Image default
Dancer Profile

ಲವಲವಿಕೆಯ ಉತ್ತಮ ನೃತ್ಯ ಕಲಾವಿದೆ ನಿಶ್ಚಿತ ನೀಲಕುಮಾರ್

ನೃತ್ಯಾಭ್ಯಾಸ ಇವಳ ದೈನಂದಿನ ಒಲವಿನ ಕಾಯಕ. ಪ್ರತಿದಿನ ತಪ್ಪದ ನೃತ್ಯ ತಾಲೀಮು. ಹೊಸ ಹೊಸ ಸಂಯೋಜನೆಯ ಕೃತಿಗಳನ್ನು ಕಲಿಯುವ ಅಪರಿಮಿತ ಉತ್ಸಾಹ. ಇದಕ್ಕೆ ಇಂಬಾದವರು ಖ್ಯಾತ ನೃತ್ಯ ಕಲಾವಿದೆ, ಕಿರುತೆರೆ ಮತ್ತು ಚಲನಚಿತ್ರ ನಟಿ ಹೇಮಾ ಪ್ರಶಾಂತ್. ಇವರೇ ನಿಶ್ಚಿತಳ  ನಾಟ್ಯಗುರುಗಳು.

ಬೆಂಗಳೂರಿನ ಶ್ರೀ ನೀಲಕುಮಾರ್ ಮತ್ತು ಭಾಗ್ಯಲಕ್ಷ್ಮಿ ದಂಪತಿಗಳ ಪುತ್ರಿ ನಿಶ್ಚಿತಾ ಕಲಾರಾಧಕಿ. ಬಾಲ್ಯದಲ್ಲೇ ಮಗಳ ಆಸಕ್ತಿ ಗುರುತಿಸಿದ ಪೋಷಕರು ಅವಳ ಏಳನೆಯ ವಯಸ್ಸಿನಲ್ಲಿ ‘ಸುಕೃತಿ ನಾಟ್ಯಾಲಯ’ದ ‘ಹೇಮಾ ಪ್ರಭಾತ್’ ಎಂದೇ ಪ್ರಸಿದ್ಧರಾದ ನೃತ್ಯಗುರುಗಳ ಗರಡಿಯಲ್ಲಿ ತಯಾರಿ ಪಡೆಯಲು ನೃತ್ಯ ಶಿಕ್ಷಣಕ್ಕೆ ಸೇರಿಸಿದರು. ಅತೀವ ಆಸಕ್ತಿಯಿಂದ ನಿಶ್ಚಿತ, ಅಡವುಗಳನ್ನು ಬಹುಬೇಗ ಕಲಿತು ಗುರುಗಳ ಪ್ರೀತಿಗೆ ಪಾತ್ರಳಾದಳು. ಹೆಜ್ಜೆ ಹೆಜ್ಜೆಗೂ ಪ್ರಗತಿ ತೋರಿದ ಅವಳು ಬದ್ಧತೆಯಿಂದ ನೃತ್ಯ ಕಲಿಯತೊಡಗಿದಳು. ಸಂಕೀರ್ಣ ಜತಿಗಳು, ನೃತ್ತಗಳು, ನಾಟ್ಯದ ವಿವಿಧ ಆಯಾಮಗಳನ್ನು ಕರಗತ ಮಾಡಿಕೊಳ್ಳುತ್ತ ನಿಶ್ಚಿತ, ಕರ್ನಾಟಕ ಸರ್ಕಾರದ ಜ್ಯೂನಿಯರ್ ನೃತ್ಯ ಪರೀಕ್ಷೆಯಲ್ಲಿ ಉತ್ತಮಾಂಕಗಳಿಂದ ತೇರ್ಗಡೆ ಹೊಂದಿದಳು. ಮುಂಬೈನ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದಿಂದ ಭರತನಾಟ್ಯದ ಸೀನಿಯರ್ ಮಟ್ಟದ ‘ಮಾಧ್ಯಮ ಪೂರ್ಣ’ ಪರೀಕ್ಷೆಯಲ್ಲೂ ಉತ್ತೀರ್ಣಳಾಗಿದ್ದಾಳೆ.

ಓದಿನಲ್ಲೂ ಮುಂದಿದ್ದ ನಿಶ್ಚಿತಾ, ತಾನು ಓದುತ್ತಿದ್ದ ವಿಜಯ ಭಾರತಿ ಶಾಲೆಯಲ್ಲೂ ನೃತ್ಯ-ನಾಟಕ ಸಂಗೀತ  ಸ್ಪರ್ಧೆಗಳಲ್ಲಿ ತಪ್ಪದೆ ಬಹುಮಾನಗಳನ್ನು ಪಡೆಯುತ್ತಿದ್ದಳು. ಮುಂದೆ- ಮೌಂಟ್ ಕಾರ್ಮಲ್ ಕಾಲೇಜಿನಿಂದ ‘ನ್ಯೂಟ್ರೀಷನ್ ಮತ್ತು ಡಯಟಿಟಿಕ್ಸ್’  ವಿಶೇಷ ವಿಷಯವಾಗಿ ಆಯ್ದುಕೊಂಡು ಬಿ.ಎಸ್ಸಿ.ಪದವೀಧರೆಯೆನಿಸಿಕೊಂಡಳು.

           ಈಗಾಗಲೇ ಉತ್ತಮ ಕಲಾವಿದೆಯಾಗಿ ಗುರುತಿಸಿಕೊಂಡಿದ್ದ ಇವಳಿಗೆ ಮನೆಯವರಿಂದ ಪೂರ್ಣ ಪ್ರೋತ್ಸಾಹ ಮತ್ತು ನೆರವು. ಅವಳ ಆಸಕ್ತಿಯ ವಿಷಯಗಳನ್ನು ಗಮನಿಸಿದ ತಂದೆ-ತಾಯಿಗಳು ಅವಳ ಸುಮಧುರ ಕಂಠ ಗುರುತಿಸಿ ಅವಳ ಸಂಗೀತದ ಒಲವಿಗೆ ನೀರೆರೆದರು. ಅವಳ ಸಂಗೀತಾಸಕ್ತಿಗೆ ಪುಷ್ಟಿ  ದೊರೆಯಿತು. ಅವಳು ತನ್ನ ಆರನೆಯ ವಯಸ್ಸಿನಿಂದ ಸಂಗೀತ ವಿದುಷಿ. ಶ್ರೀಮತಿ ಸುಮತಿ ಬಾಲಕೃಷ್ಣ ಅವರಲ್ಲಿ ಹನ್ನೆರಡು ವರ್ಷಗಳ ಕಾಲ ಸತತ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿ, ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್ ಗ್ರೇಡ್ ಸಂಗೀತ ಪರೀಕ್ಷೆಯಲ್ಲೂ  ಉತ್ತೀರ್ಣಳಾದಳು. ಇಂದಿಗೂ ಸಂಗೀತಕ್ಷೇತ್ರದಲ್ಲಿ ಇವಳ ಸಾಧನೆ ಮುಂದುವರಿದಿದೆ. ನೃತ್ಯಾಭ್ಯಾಸಕ್ಕೆ ಸಂಗೀತ ಸಹಾಯಕವಾಗಿ ತಾಳ-ಲಯ ಜ್ಞಾನ ಪಡೆದ ನಿಶ್ಚಿತಾ, ಬಹುಬೇಗ ನೃತ್ಯದ ವರ್ಣರಂಜಿತ ಲೋಕಕ್ಕೆ ಪ್ರವೇಶ ಪಡೆದಳು.

ಅನಂತರ- ಪ್ರಸಿದ್ಧ ‘ಪ್ರಭಾತ್ ಕಲಾವಿದರು’ಸಂಸ್ಥೆಯ ಖ್ಯಾತ ನೃತ್ಯ ರೂಪಕಗಳಲ್ಲಿ ಭಾಗವಹಿಸುವ ಅವಕಾಶದ ಬಾಗಿಲು ತೆರೆದು ಅದನ್ನು ನಿಶ್ಚಿತ, ಉತ್ತಮವಾಗಿ ಸಾರ್ಥಕಪಡಿಸಿಕೊಂಡಳು. ಅವಳ ಪ್ರತಿಭಾ ಪ್ರಸರಣಕ್ಕೆ ಅನುವಾಗುವಂತೆ ಅನೇಕ ಜನಪ್ರಿಯ ನೃತ್ಯರೂಪಕಗಳಲ್ಲಿ ಭಾಗವಹಿಸುವ ಸುಸಂದರ್ಭಗಳು ತೆರೆದುಕೊಂಡವು.

‘ಪ್ರಭಾತ್ ಕಲಾವಿದರು’ ಸಂಸ್ಥೆಯ ಜನಪ್ರಿಯ ನೃತ್ಯ ನಾಟಕಗಳಾದ ಸಿಂಡ್ರೆಲಾ, ಶ್ರೀ ರಾಮ ಪ್ರತೀಕ್ಷಾ, ಧರ್ಮಭೂಮಿ, ಮಹಿಷಾಸುರ ಮರ್ಧಿನಿ, ಹರಿ ಸರ್ವೋತ್ತಮ ಮತ್ತು ಕರುನಾಡ ವೈಭವ ಮುಂತಾದ ಅದ್ಭುತ ನಿರ್ಮಾಣಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ತನ್ನ ನೃತ್ಯಾಭಿನಯ ನೀಡಿ ಕಲಾರಸಿಕರ ಗಮನ ಸೆಳೆದಳು ನಿಶ್ಚಿತ. ಪ್ರಭಾತ್ ಕಲಾವಿದರು ಸಂಸ್ಥೆಯ ಸಂಸ್ಥಾಪಕ ಶ್ರೀ ಗೋಪೀನಾಥ ದಾಸರ ಶತಮಾನೋತ್ಸವದ ಎಲ್ಲ ಕಾರ್ಯಕ್ರಮಗಳಲ್ಲಿ ಯಶಸ್ವಿಯಾಗಿ ಭಾಗವಹಿಸಿದ ತೃಪ್ತಿ ಅವಳದು.

ಅಲ್ಲಿಂದ ನಿರಂತರ ನೃತ್ಯ ಕಾರ್ಯಕ್ರಮಗಳನ್ನು ನೀಡುವ ಯೋಗ ಒದಗಿ ಬಂತು. ಅನೇಕ ವೇದಿಕೆಗಳಲ್ಲಿ ನಿಶ್ಚಿತ, ಏಕವ್ಯಕ್ತಿ ನೃತ್ಯ ಪ್ರದರ್ಶನಗಳನ್ನು ನೀಡಿ ತನ್ನ ಪ್ರತಿಭಾ ಪ್ರದರ್ಶನ ಮಾಡಿದಳು. ಕರ್ನಾಟಕಾದ್ಯಂತವಲ್ಲದೆ, ಆಂಧ್ರ ಪ್ರದೇಶ ಮತ್ತು ತಮಿಳು ನಾಡಿನ ವಿವಿಧ ಪ್ರತಿಷ್ಟಿತ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ ವೈಶಿಷ್ಟ್ಯ ಇವಳದು. ಗುರು ಪ್ರಶಾಂತ್ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ನೃತ್ಯ ಉತ್ಸವ ಮತ್ತು ಮೈಲಾಡತೊರೈ ನಾಟ್ಯಾಂಜಲಿ ನೃತ್ಯೋತ್ಸವಗಳಲ್ಲಿ ಪಾಲ್ಗೊಂಡಳು.

ಎರಡು ವರ್ಷಗಳ ಹಿಂದೆ ನಿಶ್ಚಿತ ವಿದ್ಯುಕ್ತವಾಗಿ ತನ್ನ ‘ರಂಗಪ್ರವೇಶ’ ನೆರವೇರಿಸಿಕೊಂಡು ಮಾರ್ಗ ಸಂಪ್ರದಾಯದ ಎಲ್ಲ ಕೃತಿಗಳ ನಿರೂಪಣೆಯಲ್ಲಿ ಸೈ ಎನಿಸಿಕೊಂಡಳು.  ಸುಗಮ ಸಂಗೀತದಲ್ಲೂ ಅಪಾರ ಆಸಕ್ತಿಯುಳ್ಳ ನಿಶ್ಚಿತಾ, ಶ್ರೀ ಉಪಾಸನಾ ಮೋಹನ್ ಅವರ ಬಳಿ ಸುಗಮ ಸಂಗೀತ ಕಲಿಯುತ್ತಿದ್ದಾಳೆ. ನೃತ್ಯ ಸಂಯೋಜನೆಯಲ್ಲೂ ಪರಿಶ್ರಮಿಸಿರುವ ಇವಳು, ‘ಅಕ್ಷರಂ’ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ  ಭರತನಾಟ್ಯದ  ಕೃತಿಗಳಿಗೆ  ಮತ್ತು ಲಯನೆಸ್ ಕ್ಲಬ್ಬಿನ ಮಹಿಳೆಯರಿಗೆ ಜಾನಪದ ನೃತ್ಯಕ್ಕೆ ನೃತ್ಯ ಸಂಯೋಜಿಸಿ ತರಬೇತಿ ನೀಡಿದ್ದಾಳೆ. ಇದೀಗ ತನ್ನದೇ ಆದ ‘ನೃತ್ಯಾಂಗನಾ’ ನಾಟ್ಯ ಶಾಲೆಯಲ್ಲಿ ಪುಟ್ಟಮಕ್ಕಳಿಗೆ ನೃತ್ಯ ತರಬೇತಿ ನೀಡುತ್ತಿರುವ ನಿಶ್ಚಿತಾ ಪ್ರಸ್ತುತ ಖ್ಯಾತ ‘ಸಪ್ತಂ ತೈಲ ಫುಡ್ ಅಂಡ್ ಬೆವರೇಜಸ್’ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾಳೆ. ತಂದೆ-ತಾಯಿ ಮತ್ತು ತಂಗಿ ನಿಖಿತಾಳಿಂದ ಕೂಡಿದ ಸುಖೀ ಸಂಸಾರ ಇವಳದು.

                               *****************

Related posts

ಮನಾಕರ್ಷಿಸುವ ಕಥಕ್ ನೃತ್ಯಪ್ರತಿಭೆ ಶ್ರೇಯಾ.ಪಿ.ವತ್ಸ

YK Sandhya Sharma

ಅನುಪಮ ಕಥಕ್ ನೃತ್ಯಗಾರ್ತಿ ವಿಶ್ರುತಿ ಆಚಾರ್ಯ

YK Sandhya Sharma

ಮನೋಜ್ಞ ಕಥಕ್ ನೃತ್ಯ ಕಲಾವಿದೆ ಮಾನಸ ಜೋಶಿ

YK Sandhya Sharma

Leave a Comment

This site uses Akismet to reduce spam. Learn how your comment data is processed.