ಈ ಹಿರಿಯ ಪ್ರತಿಭಾನ್ವಿತ ನೃತ್ಯಕಲಾವಿದೆ ವೀಣಾಮೂರ್ತಿ ಅವರೆಲ್ಲ ಚಟುವಟಿಕೆಗಳನ್ನು ಗಮನಿಸಿದರೆ ಅಚ್ಚರಿಯುಂಟಾಗುತ್ತದೆ. ಸಕಲ ಕಲಾಪೂರ್ಣೆಯಾದ ಇವರ ನೃತ್ಯಯಾನವೇ ಕುತೂಹಲ-ವಿಸ್ಮಯಗಳ ಆಗರ. ವೀಣಾ ಅವರಿಗೆ `ನೃತ್ಯ’, ಬಾಲ್ಯದ ಆಸಕ್ತಿಯೇನಲ್ಲ. ತಂದೆ ಪಿ.ಎನ್.ಎಸ್. ಮೂರ್ತಿ, ದೊಡ್ಡ ಕಲಾಪೋಷಕರು. ಸಂಗೀತ-ನೃತ್ಯಗಳ ಬಗ್ಗೆ ಅತೀವ ಆಸಕ್ತಿಯಿದ್ದ ಅವರಿಗೆ , ಮಗಳನ್ನು ನೃತ್ಯಕಲಾವಿದೆಯನ್ನಾಗಿ ರೂಪಿಸಲೇಬೇಕೆನ್ನುವ ಕನಸು-ಅದಮ್ಯ ಆಕಾಂಕ್ಷೆ. 6 ವಯಸ್ಸಿಗೇ ಗುರು ನಾಗಭೂಷಣ್ ರಿಂದ ಪ್ರತಿದಿನ ತಪ್ಪದೆ, ಭರತನಾಟ್ಯ ಶಿಕ್ಷಣ. ಅನಂತರ ಲೋಕಯ್ಯನವರಿಂದ ಕಲಿತು 10 ರ ವಯಸ್ಸಿಗೇ `ರಂಗಪ್ರವೇಶ’ ಮಾಡಿದ ಅತ್ಯಂತ ಕಿರಿಯ ವಯಸ್ಸಿನ ನೃತ್ಯಗಾರ್ತಿ ಎಂಬ ಅಗ್ಗಳಿಕೆ. ಅನಂತರ ಲಚ್ಚುಮಹಾರಾಜ್ ಶಿಷ್ಯ ಮುಕುಂದರಾವ್ ಅವರಿಂದ ‘ಕಥಕ್ ‘ ಕಲಿತು 13 ವರ್ಷಕ್ಕೇ `ರಂಗಮಂಚ್’ ಪೂರೈಸಿ, ಡಾ.ಕೊರಾಡ ನರಸಿಂಹರಾಯ ಅವರಿಂದ ಎಂಟುವರ್ಷಗಳ ಕಾಲ ಕೂಚಿಪುಡಿ ನೃತ್ಯ ಕಲಿತ ವೀಣಾ ತಮ್ಮ ಆಸಕ್ತಿಯನ್ನು `ಕೂಚಿಪುಡಿ’ ನೃತ್ಯಪ್ರಕಾರದಲ್ಲಿ ಗುರುತಿಸಿಕೊಂಡು ಗಂಭೀರ ಸಾಧನೆಗೆ ತೊಡಗಿದರು. 14 ವರ್ಷಕ್ಕೇ ಕೂಚಿಪುಡಿಯ `ರಂಗಪ್ರವೇಶ’ವನ್ನೂ ಮುಗಿಸಿಕೊಂಡ ವಿಶೇಷತೆ ಇವರದು.
ಅನಂತರ ಗುರು ಸಿ.ಆರ್.ಅಚಾರ್ಯುಲು ಅವರಿಂದ ಉನ್ನತ ಶಿಕ್ಷಣ. ಪದ್ಮಭೂಷಣ ಡಾ. ವೆಂಕಟಲಕ್ಷ್ಮಮ್ಮ ನವರಿಂದ `ಅಭಿನಯ ಕಲೆ’ಯಲ್ಲಿ ತರಬೇತಿ, ಡಾ.ಆರ್. ಸತ್ಯನಾರಾಯಣ, ಡಾ ವೆಂಪಟಿ ಚಿನ್ನಸತ್ಯಂ ರಿಂದ ಹೆಚ್ಚಿನ ಮಾರ್ಗದರ್ಶನ, ಡಾ. ಮಾಯಾರಾವ್ ಅವರಲ್ಲಿ ನೃತ್ಯಸಂಯೋಜನೆ ಬಗ್ಗೆ ವಿಶೇಷ ತರಬೇತಿಗಳನ್ನು ಪಡೆದುಕೊಂಡರು. ಜೊತೆಗೆ ಆರ್.ಕೆ.ಶ್ರೀನಿವಾಸ ಮೂರ್ತಿ ಹಾಗೂ ಚೆನ್ನಮ್ಮ ಅವರಿಂದ ವೀಣೆಯನ್ನು ಎಂಟುವರ್ಷಗಳ ಕಾಲ ಕಲಿತು, ಕಚೇರಿಗಳನ್ನೂ ನೀಡಲಾರಂಭಿಸಿದ ಹಿರಿಮೆ ಇವರದು. ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಶ್ರೀರಂಗಮ್ಮನವರಿಂದ, ಚಂದ್ರಮೌಳಿಯವರಿಂದ ಮೃದಂಗವಾದನವನ್ನೂ ಕಲಿತ ಬಹುಮುಖ ಪ್ರತಿಭಾನ್ವಿತೆ ಈಕೆ. ಶಾಲೆಯಲ್ಲಿದ್ದಾಗ ಬ್ಯಾಡ್ಮಿಂಟನ್, ಯೋಗಶಿಕ್ಷಣ (ರಾಜ್ಯಕ್ಕೆ ರನ್ನರ್ ಅಪ್ ), ಸಂಸ್ಕೃತದಲ್ಲಿ ಐದು ಪರೀಕ್ಷೆಗಳನ್ನು ಮುಗಿಸಿ ಘನಪಾಟಿಗಳಿಂದ ವೇದಪಾಠಗಳನ್ನು ಅಭ್ಯಾಸಮಾಡಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಉತ್ತಮ ತಳಹದಿ ಪಡೆದ ಅವಕಾಶ. ಅನೇಕ ಕನ್ನಡ ನಾಟಕಗಳಲ್ಲಿ ಅಭಿನಯಿಸಿದ ಅನುಭವವೂ ಉಂಟು.
ಎಂಭತ್ತರ ದಶಕದಲ್ಲಿ ನಾಡಿನ ಯಾವುದೇ ಸರಕಾರೀ ನೃತ್ಯೋತ್ಸವಗಳಾಗಲಿ ಇವರ ನೃತ್ಯ ಪ್ರದರ್ಶನ ಇರಲೇಬೇಕು ಎಂಬ ಜನಪ್ರಿಯತೆ. ಕೊನಾರ್ಕ್ ಮತ್ತು ಖಜುರಾಹೋ ಉತ್ಸವಗಳಲ್ಲಿ ಏಕವ್ಯಕ್ತಿ ನೃತ್ಯಪ್ರದರ್ಶನ. ಭರತನಾಟ್ಯ, ಕಥಕ್ ಮತ್ತು ಕೂಚುಪುಡಿ ಮೂರು ನೃತ್ಯಪ್ರಕಾರಗಳಲ್ಲೂ ರಂಗಪ್ರವೇಶ ನೆರವೇರಿಸಿಕೊಂಡರೂ ಪರಿಣತಿ-ಪ್ರಯೋಗಶೀಲತೆ ಸಾಧಿಸಿದ್ದೂ ಇದರಲ್ಲೇ. ತಮ್ಮ `ರಾಜ ರಾಜೇಶ್ವರಿ ಕಲಾನಿಕೇತನ’ ನೃತ್ಯಸಂಸ್ಥೆಯ ನಿರ್ದೇಶಕಿ-ನಾಟ್ಯಗುರುವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ನೃತ್ಯಶಿಕ್ಷಣ ನೀಡುವ ಜೊತೆಗೆ, ತಾವೂ ಹೊಸ ಪರಿಕಲ್ಪನೆಯ ನೃತ್ಯನಾಟಕಗಳನ್ನೂ ರಚಿಸಿ, ನಿರ್ದೇಶಿಸಿ ದೇಶ-ವಿದೇಶಗಳಲ್ಲಿ ಪ್ರದರ್ಶಿಸಿ ತಮ್ಮದೇ ಆದ ಛಾಪು ಮೂಡಿಸುತ್ತಿರುವುದು ವೀಣಾ ಅಗ್ಗಳಿಕೆ. ಕಳೆದ ೩೦ ವರ್ಷಗಳಿಂದ ವರ್ಷದುದ್ದಕ್ಕೂ ಒಂದಿಲ್ಲೊಂದು ಸಂಗೀತ-ನೃತ್ಯೋತ್ಸವ, ಏಮ್ಸ್ ನಿರ್ದೇಶಕಿಯಾಗಿ ಬಿ .ಐ.ಎ. ಎಫ್. ಗಳನ್ನು ಆಯೋಜಿಸುತ್ತ ಬಂದಿದ್ದು, ವರ್ಲ್ಡ್ ಡಾನ್ಸ್ ಅಲಯನ್ಸ್ ಕರ್ನಾಟಕ ಚಾಪ್ಟರ್-ಏಷ್ಯಾ ಪೆಸಿಫಿಕ್ ನ ಅಧ್ಯಕ್ಷರೂ ಆಗಿ, ಅಸಂಖ್ಯಾತ ಕಲಾವಿದರಿಗೆ ವೇದಿಕೆಗಳನ್ನು ಒದಗಿಸುತ್ತ ಬಂದಿರುವ ಕಲಾಪ್ರೋತ್ಸಾಹಕರು. ಕೂಚುಪುಡಿಯಲ್ಲಿ ಭಾಮಾಕಲಾಪಂ ಮತ್ತು ತರಂಗಂ ಪರಿಣತಿ ಅಲ್ಲದೆ ನೃತ್ಯ ಸಂಯೋಜಕಿಯಾಗಿ ಗೀತಗಂಗಾಧರ, ರಾಮಾಯಣ ಕಥಾಸುಧಾ, ಕೃಷ್ಣಲೀಲಾ ಪ್ರಸಂಗಗಳು, ಜಯದೇವನ ಅಷ್ಟಪದಿಗಳು, ದೇವಾಲಯ ನೃತ್ಯಸಂಯೋಜನೆಯಲ್ಲಿ ಹೆಸರು ಗಳಿಸಿದ್ದಾರೆ. ಅಮೇರಿಕಾ, ಫ್ರಾನ್ಸ್, ಜರ್ಮನಿಯ ದೂರದರ್ಶನ-ರೇಡಿಯೋಕೇಂದ್ರಗಳಲ್ಲಿ ಸೋದಾಹರಣ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ.
ಅತ್ಯಂತ ಕ್ಲಿಷ್ಟತಾಳವೆನಿಸಿದ `ಸಿಂಹನಂದಿನಿ’ ಯನ್ನು ನರ್ತಿಸುತ್ತಲೇ ರಂಗೋಲಿಯ ಮೇಲೆ ಸಿಂಹದ ಚಿತ್ರ ಬಿಡಿಸುವ ಕಲೆ ಇವರಿಗೆ ಕರಗತ. ಸರಸ್ವತಿ, ಚಾಮುಂಡೆಶ್ವರಿ, ಅಷ್ಟಮೂರ್ತಿದರ್ಶನ ಮುಂತಾದ ಪ್ರಾಯೋಗಾತ್ಮಕ ನೃತ್ಯಸಂಯೋಜನೆಯೊಂದಿಗೆ ಶಿಷ್ಯತಂಡದೊಂದಿಗೆ ನೃತ್ಯ ಪ್ರದರ್ಶಿಸಿದ್ದಾರೆ. ಟಿಬೆಟ್ ಶ್ಲೋಕಗಳಿಗೆ ನೃತ್ಯ ಅಳವಡಿಸಿ ಯು.ಎಸ್.ಎ.ನಲ್ಲಿ ಪ್ರದರ್ಶಿಸಿದ್ದಾರೆ. `ವಿಜಯವಿಲಾಸ’-ಯಕ್ಷಗಾನವನ್ನು ಕೂಚಿಪುಡಿ ಶೈಲಿಯೊಂದಿಗೆ ಸಮ್ಮಿಳಿತಗೊಳಿಸಿ ಪ್ರದರ್ಶಿಸಿದ್ದೂ ನೂತನಪ್ರಯೋಗ. ಇವರ ನಿರ್ದೇಶನದ ನೃತ್ಯರೂಪಕ `ಸಿಲಪತಿಕಾರಂ’ ಮತ್ತು `ಶ್ರೀ ರಾಮಾನುಜ ವೈಭವಂ’ ಕೃತಿಗಳು ಹೆಸರು ತಂದುಕೊಟ್ಟ ನಿರ್ಮಾಣಗಳು. ಅದೇ ಸಾಲಿಗೆ ಸೇರುವ ` ಚಿತ್ರಪಟ’ ಮತ್ತು `ಸ್ತ್ರೀ’ ನೃತ್ಯನಾಟಕಗಳೂ ಬಹುಮಾನ್ಯವಾಗಿವೆ. ಕರ್ನಾಟಕದಲ್ಲಿ ಕುಚುಪುಡಿ ಅಸ್ತಿತ್ವ ಕುರಿತು `ತೆರೆ’ ಪುಸ್ತಕ ರಚನೆ, ಕೇಂದ್ರಸರ್ಕಾರದ ಸೀನಿಯರ್ ಫೆಲೋಶಿಪ್ ಗಳಿಕೆ, ಕೂಚಿಪುಡಿ ಮತ್ತು ಯಕ್ಷಗಾನ ಏಕವ್ಯಕ್ತಿ ಅಭಿವ್ಯಕ್ತಿ ಬಗ್ಗೆ ಸಂಶೋಧನೆ, ‘ಸಮನ್ವಯ’ ಡಾನ್ಸ್ ಕಂಪೆನಿಯ ನೇತೃತ್ವ ವಹಿಸಿಕೊಂಡು ರಾಜ್ಯಾದ್ಯಂತ ನೃತ್ಯ ಪ್ರದರ್ಶನ. ವೀಣಾ ಅವರ ನಾಲ್ಕುದಶಕಗಳ ಅನುಪಮ ಸೇವೆ ಪರಿಗಣಿಸಿ ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿ ‘ಕರ್ನಾಟಕ ಕಲಾಶ್ರೀ’, ಮಹಾನಗರಪಾಲಿಕೆಯ ‘ಕೆಂಪೇಗೌಡ’ಪ್ರಶಸ್ತಿಗಳೊಂದಿಗೆ ಭರತಕಲಾ ಪ್ರಪೂರ್ಣೆ , ಕೂಚಿಪುಡಿ ನೃತ್ಯವಿಶಾರದೆ, ನಾಟ್ಯಮಯೂರಿ, ‘ಕಲಾ ಆರತಿ ರತ್ನ’ ಬಿರುದು-ಸನ್ಮಾನಗಳು, ಅಮೆರಿಕಾದ ಡ್ಯೂಕ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟೋರೇಟ್ ಲಭಿಸಿದೆ.