ಆ ಮುಚ್ಚಂಜೆಯ ಸುಮಧುರ ವಾತಾವರಣದಲ್ಲಿ ಇತ್ತೀಚಿಗೆ ನಗರದ ಎ.ಡಿ.ಎ.ರಂಗಮಂದಿರದಲ್ಲಿ ಚೈತನ್ಯದಾಯಕ ನರ್ತನ ಪ್ರಸ್ತುತವಾಯಿತು. ಅಂತರರಾಷ್ಟ್ರೀಯ ಖ್ಯಾತಿಯ ನಾಟ್ಯಾಚಾರ್ಯ-ನೃತ್ಯ ಕಲಾವಿದ ಡಾ. ಸಂಜಯ್ ಶಾಂತಾರಾಂ ಶಿಷ್ಯೆ ಅನುಷಾ ಅಜಿತಕುಮಾರ್ ತನ್ನ ‘ರಂಗಪ್ರವೇಶ’ದಲ್ಲಿ ಉತ್ತಮಕೃತಿಗಳನ್ನು ಅಭಿನಯಿಸಿ ಕಲಾರಸಿಕರ ಪ್ರಶಂಸೆಗೆ ಪಾತ್ರವಾದಳು. ಅವಳ ಲವಲವಿಕೆಯ ನೃತ್ಯದ ಸೊಬಗನ್ನು ಹೆಚ್ಚಿಸಿದ ವಾದ್ಯಗೋಷ್ಠಿಯಲ್ಲಿ ಶಂಕರರಾಮನ್ (ವೀಣೆ), ಜಗದೀಶ್ ಜನಾರ್ದನ್ ( ಮೃದಂಗ), ಗಣೇಶ್(ಕೊಳಲು), ಕಾರ್ತೀಕ್ ದಾತಾರ್ (ರಿದಂ ಪ್ಯಾಡ್) ಮತ್ತು ನಟುವಾಂಗದಲ್ಲಿ ಡಾ. ಸಂಜಯ್ ಮತ್ತು ಸಹಕಾರದಲ್ಲಿ ಮಾ.ಕೌಶಿಕ್ ಇದ್ದರು.
ಶುಭಾರಂಭದಲ್ಲಿ ಹಂಸನಾದ ರಾಗದ ಗಣೇಶಶ್ಲೋಕವನ್ನು ಸಾದರಪಡಿಸಿ ನಂತರ ಸಾಂಪ್ರದಾಯಕ ‘ಪುಷ್ಪಾಂಜಲಿ’ಯಲ್ಲಿ ನಗುಮೊಗದ ತನ್ನ ನೃತ್ತಗಳ ಮೇಳದ ವೈಭವ ತೋರಿದಳು. ಮುಂದೆ, ನಟರಾಜ-ಸರಸ್ವತಿಯರ ಮಹಿಮೆಯನ್ನು ಸ್ಫುಟವಾದ ಆಂಗಿಕಗಳಲ್ಲಿ ಬಣ್ಣಿಸುತ್ತ, ಅಡಿಯಿಂದ ಮುಡಿಯವರೆಗೂ ನಟರಾಜನ ಭವ್ಯಸ್ವರೂಪವನ್ನು ಉಜ್ವಲವಾಗಿ ಪ್ರಕಟಪಡಿಸಿದಳು. ಸರಸ್ವತಿಯ ಮನೋಹರರೂಪವನ್ನು ತನ್ಮಯತೆ ಕೂಡಿದ ರಮಣೀಯ ಅಭಿನಯದ ಮೂಲಕ ನಿವೇದಿಸಿ, ಅಂತ್ಯದ ವೀಣಾಪಾಣಿಯ ಮನಮೋಹಕ ಭಂಗಿ ಪ್ರದರ್ಶನದಲ್ಲಿ ರಸಿಕರ ಕರತಾಡನ ಪಡೆದಳು.
ಡಾ. ಬಾಲಮುರಳೀಕೃಷ್ಣರ ಸಂಗೀತದ ಮೋಹನಗಾಂಧಿ ರಾಗದ ‘ಜತಿಸ್ವರ’ ಕಲಾವಿದೆಯ ಅಸೀಮ ಚೈತನ್ಯ ಶಕ್ತಿಗೆ ಕನ್ನಡಿ ಹಿಡಿಯಿತು. ನೃತ್ಯದ ಜತಿಗಳು, ಸಂಗೀತದ ಸ್ವರಗಳ ಸಮ್ಮೇಳವಾದ ಈ ಶುದ್ಧನೃತ್ತಬಂಧವನ್ನು ಅನುಷಾ, ಖಚಿತ ಅಡವು, ಹಸ್ತಮುದ್ರೆಗಳ ಶುದ್ಧ ಆಂಗಿಕದಲ್ಲಿ ಜತಿಸ್ವರದ ಸೌಂದರ್ಯವನ್ನು ಎತ್ತಿಹಿಡಿದಳು. ಕಡೆಯ ಸ್ವರಗಳು ಸಂಯುಕ್ತ ಹಸ್ತಗಳಲ್ಲಿರುವುದು ವಿಶೇಷವಾಗಿತ್ತು. ಪ್ರತಿ ಜತಿಗಳ ಲಾವಣ್ಯವನ್ನೂ ಕಲಾವಿದೆ, ಚೈತನ್ಯದ ಖನಿಯಾಗಿ ಪ್ರದರ್ಶಿಸಿದಳು.
ಹಿಂದಿನಕಾಲದಲ್ಲಿ ದೇವಾಲಯಗಳಲ್ಲಿ ನಡೆಯುತ್ತಿದ್ದ ನೃತ್ಯಗಳಿಗೆ, ಶಿಷ್ಯರಲ್ಲಿ ಆತ್ಮವಿಶ್ವಾಸ ಬೆಳೆಸಲು ಗುರುಗಳೇ ಹಾಡುತ್ತ, ನಟುವಾಂಗದ ಸಹಕಾರ ನೀಡುವುದು ಪದ್ಧತಿಯಾಗಿತ್ತು. ಅದರಂತೆ ಡಾ.ಸಂಜಯ್ ತಮ್ಮ ಉತ್ಸಾಹಪೂರ್ಣ ನಟುವಾಂಗ ಮತ್ತು ಭಾವಪೂರ್ಣ ಸುಶ್ರಾವ್ಯ ಗಾಯನಗಳ ಸಹಕಾರದಲ್ಲಿ ಕಲಾವಿದೆಯಲ್ಲಿ ಸ್ಫೂರ್ತಿ ತುಂಬಿದ್ದರು. ಕಲಾವಿದೆಯ ಅಭಿನಯ ಪಕ್ವತೆಯ ಮಾನದಂಡವಾಗಿ ವಿವಿಧರಾಗಗಳಲ್ಲಿ ಅಭಿವ್ಯಕ್ತವಾದ ‘ನವರಸ’ಗಳ ಸಂಕ್ಷಿಪ್ತ ಅಭಿನಯದಲ್ಲಿ ಅನುಷಾ ತನ್ಮಯತೆಯಿಂದ ಭಾವಗಳ ಒಳಹೊಕ್ಕು ಅಭಿನಯಿಸಿ ಮೆಚ್ಚಗೆ ಪಡೆದಳು.
ಅನಂತರ ದಂಡಾಯುಧಪಾಣಿ ಪಿಳ್ಳೈ ನಾಟಿಕುರಂಜಿ ರಾಗದ ‘’ಸ್ವಾಮಿ ನಾನುಂದನ್ ಅಡಿಮೈ’’ – ಆಧ್ಯಾತ್ಮಿಕ ಭಾವದ ‘ಪದವರ್ಣ’-ನಟರಾಜನಿಗೆ ಅರ್ಪಿತವಾಯಿತು. ‘ಶಿವನೇ ನಿನ್ನ ನರ್ತನದ ಪಾದಗಳನ್ನು ತೋರಿಸಿ ಅನುಗ್ರಹಿಸು’ ಎಂಬ ನಾಯಿಕೆಯ ಅನನ್ಯಭಕ್ತಿಯನ್ನು ಸಾಕ್ಷಾತ್ಕರಿಸಿದ ಅನುಷಾ ಆನಂದದಿಂದ, ಲವಲವಿಕೆಯಿಂದ ಅಷ್ಟೇ ಭಕ್ತಿಭಾವ ಮೈದುಂಬಿಕೊಂಡು ಪ್ರಸ್ತುತಪಡಿಸಿದಳು. ಕುಲುಮೆಗೆ ಬಿದ್ದ ಲೋಹ, ಹದಕ್ಕೆ ಬರುವಂತೆ, ಸಂಕೀರ್ಣ ನೃತ್ತಜಾಲಗಳ ‘ವರ್ಣ’ದ ನಿಕಷಕ್ಕೊಡ್ಡಿದ ಕಲಾವಿದೆಯ ನೃತ್ಯನೈಪುಣ್ಯ ‘ಪುಟಕ್ಕಿಟ್ಟ ಚಿನ್ನ’ದಂತೆ ಕಂಗೊಳಿಸುತ್ತದೆ. ಶಿವನ ದಿವ್ಯತೆಯನ್ನು ಪ್ರಜ್ವಲಿಸಿದ ಕಲಾವಿದೆಯ ವರ್ಚಸ್ವೀ ಭಾವ-ಭಂಗಿಗಳು ಮನೋಹರವಾಗಿ ಪ್ರತಿಫಲಿಸಿದವು. ಶಿವ, ನಾಗಾಭರಣ ಧರಿಸುವುದು, ಜಟೆಯನ್ನು ಬಿಗಿಯಾಗಿ ಕಟ್ಟುವ ಪರಿ, ಆತನ ಅಲಂಕಾರದ ವಿವಿಧ ಮಜಲುಗಳನ್ನು ಸೊಗಸಾಗಿ ಕಟ್ಟಿಕೊಡಲಾಯಿತು. ನಡುನಡುವೆ ಝೇಂಕರಿಸುವ ಪಾದವೈವಿಧ್ಯದ ಅಡವುಗಳು, ನವವಿನ್ಯಾಸದ ನೃತ್ತ-ಕರಣಗಳ ಅಭಿವ್ಯಕ್ತಿ ಕಣ್ಣಿಗೆ ಹಬ್ಬವಾಯಿತು. ನವೋಲ್ಲಾಸ ನಟುವಾಂಗದ ಕೊನ್ನಕೋಲ್ಗಳಿಗೆ ಅನುಗುಣ ಮಿಂಚಿದ ಹೊಸ ಹೊಳಪಿನ ಜತಿಗಳ ನಿರೂಪಣೆ ಭಾವನಿಮೀಲತೆಯ ರಸಘಟ್ಟಗಳಾದವು. ಶಿವ ಢಮರುಗ ಹಿಡಿದು ನಟನವಾಡಿದ ಸೌಂದರ್ಯ ಅನುಪಮವಾಗಿತ್ತು. ಯೋಗದ ಭಂಗಿಗಳು ಗಮನ ಸೆಳೆದವು. ‘ನಟರಾಜ ದೇವ ಸಚ್ಚಿದಾನಂದ’ ಒಂದು ಸಾಲಿನ ವಿಸ್ತಾರದಲ್ಲಿ ಕಲಾವಿದೆ ಮಿಂಚಿನಸಂಚಾರ ತೋರಿ ನೆರೆದ ರಸಿಕರನ್ನು ಮಂತ್ರಮುಗ್ಧಗೊಳಿಸಿದಳು.
ಮುಂದೆ ಪುರಂದರದಾಸರ ದೇವರನಾಮ ‘’ ಆಡಿದನೋ ರಂಗ’’ -ಇಡೀ ರಂಗವನ್ನು ಬಳಸಿಕೊಂಡು ಕೃಷ್ಣನ ಬಾಲಗಾಥೆ, ಸಾಹಸಗಳನ್ನು ರಮಣೀಯವಾಗಿ ಕಣ್ಣಿಗೆ ಕಟ್ಟುವಂತೆ ಅಭಿನಯಿಸಿದಳು. ಪ್ರಯೋಗಶೀಲ ಸಂಜಯರ ನೃತ್ಯ ಸಂಯೋಜನೆ ಅಮೋಘವಾಗಿತ್ತು. ನಾಟಕೀಯಗುಣಗಳಿಂದ ಮಿಂಚಿದ ಕೃತಿಯ ಸಾಕಾರ ಮಂಡಿ ಅಡವು, ಅಕಾಶಚಾರಿಗಳಿಂದ ಆಕರ್ಷಕವಾಗಿದ್ದವು. ಸ್ವಾತಿತಿರುನಾಳರ ಮಲಯಾಳಂ ‘ಪದಂ’ ಶೃಂಗಾರರಸದಲ್ಲಿ ಮೀಯಿಸಿತು. ಆನಂದಭೈರವಿ ರಾಗದ ಕೃತಿಗೆ ‘ಮೋಹಿನಿಯಾಟ’ದ ಸ್ಪರ್ಶ ನೀಡಲಾಗಿತ್ತು. ತಿಲ್ಲಾನದ ರಸರಂಗು, ಮಂಗಳದಲ್ಲಿ ಮೂಡಿಬಂದ ಕುವೆಂಪು ಅವರ ‘ಅಂತರತಮನೆ ಗುರು’ ಪ್ರತಿಭಾವಂತ ಕಲಾವಿದೆಯ ಅನುಪಮ ಭಂಗಿಗಳಿಗೆ, ನೃತ್ತ ನೈಪುಣ್ಯಕ್ಕೆ ಸಾಕ್ಷಿಯಾದವು.