚರ್ಚಾ ಸ್ಪರ್ಧೆ, ಆಶುಭಾಷಣ, ಎನ್.ಸಿ.ಸಿ., ಮುಂತಾದ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಸಹೋದರಿಯರು ಬಹುಮುಖ ಪ್ರತಿಭೆಯುಳ್ಳವರು. ಶಾಲಾ-ಕಾಲೇಜುಗಳಲ್ಲಿ ಅನೇಕ ನೃತ್ಯ ಕಾರ್ಯಕ್ರಮಗಳನ್ನಿತ್ತು, ಬಹುಮಾನಗಳನ್ನು ಗಳಿಸಿರುವುದು ಇವರೀರ್ವರ ವಿಶೇಷ.
ಕಳೆದ ಹತ್ತುವರ್ಷಗಳಿಂದ ಸಹೋದರಿಯರು ಅತ್ಯಾಸಕ್ತಿಯಿಂದ ಡಾ. ವೀಣಾ ಮೂರ್ತಿ ಬಳಿ ‘ಕುಚಿಪುಡಿ’ನಾಟ್ಯಶಿಕ್ಷಣ ಪಡೆಯುತ್ತಿದ್ದು, ನಾಡಿನಾದ್ಯಂತ ಎಲ್ಲ ನೃತ್ಯೋತ್ಸವ, ಸಮಾರಂಭಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡಿರುವರಲ್ಲದೆ ತಮ್ಮ ನೃತ್ಯಶಾಲೆ ‘ರಾಜ ರಾಜೇಶ್ವರಿ ಕಲಾನಿಕೇತನ’ ನಾಟ್ಯಶಾಲೆಯ ವತಿಯಿಂದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನೂರಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ನೀಡಿರುವುದು ಇವರ ಅಗ್ಗಳಿಕೆ. ನೃತ್ತಾಭಿನಯಗಳನ್ನು ಕರಗತ ಮಾಡಿಕೊಳ್ಳುತ್ತಿರುವ ಉತ್ಸಾಹೀ ಅಭ್ಯಾಸಿಗಳಾದ ಇವರಿಬ್ಬರೂ ಕರ್ನಾಟಕ ಸರ್ಕಾರ ನಡೆಸುವ ಸೀನಿಯರ್ ನೃತ್ಯ ಪರೀಕ್ಷೆಯಲ್ಲಿ ಜಯಶೀಲರಾಗಿದ್ದಾರೆ. ಮುಂದಿನ ಹಂತದ ಪರೀಕ್ಷೆಗೆ ತಯಾರಿ-ಪರಿಶ್ರಮ- ಅಭ್ಯಾಸಗಳಲ್ಲಿ ತೊಡಗಿದ್ದಾರೆ. ಇಬ್ಬರೂ ಒಟ್ಟಿಗೆ ”ರಂಗಪ್ರವೇಶ”ವನ್ನೂ ನೆರವೇರಿಸಿಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಹೆಚ್ಚಿನ ಕಲಿಕೆಯಲ್ಲಿ ತೊಡಗಿದ್ದಾರೆ.
ಹಿರಿಯವಳು ನಮ್ರತಾ. ಇಪ್ಪತ್ತರ ತರುಣಿ. ಪ್ರಸ್ತುತ ಸೇಂಟ್ ಜಾನ್ ಮೆಡಿಕಲ್ ಕಾಲೇಜಿನಲ್ಲಿ ಎರಡನೆಯ ವರ್ಷದ ಎಂ.ಬಿ.ಬಿ.ಎಸ್. ವಿದ್ಯಾಭ್ಯಾಸ ನಡೆಸುತ್ತಿದ್ದಾಳೆ. ಮುಂದೆ ಉತ್ತಮ ಸರ್ಜನ್ ಆಗಬೇಕೆಂಬ ಮಹತ್ವಾಕಾಂಕ್ಷೆ. ಜೊತೆಯಲ್ಲಿ ನೃತ್ಯಕ್ಷೇತ್ರದಲ್ಲೂ ಉನ್ನತಿ ಸಾಧಿಸುವ ಹೆಬ್ಬಯಕೆ. ಅದಕ್ಕೆ ತಕ್ಕ ಪೂರಕ ತರಬೇತಿ, ಪರಿಶ್ರಮ, ಸಾಧನೆಯತ್ತ ಏಕಾಗ್ರಚಿತ್ತ. ಕರ್ನಾಟಕ ಸಂಗೀತವನ್ನು ಕಲಿತಿರುವ ನಮ್ರತಾ, ಈಜುಗಾರಿಕೆ, ಪಾಟರಿ, ಮೇಣದಬತ್ತಿ ತಯಾರಿಸುವಿಕೆ ಮತ್ತು ಕಾಗದದ ಕಲೆ ಮುಂತಾದವು ಅವಳ ಹವ್ಯಾಸಗಳು.
ಕಿರಿಯವಳು ಜಗತಿ ಹದಿನೆಂಟರ ಯುವತಿ. ಪಿ.ಯೂ.ಸಿ.ಯಲ್ಲಿ ಉತ್ತಮಾಂಕಗಳಿಂದ ತೇರ್ಗಡೆ ಹೊಂದಿ, ಮುಂದಿನ ಉನ್ನತಾಭ್ಯಾಸಕ್ಕೆ ಪ್ರವೇಶ ಪರೀಕ್ಷೆ ಬರೆದಿದ್ದಾಳೆ. ಅವಳಿಗೆ ತಂದೆ ಮತ್ತು ಅಕ್ಕನಂತೆ ವೈದ್ಯೆಯಾಗುವ ಬಯಕೆ. ಎನ್.ಸಿ.ಸಿ. ಜೊತೆ ಏರ್ ವಿಂಗ್ ಕಾರ್ಪೋರೆಲ್ ಆಗಿದ್ದು, ಏರ್ ಕ್ರಾಫ್ಟ್ ಫ್ಲೈಯಿಂಗ್ ಮತ್ತು ರೈಫಲ್ ಶೂಟಿಂಗ್ ತರಬೇತಿ ಪಡೆಯುತ್ತಾ, ಇದಕ್ಕೆ ಸಂಬಂಧಿಸಿದ ಅನೇಕ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾಳೆ.
ಈ ಉದಯೋನ್ಮುಖ ಕಲಾವಿದೆಯರು ಭಾಗವಹಿಸಿರುವ ಪ್ರಮುಖ ನೃತ್ಯೋತ್ಸವಗಳೆಂದರೆ-ಮಾರಿಷಸ್ಸಿನಲ್ಲಿ ನಡೆದ ಎಂಬಿಸಿ ರಾಷ್ಟ್ರೀಯ ಬ್ರಾಡ್ ಕಾಸ್ಟ್ ಮಾರಿಷಸ್ ವಾಹಿನಿಯ ಕಾರ್ಯಕ್ರಮ, ತಿರುಪತಿಯಲ್ಲಿ ನಡೆದ ವಿಶ್ವ ತೆಲುಗು ಸಾಂಸ್ಕೃತಿಕ ನಿಲಯಂ ಸಮ್ಮೇಳನ, ವಿಶ್ವ ಪ್ರಸಿದ್ಧ ಮೈಸೂರು ದಸರಾ, ಸಿದ್ಧೇಂದ್ರ ಯೋಗಿ ನಾಟ್ಯ ಕಲೋತ್ಸವ-ಕುಚಿಪುಡಿ ವಿಲೇಜ್, ಕೇಂದ್ರ ಸರ್ಕಾರ ಆಯೋಜನೆಯ ಕಾರ್ಯಕ್ರಮಗಳು, ಚಿನ್ನ ಕಲಾನಂದಂ ಉತ್ಸವ , ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವದ ಕಾರ್ಯಕ್ರಮಗಳು ಹಾಗೂ ರಾಜ ರಾಜೇಶ್ವರಿ ನೃತ್ಯ ಸಂಸ್ಥೆಯ ಎಲ್ಲ ನೃತ್ಯರೂಪಕ-ನೃತ್ಯ ಪ್ರದರ್ಶನ, ಉತ್ಸವಗಳು ಮುಂತಾದ ಇನ್ನೂರಕ್ಕೂ ಹೆಚ್ಚಿನ ನೃತ್ಯ ಪ್ರದರ್ಶನಗಳಲ್ಲಿ ಭಾಗವಹಿಸಿದ ಹೆಮ್ಮೆ ಇವರದು. ಜೊತೆಗೆ ಪ್ರಸಕ್ತ ಜಗತ್ತನ್ನಾವರಿಸಿರುವ ‘ಕೊರೊನಾ’ ಸವಾಲಿನ ಪರಿಸ್ಥಿತಿಯಲ್ಲೂ ನೃತ್ಯಾಸಕ್ತಿಯನ್ನು ಬಿಡದೆ ಅಂತರ್ಜಾಲದಲ್ಲಿ ನೃತ್ಯ ಪ್ರದರ್ಶಗಳನ್ನು ನೀಡುವ ಉಮೇದು ಇವರದು.