Image default
Drama Reviews

ಅರ್ಥಪೂರ್ಣ ಸಂಭಾಷಣೆಯ ‘’ಸುಯೋಧನ’’ ನಾಟಕ

ಮಹಾಭಾರತದ ಕಥೆಯನ್ನು ಹೊಸದೃಷ್ಟಿಯಿಂದ ಮತ್ತೊಮ್ಮೆ ವಿಮರ್ಶಿಸುವ ಸಂದರ್ಭ ಸೃಷ್ಟಿಯಾದದ್ದು , ಸಂಧ್ಯಾ ಕಲಾವಿದರು ಅಭಿನಯಿಸಿದ ‘’ ಸುಯೋಧನ’’ ನಾಟಕವನ್ನು ವೀಕ್ಷಿಸಿದನಂತರ. ಇತ್ತೀಚಿಗೆ ಬೆಂಗಳೂರಿನ ‘ಪ್ರಭಾತ್ ಕಲಾಪೂರ್ಣಿಮಾ’ ಹೊಸರಂಗಮಂದಿರದಲ್ಲಿ, ಎಸ್.ವಿ.ಕೃಷ್ಣ ಶರ್ಮ ರಚಿಸಿ, ನಿರ್ದೇಶಿಸಿದ `ಸುಯೋಧನ’ ನಾಟಕ, ಪಾತ್ರಗಳ ಸೊಗಸಾದ ಮಾತಿನಿಂದಲೇ ಆಕರ್ಷಿಸಿತು. ನಾಟಕ ನೋಡಿದ ನಂತರ ಹೊಸ ಆಲೋಚನೆಗಳಿಗೆ  ಎಡೆ ಮಾಡಿಕೊಟ್ಟಿತು. ಈಗಾಗಲೇ ನಲವತ್ತು ವರುಷಗಳ ಅನುಭವವುಳ್ಳ ‘’ಸಂಧ್ಯಾ ಕಲಾವಿದರು’’ ಈ ನಾಟಕವನ್ನು ನೂರು ಪ್ರದರ್ಶನ ನೀಡಿ ಜನಪ್ರಿಯಗೊಳಿಸಿತ್ತು. ಮತ್ತೆ ಪುನಃಶ್ಚೇತನಗೊಂಡ ತಂಡ ಹೊಸಪೀಳಿಗೆಯ ತರುಣ ಕಲಾವಿದರಿಗೆ ತಾಲೀಮು ನೀಡಿ ರಂಗದಮೇಲೆ ತಂದ ಈ ನಾಟಕ ನೆನಪಿನಲ್ಲಿ ಉಳಿಯುವಷ್ಟು ಪರಿಣಾಮ ಬೀರಿತ್ತು.

ನಾಟಕಕಾರ ಕೃಷ್ಣಶರ್ಮರು ಮಹಾಭಾರತದ  ಕಥೆಯನ್ನು ಅಮೂಲಾಗ್ರವಾಗಿ ಬಲ್ಲರೆಂಬ ಅಂಶವು ನಾಟಕದಲ್ಲಿ ಪ್ರಸ್ತಾಪಿತವಾಗುವ ಅನೇಕಾನೇಕ ಘಟನೆ, ಸನ್ನಿವೇಶಗಳು ಎತ್ತಿ ತೋರಿಸುತ್ತಿದ್ದವು. ಇಲ್ಲಿನ ನಾಟಕದ ವಸ್ತು  ಕುರುಕ್ಷೇತ್ರದ ಕಡೆಯ ಭಾಗ. `ಸ್ಮಶಾನ ಕುರುಕ್ಷೇತ್ರ‘ ದಲ್ಲಿ ನಡೆಯುವ ಸುಯೋಧನ ಹಾಗೂ ಭೀಮನ ನಡುವಿನ  ಗದಾಯುದ್ಧ ಹಾಗೂ ಸುಯೋಧನನ ಅವಸಾನದ ಚಿತ್ರಣದ ಮೇಲೆ ನಾಟಕವನ್ನು ಕೇಂದ್ರೀಕರಿಸಲಾಗಿತ್ತು.

ಇಡೀ ನಾಟಕ ಕಥಾನಾಯಕ ಸುಯೋಧನನ ಸ್ಮೃತಿಪಟಲದ ಮೇಲೆ ಹಾದುಹೋಗುವ ಪಕ್ಷಿನೋಟ ತಂತ್ರದಲ್ಲಿ, ಹಿಂದೆ ನಡೆದುಹೋದ ಘಟನೆಗಳು ಬಿಚ್ಚಿಕೊಳ್ಳುವಂತೆ ನಿರೂಪಿತವಾಗಿದೆ. ಭೀಮನ ಗದಾಪ್ರಹಾರದಿಂದ ಧರಾಶಾಯಿಯಾದ ಅವನು ತನ್ನ ಪತನಕ್ಕೆ ಕಾರಣ ಯಾರು ಎಂದು ಆತ್ಮವಿಶ್ಲೇಷಣೆ ಮಾಡಿಕೊಳ್ಳುತ್ತ ಹೋಗುವ ಘಟ್ಟದಲ್ಲಿ ಅವನ ಶತ್ರುಗಳ ಜೊತೆ, ಅವನು ನೆಚ್ಚಿದವರೂ ಅದರಲ್ಲಿ ಸೇರಿದಂತೆ ಭಾಸವಾಗಿ ಭ್ರಮನಿರಸಗೊಳ್ಳುವನು. ತನ್ನ ಉಪ್ಪುಂಡ, ತನ್ನನ್ನಾಶ್ರಯಿಸಿದ ಸ್ನೇಹಿತ ಕರ್ಣ, ಮಾವ ಶಕುನಿ ಮತ್ತು ಹಿರಿಯರಾದ ದ್ರೋಣ-ಭೀಷ್ಮ ಮುಂತಾದ ನಂಬಿದ ವ್ಯಕ್ತಿಗಳೇ ದ್ರೋಹ ಮಾಡಿರುವ ಸಂಗತಿಗಳು  ಒಂದೊಂದೇ ಅರಿವಾಗಿ, ಅವರನ್ನು ವ್ಯರ್ಥ ಮೆರೆಸಿದ್ದಕ್ಕೆ ಪಶ್ಚಾತ್ತಾಪಪಡುವಂಥ ಹಲವು ಮನನೀಯ ದೃಶ್ಯಗಳಿವೆ. ನಾಟಕ ನೋಡುತ್ತಿರುವಷ್ಟು ಹೊತ್ತು, ಸುಯೋಧನ ನಿವೇದಿಸುವ ಮಾತುಗಳು ಮನಸ್ಸನ್ನು ತಾಗುವುದು ನಾಟಕದ ಸ್ವಾರಸ್ಯ.

`ಯುದ್ಧದಲ್ಲಿ ಸತ್ತವರೆಲ್ಲ ವೀರಸ್ವರ್ಗ ಸೇರುತ್ತಾರಂತಲ್ಲ ನೀವೇಕೆ ಭೂತ ಪ್ರೇತ-ಪಿಶಾಚಿಗಳಾಗಿ ಅಲೆಯುತ್ತಿರುವಿರಿ’ – ಎಂದು ಸುಯೋಧನ, ತನ್ನನ್ನು ಸುತ್ತುವರಿದ, ಕಲಿಗಳೆನಿಸಿಕೊಂಡು ಯುದ್ಧದಲ್ಲಿ ಮಡಿದವರ ಪ್ರೇತಗಳನ್ನು ಪ್ರಶ್ನಿಸುವ ಸಂದರ್ಭ ಅತ್ಯಂತ ಮಾರ್ಮಿಕವಾಗಿತ್ತು. ನಾಟಕಕಾರರ ಈ ಹೊಸಪರಿಕಲ್ಪನೆ ಕುತೂಹಲಕರವಾಗಿದ್ದರೆ, ಅದನ್ನು ನಿರ್ದೇಶಕರಾಗಿ  ಕೃಷ್ಣಶರ್ಮರು ರಂಗದಮೇಲೆ ರೂಪಿಸಿದ ಈ `ಪ್ರೇತ ದೃಶ್ಯ’ ಪರಿಣಾಮಕಾರಿಯಾಗಿತ್ತು. ಇದಕ್ಕೆ ನಟರ ಸಮರ್ಥ ಅಭಿನಯದ ಜೊತೆ ಬೆಳಕಿನವಿನ್ಯಾಸವೂ ಕಾರಣವಾಗಿತ್ತು. ಹಿನ್ನಲೆಯಲ್ಲಿ ಮೂಡಿಬಂದ ಧ್ವನಿತರಂಗ ಪರಿಣಾಮವನ್ನು ಹೆಚ್ಚಿಸಿತ್ತು.

ಮಾತಿನ ಚಕಮಕಿಯಲ್ಲಿ ಅಲ್ಲಲ್ಲಿ ಹಾಸ್ಯಚಾಟೋಕ್ತಿಗಳು ಹರಿದು ಪ್ರೇಕ್ಷಕರು ನಗೆಗಡಲಲ್ಲಿ ತೇಲಿದರು. ಕರ್ಣನನ್ನು ದುರ್ಬಲಗೊಳಿಸಲು ಕೃಷ್ಣ ಮತ್ತು ಶಕುನಿ ಹೆಣೆಯುವ ಮಾತಿನಜಾಲ, ಕೃಷ್ಣ-ಶಕುನಿಯರ ನಾಟಕೀಯ ಭೇಟಿ-ಸಂಭಾಷಣೆಗಳು ಆಸಕ್ತಿ ಹುಟ್ಟಿಸಿದವು. ಶಕುನಿ-ಆರ್. ರಂಗನಾಥರಾವ್, ಕೃಷ್ಣ-ಪ್ರದೀಪ್ ಕುಮಾರ್ ಮತ್ತು ಕರ್ಣ-ಅಶ್ವತ್ ಕುಮಾರ್ ಅವರ ನಟನೆ ಚುರುಕಾಗಿದ್ದು, ಮನಮುಟ್ಟಿತು. ನಾಟಕದ ಮುಖ್ಯಪಾತ್ರ ಸುಯೋಧನ-ಕುಶಲ್ ಭಟ್ ಅವರಿಗೆ ದೀರ್ಘಮಾತುಗಳು ಇದ್ದುದರಿಂದ ಕೊಂಚ ಆಯಾಸಗೊಂಡಂತೆ ಕಂಡರೂ ಚೆನ್ನಾಗಿ ಅಭಿನಯಿಸಿದರು. ಮಾತಿನ ಏರಿಳಿತ ಒಂದೇ ಮಟ್ಟದಲ್ಲಿ ಇದ್ದಿದ್ದರೆ ಕಡೆಯ ಬೆಂಚಿನವರಿಗೂ ಸ್ಪಷ್ಟವಾಗಿ ಕೇಳುತ್ತಿತ್ತು. ಭೀಮ (ಶ್ಯಾಮಸುಂದರ) ಇನ್ನಷ್ಟು ಹುರುಪಿನಿಂದ ರಂಗವನ್ನು ಬಳಸಿಕೊಳ್ಳುತ್ತ ಆರ್ಭಟಿಸಿದ್ದರೆ ಕಳೆಗಟ್ಟುತ್ತಿತ್ತು. ಧರ್ಮರಾಯ ( ಅಶೋಕ್.ಬಿ.), ದ್ರೋಣ( ಪ್ರಕಾಶ್) ಮತ್ತು ಭೀಷ್ಮ( ಶರತ್) ಕೂಡ ಯಥೋಚಿತವಾಗಿ ನಟಿಸಿದರು. ಕೃಷ್ಣಶರ್ಮರ ನಿರ್ದೇಶನ ಬಿಗಿಯಾಗಿತ್ತು.

Related posts

ಹೊಸಬೆಳಕಿನಲ್ಲಿ ರಾವಣನ ಕಥೋಪಾಖ್ಯಾನ

YK Sandhya Sharma

ಅತ್ಯದ್ಭುತವಾಗಿ ಮೂಡಿಬಂದ `ಸುಯೋಧನ’

YK Sandhya Sharma

ತಿಳಿಹಾಸ್ಯದ ಹೊನಲು ಹರಿಸಿದ – ಸತ್ಯಂ ವಧ

YK Sandhya Sharma

Leave a Comment

This site uses Akismet to reduce spam. Learn how your comment data is processed.