Image default
Dance Reviews

ವಚನಗಳಲ್ಲಿ ನವರಸ –ನವಪ್ರಯೋಗದ ಸೊಗಸು

ಹನ್ನೆರಡನೆಯ ಶತಮಾನದ ವಚನಕ್ರಾಂತಿ ಅನೇಕ ವಿಧಗಳಲ್ಲಿ ಇಂದಿನವರೆಗೂ ತನ್ನ ಪರಿಣಾಮವನ್ನು ಉಳಿಸಿಕೊಂಡು ಬಂದಿರುವುದು ನಿಜಕ್ಕೂ ಚೋದ್ಯ. ಇಂದಿಗೂ ಪ್ರಸ್ತುತವಾದ ವಚನಕಾರರ ವಿಚಾರಧಾರೆಗಳು, ಸಾಹಿತ್ಯ, ಸಂಗೀತ, ನಾಟಕ ಪ್ರಕಾರಗಳ ಸಾಮಾಜಿಕ ಹೊಸ ಆಯಾಮಗಳ ಶೋಧದಲ್ಲಿ ವಿಪುಲಕೃತಿಗಳ ಸೃಷ್ಟಿಗೆ ಕಾರಣವಾಗುತ್ತಿರುವುದು ಅದರ ಶ್ರೀಮಂತಿಕೆಗೆ ಸಾಕ್ಷಿ. ಇದೀಗ `ಅಚ್ಚಿ ಕ್ಲಾಸಿಕಲ್ ಡಾನ್ಸ್ ಸೆಂಟರ್ ‘ ನ `ವಚನಗಳಲ್ಲಿ ನವರಸ ‘ ಎಂಬ ನೃತ್ಯ ಕಾರ್ಯಕ್ರಮ ಇತ್ತೀಚೆಗೆ ಎ.ಡಿ.ಎ. ರಂಗಮಂದಿರದಲ್ಲಿ ಆಸಕ್ತಿಯನ್ನು ಕೆರಳಿಸಿದಂಥ ವಿನೂತನ ಪ್ರಯೋಗ.

`ತಿಳಿ ಜಲ-೨೦೧೭’ ಎಂಬ ಶೀರ್ಷಿಕೆಯಲ್ಲಿ ಅಚ್ಚಿ ನೃತ್ಯ ಸಂಸ್ಥೆ, ವಾರ್ಷಿಕೋತ್ಸವ ಸಂದರ್ಭದಲ್ಲಿ ನೃತ್ಯ ವಿದ್ಯಾರ್ಥಿಗಳಿಂದ ಸೊಗಸಾದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಉತ್ತಮ ಭರತನಾಟ್ಯ ಕಲಾವಿದೆ ಹಾಗೂ ನಾಟ್ಯಗುರುವಾಗಿ ಖ್ಯಾತರಾದ ಪದ್ಮಿನಿ, ಈಗಾಗಲೇ ಕುವೆಂಪು ಕವನ-ನಾಟ್ಯ ನಮನ, ಗಿರಿಜಾ ಕಲ್ಯಾಣ, ದಶಾವತಾರ, ಶ್ರೀ ಕೃಷ್ಣಲೀಲಾ ಎಂಬ ನೃತ್ಯರೂಪಕಗಳನ್ನು ಸಂಯೋಜಿಸಿ, ಯಶಸ್ವೀ ಪ್ರದರ್ಶನಗಳನ್ನು ನೀಡಿದ್ದಾರೆ. ಇದೀಗ `ವಚನಗಳಲ್ಲಿ ನವರಸ’- ಒಂದು ಹೊಸ ಸೇರ್ಪಡೆ. ಹೊಸ ಪರಿಕಲ್ಪನೆಯ ವಸ್ತುವನ್ನು ಆರಿಸಿಕೊಂಡು ಸಮರ್ಥವಾಗಿ ನಿಭಾಯಿಸಿರುವುದು ಪದ್ಮಿನಿಯವರ ಹೆಗ್ಗಳಿಕೆ. ಕೆಲವು ಉತ್ತಮ ವಚನಗಳನ್ನು ಆರಿಸಿಕೊಂಡು, ಅವುಗಳಲ್ಲಿ ವಿವಿಧ ರಸಗಳ ಸೆಲೆಯನ್ನು ಗುರುತಿಸಿ, ಅವುಗಳಿಗೆ ಸೂಕ್ತವಾದ ಅಷ್ಟೇ ಆಕರ್ಷಕ ಮೂರ್ತರೂಪಗಳನ್ನು ರಚಿಸಿ, ಉತ್ತಮ ನೃತ್ಯ ಸಂಯೋಜನೆಯಲ್ಲಿ ರಂಗದ ಮೇಲೆ ತಂದ ಪದ್ಮಿನಿಯವರ ಪ್ರತಿಭೆ ಸ್ತುತ್ಯಾರ್ಹ.

ಮೊದಲಿಗೆ ಸಾಂಪ್ರದಾಯಕ `ಪುಷ್ಪಾಂಜಲಿ’ ಯೊಂದಿಗೆ ಆರಂಭ. ಸಮೂಹ ನೃತ್ಯದಲ್ಲಿ ಭಾಗವಹಿಸಿದ ಕಲಾವಿದೆಯರ ನೃತ್ತಗಳ ವೈವಿಧ್ಯ, ಖಚಿತ ಹಸ್ತ, ಅಡವುಗಳ ಸೌಂದರ್ಯದಿಂದ ನೃತ್ಯ ಆಹ್ಲಾದ ನೀಡಿತು. ಪ್ರತಿಯೊಬ್ಬರ ಮಂದಸ್ಮಿತ ವದನ, ಪರಸ್ಪರ ಸಾಮರಸ್ಯ, ಯಾಂತ್ರಿಕತೆಯನ್ನು ಮುರಿದ ಮನಮೋಹಕ ರಚನೆಗಳೊಂದಿಗೆ ಆಕರ್ಷಕ ವಸ್ತ್ರ-ತೊಡುಗೆಗಳು ಗಮನ ಸೆಳೆದವು.

ವಚನ ಮುಖೇನ ಹರಿದ ನವರಸಗಳ ಝೇಂಕಾರದಲ್ಲಿ ಒಂದು ಬಗೆಯ ಮುದವಿತ್ತು. ಮೊದಲಿಗೆ ಬಸವಣ್ಣನ `ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ…’ -ವಚನದಲ್ಲಿ, ಅಂತಃಪ್ರವಹಿಸಿದ ಶೃಂಗಾರರಸದ ಎಳೆಯನ್ನು ಹೆಣೆಯುತ್ತ, ಸುಂದರ ಹೂಗಳ ಅರಳುವಿಕೆ, ಭ್ರಮರಗಳ ಝೇಂಕಾರ, ಮಧು ಈಂಟುವಿಕೆಯ ಸಂಭ್ರಮ, ಜೋಡಿಹಕ್ಕಿಗಳ ಕಲರವ-ಮಿಲನದ ಉತ್ಸುಕತೆಗಳನ್ನು ಕಲಾವಿದೆಯರು ತಮ್ಮ ಹಸ್ತಗಳ ಸುಂದರಚಲನೆಯಿಂದ ಹೂವಿನ ಪಕಳೆಗಳ ಸ್ಪಂದನವನ್ನು, ಸೃಷ್ಟಿಯಲ್ಲಿನ ಸಮಸ್ತ ಪ್ರೀತಿಪಾರಮ್ಯವನ್ನು ಕಟ್ಟಿಕೊಟ್ಟರು. ಶೃಂಗಾರರಸಕ್ಕೆ ಪೂರಕವಾದ ಸಂಗೀತ, ಸಾಹಿತ್ಯಕ್ಕೆ ಕಳೆಗೊಟ್ಟಿತು.

`ಛಲ ಬೇಕು ಶರಣಂಗೆ …’ ವಚನದಲ್ಲಿ ವೀರರಸದ ಆಂಗಿಕಗಳು ನಾಟಕೀಯ ಘಟನೆಗಳ ಸಂಚಾರಿಯೊಂದಿಗೆ ಪರಿಣಾಮ ಮೂಡಿಸಿದವು. ವಚನದ ಪ್ರತಿಸಾಲೂ ದೃಶ್ಯಾತ್ಮಕವಾಗಿ ರೂಹುಗೊಂಡು, ಮನದ ನಿಗ್ರಹದ ಬಗ್ಗೆ ಒತ್ತು ನೀಡುವ ವಚನದ ಸಾರವನ್ನು ವೀರವತ್ತಾಗಿ ಪ್ರದರ್ಶಿಸಿದರು. ವಿವಿಧ ಪಾತ್ರಗಳನ್ನು ನಿರ್ವಹಿಸಿದ ಕಲಾವಿದರ ಅಭಿನಯದೊಂದಿಗೆ, ಸಾಮೂಹಿಕ ರಚನೆ, ವಿನ್ಯಾಸಗಳು ಮನಸೆಳೆದವು.

`ಹುತ್ತವ ಬಡಿದರೆ ಹಾವು ಸಾಯಬಲ್ಲುದೆ ಅಯ್ಯಾ…’ ವಚನದಲ್ಲಿ ವ್ಯಂಗ್ಯ-ಹಾಸ್ಯವನ್ನು ಗುರುತಿಸುತ್ತ, ಕಲಾವಿದರು ನಾಟಕೀಯ ಘಟನೆಗಳ ಮೂಲಕ ಹಾಸ್ಯ ಜಿನುಗಿಸಿದರು. ಹಾವು ಬಡಿಯುವ ದೃಶ್ಯದಲ್ಲಿ ತೇಲಿಬಂದ ಜಾನಪದ ಲಯ, ಲಹರಿಯ ಹೆಜ್ಜೆಗಳು ಇಷ್ಟವಾದವು. ಅದ್ಭುತರಸಕ್ಕೆ ಆರಿಸಿಕೊಂಡ ವಚನ- `ಸಮುದ್ರ ಘನವೆಂಬೆನೆ,ಧರೆಯ ಮೇಲಡಗಿತ್ತು…’ ಎಂದು ಮುಂದುವರಿಯುವ ಭಾವದಲ್ಲಿ, ಯಾವುದೂ ಪರಮಶಕ್ತಿಯಲ್ಲ, ಪರಸ್ಪರ ಪೂರಕ, ಅವಲಂಬಿತ ಎಂಬುದನ್ನು ಸುಂದರ ರೂಪಕ-ಉಪಮೆಗಳಲ್ಲಿ ನೃತ್ಯ, ಚಿತ್ರವತ್ತಾಗಿ ಸಾಕ್ಷಾತ್ಕರಿಸಿತು. ಕಡೆಗೆ ಕೂಡಲಸಂಗನ ಶರಣರ ಭಕ್ತಿಯೇ ಅಧಿಕ-ಅದ್ಭುತ ಎಂದು ಸಾರುವ ನಿರೂಪಣೆಯನ್ನು ಕಲಾವಿದರು ಸಮುದ್ರ ರಚನೆ, ಅಲೆಗಳ ಉಬ್ಬರವಿಳಿತ, ಶಿವ-ಪಾರ್ವತಿಯರ ನೃತ್ಯದಲ್ಲಿ ಪ್ರಸ್ತುತಿಗೊಳಿಸಿದರು.

`ನಾದಪ್ರಿಯ ಶಿವನೆಂಬರು…’ -ವಚನ, ಕರುಣರಸವನ್ನು ಪ್ರತಿನಿಧಿಸಿತು. ಬ್ರಹ್ಮಂಗೆ ಶಿರ ಹೋದ ಪ್ರಸಂಗ, ರಾವಣನಿಗೆ ಆಯುಷ್ಯ ಅರ್ಧವಾದ ಪ್ರಸಂಗಗಳಲ್ಲಿ ಕರುಣರಸವನ್ನು ಸ್ಫುರಿಸುತ್ತ, ರಾವಣ ಕೈಲಾಸ ನಡುಗಿಸಿ, ತನ್ನ ಕರುಳಲ್ಲಿ ರುದ್ರವೀಣೆ ನುಡಿಸಿದ ಪರಿ ಪರಿಣಾಮಕಾರಿಯಾಗಿತ್ತು. ಭೀಭತ್ಸರಸವನ್ನು ನಿರೂಪಿಸಲು ಅಲ್ಲಮನ ವಚನವನ್ನು ಆಯ್ದುಕೊಳ್ಳಲಾಗಿತ್ತು. ಇಂದ್ರಿಯ ವಿಕಾರಗಳನ್ನು ಸೋದಾಹರಣವಾಗಿ ದೃಶ್ಯದಲ್ಲಿ ನಿರೂಪಿಸಿ, ಗುಹೇಶ್ವರನರಿವ ಕರ್ಮಿಗಳ ವೈಶಿಷ್ಟ್ಯವನ್ನು ಎತ್ತಿಹಿಡಿಯಲಾಯಿತು.

`ಮನೆಯೊಳಗಣ ಕಿಚ್ಚು ಮನವ ಸುಡದೆ ಬಿಡದು…’ ಎಂಬ ವಚನದಲ್ಲಿ ರೌದ್ರಭಾವವನ್ನು ಹಿಡಿದಿಡಲಾಗಿತ್ತು. ಪರಸ್ಪರ ಒಳಜಗಳ, ಹೊಡೆದಾಟ ನಾಶಕ್ಕೆ ಕಾರಣ ಎಂಬುದನ್ನು ಉತ್ತಮ ನೃತ್ಯಸಂಯೋಜನೆಯಲ್ಲಿ ಧ್ವನಿಸಲಾಯಿತು. ಅಕ್ಕಮಹಾದೇವಿಯ `ಬೆಟ್ಟದ ಮೇಲೊಂದು ಮನೆಯ ಮಾಡಿ..’ ವಚನದಲ್ಲಿ ಭಯಾನಕತೆಯನ್ನು ಹಾಗೂ `ವಚನದಲ್ಲಿ ನಾಮಾಮೃತ ತುಂಬಿ…’ ವಚನದಲ್ಲಿ ಶಾಂತರಸದ ಭಾವವನ್ನು ಕೇಂದ್ರೀಕರಿಸಲಾಯಿತು.

ಗುರು ಪದ್ಮಿನಿಯವರ ಪರಿಕಲ್ಪನೆ, ನೃತ್ಯ ಸಂಯೋಜನೆ, ಕಲಾವಿದರ ಕಲಾನೈಪುಣ್ಯ , ನರ್ತನಾ ಸಾಮರ್ಥ್ಯ ಮೆಚ್ಚುಗೆ ಪಡೆದುಕೊಂಡರೂ, ನವರಸಗಳು ಇನ್ನಷ್ಟು ಸಾಂದ್ರವಾಗಿರುವ, ಸೂಕ್ತವಾಗಿರುವ ವಚನಗಳನ್ನು ಶೋಧಿಸುವ ಅವಕಾಶಗಳಿದ್ದವು. 

Related posts

ಸೊಗಸು ಬೀರಿದ ರಮ್ಯ ನೃತ್ಯ ವೈವಿಧ್ಯ

YK Sandhya Sharma

Kuchipudi ‘Bhavanutha’ Aadhyaatmika Ramayana

YK Sandhya Sharma

Kalanidhi Arts Academy- Sri Krishna Leelaamrutam ಕಣ್ಮನ ತುಂಬಿದ ರಮ್ಯ ನೃತ್ಯರೂಪಕ- ‘ಶ್ರೀ ಕೃಷ್ಣ ಲೀಲಾಮೃತಂ’

YK Sandhya Sharma

Leave a Comment

This site uses Akismet to reduce spam. Learn how your comment data is processed.