ಭಾರತೀಯ ಪರಂಪರೆಯಲ್ಲಿ ಹಿಂದಿನಿಂದಲೂ ಗುರುಕುಲಗಳಲ್ಲಿಯೇ ಆಗಲಿ ಅಥವಾ ಮುಂದಿನ ಕಾಲಘಟ್ಟಗಳಲ್ಲಿಯೇ ಆಗಲಿ ಗುರು ಸಮಕ್ಷಮ ಶಿಷ್ಯರು ಅತೀವ ಶ್ರದ್ಧೆಯಿಂದ ವಿದ್ಯಾರ್ಜಿಸುವ ಸಂಪ್ರದಾಯ ಅನೂಚಾನವಾಗಿ ನಡೆದು ಬಂದಿದೆ. ಆದರೆ ಈಗ ‘ಕಾಲಾಯ ತಸ್ಮೈ ನಮಃ’. ಇದು ವಿವಿಧ ಮಾಧ್ಯಮಗಳ ಯುಗ. ಅದರಲ್ಲೂ ಯಾರೂ ನಿರೀಕ್ಷಿಸಿರದ ಇಡೀ ವಿಶ್ವವನ್ನೇ ‘ಕರೋನಾ’ ಅಪೋಶನ ತೆಗೆದುಕೊಳ್ಳುತ್ತಿರುವ ಸಂಕೀರ್ಣ ಪರ್ವದಲ್ಲಿ ಎಷ್ಟೋ ಬದಲಾವಣೆಗಳಿಗೆ ಜನಜೀವನ ಒಗ್ಗಿಕೊಂಡ ಅನಿವಾರ್ಯತೆ. ಇದರ ನೇರ ಪರಿಣಾಮ ‘ಕಲಾರಂಗ’ದ ಮೇಲೂ ಆಗಿರುವುದು ಅಷ್ಟಿಷ್ಟಲ್ಲ . ಹೀಗಾಗಿ ಈಗ ಎಲ್ಲವೂ ‘ವರ್ಚ್ಯುಯಲ್’ -ಅಂತರ್ಜಾಲಮಯ.
ಹೀಗೊಂದು ಅಪರೂಪದ ರಂಗಪ್ರವೇಶ. ನಾಟ್ಯಗುರು ಸೌಜನ್ಯ ಮಧುಸೂದನ್ ದೂರದ ಅಮೆರಿಕೆಯಲ್ಲಿ. ಬೆಂಗಳೂರಿನಿಂದ ಅವರ ಬಳಿ ನೃತ್ಯಶಿಕ್ಷಣ ಪಡೆಯುತ್ತಿರುವ ಶಿಷ್ಯೆ ಮಹತಿ ಅರುಣ್. ರಂಗಪ್ರವೇಶಕ್ಕೆ ಸಿದ್ಧಮಾದುವುದು ಸುಲಭದ ಮಾತಲ್ಲ. ಇಡೀ ‘ಮಾರ್ಗಂ’ ಸಂಪ್ರದಾಯದ ಅಷ್ಟೂ ಕೃತಿಗಳನ್ನು ಅನುಕ್ರಮಣದಲ್ಲಿ ಅಭ್ಯಾಸ ಮಾಡಿಸಲು ಸುಮಾರು ಮೂರ್ನಾಲ್ಕು ತಿಂಗಳುಗಳೇ ಬೇಕು. ಹಾಗೆ ಪರಿಶ್ರಮಿಸಿ ರಂಗವೇರಲು ಸನ್ನದ್ಧಳಾದ ‘ಮಹತಿ’ ಬಹು ಅಚ್ಚುಕಟ್ಟಾಗಿ, ಸುಮನೋಹರವಾಗಿ ತಾನು ಕಲಿತ ವಿದ್ಯೆಯನ್ನು ರಂಗಾರ್ಪಣೆ ಮಾಡಿದ್ದು ನಿಜಕ್ಕೂ ಸ್ತುತ್ಯಾರ್ಹ.
ಬೆಂಗಳೂರಿನ ಖ್ಯಾತ ‘ಭರತ ದರ್ಶನ’‘’ ನೃತ್ಯಸಂಸ್ಥೆಯ ಬದ್ಧತೆಯ ಶಾಸ್ತ್ರೀಯ ನಾಟ್ಯ ತರಬೇತಿಗೆ ಹೆಸರಾದವರು, ಅಂತರರಾಷ್ಟ್ರೀಯ ನೃತ್ಯ ಗುರು-ಸಂಗೀತಗಾರ್ತಿ-ನಟುವನ್ನಾರ್ ಆಗಿ ಚೆನ್ನೈ ನ ‘ಅಡಿಯಾರ್ ಲಕ್ಷ್ಮಣ್’ ಅವರ ಸಹೋದರಿ, ದಿ. ಶ್ರೀಮತಿ ನಾಗಮಣಿ ಶ್ರೀನಿವಾಸರಾವ್ . ಅವರಿಂದ ಇಲ್ಲಿ ನೃತ್ಯ ಕಲಿಯುತ್ತಿದ್ದ ಮಹತಿ ಆಕೆಯ ಕಾಲಾನಂತರ ಆ ಗುರುವಿನ ಪ್ರಧಾನ ಶಿಷ್ಯೆ ಮತ್ತು ಸೊಸೆಯಾದ ನೃತ್ಯ ಕಲಾವಿದೆ ವಿದುಷಿ ಸೌಜನ್ಯ ಮಧುಸೂದನ್ ಅವರಿಂದ ಆನ್ಲೈನ್ ನಲ್ಲಿ ಶಿಕ್ಷಣ ಪಡೆದು ಇದೀಗ ಅದನ್ನು ಬೆಂಗಳೂರಿನ ಜಯನಗರದ ಜೆ.ಎಸ್.ಎಸ್ . ಆಡಿಟೋರಿಯಂನಲ್ಲಿ ಸಾದರಪಡಿಸಿ ಕಲಾರಸಿಕರ ಮೆಚ್ಚುಗೆ ಗಳಿಸಿ ದಾಖಲೆ ನಿರ್ಮಿಸಿದ ಹೆಮ್ಮೆ ಅವಳದು.
ದಂತದ ಗೊಂಬೆಯಂಥ ಮಾಟವಾದ ನಿಲುವಿನ ‘ಮಹತಿ’- ಶುಭಾರಂಭಕ್ಕೆ ಅಣ್ಣಮಾಚಾರ್ಯರ ರಚನೆಯ ‘ತೋಡಯಂ ಮಂಗಳಂ’ ಮತ್ತು ‘ನಾರಾಯಣತೆ ನಮೋ ನಮೋ’- ಅಂಗಶುದ್ಧ ಲವಲವಿಕೆಯ ನರ್ತನದಿಂದ ಮನಸೆಳೆಯಿತು. ಶಾಸ್ತ್ರೀಯ ಚೌಕಟ್ಟಿನೊಳಗೆ ಮೂಡಿಬಂದ ಕಲಾವಿದೆಯ ಪ್ರವೇಶದ ಕೃತಿಯಲ್ಲೇ ಆಕೆಯ ಆಂಗಿಕ ಚಲನೆ, ಹಸ್ತಮುದ್ರೆ-ಖಚಿತ ಅಡವುಗಳ ಮಿಂಚು ಸೊಬಗಿನಿಂದ ಕಂಗೊಳಿಸಿದವು. ಜೊತೆಗೆ ಆಕೆಯ ರಂಗಪ್ರಜ್ಞೆ, ಸ್ಫುಟವಾದ ಅರ್ಥ ಸ್ಫುರಣೆಯ ಬಗೆ, ರಮ್ಯ ಭಾವ-ಭಂಗಿಗಳ ನಿಖರತೆ, ನೃತ್ತಗಳ ಲಾಲಿತ್ಯ ಗಮನಾರ್ಹವಾಗಿದ್ದವು.
ಮುಂದೆ-ಶುದ್ಧ ನೃತ್ತ ಪ್ರಸ್ತುತಿ ‘ಜತಿಸ್ವರ’ ಅಷ್ಟೇ ಆಹ್ಲಾದಕರವಾಗಿ, ಜತಿಗಳ ಸಾಕಾರದಲ್ಲಿ ಜತಿ ಮತ್ತು ಸ್ವರಗಳ ನಿರೂಪಣೆಯಲ್ಲಿನ ಆಕೆಯ ಹಿಡಿತ ಸುವ್ಯಕ್ತವಾಯಿತು.ಹಿತ ಮಿತವಾದ ಹಸ್ತ ವಿನಿಯೋಗ, ಆಂಗಿಕಾಭಿನಯ ಮುದ ನೀಡಿತು. ಭಾವನೆ-ಅಭಿನಯಕ್ಕೆ ತೆರಪಿಲ್ಲದ ಕೃತಿ ಸಾಕಾರದಲ್ಲೂ ಮಹತಿ ನಗುಮುಖದಿಂದ ನೃತ್ತಗಳ ಸೌಂದರ್ಯವನ್ನು ಎತ್ತಿಹಿಡಿಯುತ್ತ ಜೀವಂತಿಕೆಯನ್ನು ತುಂಬಿದ್ದಳು.
ಮೊತ್ತ ಮೊದಲ ಬಾರಿಗೆ ಮಾರ್ಗ ಪದ್ಧತಿಯಲ್ಲಿ ಅಭಿನಯ ಮತ್ತು ಮುಖಾಭಿವ್ಯಕ್ತಿಯನ್ನು ಪರಿಚಯಿಸುವ ‘ಶಬ್ದಂ’- ಅರುಣಾಚಲಂ ಪಿಳ್ಳೈಯವರ ರಚನೆಯಾಗಿದ್ದು, ರಾಗಮಾಲಿಕೆಯ ಮಿಶ್ರಚಾಪು ತಾಳದಲ್ಲಿತ್ತು. ಚಿದಂಬರದಲ್ಲಿರುವ ಶಿವನ ನೃತ್ಯ ವಿಸ್ಮಯಗಳನ್ನು ತನ್ನ ಅದ್ಭುತ ಭಾವ-ಭಂಗಿಗಳ ಮನೋಹರತೆಯಲ್ಲಿ ಕಟ್ಟಿಕೊಡುವ ಕಲಾವಿದೆಯ ಸಾತ್ವಿಕಾಭಿನಯ ಕಣ್ತುಂಬಿತು. ಭಕ್ತಿಪ್ರಧಾನ ಈ ಕೃತಿಯಲ್ಲಿ ಮಹತಿ, ತನ್ನ ದೈವೀಕಾನುಭೂತಿಯನ್ನು ಪ್ರೇಕ್ಷಕರಿಗೂ ದಾಟಿಸಿದ್ದು ವಿಶೇಷ. ಶ್ರೀ ಈಶ್ವರ್ ಅಯ್ಯರ್ ಅವರ ಸುಶ್ರಾವ್ಯ ಗಾಯನ, ಮಹೇಶ್ ಸ್ವಾಮಿ ಅವರ ಕೊಳಲುವಾದನ ಕೂಡ ಇದರಲ್ಲಿ ಪಾಲ್ಗೊಂಡಿತು.
ದೇವಾಲಯದ ಪ್ರವೇಶದ್ವಾರ- ನವರಂಗ-ಮುಖಮಂಟಪಗಳನ್ನು ದಾಟಿಕೊಂಡು ದೈವ ಸಾಕ್ಷಾತ್ಕಾರದ ಗರ್ಭಗುಡಿಯ ಹಂತ ತಲುಪಿದ, ಹೃದಯಾಂತರಂಗ ಸಾನಿಧ್ಯ ಹೊಂದಿದ ಧನ್ಯತೆಯ ಕ್ಷಣ. ಪ್ರಸ್ತುತಿಯ ಹೃದ್ಯ ಭಾಗ- ‘ವರ್ಣ’. ಇದನ್ನು ಸಾಕಾರಗೊಳಿಸುವುದು ಅಷ್ಟೇ ಸಂಕೀರ್ಣ ಕೂಡ. ನೃತ್ಯ ವ್ಯಾಕರಣ- ನಿಘಂಟಿನಂತಿರುವ ಶಾಸ್ತ್ರದ ಆಯಾಮಗಳನ್ನು ಕರಗತಗೊಳಿಸಿಕೊಂಡಿರಬೇಕಾದ ಪರೀಕ್ಷೆ ಕೂಡ. ಭಕ್ತಿ ಪ್ರಧಾನವಾದ ‘ಚಲಮೇಲರ…’ (ರಾಗ-ನಾಟಕುರಂಜಿ, ಆದಿತಾಳ-ರಚನೆ- ಮೂಲೈವೀಡ್ ರಂಗನಾರ್) ‘ವರ್ಣ’ ದಲ್ಲಿ ಶ್ರೀ ರಂಗನಾಥನಲ್ಲಿ ಭಕ್ತಿ ಸಮರ್ಪಣೆ ಮಾಡುವ ಭಕ್ತೆಯ ತಾದಾತ್ಮ್ಯ, ದಯಾರ್ದ ಕೋರಿಕೆಗಳು ಅನುಪಮವಾಗಿ ಮೂಡಿಬಂದವು. ಮೃದುನಡೆಯ ಲಾಸ್ಯಪೂರ್ಣ ಭಂಗಿ-ಭಾವಗಳಲ್ಲಿ ಸುವ್ಯಕ್ತವಾಗುವ ‘ಭಕ್ತಿ’- ಸ್ಥಾಯಿಭಾವದ ಒಡಲಲ್ಲಿ ಅನೇಕ ಪ್ರೇಮಭಾವದ ಮುದ ನೀಡುವ ಸಂಚಾರಿಗಳು ನವಿರಾಗಿ ಹಾದುಹೋದವು. ನಡುನಡುವೆ ಕಾಣಿಸಿಕೊಳ್ಳುವ ನೃತ್ತವೈಭವ ( ಸ್ಫುಟವಾದ ನಟುವಾಂಗ-ಅಡಿಯಾರ್ ಕೆ.ಗೋಪೀನಾಥ್) ಉಸಿರು ಬಿಗಿಹಿಡಿದು ವೀಕ್ಷಿಸುವಂಥ ಮಿಂಚಿನ ಸ್ಪರ್ಶದಲ್ಲಿ ಝೇಂಕಾರಗೊಂಡವು. ಕರಾರುವಾಕ್ಕಾದ ತಾಳಜ್ಞಾನ, ಅಗಾಧ ಸ್ಮರಣಶಕ್ತಿಯನ್ನು ನಿರೀಕ್ಷಿಸುವ ‘ವರ್ಣ’ದ ವಿವಿಧ ಮಜಲುಗಳು ಪುಟ್ಟ ಕಲಾವಿದೆ ಮಹತಿಯು ಪಡೆದ ಕಠಿಣ ನೃತ್ಯಶಿಕ್ಷಣದ ಹಾಗೂ ಆಕೆಯ ಪ್ರತಿಭೆಯ ಜೇನ್ಗೊಡಗಳಾಗಿದ್ದವು. ವಿನಯ್ ನಾಗರಾಜ್ ಮೃದಂಗದ ತಾಳಕ್ಕೆ, ಮುಡಿಕೊಂಡಾನ್ ರಮೇಶರ ವೀಣಾನಾದಕ್ಕೆ ಹೆಜ್ಜೆ ಜೋಡಿಸಿದ ಅಚ್ಚುಕಟ್ಟಾದ ಜತಿಗಳ ನಿರ್ವಹಣೆ, ಕರಣ-ಚಾರಿಗಳ ಅನುಪಾಲನೆ, ಸುಂದರಾಭಿನಯ ಮಹತಿಯ ವೈಶಿಷ್ಟ್ಯವನ್ನು ಸಾರಿದವು. ಈ ಕ್ಲಿಷ್ಟ-ದೀರ್ಘ ಬಂಧ- ನಿರಾಯಾಸಡಿ ನರ್ತಿಸಿದ ನಗುಮೊಗದ ಪ್ರತಿಭಾನ್ವಿತ ಕಲಾವಿದೆಯ ಅದಮ್ಯ ಚೇತನಕ್ಕೆ ಸಾಕ್ಷಿಯಾಯಿತು.
ಮುಂದೆ- ಮಹತಿ ಆನಂದಿಸುತ್ತಾ ನರ್ತಿಸಿದ ಕೀರ್ತನೆ – ‘ಆನಂದ ನರ್ತನಂ ಗಣಪತಿ’-(ರಚನೆ- ಊತುಕಾಡು ವೆಂಕಟ ಸುಬ್ಬಯ್ಯರ್) ಯನ್ನು ಕುರಿತು. ವರ್ಣನೆಯ ಸಾಹಿತ್ಯ ಕಣ್ಣಿಗೆ ಕಟ್ಟುವಂತೆ ಕಲಾವಿದೆ, ಪ್ರತಿಸಾಲಿನ ಅಂತರಂಗಕ್ಕೆ ಕನ್ನಡಿ ಹಿಡಿದು, ದೃಶ್ಯರೂಪವನ್ನು ಕಟ್ಟಿಕೊಟ್ಟಳು. ಸೊಂಡಿಲನ್ನು ಮೆಲುವಾಗಿ ತೂಗುತ್ತ ನಡೆಯುವ ಗಣಪನ ರೂಪವನ್ನು ಬಹು ಮನೋಜ್ಞವಾಗಿ ಅಭಿನಯಿಸಿದಳು.
ಉಕ್ಕುವ ಭಾವನಾಭಿವ್ಯಕ್ತಿಗೆ ರೂಪಕದಂತಿರುವ ‘ಪದಂ’ –ಜೀವಾತ್ಮ-ಪರಮಾತ್ಮ ಕಲ್ಪನೆಯನ್ನು ಧ್ವನಿಸುತ್ತದೆ. ಪರಮಾತ್ಮನನ್ನು ಸಾಕಾರಗೊಳಿಸಿಕೊಳ್ಳಲು ಗುರು ನೆರವಾಗುವಂತೆ ಇನಿಯನನ್ನು ಸೇರಿಕೊಳ್ಳಲು ಸಖಿಯಾದವಳ ರಾಯಭಾರ ಅಷ್ಟೇ ಮುಖ್ಯ. ಇಲ್ಲಿ ವಿರಹತಪ್ತ ನಾಯಕಿ, ತಿರುವತ್ಯೂರಿನ ತ್ಯಾಗರಾಜನನ್ನು ಕೂಡಿಕೊಳ್ಳಲು ಮಾರ್ಗವರಸುತ್ತ ತನ್ನ ಸಖಿಯೊಡನೆ ತನ್ನನ್ನು ಕಾಡುತ್ತಿರುವ ವಿರಹವೇದನೆಯನ್ನು ತೋಡಿಕೊಳ್ಳುವ ಪರಿ ಹೃದಯಸ್ಪರ್ಶಿಯಾಗಿದೆ. ತನ್ನ ಪ್ರೇಮಸಂದೇಶವನ್ನು ತನ್ನಿನಿಯನಿಗೆ ತಲುಪಿಸಲು ನಾಯಕಿ ಬೇಡಿಕೊಳ್ಳುವ ಬಗೆಬಗೆಯ ನಿವೇದನೆ ಕಲಾವಿದೆಯ ಪರಿಣಾಮಕಾರಿ ಅಭಿನಯಕ್ಕೆ ಹಿಡಿದ ಕನ್ನಡಿಯಾಗಿತ್ತು. ಘನಂ ಕೃಷ್ನೈಯ್ಯರ್ ರಚಿಸಿದ ಈ ‘ಪದಂ’ಗೆ ನೃತ್ಯ ಸಂಯೋಜಿಸಿದವರು- ಗೌರಿ ಅಮ್ಮಾಳ್.
ಮುಂದೆ- ಮೈಸೂರು ವಾಸುದೇವಾಚಾರ್ಯರು ರಚಿಸಿದ ‘ಜಾವಳಿ’ ಯನ್ನು ಪ್ರೇಮಗೀತೆ ಎನ್ನಲಡ್ಡಿಯಿಲ್ಲ. ಲವಲವಿಕೆಯಿಂದ ಅಭಿನಯ ಈ ಕೃತಿಯ ಜೀವಾಳ. ‘ನೇ ಪಿಲಚಿತೆ…’ ಬಾರನೇಕೆ ನನ್ನಿನಿಯ ಕಮಲನಯನ, ವಾಸುದೇವ ಎಂದು ಪ್ರೇಮಿ -ನಾಯಕಿ ವ್ಯಾಕುಲಗೊಂಡು, ತನ್ನಿಂದೇನಾದರೂ ಪ್ರಮಾದವಾಯಿತೇ ಎಂದು ಹಲುಬುತ್ತ, ಅನನ್ಯ ಪ್ರೇಮಭಾವದಿಂದ ಅನುನಯದಿಂದ ಕೋರಿಕೊಳ್ಳುವ ಈ ‘ಜಾವಳಿ’ಯಲ್ಲಿ, ಮಹತಿ ತನ್ನ ಸುಕೋಮಲ ರಮ್ಯ ಅಭಿನಯದಿಂದ ನೋಡುಗರ ಮನಸ್ಸು ತಾಗುತ್ತಾಳೆ.
ಸತತವಾಗಿ ಸುಮಾರು ಮೂರು ಗಂಟೆಗಳ ಕಾಲ ಚೈತನ್ಯಪೂರ್ಣವಾಗಿ ನರ್ತಿಸಿದ ಕಲಾವಿದೆ ಮಹತಿ, ಮನಮೋಹಕ ‘ತಿಲ್ಲಾನ ಮತ್ತು ‘ಮಂಗಳ’ದೊಂದಿಗೆ ತನ್ನ ಪ್ರಸ್ತುತಿಯನ್ನು ಸಂಪನ್ನಗೊಳಿಸಿದಳು.
*****************