Image default
Dancer Profile

ನೃತ್ಯಸಾಧನೆಯ ಛಲಗಾರ್ತಿ ಅನುಪಮಾ ಮಂಗಳವೇಡೆ

ಹೀಗೂ ಉಂಟೇ ಎಂದೆನಿಸುವ, ನಿಜಕ್ಕೂಇದೊಂದು ಕುತೂಹಲಕರ ಕಥೆ. ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ನಿದರ್ಶನ ಅಮೇರಿಕಾದ ಶಿಕಾಗೋನಲ್ಲಿ ವಾಸವಾಗಿರುವ ಸಾಫ್ಟ್ ವೇರ್ ಎಂಜಿನಿಯರ್, ಭರತನಾಟ್ಯ ಕಲಾವಿದೆ ಅನುಪಮಾ ಮಂಗಳವೇಡೆ. ಅವರೊಮ್ಮೆ ಶಿಕಾಗೋದಲ್ಲಿ ನಡೆದ ‘ಈಶ ಫೌಂಡೇಷನ್ ‘ನ ಯೋಗ-ಕ್ರಿಯಾಸಾಧನೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದಾಗ ‘ಸದ್ಗುರು’ ಜಗ್ಗಿ ವಾಸುದೇವ್ ಹೇಳಿದ ಮಾತೊಂದು ಹಸಿಮಣ್ಣಿನ ಮೇಲೆ ಒಗೆದ ಬೀಜದಂತೆ ಮನಸ್ಸಿಗೆ ನಾಟಿ ಟಿಸಿಲೊಡೆದು ಫಲನೀಡಿತ್ತು. ‘ವಿಧಿ ಎಂದು ಕೈಚೆಲ್ಲಿ ಕೂಡುವುದಕ್ಕಿಂತ, ನಮ್ಮ ಹಣೆಯಬರಹವನ್ನು ನಾವೇ ಬರೆದುಕೊಳ್ಳಬಹುದು’ ಎಂಬ ಭರವಸೆಯ ಕನಸು ಹುಟ್ಟುಹಾಕಿದ ಅವರ ಸತ್ವಯುತ ಮಾತುಗಳಲ್ಲಿ ಸ್ಫೂರ್ತಿಯ ಬೆಳಕನ್ನು ಕಂಡುಕೊಂಡರು ಅನುಪಮಾ. ಅಲ್ಲಿಂದ ಆರಂಭವಾಯಿತು ಅವರ ನೃತ್ಯಪಯಣ…!  

ಹಾಸನಜಿಲ್ಲೆಯ ಚೆನ್ನರಾಯಪಟ್ಟಣದಲ್ಲಿ ಪ್ರೌಢಶಾಲೆಯ ಶಿಕ್ಷಕರಾಗಿದ್ದ ಬಿ.ಕೆ.ಸತ್ಯನಾರಾಯಣ ಮತ್ತು ಜಿ.ಎಲ್.ಶಾರದಾ ಪುತ್ರಿ ಅನುಪಮಾ ಓದಿನಲ್ಲಿ ಬುದ್ಧಿವಂತೆ. ಸಾಮಾನ್ಯವಾಗಿ ಮಕ್ಕಳು ಶಾಲೆಯಲ್ಲಿ ನೃತ್ಯ-ನಾಟಕ ಏನಾದರೊಂದು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ವಾಡಿಕೆ. ಆದರೆ ಅನುಪಮಾಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೇಳಿಕೊಳ್ಳುವಂಥ ಆಸಕ್ತಿ ಇರಲಿಲ್ಲವಂತೆ. ಜಾಣೆಯಾಗಿ ಓದಿ ಎಸ್.ಎಸ್.ಎಲ್.ಸಿ.ಯಲ್ಲಿ ಇಡೀ ರಾಜ್ಯಕ್ಕೆ 48 ನೆಯವರಾಗಿ ಜಿಲ್ಲೆಗೆ ಮೊದಲಸ್ಥಾನ ಪಡೆದ ಅಗ್ಗಳಿಕೆ ಅವರದಾಗಿತ್ತು. ಮಗಳು ವೈದ್ಯಳಾಗಲಿ ಎಂದು ಹೆತ್ತವರ ಆಶೆಯಾಗಿದ್ದರೆ, ಹಾಸನದ ಮಲೆನಾಡು ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತಾಂಕಗಳಿಂದ ಎಂಜಿನಿಯರ್ ಪದವಿ ಪಡೆದರು. ಬೆಂಗಳೂರಿನಲ್ಲಿ ಒಂದುವರ್ಷ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡಿ, ಅನಂತರ ಮದುವೆಯಾಗಿ ಶಿಕಾಗೋ ಸೇರಿ ಗೃಹಿಣಿಯಾದರು. ಆಮೇಲೆ ಎಂ.ಎಸ್. ಮಾಡಿ ಉದ್ಯೋಗಸ್ಥೆಯೂ ಆಗಿ, ಎರಡು ಹೆಣ್ಣುಮಕ್ಕಳ ತಾಯಿಯೂ ಆದರು. ಅಷ್ಟೇ ಆಗಿದ್ದರೆ ಅವರು ಈ ಅಂಕಣದಲ್ಲಿ ದಾಖಲಾಗುತ್ತಿರಲಿಲ್ಲ. ಅನಂತರವೇ ಅವರ ಜೀವನದ ಪರ್ವಕಾಲ. !

 ಎಂದೂ ಬಾಲ್ಯದ ಕನಸಾಗಿರದಿದ್ದ ನೃತ್ಯ, ಈ ಪರಿ ಆವರಿಸುತ್ತದೆಂದು ಆಕೆ ಕನಸುಮನಸ್ಸಿನಲ್ಲೂ ನೆನೆಸಿರಲಿಲ್ಲ. ತಾನೊಬ್ಬ ನೃತ್ಯಗಾರ್ತಿಯಾಗುತ್ತೇನೆಂಬ ಕಲ್ಪನೆಯೂ ಇರಲಿಲ್ಲ.ತಮ್ಮ ಆಸೆಗಳೇನು ಎಂಬುದೇ ನಿಖರವಾಗಿ ತಿಳಿಯದಂಥ ಯಾಂತ್ರಿಕಜೀವನದ ಹರಿವಿನಲ್ಲಿ ಸಿಲುಕಿದ ಅನುಪಮಾ ಮನಸ್ಸಿನಲ್ಲೇನೋ ಅರೆಕೊರೆ. ತಾನೇನಾದರೂ ಸಾಧನೆ ಮಾಡಬೇಕೆಂಬ ತುಡಿತ-ತುಮುಲ ಆರಂಭವಾಗಿತ್ತು. ಅದಕ್ಕೆ ದಾರಿತೋರಿದ್ದು ಸದ್ಗುರು ವಾಕ್ಯ. ಪುತ್ರಿಯರು ಭರತನಾಟ್ಯ ತರಗತಿಯಲ್ಲಿ ಮಾಡುತ್ತಿದ್ದ ನೃತ್ಯತಾಲೀಮನ್ನು ಕಂಡಾಗ ಅವರೊಳಗಿನ ಕಲಾವಿದೆ ಪುಟಿದೆದ್ದಿದ್ದಳು. ಕಲೆಗೆ ವಯಸ್ಸಿನ ಹಂಗೇಕೆ ಎಂದು ನಿರ್ಧರಿಸಿಯೇಬಿಟ್ಟರಾಗ. ಮೂವತ್ತೈದು ದಾಟಿದನಂತರ ಶರೀರ ಹೇಳಿದ ಮಾತು ಕೇಳುವುದಿಲ್ಲ. ಅದೂ ಅಮ್ಮನಾದ ಬಳಿಕ ನೃತ್ಯ ಕಲಿಯುವುದೇ ಎಂಬ ಸಂಕೋಚ ಮುತ್ತಿದರೂ, ಮೊದಮೊದಲು ದೇಹ ಬಾಗಲು ಸಹಕರಿಸದಿದ್ದರೂ, ಕಠಿಣಾಭ್ಯಾಸ ಹೈರಾಣಾಗಿಸಿದರೂ, ಛಲಬಿಡದ ತ್ರಿವಿಕ್ರಮರಾದರು ಅನುಪಮಾ. ಬದ್ಧತೆ-ಕಠಿಣಪರಿಶ್ರಮ, ಹಗಲಿರುಳೆನ್ನದ ನೃತ್ಯಾಭ್ಯಾಸ ಅವರನನ್ನೊಬ್ಬ ಉತ್ತಮ ‘ನೃತ್ಯಶಿಲ್ಪ’ವನ್ನಾಗಿ ಕಡೆಯಿತು. ಗುಜರಾತಿನ ಕ್ಷಮಾ ಷಾ ಎಂಬ ಉತ್ತಮ ನಾಟ್ಯಗುರುವಿನ ಸಮರ್ಥಗರಡಿಯಲ್ಲಿ ಕೇವಲ ಐದುವರ್ಷಗಳ ಕಲಿಕೆಯಲ್ಲಿ ಅನುಪಮಾ ‘ರಂಗಪ್ರವೇಶ’ಕ್ಕೆ ಸಿದ್ಧವಾದರು.

ನಲವತ್ತರ ವಯಸ್ಸಿನಲ್ಲಿ, ತುಂಬಿದ ಆಡಿಟೋರಿಯಂನಲ್ಲಿ, ಮಾರ್ಗಂ ಪದ್ಧತಿಯ ಆಷ್ಟೂ ಕೃತಿಗಳನ್ನು ಅನುಪಮಾ,ಸುಮಾರು ಎರಡುಗಂಟೆಗಳ ಕಾಲ ಲೀಲಾಜಾಲವಾಗಿ ನಿರ್ವಹಿಸಿದ್ದು ನಿಜಕ್ಕೂ ಹಿರಿಮೆಯೇ ಸರಿ. ಮಾಗಿದ ಮನಸ್ಸಿನ, ವಯಸ್ಸಿನಲ್ಲಿ ಅವರು ಗ್ರಹಿಸಿದ್ದು, ಕಲಿತದ್ದು ಬಹಳವೇ ಆಗಿದ್ದರಿಂದ ಅವರ ನೃತ್ಯಪ್ರಸ್ತುತಿ ಪ್ರಬುದ್ಧವಾಗಿ ಮೂಡಿಬಂತು. ಅಲ್ಲಿನ ಆನ್ ಲೈನ್ ಪತ್ರಿಕೆಗಳಲ್ಲಿ ಉತ್ತಮ ವಿಮರ್ಶೆಗಳು ಬಂದವು. ಅಲ್ಲಿಂದ ಅನುಪಮಾ ನೃತ್ಯಕಲಾವಿದೆಯಾಗಿ ಮುಂದಿನ ಹೆಜ್ಜೆಗಳನ್ನಿರಿಸಿದರು. ನೃತ್ಯ ಕಲಿಕೆ ಮುಂದುವರಿಯಿತು. ಹಲವಾರು ಸಾಂಸ್ಕೃತಿಕ ಉತ್ಸವಗಳಲ್ಲಿ ನೃತ್ಯಪ್ರದರ್ಶನ ನೀಡಿದರು. ಇತ್ತೀಚಿಗೆ ಬೆಂಗಳೂರಿನಲ್ಲೂ ಹಲವು ಪ್ರದರ್ಶನಗಳನ್ನು ನೀಡಿ ತಮ್ಮ ಪ್ರತಿಭಾಸಾಮರ್ಥ್ಯವನ್ನು ಸಾಬೀತುಪಡಿಸಿದ್ದು ನಿಜಕ್ಕೂ ವಿಶೇಷವೇ . ಇದರೊಡನೆ ‘ಅನುಪಮ ಕಥನ’ ಎಂಬ ತಮ್ಮ ನೃತ್ಯಪ್ರಯಾಣದ ಪುಸ್ತಕ ಬರೆದಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ಅವರ ಕಥೆ, ಹರಟೆ ಮತ್ತು ಪ್ರಬಂಧಗಳು ಪ್ರಕಟವಾಗಿ ಲೇಖಕಿಯಾಗಿಯೂ ದಾಖಲಾಗಿದ್ದಾರೆ. ಅಲ್ಲಿನ ಕನ್ನ್ನಡ ಸಂಘಗಳ ಎಲ್ಲ ಕಾರ್ಯಕ್ರಮಗಳಿಗೂ ಇವರದೇ ನಿರೂಪಣೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಬಲ್ಲರಾದ್ದರಿಂದ ಸಂಗೀತ ಕಾರ್ಯಕ್ರಮ, ನಾಟಕಗಳಲ್ಲೂ ಪಾಲ್ಗೊಳ್ಳುವರು. ಪತಿ ನಿತಿನ್ ಸಾಫ್ಟ್ ವೇರ್ ಎಂಜಿನಿಯರ್, ಉತ್ತಮ ಗಾಯಕರು. ಪುತ್ರಿಯರು ಮೇಘನಾ  ಮತ್ತು ಮಾನಸಿ ಸಂಗೀತ ಮತ್ತು ಭರತನಾಟ್ಯ ಕಲಿಯುತ್ತಿದ್ದು ಅವರ ಇಡೀ ಸಂಸಾರ ಕಲಾಕುಟುಂಬವೆನಿಸಿಕೊಂಡಿದೆ.

Related posts

ಪ್ರತಿಭಾವಂತ ಕಲಾಪ್ರಪೂರ್ಣೆ ಸುಷ್ಮಾ ಕೆ.ರಾವ್

YK Sandhya Sharma

ಬದ್ಧತೆಯ ನಾಟ್ಯಗುರು-ಕಲಾವಿದೆ ಫಣಿಮಾಲಾ

YK Sandhya Sharma

ಮೋಹಕ ಒಡಿಸ್ಸಿ ನರ್ತಕಿ ಕರಿಷ್ಮಾ ಅಹುಜಾ

YK Sandhya Sharma

Leave a Comment

This site uses Akismet to reduce spam. Learn how your comment data is processed.