Image default
Dance Reviews

ಕಣ್ಮನ ಸೆಳೆದ ಯೋಗದ ಭಂಗಿಗಳು- ಗಾಯನಳ  ರಮ್ಯನರ್ತನ

ಕರೋನಾದ ಸಂಕೀರ್ಣ ದಿನಗಳ ಆತಂಕವನ್ನು ಕೊಂಚಮಟ್ಟಿಗೆ ದಾಟಿರುವ ಕಲಾರಂಗ ನಿಧಾನವಾಗಿ ಸಾಂಸ್ಕೃತಿಕ ಚಟುವಟಿಕೆಗಳಿಂದ ಗರಿಗೆದರುತ್ತಿದೆ. ರಂಗಮಂದಿರಗಳಲ್ಲಿ ಗಲ್ ಗಲ್ ಗೆಜ್ಜೆ ಅನುರಣಿಸುತ್ತಿದೆ. ಕಳೆದೆರಡು ವರ್ಷಗಳಿಂದ ವೇದಿಕೆಯೇರಲು ಸಿದ್ಧವಾಗಿದ್ದು, ಸ್ಥಗಿತಗೊಂಡಿದ್ದ ಹಾಗೂ ರದ್ದಾಗಿದ್ದ ಅನೇಕ ಕಾರ್ಯಕ್ರಮಗಳು ಈಗ ಆಶಾಕಿರಣದೊಂದಿಗೆ ಮತ್ತೆ ಪುನರಾರಂಭಗೊಂಡಿವೆ. ಕಲಾರಸಿಕರು ಮೊದಲಿನಷ್ಟು ಸಂಖ್ಯೆಯಲ್ಲಿ ಅಲ್ಲದಿದ್ದರೂ ನಿಧಾನವಾಗಿ ರಂಗಮಂದಿರದತ್ತ ಬರುತ್ತಿದ್ದು,  ಆಶಾದಾಯಕ ವಾತಾವರಣ ನಿರ್ಮಾಣವಾಗುತ್ತಿದೆ.

ಇತ್ತೀಚಿಗೆ ಎ.ಡಿ.ಎ. ರಂಗಮಂದಿರದಲ್ಲಿ ನಂದಿ ಭರತನಾಟ್ಯ ಕಲಾಶಾಲೆಯು ಆಯೋಜಿಸಿದ್ದ ಗುರು ಗೀತಾಲಕ್ಷ್ಮಿ ಅವರ ಶಿಷ್ಯೆ ಗಾಯನಾ ಪಿ. ಶೆಟ್ಟಿ ಅವರ ರಂಗಪ್ರವೇಶ ಕಾರ್ಯಕ್ರಮ ತುಂಬಿದ ಸಭಾಗೃಹದ ವೀಕ್ಷಣೆಯಿಂದ ಯಶಸ್ವಿಯಾಯಿತು. ಎರಡೂವರೆಗಂಟೆಗಳ ಕಾಲ ಅತ್ಯಂತ ಲವಲವಿಕೆಯಿಂದ ನರ್ತಿಸಿದ ಗಾಯನ ತನ್ನ ಅಪೂರ್ವ ಯೋಗದ ಭಂಗಿಗಳಿಂದ ಕಣ್ಮನ ಸೆಳೆದಳು.

ಮೊದಲಿಗೆ ಸಾಂಪ್ರದಾಯಕ ‘ಪುಷ್ಪಾಂಜಲಿ’ (ರಾಗ-ಚಕ್ರವಾಕ, ಆದಿತಾಳ )-ವಿವಿಧ ನವನವೀನ ನೃತ್ತವಿನ್ಯಾಸಗಳ ಅರ್ಚನೆಯಿಂದ ಕಲಾವಿದೆ ಸಭೆಗೆ-ಗುರು-ಹಿರಿಯರು ದೇವಾನುದೇವತೆಗಳಿಗೆ ನಮನ ಸಲ್ಲಿಸಿ, ಪ್ರಥಮವಂದಿತ ಗಣಪತಿಯ ಸುಂದರ ಕೃತಿ (ರಾಗ- ಹಂಸನಾದ- ರಚನೆ-ಉಮಾ ಬಾಲಕೃಷ್ಣನ್) ಯನ್ನು ಅರ್ಪಿಸಿದಳು. ನಗುಮೊಗದ, ಪಾದರಸದ ಹೆಜ್ಜೆಗಳು ಗಾಯನಳ ವೈಶಿಷ್ಟ್ಯವಾಗಿತ್ತು. ಹೆತ್ತ ತಾಯಿ-ತಂದೆಗಳೇ ನಿಜವಾದ ದೇವರು ಎಂಬುದನ್ನು ಎಂಬುದನ್ನು ಸಂಚಾರಿ ಘಟನೆಯಲ್ಲಿ ಸಾಕ್ಷೀಕರಿಸಿದ ಗಣೇಶ- ಷಣ್ಮುಖರ ನಡುವೆ ಜ್ಞಾನಫಲಕ್ಕಾಗಿ ನಡೆದ ಸ್ಪರ್ಧೆಯ ಸನ್ನಿವೇಶವನ್ನು ಕಲಾವಿದೆ ಬಹು ಸ್ಫುಟವಾಗಿ ತನ್ನ ಭಾವಪೂರಿತ ಮುಖಭಾವ, ಆಂಗಿಕ ಚಲನೆಗಳಿಂದ ಕಟ್ಟಿಕೊಟ್ಟಳು. ಆಕೆಯ ನಾಟ್ಯದ ಸೊಗಡು ಪ್ರಥಮ ಕೃತಿಯಲ್ಲೇ ಪರಿಚಯವಾಯಿತು. ಸೊಂಡಿಲನ್ನೆತ್ತಿ ನಿರೂಪಿಸಿದ ವಿವಿಧ ನೃತ್ತಗಳು ಗಮನ ಸೆಳೆದವು.

ಪೂರ್ವೀ ಕಲ್ಯಾಣಿ ರಾಗದಲ್ಲಿ ಶ್ರೀ ತಿರು ನೀಲಕಂಠನ್ ಶಿವನ್ ರಚಿಸಿದ ‘ಶಿವಕೀರ್ತನೆ’- ಚಿದಂಬರದಲ್ಲಿ ಶಿವನಾಡಿದ ‘ಆನಂದ ತಾಂಡವ’ ನೃತ್ಯ ಆಕರ್ಷಕವಾಗಿತ್ತು. ಆದ್ಯಂತರಹಿತ ನಟರಾಜನ ಮಹಿಮೆಯನ್ನು ಸಾರುವ ಬ್ರಹ್ಮ ಹಾಗೂ ವಿಷ್ಣುವಿನ ಮಧ್ಯೆ ನಡೆಯುವ ಸ್ಪರ್ಧೆಯ ಘಟನೆಯ ಮೂಲಕ ಸಾಬೀತಾಗುವ ಶಿವನ ಬ್ರಹ್ಮಾಂಡ ಸ್ವರೂಪ ಅಗಾಧತೆಯನ್ನು ಕಲಾವಿದೆ ತನ್ನ ಸೊಗಸಾದ ಆಂಗಿಕಾಭಿನಯದಿಂದ ಮನಗಾಣಿಸಿದಳು. ‘ಆನಂದ ನಟಮಾಡುವಾರ್ ತಿಲ್ಲೈ..’ ಎಂಬ ಶಿವನ ನಾಟ್ಯ ವೈವಿಧ್ಯವನ್ನು ಗಾಯನ ತನ್ನ ಮನಮೋಹಕ ಆಕಾಶಚಾರಿ, ಮಂಡಿ ಅಡವು, ಸುಂದರ ಹಸ್ತ ವಿನಿಯೋಗಗಳ ಕಲಾರತಿಯೊಂದಿಗೆ ಅರ್ಪಿಸಿದಳು. ಅಂತ್ಯದ ಅಪೂರ್ವ ಯೋಗದ ಭಂಗಿಗಳು  ಮನೋಜ್ಞವಾಗಿದ್ದವು.

ತಿರುಪತಿಯ ಅದಿದೈವ ವೆಂಕಟೇಶ್ವರನ ಹಲವು ಅವತಾರಗಳ ಸೌಂದರ್ಯವನ್ನು ಕಣ್ಮುಂದೆ ಹರಡಿದ ಶ್ರೀ ಪುರಂದರದಾಸರ ದೇವರನಾಮ ‘ವೆಂಕಟಾಚಲ ನಿಲಯಂ ವೈಕುಂಠಪುರವಾಸಂ..’- ಸೊಗಸಾಗಿ ಮೂಡಿಬಂತು. ನಯನ ಮನೋಹರ ಅಭಿನಯ ಮೆಚ್ಚುಗೆ ಪಡೆಯಿತು.

ಕ್ಲಿಷ್ಟದ ಜತಿಗಳನ್ನುಳ್ಳ -ಸಂಕೀರ್ಣ ದೀರ್ಘಬಂಧ ‘ವರ್ಣ’ ಪ್ರಸ್ತುತಿಯ ಕೇಂದ್ರ ಭಾಗ. ಶ್ರೀ ಮಧುರೈ ಆರ್. ಮುರಳೀಧರನ್ ರಚನೆಯ ಷಣ್ಮುಖಪ್ರಿಯ ರಾಗದ ಭಕ್ತಿರಸಪ್ರಧಾನ ವರ್ಣವನ್ನು ಕಲಾವಿದೆ ಸಮರ್ಥವಾಗಿ ನಿರೂಪಿಸಿದಳು. ಮುರುಗನ ಜನ್ಮರಹಸ್ಯ ‘ವರ್ಣ’ದ ಕೇಂದ್ರವಸ್ತು. ಒಮ್ಮೆ, ಪಾರ್ವತಿ ಮಗುವನ್ನು ಬೇಡಿದಾಗ, ಶಿವನು ತನ್ನ ಮೂರನೆಯ ಕಣ್ಣನ್ನು ತಾವರೆಯ ಹೂವಿನೊಳಗೆ ನೆಟ್ಟಾಗ, ಆ ತಾವರೆಯ ಆರು ದಳದೊಳಗೆ ಆರು ಶಿಶುಗಳು ಜನ್ಮಿಸುತ್ತವಂತೆ. ಕಡೆಗೆ ಅವು ಆರು ಸೇರಿ ಆರುತಲೆಗಳ ಆರ್ಮುಗ- ಷಣ್ಮುಖನಾಗುತ್ತಾನಂತೆ. ಮುಂದೆ ಅವನು ತಂದೆ ಶಿವನಿಗೆ ಓಂಕಾರ ಪ್ರಣವ ಮಂತ್ರ ಬೋಧಿಸುತ್ತಾನೆ. ಸೂರ್ಯಪದ್ಮ ವೃಕ್ಷ ಎರಡಾಗಿ ಸೀಳಿದಾಗ, ಅದರಿಂದ ಕೋಳಿ ಮತ್ತು ನವಿಲುಗಳು ಹೊರಬರುತ್ತವಂತೆ. ಷಣ್ಮುಗ ಕೋಳಿಯನ್ನು ತನ್ನ ಲಾಂಛನದಲ್ಲಿ ಸೇರಿಸಿಕೊಂಡು, ಮಯೂರವನ್ನು ತನ್ನ ವಾಹನವನ್ನಾಗಿ ಮಾಡಿಕೊಳ್ಳುವ ಇವೇ ಮುಂತಾದ ಅನೇಕ ಸ್ವಾರಸ್ಯಕರ ಸಂಗತಿಗಳನ್ನು ತಿಳಿಸುವ ಸಂಚಾರಿಗಳನ್ನು ಗಾಯನ ತನ್ನ ಪರಿಣತ ಅಭಿನಯದಿಂದ ಸಾಕ್ಷಾತ್ಕರಿಸಿದಳು. ಕಥಾನಿರೂಪಣೆಯ ನಡುನಡುವೆ ಮೂಡಿಬಂದ ನೃತ್ತಾವಳಿಗಳ ವಿನ್ಯಾಸಗಳಿಂದ  ನೃತ್ಯ ಸಂಯೋಜನೆ ಮಾಡಿದ ಗೀತಾಲಕ್ಷ್ಮಿ ಅವರ ಕಲ್ಪನಾಶಕ್ತಿ ಸುವ್ಯಕ್ತವಾಗಿತ್ತು. ಶಿಷ್ಯೆಯ ಲವಲವಿಕೆಯ ನೃತ್ಯಧಾರೆಗೆ ಗುರುವಿನ ಖಚಿತ ನಟುವಾಂಗದ ಓಘ ಸ್ಫೂರ್ತಿ ನೀಡಿತ್ತು. 

ಶ್ರೀ ತಂಜಾವೂರು ಶಂಕರ್ ಅಯ್ಯರ್, ರಾಗಮಾಲಿಕೆಯಲ್ಲಿ,  ರಂಜಿನಿ ಕುಟುಂಬದ ವಿವಿಧ ರಂಜಿನಿ ರಾಗಗಳನ್ನು ಬಳಸಿಕೊಂಡು ಹೆಣೆದ ಕೃತಿ-‘ರಂಜಿನಿ, ಮೃದು ಪಂಕಜಲೋಚನಿ…’ ಯನ್ನು ಗಾಯನ, ಪ್ರಸನ್ನಭಾವದಿಂದ, ವಿವಿಧ ಮನೋಹರ ಭಂಗಿಗಳ ಪ್ರದರ್ಶನದಿಂದ ಸಾಕಾರಗೊಳಿಸಿದಳು.

ಮುಂದೆ ಮೂಡಿ ಬಂದ ‘ಶಿವನ್ ಚಿಂದು’-ವಿಶಿಷ್ಟ ಅಪರೂಪದ ಕೃತಿ, ಪಾರಂಪರಿಕ ಜಾನಪದ ಶೈಲಿಯನ್ನೊಳಗೊಂಡಿತ್ತು. ಅಣ್ಣಾಮಲೈ ರೆಡ್ಡಿಯಾರ್ ಈ ಕೃತಿಯ ಕರ್ತೃ. ಸಾಮಾಜಿಕ ಆಯಾಮದ ಈ ಕಥೆಯಲ್ಲಿ, ಪಾಂಡ್ಯರಾಜ್ಯದ ಒಂದೆಡೆ ರಸೆ ಕಾಮಗಾರಿ ನಡೆದಿದೆ. ಮುದುಕಿಯೊಬ್ಬಳು ಕೈಲಾಗದೆ ಸುಸ್ತಾಗಿ ಕುಳಿತಿದ್ದ ಸನ್ನಿವೇಶದಲ್ಲಿ, ಶಿವನು ಕಟ್ಟಿಗೆ ಮಾರುವವನ ವೇಷದಲ್ಲಿ ಬಂದು, ಅವಳಿತ್ತ ತಿನಿಸನ್ನು ತಿಂದು ಅವಳಿಗೆ ಸಹಾಯ ಮಾಡುತ್ತಾನೆ. ಅಷ್ಟುಹೊತ್ತಿಗೆ ಅಲ್ಲಿಗೆ ಬಂದ ಕೆಲಸದ ಮೇಲುಸ್ತುವಾರಿ  ಮೇಸ್ತ್ರೀ, ಅಪರಿಚಿತ ಕೆಲಸಗಾರ ಶಿವನನ್ನು ಕಂಡು ಕೋಪದಿಂದ ಹೊಡೆಯಲಾರಂಭಿಸಿದಾಗ, ಆ ಹೊಡೆತ ಅಲ್ಲಿದ್ದ ಎಲ್ಲರ ಬೆನ್ನಿನ ಮೇಲೂ ಬೀಳಲಾರಂಭಿಸಿದಾಗ  ಆ ಅಪರಿಚಿತ ವ್ಯಕ್ತಿ ಶಿವನೆಂದು ಆಗ ಎಲ್ಲರಿಗೂ ಅರಿವಾಗುತ್ತದೆ. ಜಾನಪದ ಲಹರಿಯ ಕುಣಿತದ ನಡೆಗಳನ್ನುಳ್ಳ ಈ ಕಥಾರೂಪದ ಸನ್ನಿವೇಶವನ್ನು ಗಾಯನ ತನ್ನ ಲೀಲಾಜಾಲ ಲಹರಿಯ ಚಲನೆಯಲ್ಲಿ ನಿರೂಪಿಸಿದಳು.

ಅಂತ್ಯದಲ್ಲಿ ಟಿ.ವಿ.ಗೋಪಾಲಕೃಷ್ಣನ್ ರತಿಪತಿಪ್ರಿಯ ರಾಗದಲ್ಲಿ ರಚಿಸಿದ ‘ತಿಲ್ಲಾನ’ ಸಂಭ್ರಮ- ಖುಷಿಯ ಭಾವಗಳನ್ನು ಸಿಂಚನಗೈದ ವೈವಿಧ್ಯಪೂರ್ಣ ಲಯವಿನ್ಯಾಸ ಮತ್ತು ಸುಂದರ ಶೋಲ್ಲುಕಟ್ಟುಗಳ ನಿರೂಪಣೆಯೊಂದಿಗೆ ಪ್ರಸ್ತುತಿ ಸಂಪನ್ನಗೊಂಡಿತು. ‘ಕಣ್ಣ ಮಣಿವಣ್ಣ ಕಮಲಕಣ್ಣ’- ಮುರುಗನ ಸ್ತುತಿಯ ಮಂಗಳ ಕಡೆಯಲ್ಲಿ ಶೋಭಿಸಿತು.

ವಾದ್ಯಗೋಷ್ಠಿಯಲ್ಲಿ  ಗಾಯನ-ಬಾಲಸುಬ್ರಮಣ್ಯ ಶರ್ಮ, ವೀಣೆ- ಶಂಕರರಾಮನ್,  ವಯೊಲಿನ್- ಮಧುಸೂದನ್, ಮೃದಂಗ-ಕಾರ್ತೀಕ್ ವೈಧಾತ್ರಿ,  ಕೊಳಲು- ನಿತೀಶ್ ಅಮ್ಮಣ್ಣಯ್ಯ, ರಿದಂ ಪ್ಯಾಡ್-ಡಿ. ಅರುಣ್ ಕುಮಾರ್ ಮತ್ತು ನಟುವಾಂಗ- ಗುರು ಗೀತಾಲಕ್ಷ್ಮಿ ಅವರ ಸಹಕಾರ ಯಶಸ್ವಿಯಾಗಿತ್ತು.

                                          ***************   

Related posts

ಮುದ ನೀಡಿದ ನವ್ಯಳ ಮೋಹಕ ನೃತ್ಯ

YK Sandhya Sharma

ಮೀನಳ ಭಾವಪೂರ್ಣ ಅಭಿನಯದ ವರ್ಚಸ್ವೀ ನೃತ್ಯ

YK Sandhya Sharma

ಅಮರಪ್ರೇಮದ ರಸಲೋಕ `ಗೀತಗೋವಿಂದ’

YK Sandhya Sharma

Leave a Comment

This site uses Akismet to reduce spam. Learn how your comment data is processed.