ಪುಟಾಣಿ ಮುದ್ದುಕೃಷ್ಣನಿಂದ ಹಿಡಿದು ಹದಿವಯದವರೆಗೂ ಏಳೆಂಟು ಜನ ತುಂಟ ಕೃಷ್ಣನಂದಿರು ತೋರಿದ ಲೀಲಾ ವಿನೋದಗಳು ಒಂದೆರೆಡಲ್ಲ. ಅವರ ಅದಮ್ಯ ಚೇತನದ ಲವಲವಿಕೆಯ ಆಕರ್ಷಕ ಚಟುವಟಿಕೆಗಳು, ಮನಸೆಳೆದ ರಮ್ಯ ಪ್ರಕರಣಗಳು, ಹೃದಯಸ್ಪರ್ಶೀ ಘಟನೆಗಳು, ಪೂರಕ ಸನ್ನಿವೇಶಗಳು, ಪಾತ್ರಗಳ ಸಮರ್ಥ ಅಭಿನಯ- ಕಮನೀಯ ನರ್ತನದಿಂದ ಪ್ರೇಕ್ಷಕರನ್ನು ದ್ವಾಪರ ಯುಗಕ್ಕೆ ಕೊಂಡೊಯ್ದಿದ್ದವು. ಕಣ್ಮುಂದೆ ಸುಳಿದ ಪ್ರಕರಣಗಳ ಸಂಪೂರ್ಣ ಚಿತ್ರಣಗಳು- ಕೃಷ್ಣ ಕಥಾವಳಿಯನ್ನು ಒಳಗೊಂಡ ‘ಶ್ರೀ ಕೃಷ್ಣ ಲೀಲಾಮೃತಂ’ ವರ್ಣರಂಜಿತ ನೃತ್ಯರೂಪಕ ಅಸದೃಶವಾಗಿತ್ತು.
ಸೇವಾಸದನ ವೇದಿಕೆಯ ಮೇಲೆ ಖ್ಯಾತ ‘ಕಲಾನಿಧಿ ಆರ್ಟ್ಸ್ ಅಕಾಡೆಮಿ’ಯ ಹಿರಿಯ ನೃತ್ಯಗುರು ಶ್ರೀಮತಿ ಪವಿತ್ರ ಶ್ರೀಧರ್ ಅವರ ನೇತೃತ್ವದಲ್ಲಿ ಅವರ ಶಿಷ್ಯರಿಂದ ಸಾಕ್ಷಾತ್ಕಾರಗೊಂಡ ‘ಸರ್ವಂ ಕೃಷ್ಣಮಯ’ವಾಗಿ ಕಂಗೊಳಿಸಿ ದೈವೀಕ ಅನುಭವವನ್ನು ಕಟ್ಟಿಕೊಟ್ಟ ‘ಶ್ರೀ ಕೃಷ್ಣ ಲೀಲಾಮೃತಂ’ ನೃತ್ಯರೂಪಕ ಅದ್ಭುತವಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ.
ವಿದುಷಿ ಪವಿತ್ರಾ ಶ್ರೀಧರ್ ಅನನ್ಯವಾಗಿ ನೃತ್ಯ ಸಂಯೋಜಿಸಿದ ಶ್ರೀಕೃಷ್ಣ ಜನ್ಮಾಷ್ಟಮಿ ಪವಿತ್ರ ಸಂದರ್ಭದಲ್ಲಿ ಶ್ರೀಕೃಷ್ಣನಿಗೆ ಸಲ್ಲಿಸಿದ ವಿಶೇಷ ನೃತ್ಯಾರಾಧನೆಯಾಗಿತ್ತು. ಆಕರ್ಷಕ ಆಹಾರ್ಯ- ವೇಷಭೂಷಣಗಳಲ್ಲಿ ಮಿಂಚಿದ ಮುದ್ದುಪುಟಾಣಿಗಳ ಮನಮೋಹಕ ನರ್ತನ ಪ್ರತಿಭೆ ನೆರೆದ ರಸಿಕರ ಮೆಚ್ಚುಗೆಯ ಕರತಾಡನ ಕಿವಿಗಡಚಿಕ್ಕಿತು. ನೃತ್ಯಕಲಾವಿದರ ದೊಡ್ಡ ತಂಡಕ್ಕೆ ಪವಿತ್ರಾ ಅವರು ನೀಡಿದ ಅತ್ಯುತ್ತಮ ತರಬೇತಿ, ವಹಿಸಿದ ಪರಿಶ್ರಮ, ಪರಿಕಲ್ಪಿಸಿದ ಕಥಾನಕ- ದೃಶ್ಯಗಳ ಸಂಯೋಜನೆ ಅವರ ದೂರದರ್ಶಿತ್ವಕ್ಕೆ ಸಾಕ್ಷಿಯಾಗಿತ್ತು.
ಸುಮಾರು ಎರಡುಗಂಟೆಗೂ ಮಿಕ್ಕಿ ಸಾಗಿದ ನರ್ತನ ವೈಭವ, ಶ್ರೀಕೃಷ್ಣನ ವಿವಿಧ ಲೀಲಾವಳಿ- ಸಾಹಸಗಾಥೆಗಳನ್ನು ಒಳಗೊಂಡ ವೈವಿಧ್ಯಪೂರ್ಣ ನೃತ್ಯಾವಳಿ ರಂಜನೀಯವಾಗಿತ್ತು. ಶ್ರೀಕೃಷ್ಣನೇ ಧರೆಗಿಳಿದು ಬಂದ ವಿಶಿಷ್ಟ ಅನುಭವವನ್ನು ಮನಗಾಣಿಸಿದ ನೃತ್ಯ ಪ್ರದರ್ಶನಕ್ಕೆ ಪರಿಣಾಮಕಾರಿಯಾದ ಪೂರಕ ಧ್ವನಿ ಸಾಂಗತ್ಯವನ್ನು ನೇರ ಸಹಕಾರದಲ್ಲಿ ಸಂಗೀತ- ವಾದ್ಯಗೋಷ್ಠಿ ಇದ್ದದ್ದು ವಿಶಿಷ್ಟವಾಗಿ ನೃತ್ಯರೂಪಕದ ಔನ್ನತ್ಯವನ್ನು ಹೆಚ್ಚಿಸಿದ್ದವು.
ಶ್ರೀಕೃಷ್ಣನ ಜನನ, ಬಾಲ್ಯ, ಅವನ ತುಂಟತನದ ಪ್ರಕರಣಗಳು, ಅವನ ಧೀರ- ಎದೆಗಾರಿಕೆಯ ಮತ್ತು ವಿಸ್ಮಯಕರ ಸಾಹಸದ ಘಟನೆಗಳಿಂದ ಕೂಡಿದ ಅವನ ದಿವ್ಯ ಸಂದೇಶಾತ್ಮಕ ಬದುಕಿನ ಪ್ರತಿ ಹೆಜ್ಜೆಯನ್ನೂ ಸುಮನೋಹರವಾಗಿ ನೃತ್ಯರೂಪಕ ವಿಶಿಷ್ಟ ದೃಶ್ಯಗಳಲ್ಲಿ ಕಟ್ಟಿಕೊಟ್ಟಿತು.
ಪ್ರಸ್ತುತಿಯ ಶುಭಾರಂಭ ‘ಶ್ರೀಮನ್ನಾರಾಯಣ’ ( ರಚನೆ- ಅಣ್ಣಮಾಚಾರ್ಯ, ರಾಗ- ಭೌಳಿ, ಆದಿತಾಳ) ನ ಸುಮನೋಹರ ರೂಪ, ಗುಣ -ಮಹಿಮೆಗಳನ್ನು ವರ್ಣಿಸಿದ ಕೃತಿ ಸಾಕ್ಷಾತ್ ವೈಕುಂಠವನ್ನೇ ಸೃಷ್ಟಿಸಿತ್ತು. ಶ್ರೀವಿಷ್ಣು- ಲಕ್ಷ್ಮೀಯರ ಸಹಿತ ಪ್ರಸ್ತುತಪಡಿಸಿದ ರಮ್ಯನರ್ತನ ವಿಲಾಸದ ಒಡಲಲ್ಲಿ ಭಕ್ತ ಪ್ರಹ್ಲಾದ ಮತ್ತು ನರಸಿಂಹಾವತಾರದ ಸಂಚಾರಿ ಕಥಾನಕಗಳೊಡನೆ, ಸಂಕ್ಷಿಪ್ತ ದಶಾವತಾರದ ಸೊಗಸನ್ನು ಅನಾವರಣಗೊಳಿಸಲಾಯಿತು. ಪವಿತ್ರಾ ಸುಶ್ರಾವ್ಯವಾಗಿ ಹಾಡುತ್ತ, ತಮ್ಮ ಸ್ಫುಟವಾದ ನಟುವಾಂಗ ಸಾಂಗತ್ಯದಲ್ಲಿ ನೃತ್ಯಸಂಯೋಜಿಸಿದ್ದು ವಿಶಿಷ್ಟವಾಗಿತ್ತು.
ಮುಂದೆ-ರಾಗಮಾಲಿಕೆಯ ‘ನಾರಾಯಣ ಶಬ್ದಂ’ ಬಾಲಕೃಷ್ಣನ ತುಂಟಾಟಗಳನ್ನು ಬಗೆಬಗೆಯಲ್ಲಿ ಆಕರ್ಷಕವಾಗಿ ಸಾಕಾರಗೊಳಿಸಿತು. ಅವನು ಗೋಪಿಕಾ ಸ್ತ್ರೀಯರನ್ನು ಕಾಡುವ ಬಗೆ ಒಂದೇ, ಎರಡೇ?..ವಿವಿಧ ವಿನ್ಯಾಸದ ನೃತ್ತಮಂಜರಿ ಮನಸೆಳೆದರೆ, ನರ್ತಕಿಯರ ಅಭಿನಯವೂ ಅಷ್ಟೇ ಮುದವಾಗಿತ್ತು. ಮುದ್ದುಕೃಷ್ಣನಂತೂ ಎಲ್ಲರ ಮನವನ್ನೂ ಅಪಹರಿಸಿದ್ದ.
ಭರತನಾಟ್ಯದ ಪ್ರಮುಖ ಭಾಗ ‘ವರ್ಣಂ’- ಸುದೀರ್ಘ ಕ್ಲಿಷ್ಟ ಬಂಧ- ನೃತ್ತ ಮತ್ತು ಅಭಿನಯಗಳ ವಿಹಂಗಮ ದೃಶ್ಯವನ್ನು ಪ್ರದರ್ಶಿಸುವ ಅಷ್ಟೇ ಸುಮನೋಹರ ಕೃತಿ. ಶ್ರೀಕೃಷ್ಣನ ಬಾಲ್ಯದ ಘಟನೆಗಳ ಸ್ವಾರಸ್ಯಗಳನ್ನು ಸೆರೆಹಿಡಿವ, ಮನರಂಜಕವೂ ಅಷ್ಟೇ ದೈವೀಕ ಆಯಾಮದಿಂದ ಮೋಡಿ ಮಾಡಿದ ‘ನಿನ್ನೇ ನೇನು ನಮ್ಮಿರಾ ಕೃಷ್ಣಾ’ ವರ್ಣವು, ಕಲಾವಿದರ ಸೊಗಸಾದ ಅಂಗಶುದ್ಧ ನೃತ್ತಾರ್ಪಣೆಯ ಜೊತೆ ಅಷ್ಟೇ ಮೋಹಕ ಅಭಿನಯದಿಂದ ಕೂಡಿತ್ತು. ಪವಿತ್ರಾರ ಉತ್ಸಾಹಪೂರಿತ ನಟುವಾಂಗದ ಓಘ ನರ್ತಕರ ಚೈತನ್ಯವನ್ನು ವೃದ್ಧಿಗೊಳಿಸಿತ್ತು.
ಸೆರೆಮನೆಯಲ್ಲಿ ಕೃಷ್ಣನ ಜನನದಿಂದ ಹಿಡಿದು, ವಸುದೇವ ಯಮುನಾ ನದಿಯನ್ನು ದಾಟಿ, ಕೃಷ್ಣ ಗೋಕುಲ ಸೇರುವವರೆಗಿನ ದೃಶ್ಯಗಳು ಮತ್ತು ಬಾಲಕೃಷ್ಣನ ಕಣ್ಮನ ತುಂಬಿದ ತುಂಟಾಟದ ವೈವಿಧ್ಯಗಳನ್ನು ಸಂಚಾರಿಗಳಲ್ಲಿ ಒಡಮೂಡಿಸಲಾಯಿತು. ಗಜೇಂದ್ರ ಮೋಕ್ಷದ ಕಥೆಯ ಸಂಚಾರಿಯಂತೂ ನಾಟಕೀಯ ಆಯಾಮದಲ್ಲಿ ಮಿಂಚಿತು.
ಕಂಸ ಸಂಹಾರ, ಕುಚೇಲನ ಸ್ನೇಹ ಸಮ್ಮಿಲನ, ದ್ರೌಪದಿಗೆ ಅಕ್ಷಯವಸ್ತ್ರ ದಾನ, ಪಾರ್ಥ ಸಾರಥಿಯಾಗಿ ಭಗವದ್ಗೀತೆ ಮತ್ತು ವಿಶ್ವರೂಪದವರೆಗೆ ವಿವಿಧ ಘಟನಾವಳಿಗಳಲ್ಲಿ ವಿವಿಧ ವಯಸ್ಸಿನ ಕೃಷ್ಣರು, ಒಬ್ಬರಿಗಿಂಥ ಒಬ್ಬರು, ಒಟ್ಟು ಏಳುಜನ ಕೃಷ್ಣಂದಿರು ಅನನ್ಯವಾಗಿ ನರ್ತಿಸಿ, ಅಭಿನಯಿಸಿದರು. ಪವಿತ್ರಾ ಶಕ್ತಿಶಾಲಿ ನಟುವಾಂಗದ ಸಹಿತ ಕಂಚಿನ ಕಂಠದಲ್ಲಿ ಅಮೋಘವಾಗಿ ಹಾಡಿದ್ದು ಪರಿಣಾಮಕಾರಿಯಾಗಿತ್ತು.
ಅನಂತರ- ಬಿಲಹರಿ ರಾಗ ಆದಿತಾಳದ ‘ರಾ ರಾ ವೇಣು ಗೋಪಾಬಾಲ ರಾಜಿತ ಸದ್ಗುಣ ಜಯಶೀಲ’ ಹಾಗೂ ‘ಸ್ವಾಗತಂ ಕೃಷ್ಣ’ ಚೇತೋಹಾರಿಯಾಗಿ ಮೂಡಿಬಂತು. ಮಧುರೈ ಮುರಳೀಧರನ್ ರಚನೆಯ ‘ತಿಲ್ಲಾನ’ ಅತ್ಯಮೋಘವಾಗಿ ಕೃಷ್ಣನ ಅದ್ಭುತ ಸಾಹಸಗಳಿಗೆ ಕನ್ನಡಿ ಹಿಡಿಯಿತು. ಆಕಾಶಚಾರಿ, ಮಂಡಿ ಅಡವು, ಯೋಗದ ಭಂಗಿಗಳಿಂದ ಕೂಡಿದ್ದ ಕಾಳಿಂಗಮರ್ಧನ ಕೃಷ್ಣ ಮನಸೂರೆಗೊಂಡ. ಆರು ಹೆಡೆಗಳ ಕಾಳಿಂಗ, ಬಿರುಸಾಗಿ ಹೆಡೆ ಎತ್ತಿ ನಾಟ್ಯವಾಡುವ ಹಾಗೂ ಅದರ ಹೆಡೆಯ ಮೇಲೆ ಕೃಷ್ಣ ಮುದವಾಗಿ ನರ್ತಿಸುವ ದೃಶ್ಯವಂತೂ ಕಣ್ಣರಳಿಸಿ ನೋಡುವಂತೆ ಮಾಡಿತ್ತು. ಗುರು ಪವಿತ್ರ ಸಂಯೋಜಿಸಿದ ನೃತ್ಯ ವೈಖರಿ ಅಸ್ಮಿತೆಯಿಂದ ಕೂಡಿತ್ತು.
ಸೂರದಾಸರ ಭಜನೆ ಗೋಪಿ ಗೋಪಾಲ ಲಾಲನ ರಾಸಲೀಲೆ-ಕೋಲಾಟದ ಸಂಭ್ರಮದ ಆನಂದ ನೋಡುಗರನ್ನು ರಸಾನಂದದಲ್ಲಿ ಮುಳುಗಿಸಿತು. ನೃತ್ತ ಪ್ರಾವೀಣ್ಯ, ನಾಟ್ಯ-ಅಭಿನಯದಲ್ಲಿ ಪ್ರಭುತ್ವ ಮತ್ತು ಲೀಲಾಜಾಲ ನಟುವಾಂಗದಲ್ಲಿ ನಿಷ್ಣಾತರಾದ ಪವಿತ್ರ ಜೊತೆಯಲ್ಲಿ ಎರಡು ಗಂಟೆಗಳು ಗಾಯನವನ್ನೂ ನಿರ್ವಹಿಸಿದ್ದು ಅವರ ಬಹುಮುಖ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿತ್ತು.
************* ವೈ.ಕೆ.ಸಂಧ್ಯಾ ಶರ್ಮ