ಅದೊಂದು ವಿನೂತನ ಪ್ರಯತ್ನ, ಪ್ರಯೋಗ ಕೂಡ. ಅದನ್ನು ಆಗು ಮಾಡಿದವರು ನಾಟ್ಯಗುರು ಡಾ. ಮಾಲಿನಿ ರವಿಶಂಕರ್. ಕಾವ್ಯಗಳನ್ನು ನೃತ್ಯಕ್ಕೆ ಅಳವಡಿಸುವ ಪರಿಕಲ್ಪನೆಯೇ , ರಂಗಪ್ರವೇಶದ ಸಂಪ್ರದಾಯದಲ್ಲಿ ಪ್ರಪ್ರಥಮ. ‘’ಲಾಸ್ಯವರ್ಧನ’’ನೃತ್ಯಶಾಲೆಯ ವಿದ್ಯಾರ್ಥಿನಿ ಶಿವಾನಿಯ ಪ್ರತಿಭಾ ಸಾಮರ್ಥ್ಯವನ್ನು ಅರಿತೇ ಇಂಥದ್ದೊಂದು ಹೊಸ ಆಯಾಮದ ‘ರಂಗಾರೋಹಣ’ ವನ್ನು ಮಾಲಿನಿ ರೂಪಿಸಿದ್ದಂತೆ ಕಂಡಿತು. ಇಡೀ ಕಾರ್ಯಕ್ರಮ ಕನ್ನಡಮಯವಾಗಿ ಕಾವ್ಯದೌತಣದಿಂದ ಪುಳಕ ತಂದಿತು. ಹಳೆಗನ್ನಡ ಕಾವ್ಯಗಳಿಂದ ಹಿಡಿದು ನವೋದಯದವರೆಗೂ ಅದರ ಬೀಸು ಹರವಿಕೊಂಡಿದ್ದು, ಪ್ರತಿ ಪ್ರಸ್ತುತಿಯೂ ರಸಪೂರ್ಣವಾಗಿ ನಿರೂಪಿತವಾಯಿತು. ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮರ ಸುಶ್ರಾವ್ಯ ಸಂಗೀತ ಸಂಯೋಜನೆ, ಕರ್ಣಾನಂದ ಗಾಯನ ನೃತ್ಯಧಾರೆಯಲ್ಲಿ ಸಮಪಾಲು ಪಡೆಯಿತು. ಡಾ. ಮಾಲಿನಿಯವರ ಅರ್ಥಪೂರ್ಣ ಕೃತಿಗಳ ಆಯ್ಕೆ, ಸುಮನೋಹರ ನೃತ್ಯ ಸಂಯೋಜನೆ, ಶಿವಾನಿಯ ಮನೋಜ್ಞ ನೃತ್ಯದಾರತಿಯಲ್ಲಿ ಮೆರುಗು ಪಡೆಯಿತು.
ರಂಗಪ್ರವೇಶದಲ್ಲಿ ಸಾಂಪ್ರದಾಯಕ ‘ಮಾರ್ಗಂ’ ಪದ್ಧತಿಯನ್ನು ಮುರಿದು ಕಟ್ಟುವ ಪ್ರಯತ್ನಗಳು ಸ್ವಾಗತಾರ್ಹ. ಆಗಾಗ ಇಂಥ ನವಕಲ್ಪನೆಯ ಮಾದರಿಗಳು ರಸಿಕ ಜನರಿಗೆ ಯಾಂತ್ರಿಕತೆಯನ್ನು ತಪ್ಪಿಸಿ ಮನರಂಜನೆ, ರಸಾನುಭವ ನೀಡುವುದರಲ್ಲಿ ಅನುಮಾನವಿಲ್ಲ. ನೃತ್ಯ ಹೂರಣದೊಂದಿಗೆ ಹಿಮಾಲಯ ಶ್ರೇಣಿಗಳ ಹಿನ್ನಲೆಯಲ್ಲಿ ಬೃಹದಾಕಾರದ ಶಿವನ ಕಲಾತ್ಮಕ ಆಕೃತಿ, ತ್ರಿಶೂಲ, ಢಮರುಗಗಳ ಸಹಿತ ಕೈಲಾಸವನ್ನೇ ಧರೆಗಿಳಿಸಿದ ಸೃಜನಾತ್ಮಕ ರಂಗಸಜ್ಜಿಕೆ, ಬೆಳಕಿನ ರಂಗಿನಾಟ ಮತ್ತು ಸನ್ನಿವೇಶಗಳ ಗಾಢತೆಗೆ ಪೂರಕವಾದ ವಾದ್ಯಗಳ ಧ್ವನಿ ಪರಿಣಾಮ ನಿಜಕ್ಕೂ ನೃತ್ಯಪ್ರಸ್ತುತಿಯನ್ನು ಔನ್ನತ್ಯಕ್ಕೇರಿಸಿತು.
ಕನ್ನಡ ಕಾವ್ಯಗಳ ವಿಹಂಗಮ ನೋಟ, ಶಿವ ಸ್ಥಾಯೀಭಾವದ ಶಿವಾನಿಯ ನೃತ್ಯಾಂಜಲಿ-ಕಾವ್ಯಾಂಜಲಿ ‘ಮಣಿವೆನಿಂದು ಮನದಾಳದಿಂದ ಸಿರಿಗನ್ನಡ ಅಂಬೆ ನಿನಗೆ’ ಎಂಬ ಕೃತಜ್ಞತಾ ಪ್ರಾರ್ಥನೆಯೊಂದಿಗೆ ಶುಭಾರಂಭಗೊಂಡಿತು. ಮೊದಲನೋಟಕ್ಕೇ ಕಲಾವಿದೆಯ ಅಂಗಶುದ್ಧಿಯನ್ನು ಬಿಂಬಿಸುವ ಖಚಿತ ಹಸ್ತ, ಅಡವುಗಳ ಸ್ಫುಟತೆ, ನಿಖರ ಚಲನೆಯ ನೃತ್ಯದ ಮೋಡಿಯ ಪರಿಚಯ ಲಭಿಸಿತು. ಗಜಾನನನ ಅರ್ಚನೆಯಲ್ಲಿ ನಗುಮುಖದ ಆಕೆಯ ಸುಂದರ ಆಂಗಿಕಗಳೊಡನೆ ಭಾವತಲ್ಲೀನತೆ ಸ್ಫುರಿಸಿತು. ಮೋಹಕ ನೃತ್ತಗಳಲ್ಲಿನ ನಾಟಕೀಯ ಸೆಳೆಮಿಂಚುಗಳು ಆಕರ್ಷಣೀಯವೆನಿಸಿದವು.
ಅನಂತರ ರಾಘವಾಂಕ ಕವಿಯ ‘ಸೋಮನಾಥ ಚರಿತ್ರೆ’ಯಿಂದ ಆಯ್ದಭಾಗ ‘ಸೋಮನಾಥ ಕವಿತ್ವಂ’ ಆಗಿ ಸೊಲ್ಲುಗಳಿ ಗನುಗುಣವಾದ ನೃತ್ತ ಝೇಂಕಾರದಲ್ಲಿ ಅನಾವರಣಗೊಂಡಿತು. ಸೋಮನ ರೌದ್ರಾವತಾರ, ವೀರಾವೇಶದ ಅಡವುಗಳನ್ನು ಶಿವಾನಿ ಪೌರುಷ ನಡೆಯಲ್ಲಿ ನಿರೂಪಿಸಿದಳು. ಸಾಹಿತ್ಯದ ಸಾಲುಗಳು ಅವಳ ಅಭಿನಯಕ್ಕೆ ಹೇಳಿ ಮಾಡಿಸಿದಂತಿದ್ದವು. ಹೆಚ್ಚೇನು ಸೋಮೇಶ್ವರನನ್ನು ಕೈಲಾಸದಿಂದ ಭುವಿಗಿಳಿಸಿ ಸಾಕ್ಷತ್ಕರಿಸಿದ್ದಳು.
ಅನಂತರ ಬಸವಣ್ಣನ ‘ ನಾದಪ್ರಿಯ ಶಿವನೆಂಬರು , ನಾದಪ್ರಿಯ ಶಿವನಲ್ಲ…’ (ಹಿಂದೋಳ ರಾಗ) ವಚನವನ್ನು ಕಲಾವಿದೆ ತನ್ನ ಭಾವಸ್ಫುರಣ ಅಭಿನಯದಿಂದ ಹೃದಯಸ್ಪರ್ಶಿಯಾಗಿಸಿದಳು. ಭಕ್ತಿಪ್ರಿಯ ಶಿವನ ಮಹಿಮೆಯನ್ನು ತಿಳಿಸಲು ಸಂಚಾರಿಯಲ್ಲಿ ನಿದರ್ಶನವಾಗಿ ಬಂದ ರಾವಣನ ಶಕ್ತಿಶಾಲಿ ಕಥಾನಕದಲ್ಲಿ ಕಲಾವಿದೆಯ ಅಭಿನಯಸಾಮರ್ಥ್ಯ ಸಂಪೂರ್ಣ ತೆರೆದುಕೊಂಡಿತು. ರಾವಣನ ಪೌರುಷಯುಕ್ತ ವರ್ತನೆ, ಗಡಸುಭಾವ,ವೀರಾವೇಶ, ತೇಜೋಪುಂಜ ವ್ಯಕ್ತಿತ್ವವನ್ನು ಶಿವಾನಿ ತನ್ನ ಶಕ್ತಿಶಾಲಿಯಾದ ಆಂಗಿಕಾಭಿನಯದಿಂದ ಮನೋಜ್ಞವಾಗಿ ಕಟ್ಟಿಕೊಟ್ಟಳು. ಕರುಳಲ್ಲಿ ವೀಣೆ ನುಡಿಸುವ ದೃಶ್ಯ ಅನನ್ಯವಾಗಿದ್ದು, ಆತ್ಮಲಿಂಗ ಪಡೆಯುವ ಕೃತಕೃತ್ಯತೆಯ ಭಾವಾಭಿನಯವನ್ನು ಪಾತ್ರದಲ್ಲಿ ತಲ್ಲೀನಳಾಗಿ ಅನುಭವಿಸಿ ತೋರಿದಳು. ಅಷ್ಟೇ ಶೀಘ್ರವಾಗಿ ವೀರರಸದಿಂದ ಭಕ್ತಿರಸಕ್ಕೆ ಎರಕಗೊಂಡವಳು, ‘ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ’ ಎಂಬುವಲ್ಲಿ ಭಕ್ತಿಮೂರ್ತಿಯೇ ಆದಳು.
ರಂಗಾರೋಹಣದ ಕೇಂದ್ರ ರಸಭಾವದ ಘಟ್ಟವೆಂದರೆ ‘ವರ್ಣ’. ನೃತ್ತ-ಅಭಿನಯಗಳ ಸಮ್ಮಿಲನದ ಸುದೀರ್ಘ ಬಂಧದಲ್ಲಿ ಶಿವಾನಿ, ಹರಿಹರ ಕವಿಯ ‘ಗುಂಡಯ್ಯನ ರಗಳೆ’ ಯಂಥ ಅಪರೂಪದ ಕೃತಿಯನ್ನು, ಶಾಸ್ತ್ರೀಯ ಚೌಕಟ್ಟಿನೊಳಗಣ ವರ್ಣವಾಗಿ ಅರ್ಪಿಸಿದ್ದು ವಿಶೇಷ. ಇದರಲ್ಲಿ ವರ್ಣದ ಎಲ್ಲ ಲಕ್ಷಣ, ಶಾಸ್ತ್ರಾಂಶಗಳೂ ಇದ್ದವು. ಸುಪುಷ್ಟ ಮೋಹಕ ನೃತ್ತಗಳೊಂದಿಗೆ ಪರಿಣತ ಅಭಿನಯಕ್ಕೆ ಯಥೇಚ್ಛ ಅವಕಾಶಗಳಿದ್ದವು. ಶಿವಭಕ್ತನಾದ ಗುಂಡಯ್ಯ, ಘಟ ಮಾಡುವ ತನ್ನ ಕಾಯಕದೊಳಗೆ ಶಿವನ ಕಾಣುತ್ತ, ಘಟನಾದ ಮಾಡುತ್ತಾ, ಕೈಲಾಸದ ಶಿವನನ್ನು ಕುಣಿಸಿದ,ಒಲಿಸಿದ. ಅಷ್ಟೇ ಅಲ್ಲದೆ ಶಿವೆಯೊಂದಿಗೆ ಅವನ ಮುಂದೆ ಮನದಣಿಯೆ ನರ್ತನ ಮಾಡುವಂತೆ ಮಾಡಿದ ಮಹಾಭಕ್ತ. ನಾಟಕೀಯ ಘಟನೆ-ದೃಶ್ಯಗಳಿಗೆ ಹೇಳಿ ಮಾಡಿಸಿದಂಥ ಇಂಥ ರಸಾತ್ಮಕ ಕಥಾನಕವನ್ನು ಆಯ್ಕೆ ಮಾಡಿದ ಮಾಲಿನಿಯವರ ಕಾಣ್ಕೆ, ದರ್ಶನ ಸ್ತುತ್ಯಾರ್ಹ.
ರಾಗಮಾಲಿಕೆಯ ‘ ಶಶಿಮೌಳಿಯೇ ಶರಣು ಸಲ್ಲಲಿತ…’ಎನ್ನುವ ಶಿವಾತ್ಮಕ ಭಾವಕ್ಕೆ ತಕ್ಕಂತೆ, ಶಿವಾನಿ ಕೇಸರಿಯ ಕಾವಿವಸ್ತ್ರ , ಕೊರಳಲ್ಲಿ ರುದ್ರಾಕ್ಷಿ ಮಾಲೆ, ನೊಸಲಲ್ಲಿ ಭಸ್ಮ ಧರಿಸಿ, ವೇದಿಕೆಯಲ್ಲಿ ಭಕ್ತಿಪರವಶತೆಯಿಂದ ನರ್ತನ ತಾಂಡವವಾಡಿದಳು. ಗುಂಡಯ್ಯ, ಕುಂಬಾರಿಕೆಯ ಕೆಲಸಗಳನ್ನು ಮಾಡುವಾಗಿನ ಪ್ರತಿ ವಿವರವನ್ನೂ ಕಲಾವಿದೆ ತನ್ನ ಸೂಕ್ಷ್ಮಾಭಿಜ್ಞತೆಯಿಂದ ಚೆಲುವಾಗಿ ಅಭಿನಯಿಸುತ್ತ ರಸಿಕರು ಕಣ್ಮಿಟುಕಿಸದಂತೆ ಆವರಿಸಿಕೊಂಡಳು. ಘಟಗಳನ್ನು ಬಳಸಿಕೊಂಡು ಸಾದರಪಡಿಸಿದ ಸೊಲ್ಲುಕಟ್ಟುಗಳ ಲಯ ಹಿಡಿದು ಹಾಕಿದ ಅಡವುಗಳ ರಭಸ, ಪಾದಭೇದಗಳ ಸೊಗಸು, ಶಿವತಾಂಡವದ ನೃತ್ಯವೈವಿಧ್ಯ ಅನನ್ಯವಾಗಿತ್ತು. ಶಿವ ಸಾಕ್ಷತ್ಕಾರವಾದಾಗ ಗುಂಡಯ್ಯನಿಗಾಗುವ ದಿಗ್ಭ್ರಮೆ,ವಿಸ್ಮಯ, ಧನ್ಯತಾ ಭಾವಗಳ ಅಭಿವ್ಯಕ್ತಿ, ಕಲಾವಿದೆಯ ಅಭಿನಯ ಪ್ರೌಢಿಮೆಗೆ ಹಿಡಿದ ಕನ್ನಡಿಯಾಗಿತ್ತು. ಮೂಡಿಬಂದ ಆಕಾಶಚಾರಿ, ಮಂಡಿ ಅಡವುಗಳ ನೃತ್ತನೈಪುಣ್ಯ, ಮನೋಹರ ರಂಗಾಕ್ರಮಣ, ರಸಿಕರ ಮೆಚ್ಚುಗೆಯ ಕರತಾಡನವಾಯಿತು. ಶಿವಾನಿಯ ತಾಳ-ಲಯಜ್ಞಾನಗಳು, ಸೂಕ್ಷ್ಮಗ್ರಹಿಕೆಯ ಶಕ್ತಿ ಸುವ್ಯಕ್ತವಾದವು.
ಮುಂದಿನ ‘ಕಿರಾತಾರ್ಜುನೀಯ ಪ್ರಸಂಗ’ ( ಕುಮಾರವ್ಯಾಸ ಕರ್ಣಾಟ ಭಾರತ ಕಥಾಮಂಜರಿ) ದಲ್ಲಿ ಶಿವಾನಿಯ ಅಭಿನಯದ ಎಲ್ಲ ಮುಖಗಳೂ ಕಾಣಿಸಿಕೊಂಡವು. ಕಿರಾತ ಮತ್ತು ಅರ್ಜುನನ ಬಿಲ್ಲು ಕಾಳಗದ ದೃಶ್ಯದಲ್ಲಿ ಕಂಡ ನಾಟಕೀಯ ನೃತ್ಯದ ವರಸೆ, ಸಂಭಾಷಣೆಗಳು ಪರಿಣಾಮವನ್ನು ಹೆಚ್ಚಿಸಿದವು. ಚಿಗರೆಯ ಲವಲವಿಕೆಯ ಚಲನೆ, ಚುರುಕಿನ ನೆಗೆತಗಳ ಜೊತೆಯಲ್ಲಿ ಸಾಗಿ ಬಂದ ಪಾದರಸದ ನೃತ್ತಗಳು ಮುದ ನೀಡಿದವು. ತಾನು ಅರ್ಚಿಸಿದ ಹೂಗಳು ಎದುರಿಗೆ ನಿಂತ ಕಿರಾತನ ಪಾದಗಳಿಗೆ ವೃಷ್ಟಿಯಾದಾಗ ಅರ್ಜುನನ ಗರ್ವಭಂಗವಾಗಿ ಶರಣಾಗುವ ಸನ್ನಿವೇಶ ಅದ್ಭುತವಾಗಿ ಮೂಡಿಬಂತು.
ಮುಂದೆ ಗೋಪಾಲದಾಸರ ‘ಒಲಿದೆ ಏಕಮ್ಮಾ ಗಿರಿಜೆ ವಾಮದೇವನ?’ ಎಂಬ ಸುಂದರ ಕೃತಿ ಸಾದರಪಡಿಸಿ, ತನ್ನ ಲಾಸ್ಯಪೂರ್ಣ ನೃತ್ತಗಳು, ಭ್ರಮರಿಗಳು, ಸುಂದರ ತೀರ್ಮಾನಗಳ ‘ತಿಲ್ಲಾನ’ ದೊಂದಿಗೆ ಪ್ರಸ್ತುತಿಯನ್ನು ಸಂಪನ್ನಗೊಳಿಸಿದಳು. ‘ಮಂಗಳ’ದಲ್ಲಿ ಕನ್ನಡ ಬಾವುಟ ಹಿಡಿದು ಶಿವಾನಿ ರಂಗಾಕ್ರಮಿಸಿ ಹರ್ಷದಿಂದ ನರ್ತಿಸಿದ್ದು ಮನಸೂರೆಗೊಂಡಿತು.