Image default
Drama Reviews

ಹೊಸನೋಟ ಬೀರಿದ ‘’ಸುಯೋಧನ’’

ಇತ್ತೀಚಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿತವಾದ “ಸಂಧ್ಯಾ ಕಲಾವಿದರು’’ ಅಭಿನಯಿಸಿದ, ಎಸ್.ವಿ.ಕೃಷ್ಣ ಶರ್ಮ ರಚಿಸಿ, ನಿರ್ದೇಶಿಸಿದ `ಸುಯೋಧನ’ ನಾಟಕ ಸೊಗಸಾಗಿ ಮೂಡಿಬಂತು. ಇದು ೧೦೪  ನೇ ಪ್ರದರ್ಶನವೆಂಬುದೇ ಅದರ ಜನಪ್ರಿಯತೆಗೆ ಸಾಕ್ಷಿಯಾಯಿತು. ಇದುವರೆಗೂ ಮಹಾಭಾರತದ ಕಥೆಗಳು ಅನೇಕ ರೂಪದಲ್ಲಿ ಮೂಡಿಬಂದಿವೆಯಾದರೂ ಈ ನಾಟಕದಲ್ಲಿ ಚರ್ಚಿತವಾದ ರೀತಿ ವಿಭಿನ್ನವಾಗಿತ್ತು. ಇಲ್ಲಿ ದುರ್ಯೋಧನನೇ ನಾಯಕ. ಹೊಸ ದೃಷ್ಟಿಯಲ್ಲಿ ಈ ಪಾತ್ರ ಚಿತ್ರಿತವಾಗಿದೆ. ಪ್ರತಿಯೊಂದು ಪಾತ್ರ-ಘಟನೆಗಳನ್ನು ಅವನು ತನ್ನ ದೃಷ್ಟಿಯಲ್ಲಿ ಪರಾಂಬರಿಸುತ್ತ ಪ್ರಶ್ನಿಸುತ್ತಾನೆ. ತನ್ನ ಕಾರ್ಯಗಳನ್ನು ಸಮರ್ಥಿಸಿಕೊಳ್ಳುತ್ತಾನೆ. ಸಂಭಾಷಣೆ ಪ್ರಧಾನವಾದ ಈ ನಾಟಕದಲ್ಲಿ ನಡೆವ ಚರ್ಚೆ ಆಸಕ್ತಿಕರವಾಗಿತ್ತು. ಮಾತುಗಳು, ಭಾಷಾ ಸಾಮರ್ಥ್ಯ ವಿನೂತನ. ಜನ ನಾಟಕ ನೋಡಿ ತುಂಬ ಆನಂದಿಸಿದರು. ಪಾತ್ರ ಪೋಷಣೆ, ಸನ್ನಿವೇಶಗಳ ರಚನೆ ಹಾಗೂ ವಾದ-ವಿವಾದ ಕುತೂಹಲಕಾರಿಯಾಗಿತ್ತು.

 ಹೊಸ ವಿನ್ಯಾಸದಲ್ಲಿ ಮೂಡಿಬಂದ ಈ ನಾಟಕದಲ್ಲಿ ಮಾತುಗಳೇ ಪ್ರಧಾನವಾಗಿದ್ದವು. ಸುಯೋಧನ, ಸ್ಮಶಾನ ಕುರುಕ್ಷೇತ್ರದಲ್ಲಿ ನಿಂತು ಆವೇಶದಿಂದ ಮಾತನಾಡುವ ಧಾಟಿ ಪಕ್ಷಿನೋಟದಲ್ಲಿ ಸಾಗುತ್ತ ಇಡೀ ಮಹಾಭಾರತದ ಕಥೆಯ ಘಟನೆಗಳನ್ನೆಲ್ಲ ಸೂಕ್ಷ್ಮವಾಗಿ ಜಾಲಾಡಿತ್ತು. ಸಕಾರಣವಾಗಿ ಅವುಗಳ ವಿಶ್ಲೇಷಣೆಯನ್ನು ನೀಡುತ್ತ ಹೋದ ರೀತಿ ನೋಡುಗರ ಮನಸ್ಸಿಗೆ ಹಿಡಿಸಿತು. ಅವನ ಅಂತರಂಗದ ಮಾತುಗಳೆಲ್ಲ ಧಾರಾಕಾರವಾಗಿ ಹರಿಯುತ್ತಾ ಹೋದಾಗ ಅವನ ಪಾತ್ರ ಗಟ್ಟಿಗೊಳ್ಳುತ್ತ ಹೋಯಿತು. ಮಾತಿನ ಚಾಟಿಯಿಂದ ತತ್ತರಿಸುವ ಭೀಮ, ಧರ್ಮರಾಯ, ಕೃಷ್ಣ ಮುಂತಾದ ಪಾತ್ರಗಳುಸಬೂಬಿನ ಉತ್ತರಗಳನ್ನು ನೀಡಿದವು. ವಿಶಿಷ್ಟವಾಗಿ ರೂಪಿಸಿದ ಪ್ರೇತಗಳು ಸುಯೋಧನನನ್ನು ಕಾಡುವ ದೃಶ್ಯ ಕುತೂಹಲಕರವಾಗಿ ಸಾಗುತ್ತ ಆಸಕ್ತಿ ಕೆರಳಿಸಿತ್ತು. ಕೃಷ್ಣಶರ್ಮರ ನಿರ್ದೇಶನ  ಬಿಗಿಯಾಗಿತ್ತು.

ಶಕುನಿಯಾಗಿ ವಿ. ರಂಗನಾಥರಾವ್ ಪಾತ್ರವನ್ನು ಅರ್ಥ ಮಾಡಿಕೊಂಡು, ವಿಕಟತೆ ಹಾಗೂ  ವಿಡಂಬನೆ ತೋರುತ್ತ ಪಕ್ವ ಅಭಿನಯ ನೀಡಿದರು. ಕೃಷ್ಣನಾಗಿ ಪ್ರದೀಪ್ ಅಂಚೆ ಸಮತೋಲನದಿಂದ ನಟಿಸಿದರು.  ಕರ್ಣನಾಗಿ ಅಶ್ವತ್ ಕುಮಾರ್ ಅವರ ನಟನೆ ಭಾವಪೂರ್ಣವಾಗಿ  ಮನಮುಟ್ಟಿತು. ನಾಟಕದ ಮುಖ್ಯಪಾತ್ರ ಸುಯೋಧನನಾಗಿ ನರೇಂದ್ರ ಕಶ್ಯಪ್ ಅವರು ಪಾತ್ರದೊಳಗೊಂದಾಗಿ ಚೆನ್ನಾಗಿ ಲವಲವಿಕೆಯಿಂದ ಅಭಿನಯಿಸಿದರು. ಭೀಮ (ರಾಘವೇಂದ್ರ ), ಧರ್ಮರಾಯ (ಅಶೋಕ್.ಬಿ.), ದ್ರೋಣ ( ಪ್ರಕಾಶ್) ಮತ್ತು ಭೀಷ್ಮ( ಕುಲದೀಪ್ ಸೋಮಯಾಜಿ  ) ಕೂಡ ಹದವಾಗಿ ನಟಿಸಿದರು.

ಗಮನಾರ್ಹ ಅಂಶವೆಂದರೆ ಅಭಿನಯಿಸಿದ ಎಲ್ಲ ನಟರ ಸ್ಪಷ್ಟ ಉಚ್ಚಾರ, ಸಂಭಾಷಣೆ ಹೇಳುವ ಧಾಟಿ ಇಷ್ಟವಾಯಿತು. ಇದನ್ನು ಬಿಗಿಬಂಧದಿಂದ ನಿರ್ದೇಶಿಸಿ, ಹೊಸ ವಿನ್ಯಾಸದಿಂದ ನಾಟಕ ರೂಪಿಸಿದ  ನಾಟಕಕಾರ ಕೃಷ್ಣ ಶರ್ಮರ ಬಧ್ಧತೆ ಹಾಗೂ ಶ್ರಮ ನಾಟಕದಲ್ಲಿ ಎದ್ದುಕಂಡಿತು.

Related posts

ಅತ್ಯದ್ಭುತವಾಗಿ ಮೂಡಿಬಂದ `ಸುಯೋಧನ’

YK Sandhya Sharma

ಅತ್ಯದ್ಭುತವಾಗಿ ಮೂಡಿಬಂದ `ಸುಯೋಧನ’

YK Sandhya Sharma

ಬೆಂಗಳೂರು ನಾಗರತ್ನಮ್ಮನ ಹೃದಯಸ್ಪರ್ಶೀ ಚಿತ್ರಣ

YK Sandhya Sharma

Leave a Comment

This site uses Akismet to reduce spam. Learn how your comment data is processed.