ಇದುವರೆಗೂ ಜನಜನಿತವಾದ ರಾವಣನ ಪಾತ್ರಕ್ಕಿಂತ ತೀರಾ ಭಿನ್ನವಾದ ವ್ಯಕ್ತಿತ್ವ , ಅಷ್ಟೇ ವೈಶಿಷ್ಟ್ಯಪೂರ್ಣವಾದ ಅವನ ಕುತೂಹಲದ ಕಥೆಯನ್ನು ಆಲಿಸುವ ಅವಕಾಶ ಒದಗಿ ಬಂದದ್ದು `ಪೌಲಸ್ಥ್ಯನ ಪ್ರಣಯ ಕಥೆ’ ನಾಟಕ ವೀಕ್ಷಣೆಯ ಸಂದರ್ಭದಲ್ಲಿ. ಇತ್ತೀಚಿಗೆ ಸಂಧ್ಯಾ ಕಲಾವಿದರು ಕೆ.ಹೆಚ್.ಕಲಾಸೌಧದಲ್ಲಿ ಅಭಿನಯಿಸಿದ ಹೊಸ ಆಯಾಮದ ಈ ನಾಟಕ ಸ್ಪಂದನಾಶೀಲವಾಗಿದ್ದು, ನಾಟಕ ಮುಗಿಯುವಷ್ಟರಲ್ಲಿ ರಾವಣನ ಪಾತ್ರದ ಬಗ್ಗೆ ನೋಡುಗರ ಮನದಲ್ಲಿ ಯಾವುದೋ ಒಂದು ಬಗೆಯ ಅವ್ಯಕ್ತ ಆಪ್ತತೆ ಆವರಿಸಿತೆಂದರೆ ಖಂಡಿತಾ ಅದು ಉತ್ಪ್ರೇಕ್ಷೆಯ ಮಾತಲ್ಲ.
ನಾಟಕದ ಆರಂಭದಿಂದ ಕೊನೆಯವರೆಗೂ ಆಸಕ್ತಿ ಕೆರಳಿಸಿದ ನೂತನ ಶೈಲಿಯ ನಿರೂಪಣೆ ಬಿಗಿಯಾದ ಬಂಧದಲ್ಲಿತ್ತು. ಸನ್ನಿವೇಶಗಳ ಅನಾವರಣವೂ ಅಷ್ಟೇ ವೈವಿಧ್ಯಪೂರ್ಣವಾಗಿದ್ದವು. ಇಡೀ ನಾಟಕದಲ್ಲಿ ರಾವಣ ಲವಲವಿಕೆಯಿಂದ ಕಥೆ ಬೆಳೆಸುವ ಪರಿ, ಅವನ ಉತ್ಸಾಹ ಗಮನಾರ್ಹವಾಗಿತ್ತು. ಹೊಸ ರಾವಣನನ್ನು ದರ್ಶನ ಮಾಡಿಸುವ ಈ ನಾಟಕದ ಮೂಲ `ಪೌಲಸ್ಥ್ಯನ ಪ್ರಣಯ ಕಥೆ’ ಲತಾ ಅವರ ತೆಲುಗಿನ ಕಾದಂಬರಿ. ವಂಶಿಯವರಿಂದ ಕನ್ನಡಕ್ಕೆ ಅನುವಾದಿತವಾದ ಈ ಕೃತಿಯನ್ನಾಧರಿಸಿ , ನಟ-ನಿರ್ದೇಶಕ-ನಾಟಕಕಾರರಾದ ಎಸ್.ವಿ.ಕೃಷ್ಣ ಶರ್ಮ, ಬಹು ಸ್ವಾರಸ್ಯಕರವಾದ ನಾಟಕವನ್ನು ಹೆಣೆದಿದ್ದಾರೆ. ಅಷ್ಟೇ ಪರಿಣಾಮಕಾರಿಯಾಗಿ, ತಮ್ಮ ಹರಿತ ನಿರ್ದೇಶನದಿಂದ ಅದನ್ನು ರಂಗದ ಮೇಲೆ ತಂದಿದ್ದಾರೆ. ಜೊತೆಗೆ ತಾವೇ ರಾವಣನ ಪಾತ್ರವನ್ನು ನಟಿಸಿ, ತಮ್ಮ ಪ್ರೌಢ ಅಭಿನಯದಿಂದ ಜೀವಂತಗೊಳಿಸಿದ್ದಾರೆ.
ಎರಡು ಗಂಟೆಗೂ ಮಿಕ್ಕಿ ಸಾಗಿದ ನಾಟಕದಲ್ಲಿ ರಾವಣನೇ ಕೇಂದ್ರ ಪಾತ್ರ. ಅವನೇ ಇಡೀ ಕಥಾನಕವನ್ನು ವಿಶಿಷ್ಟವಾಗಿ ನಡೆಸಿಕೊಂಡು ಹೋಗುವವನು. ನಾವು ತಿಳಿದಂತೆ ಇಲ್ಲಿನ ರಾವಣ ಖಳನಾಯಕನಲ್ಲ. ಪರಸ್ತ್ರೀಯನ್ನು ಅಪಹರಿಸುವ ಖೂಳನೂ ಅಲ್ಲ. ನಾವು ಕೇಳಿದ ರಾಮಾಯಣ ಕಥೆಯಲ್ಲಿ ನಡೆಯುವ ಘಟನೆಗಳಿಗೆಲ್ಲ ಇಲ್ಲಿ ಬೇರೊಂದೇ ಅರ್ಥವಿದೆ, ಆಯಾಮವಿದೆ, ಹಿನ್ನಲೆಯಿದೆ. ಎಳೆಎಳೆಯಾಗಿ ಹರವಿಕೊಳ್ಳುವ ಕಥೆಯ ಅಂತರಂಗದಲ್ಲಿ ಇನ್ನೊಂದು ಪದರ ತೆರೆದುಕೊಳ್ಳುತ್ತ ಹೋಗುವುದು ಈ ನಾಟಕದ ವಿಶೇಷತೆ.
ಶತಶತಮಾನದ ಕಥೆ ವಿಷ್ಕಂಭಕವಾಗಿ ಬಿಚ್ಚಿಕೊಳ್ಳುವ ನಾಟಕದಲ್ಲಿ ರಾಮಾ-ಸೀತೆಯರ ಮದುವೆಯ ಪ್ರಕರಣ, ಅರಣ್ಯವಾಸ, ಸೀತಾಪಹರಣ, ಹನುಮಂತ ಮುಂತಾದ ಕಪಿಗಳ ಸಖ್ಯ, ಲಂಕಾಕ್ರಮಣ, ರಾಮ-ರಾವಣರ ಭೇಟಿ, ವಿಲಕ್ಷಣ ಸಂವಾದ, ರಾವಣನ ಬಯಕೆಯಂತೆ ರಾಮನೇ ಅವನಿಗೆ ಯುದ್ಧಕಂಕಣ ಕಟ್ಟಿ ತನ್ನಲ್ಲಿ ಐಕ್ಯಗೊಳಿಸಿಕೊಳ್ಳುವ ಅಪರೂಪದ ತಿರುವಿಗೆ ಪ್ರೇಕ್ಷಕರು ಸಾಕ್ಷಿಯಾಗಬೇಕಾಗುತ್ತದೆ.
ಪುರುಷೋತ್ತಮನೆನಿಸಿಕೊಂಡ ಆದರ್ಶಪುರುಷ ರಾಮನಲ್ಲಿ, ರಾವಣ ತೋರಿದ ಪ್ರಣಯದ ಉತ್ಕಟತೆ, ಭಕ್ತಿಯ ಪಾರಮ್ಯವನ್ನು ನಾಟಕದಲ್ಲಿ ಸೊಗಸಾಗಿ ಕಂಡರಿಸಲಾಗಿದೆ. ಸಾಂಪ್ರದಾಯಕ ರಾಮಾಯಣದ ಪ್ರತಿ ಸಂಗತಿಯೂ ಇಲ್ಲಿ ಬೇರೊಂದು ಆಯಾಮ ಪಡೆದುಕೊಳ್ಳುತ್ತಾ ಹೋಗುವ ರೀತಿ ನೋಡುಗರನ್ನು ಗೆದ್ದುಕೊಳ್ಳುತ್ತದೆ. ಮಹಾ ಸಂಗೀತಜ್ಞ, ವೈಣಿಕ, ಕವಿ, ವಾಗ್ಮಿ, ರಸಿಕ , ಒಳ್ಳೆಯ ಪತಿ, ಪ್ರೇಮಿ, ಅಣ್ಣ , ಉತ್ತಮದೊರೆಯಾಗಿ ರಾವಣನ ದಶಮುಖಗಳು ಅಭಿವ್ಯಕ್ತವಾಗುವುವು.ಇವೆಲ್ಲಕ್ಕಿಂತ ಅವನು ವಾಲ್ಮೀಕಿಯ ಕಾವ್ಯಪ್ರೇರಕನಾಗಿ ರಾಮಾಯಣದ ಕಥೆ ಬರೆಯಲು ಸೂತ್ರಧಾರನಾಗುವ ವೈಶಿಷ್ಟ್ಯ ನಾಟಕದ ರೋಚಕಾಂಶ.
ಮನನೀಯ ಮಾತುಗಳಿಂದ ನಾಟಕ ಕಟ್ಟಿಕೊಟ್ಟಂತೆ, ಎಲ್ಲ ಪಾತ್ರಗಳ ಅಭಿನಯವೂ ಅಷ್ಟೇ ಉತ್ತಮಿಕೆಯಿಂದ ಶೋಭಿಸಿತ್ತು. ರಾವಣನಾಗಿ ಕೃಷ್ಣ ಶರ್ಮ ತಮ್ಮ ಲೀಲಾಜಾಲದ ಅಭಿನಯ ಪರಿಣತಿ, ಪ್ರಾವೀಣ್ಯತೆಯನ್ನು ತೋರುತ್ತಾರೆ. ವಾಲ್ಮೀಕಿಯಾಗಿ ವಿ. ರಂಗನಾಥರಾಯರದು ಸಹಜಾಭಿನಯ, ಭಾರಧ್ವಾಜನಾಗಿ ಸುಜಿತ್ ತನ್ನ ಲವಲವಿಕೆಯಿಂದ ಗಮನಾರ್ಹ. ಮಂಡೋದರಿ ರಾಧಿಕಾ ಭಾರಧ್ವಾಜ್ ಪಾತ್ರವರಿತು ಮಾಡುವ ಕುಶಲಿ. ರಂಭೆಯಾಗಿ ಕಾವ್ಯ ತನ್ನ ನಾಟಕೀಯತೆಯಿಂದ ಆಕರ್ಷಿಸಿದರೆ, ಸೀತೆ-ಫಲ್ಗುಣಿ ಮತ್ತು ರಾಮನಾಗಿ ಅಶೋಕ್ ಅಚ್ಚುಕಟ್ಟಾದ ಅಭಿನಯ ತೋರಿದರು. ಉಳಿದೆಲ್ಲ ಪಾತ್ರಗಳೂ ಹದವರಿತು ನಟಿಸಿದರು, ನಾಟಕದ ಯಶಸ್ಸಿನ ಪಾಲುದಾರರಾದರು.
ಮನಸೆಳೆದ ಅಂಶಗಳೆಂದರೆ, ಉತ್ತಮ ರಂಗಸಜ್ಜಿಕೆ, ಕಿವಿ ತುಂಬಿದ ಪದ್ಮಚರಣರ ಸುಶ್ರಾವ್ಯ ಸಂಯೋಜನೆಯಲ್ಲಿ ಹಾಡಿದ ಎಸ್. ಶಂಕರರ ಗಾನಸಿರಿ, ಧ್ವನಿ ಪರಿಣಾಮಗಳು ಪ್ರದರ್ಶನವನ್ನು ಔನ್ನತ್ಯಕ್ಕೊಯ್ದಿದ್ದವು.