Image default
Dance Reviews

ಆಪ್ಯಾಯಮಾನ ಮೋಹಿನಿಯಾಟ್ಟಂ -ಕಥಕ್ ಸಮ್ಮಿಲನ

ಮಹಿಳಾ ಸಬಲೀಕರಣದ ಘನ ಉದ್ದೇಶವುಳ್ಳ `ತಾಮರ ಫೌಂಡೇಶನ್ ‘ನ , ಕಲಾವಿದೆಯರು ವೇದಿಕೆಯ ಮೇಲೆ ಸಮರ್ಥವಾಗಿ ನರ್ತಿಸಿ, ಭೇಷ್ ಎನಿಸಿಕೊಂಡು ಯಶಸ್ವಿಯಾಗುವುದಷ್ಟೇ ಅಲ್ಲ, ತಮ್ಮ ಜೀವನವನ್ನು  ಕಟ್ಟಿಕೊಳ್ಳಲು ಇದೇ ನೃತ್ಯಕ್ಷೇತ್ರವನ್ನು ಸಂಪೂರ್ಣ ಸದುಪಯೋಗಪಡಿಸಿ ಕೊಳ್ಳಲು ಅವಕಾಶಗಳನ್ನು ಸೃಷ್ಟಿಸುತ್ತಿರುವುದು ಸ್ತುತ್ಯಾರ್ಹ ವಿಚಾರ. ರಂಗದ ರಂಗುರಂಗಿನ  ಬೆಳಕಲ್ಲಿ ಥಳಥಳಿಸುವ ನೃತ್ಯವನ್ನು ಆಕರ್ಷಕವಾಗಿಸುವ ಕಲಾವಿದರ ಸುಂದರ ವೇಷಭೂಷಣ, ಪ್ರಸಾಧನ, ಬೆಳಕು ಮತ್ತು ಶಬ್ದವ್ಯವಸ್ಥೆ ಎಲ್ಲ ಕೌಶಲ್ಯಗಳ ಕಸುಬುದಾರಿಕೆಯ ತರಬೇತಿಯನ್ನು ನೀಡುವ , ನೃತ್ಯಕ್ಷೇತ್ರವನ್ನು ಉದ್ಯಮವನ್ನಾಗಿಸುವ ಪ್ರಯತ್ನ `ತಾಮರ ಫೌಂಡೇಶನ್ ‘ ಸಂಸ್ಥೆಯದು. ಅದರಂತೆ ತಮ್ಮೆಲ್ಲ ಕಾರ್ಯಕ್ರಮಗಳಿಗೂ ಸ್ವಸಹಾಯ ಸ್ವಂತ ಪರಿಶ್ರಮದ ಸ್ವ ಉದ್ಯೋಗ ರೂಪಿತ ನೃತ್ಯ ಕಾರ್ಯಕ್ರಮ ಪ್ರಸ್ತುತಿ `ತಾಮರ’ದ ವೈಶಿಷ್ಟ್ಯ.

ಪ್ರಖ್ಯಾತ ಮೋಹಿನಿಯಾಟ್ಟಂ ನಾಟ್ಯಗುರು ಕೆ.ಪಿ. ಶ್ರುತಿ ಅವರ ಮಾರ್ಗದರ್ಶನದಲ್ಲಿ ಇತ್ತೀಚಿಗೆ ಈ ಸಂಸ್ಥೆಯು  `ಶೂನ್ಯ’ ಆಡಿಟೋರಿಯಂನಲ್ಲಿ  ಪ್ರಸ್ತುತಪಡಿಸಿದ ನಾಟ್ಯಪ್ರಯೋಗ ವಿಶಿಷ್ಟವಾಗಿ ಮೂಡಿಬಂದಿತು. ನಿಜವಾದ ಕಲಾರಸಿಕರಿಗೆಂದೇ  ನಿರ್ಮಿತವಾದ `ಶೂನ್ಯ’ದ ಪುಟ್ಟ ಆಪ್ತಮಂದಿರದಲ್ಲಿ ಕಲಾವಿದರಿಗೆ ವೇದಿಕೆಯಾಗಲಿ, ನೋಡುಗರಿಗೆ ಆಸನದ ವ್ಯವಸ್ಥೆಯಾಗಲಿ ಇಲ್ಲ. ಇಬ್ಬರದೂ ನೇರ ಮುಖಾಮುಖಿ. ಕುಳಿತುಕೊಳ್ಳಲು ಸಾದಾ ಚಾಪೆಗಳು. ನಾಲ್ಕನೆಯ ಮಹಡಿಯ ತಾರಸಿಯಲ್ಲಿ ನಿಶಬ್ದ ನಿಸೂರು ವಾತಾವರಣ. ಕಲೆಯನ್ನು ಮನಸಾ ಆಸ್ವಾದಿಸಲು ಹೇಳಿಮಾಡಿಸಿದ ಅನುಕೂಲ ಪರಿಸರ.

ಮೊದಲಿಗೆ `ಆಯನ ‘ತಂಡದ ಐದುಜನ ಪುರುಷ ಕಲಾವಿದರು ಮೋಹಿನಿಯಾಟದ ಪ್ರಾರಂಭಿಕ ಸಾಂಪ್ರದಾಯಿಕ `ಚೊಲ್ ಕಟ್ಟು’ ನೃತ್ತ ಪ್ರಧಾನ ಕೃತಿಯನ್ನು ಮನಮೋಹಕವಾಗಿ ಪ್ರಸ್ತುತಿಪಡಿಸಿದರು. ಮೈಯನ್ನು ಅರ್ಧ ನೆಲಕ್ಕೆ ಬಗ್ಗಿಸಿ ವಿನೀತವಾಗಿ ದೇವಪ್ರಾರ್ಥನೆ ಮಾಡುವ ಆಂಗಿಕಗಳು, ಖಚಿತ ಹಸ್ತಮುದ್ರೆಗಳು, ಮೃದುವಾದ ಪಾದಭೇದಗಳು, ಅಲೆಯಂತೆ ಬಳುಕುವ ಶರೀರ ಲಾಸ್ಯ, ವಿಶಿಷ್ಟ ಸಮೂಹ ರಚನೆಯಲ್ಲಿ ಸಾಮರಸ್ಯ ಮೆರೆದವು. ಬಿಳಿಯ ಕಚ್ಚೆ, ಮೇಲೊಂದು ಅಂಗಿ, ಸೊಂಟದಲ್ಲೊಂದು ಡಾಬು, ಕೈಯ ಕಡಗ ತೊಟ್ಟ ಯುವಕರ ನೃತ್ಯ ಮನಸೂರೆಗೊಂಡವು. ಹಿನ್ನಲೆಯ ಚಂಡೆನಾದ ನೃತ್ಯದ ಸೌಂದರ್ಯವನ್ನು ಇಮ್ಮಡಿಸಿದವು.

ಮೋಹಿನಿಯಾಟ ಮತ್ತು ಕಥಕ್ ಎರಡು ವಿರುದ್ಧಧ್ರುವದ ಕಲಾಪ್ರಕಾರಗಳಾದರೂ , ಅಮಿತಾ ಮಾಥೂರ್(ಕಥಕ್) ಮತ್ತು ಶ್ರುತಿ (ಮೋಹಿನಿಯಾಟ ) ಪ್ರಸ್ತುತಪಡಿಸಿದ `ಜುಗಲ್ಬಂದಿ’ ಒಂದರೊಳಗೊಂದು ಸಂಗಮಿಸಿ ನೋಡುಗರ ಕಣ್ಣಿಗೆ ಆನಂದಾನುಭೂತಿಯನ್ನು ನೀಡಿದವು. ಪಾಶ್ಚಾತ್ಯ ಸಂಗೀತದ ಅಲೆಗಳ ಹಿನ್ನಲೆ, ಮಂಜುಮುಸುಕಿದಂತಿದ್ದ ಧೂಮ್ರಾವೃತ ಪರಿಸರದೊಳಗೆ ದೇವಕನ್ನಿಕೆಯರಂತಿದ್ದ ಇಬ್ಬರು ಕಲಾವಿದೆಯರು ಮನೋಜ್ಞವಾಗಿ ನರ್ತಿಸಿದರು. ಒಬ್ಬಳು ಮಳೆಯಾಗಿ ಮೃದುಚಲನೆಯ ತುಂತುರಾದರೆ, ಇನ್ನೊಬ್ಬಳು ನವಿಲಾಗಿ ಸೋಗೆ ಬಿಚ್ಚಿ ಹರಿದಾಡುವ ಚಲನೆಗಳಿಂದ ಕುಣಿವಳು. ಒಬ್ಬಳು ಹೂವಾಗಿ ನಳನಳಿಸಿದರೆ ಇನ್ನೊಬ್ಬಳು ಭ್ರಮರವಾಗಿ ಮಧು ಈಂಟುವಳು. ಇಬ್ಬರೂ ಪಕ್ಷಿಗಳಾಗಿ ಕೊಕ್ಕು ಪಲುಕಿಸಿ, ಕೊರಳು ಕೊಂಕಿಸಿ ಸ್ವಚ್ಚಂದ ಹಾರಾಡುವ ನೋಟ ಚೇತೋಹಾರಿಯಾಗಿತ್ತು. ಅಮಿತಾ ಚಕ್ಕರ್ ಹಾಕುತ್ತ, ವೇಗದ ಪದಗತಿಯ ಹೆಜ್ಜೆ-ಗೆಜ್ಜೆಗಳಿಂದ ಆಕರ್ಷಿಸಿದರೆ, ಶ್ರುತಿ, ತಮ್ಮ ಕೋಮಲಚಲನೆಗಳಿಂದ, ಪರಿಣಾಮಕಾರಿ ಅಭಿನಯದಿಂದ ಗಮನ ಸೆಳೆದರು. ಪರಸ್ಪರ ಕಲೆಗೆ ಗೌರವ ನಮನ ಸಲ್ಲಿಸುವ ಬಗೆ ಸೌಹಾರ್ದಯುತವಾಗಿತ್ತು.

ಹನ್ನೆರಡನೇ ಶತಮಾನದ ಕವಿ ಜಯದೇವನ `ಅಷ್ಟಪದಿ’ ಯ `ಲಲಿತ ಲವಂಗ ಲತಾ ಪರಿಶೀಲನ ಕೋಮಲ ಸಮೀರೆ ’ ಕೃತಿಯನ್ನು ತಾಮರದ ನರ್ತಕಿಯರು `ನಿಯೋ ಕ್ಲಾಸಿಕಲ್’ ಶೈಲಿಯಲ್ಲಿ ಕೃಷ್ಣ ಪರಿವೇಷ್ಟಿತ ಸಖಿಯರಾಗಿ ಸುಮನೋಹರ ಸನ್ನಿವೇಶವನ್ನು ನಿರ್ಮಿಸಿದರು. ರಾಧಾ-ಕೃಷ್ಣರ ಲೀಲಾವಿನೋದಗಳು, ಹುಸಿಮುನಿಸು, ವಿರಹಿಯ ಭಾವನೆಗಳನ್ನು ತಮ್ಮ ಸುಂದರ ಆಂಗಿಕಾಭಿನಯ, ಬಾಗು ಬಳುಕುಗಳ ವಯ್ಯಾರದ ಚಲನೆಯಿಂದ, ಭಾವಪ್ರದ ಅಭಿನಯದಿಂದ ಪ್ರೇಕ್ಷಕರ ಮನಸ್ಸನ್ನು ಆವರಿಸಿಕೊಂಡರು. ಕ್ಷಣದಲ್ಲಿ ರಂಗದ ತುಂಬ ನಲಿದಾಡುತ್ತ, ಶರೀರ ವಿನ್ಯಾಸಗಳಿಂದ ವಿವಿಧ ವ್ಯೂಹರಚನೆಗಳ ಸಂಯೋಜನೆಯಿಂದ, ಆಕರ್ಷಕ ಹೂದೋಟ, ಅಳಿಸಂಕುಲದ ಹಾರಾಟ, ಸರಸ-ವಿನೋದಗಳ ಕ್ರೀಡೆಗಳ ಪ್ರದರ್ಶನಗಳಿಂದ, ವೇಗಗತಿಯ ಚಕ್ಕರ್ ಗಳು, ಸುಂದರಭಂಗಿಗಳನ್ನು ತೋರುತ್ತ ಮನಸ್ಸಿಗೆ ಆನಂದ ತುಂಬಿ ಚೇತೋಹಾರಿಯಾಗಿ ನರ್ತಿಸಿದರು.

ಪ್ರಸಿದ್ಧ ಆಂಗ್ಲ ಕವಿ ಪೌಲಾ ನೆರೂಡಾ ಅವರ ಪದ್ಯವಾಚನಕ್ಕೆ ಶ್ರುತಿ, ತಮ್ಮ ಹೊಳಪು ಕಂಗಳು ಮತ್ತು ಹುಬ್ಬುಗಳ ಬಳುಕಾಟ, ಮುಖದ ಸ್ನಾಯುಗಳ ಕಂಪಿಸುವಿಕೆಯಿಂದ ಅಭಿನಯವಾದರು. ಅನಂತರ, ಸ್ವಾತಿ ತಿರುನಾಳ್ ಮಹಾರಾಜರ ರಚನೆಯ ತಿಲ್ಲಾನವನ್ನು ಕಲಾವಿದ ಸೌವಿಕ್ ಘೋಷಾಲ್ ತಮ್ಮ ದ್ರವೀಕೃತ ಅನುಪಮ ಚಲನೆಗಳಿಂದ, ಮೃದುವಾದ ಅಡವುಗಳ ಸೊಗಸನ್ನು ಮೆರೆಯುತ್ತ, ಅರೆಮಂಡಿಯಲ್ಲಿ ನಟನಾ ಕೌಶಲ್ಯವನ್ನು ಪ್ರದರ್ಶಿಸಿದರು. ನವಶಾಸ್ತ್ರೀಯ ನೃತ್ಯದಲ್ಲಿ `ಕೃಷ್ಣ ಎನಬಾರದೇ’ ಎನ್ನುತ್ತ, ವಾರೆತುರುಬಿನ ಸುಂದರಿಯರು, ವೇಣುನಾದಕೆ ತನ್ಮಯದಿಂದ ನರ್ತಿಸುತ್ತಾ, ಹಿನ್ನಲೆಯ ಮ್ಯಾಂಡೊಲಿನ್ ಅನುರಣಕ್ಕೆ ಅಭಿನಯಿಸುತ್ತ, ಅಭಿನಯದ ಎಲ್ಲ ಸಾಧ್ಯತೆಗಳನ್ನೂ ಸಮರ್ಥವಾಗಿ ಬಳಸಿಕೊಂಡು ಅನನ್ಯವಾಗಿ ನರ್ತಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

Related posts

ಕವನ-ಧ್ವನಿ ಸೋದರಿಯರ ಸುಂದರ ಯುಗಳ ನೃತ್ಯ

YK Sandhya Sharma

Kala Sindhu Academy-Samvitha Rangapravesha

YK Sandhya Sharma

ಪರಿಣಿತ ಅಭಿನಯದಿಂದ ಕಂಗೊಳಿಸಿದ ಅಕ್ಷತಾ ನೃತ್ಯ

YK Sandhya Sharma

Leave a Comment

This site uses Akismet to reduce spam. Learn how your comment data is processed.