Image default
Short Stories

ಆಗಂತುಕರು

ಮಣ್ಣನ್ನು ಬುಟ್ಟಿಗೆ ಗೋರುತ್ತಿದ್ದ ಜಬ್ಬ, ತಟ್ಟನೆ ಪಿಕಾಸಿಯ ಕೈಬಿಟ್ಟು ಹುಬ್ಬಿಗೆ ಕೈ ಹಚ್ಚಿ ದೃಷ್ಟಿಯನ್ನು ಕೊಳವೆ ಮಾಡಿನೋಡಿದ. ಬಣ್ಣ ಬಣ್ಣದ ಅಂಗಿಗಳು!…ಬಡಗಣ ತೋಪಿಗುಂಟ ಕಾಡಹಾದಿಯಲ್ಲಿ ಮನುಷ್ಯ ಧ್ವನಿಗಳ ಗುಂಗುರು!

`ಬಂದ್ನಪ್ಪೋಯ್…’-ಎಂದು ಸೌದೆ ಕಡಿಯುತ್ತಿದ್ದ ಸಿಂಗ್ರನಿಗೆ ತಿಳಿಸಿ, ಧೊಪ್ಪನೆ ಬುಟ್ಟಿಯನ್ನು ಅಲ್ಲೇ ಕುಕ್ಕಿ, ಜಬ್ಬ ಹಳ್ಳಿಯ ಕಡೆ ದೌಡಾಯಿಸಿದ.

ಕುಲಕರ್ಣಿಯವರು ಅದೇ ತಾನೆ ಊಟ ಮುಗಿಸಿ ವೀಳ್ಯವನ್ನು ದವಡೆಗೊತ್ತರಿಸುತ್ತ ಅಂಗಳದ ಜಗುಲೀಕಟ್ಟೆಯ ಮೇಲೆ ಕುಳಿತಿದ್ದರು. ಕೆಳಗಡೆ ಬಪ್ಪ, ಅವರ ಹಿಮ್ಮಡಿ, ಪಾದಗಳನ್ನು ಒತ್ತುತ್ತ ಕುಕ್ಕುರುಗಾಲಲ್ಲಿ ಕುಳಿತುಕೊಂಡಿದ್ದ.

ಪಾಟೀಲರ ಹಿಗ್ಗು ಅವರ ಎರಡೂ ಕಿವಿಗಳನ್ನೂ ಸೇರಿಸುವಂತೆ ಹಲ್ಲುಗಳ ಸರಪಳಿಯನ್ನು ನೇಯ್ದಿತ್ತು.

`ಭೋಜ್ನ ಅಂದ್ರ ಇದು ನೋಡಿ ರಾಯ್ರೇ ‘-ಡಬರಿಯಂಥ ತಮ್ಮ ಹೊಟ್ಟೆಯ ಮೇಲೆ ನಯವಾಗಿ ಅವರ ಕೈ ಆಡಿತು.

`ಅಯ್ನೋರ ಮನ್ಯಾಗ, ಹಳ್ಳಿಗೆ ಹಳ್ಳಿಯೇ ಉಂಡು ನಲೀತಾರ ನೋಡ್ ಧಣೀರಾ’-ಕಂಬದ ಮೂಲೆಯಲ್ಲಿ ಕೈ ಹೊಸೆಯುತ್ತ ನಿಂತಿದ್ದ ಅಪ್ಪು ಹಲ್ಲು ಕಿರಿದ.

ಪಾಟೀಲರು `ಢರ್’ ಎಂದು ತೇಗಿದರು.

ಜಗುಲಿಯ ಆಚೆ ಬದಿಯಲ್ಲಿ ಕುಲಕರ್ಣಿಗಳ ಹೆಂಡತಿ, ಆಳುಮಕ್ಕಳನ್ನು ಸಾಲಾಗಿ ಕೂಡ್ರಿಸಿ ಉಣಬಡಿಸುತ್ತಿದ್ದರು.

`ಧಣ್ಯಾರೇ, ನನ್ನ ಮಗಳ ಲಗ್ನದ ಹೊತ್ಗೆ ಒಂದೀಟು ಧಾನ್ಯ ಹೊಡೆಸಿಕೊಡ್ರಲ್ಲ’-ಅಪ್ಪುವಿನ ಗಿಂಜುವ ದನಿಗೆ ಪಾಟೀಲರು ನಗುತ್ತ, `ಆತು ಬುಡು’ ಎಂದು, ತಮ್ಮ ತೊಡೆಯೇರಿ ಕುಳಿತ ಕುಲಕರ್ಣಿಯವರ ಕಿರೀಕೂಸಿನ ಮಂಡೆ ನೇವರಿಸಿದರು.

ಅಷ್ಟರಲ್ಲಿ ಮೇಲುಸಿರು ಕಕ್ಕುತ್ತ ಅಲ್ಲಿಗೆ ಓಡಿಬಂದ ಜಬ್ಬ, ಜಗುಲಿಯಿಂದ ನಾಲ್ಕಾರು ಮಾರು ದೂರದಲ್ಲೇ ಕೈಜೋಡಿಸಿ ನಿಂತ ಉದ್ವೇಗದ ಭಾವವನ್ನು ಒಸರಿಸುತ್ತ.     ನಿಧಾನವಾಗಿ ಅವನ ತುಟಿಗಳು ಬಿಚ್ಚಿಕೊಂಡು ಮತುಗಳು ತುಂಡು ತುಂಡಾಗಿ ಹೊರಜಾರಿದವು.

`ಹೊರಗಿಂದ್ಯಾರೋ ಮಂದಿ ಬರಾಕ್ ಹತ್ಯಾರೇ’

ತಟ್ಟನೆ ಕುಲಕರ್ಣಿ ಮತ್ತು ಪಾಟೀಲರು ಮೇಲೆದ್ದರು, ಮುಖಗಳಲ್ಲಿ ಆಶ್ಚರ್ಯ ಚಿಮ್ಮಿಸುತ್ತ, ಗರಿಗರಿಯಾಗಿದ್ದ ತಮ್ಮ ಬಿಳೀ ಮೇಲಂಗಿಗಳನ್ನು ಸಟ್ಟನೆಳೆದು ಸರಿಪಡಿಸಿಕೊಂಡು, ಬಾಯಲ್ಲಿನ ಕವಳವನ್ನು ಪಕ್ಕಕ್ಕೆ ತುಪ್ಪಿ, ಮರುಮಾತನಾಡದೆ ಠೀವಿಯಿಂದ ಜಬ್ಬನನ್ನು ಅನುಸರಿಸಿದರು.

ದೆಮ್ಮರಡಿಯ ಹಾಸು ಬೀಸು, ಒಂದೂವರೆ ಮೈಲಿಯೊಳಗೆ ಮುದುಡಿಕೊಂಡು, ಸುತ್ತ ದುರ್ಭೇದ್ಯ ಕಾಡಿನ ಅಂಚನ್ನು ನೇಯ್ದುಕೊಂಡಿತ್ತು. ಅದೊಂದು ಪುಟ್ಟ ಹಳ್ಳಿ. ಅಲ್ಲಲ್ಲಿ ಚೆದುರಿಕೊಂಡ ಮನೆಗಳು, ಹೊರಸುತ್ತಿನಲ್ಲಿ ಹೊಲ,ಗದ್ದೆ-ತೋಟಗಳು….ಅದರ ಸೆರಗಿಗೆ ನೀರ ಕಾಲುವೆ, ಅದರಾಚೆ ಒತ್ತಾದ ಕಾಡು. ಕಾಲುವೆ ದಾಟಿ, ಕಾಡಿನ ಭಯಂಕರ ಬಸಿರಲ್ಲಿ ಹೆಜ್ಜೆಯಿರಿಸಿ, ಕ್ರೂರಮೃಗಗಳನ್ನು ಹಾದು,ಅದರಾಚೆ ಅರಿಯುವ ಪ್ರಯತ್ನ, ದೆಮ್ಮರಡಿಯವರ ಅಳವಿಗೆ ಮೀರಿದ್ದು. ಆ ಪ್ರಯತ್ನದ ಕುತೂಹಲವಾಗಲಿ,ಇಚ್ಛೆ-ಅಗತ್ಯಗಳಾಗಲೀ ಅವರನ್ನು ಬಾಧಿಸಿರಲಿಲ್ಲ. ಹೀಗಾಗಿ ದೆಮ್ಮರಡಿ ತನ್ನಷ್ಟಕ್ಕೆ ತಾನು ಸಮೃದ್ಧ-ಸಂತೃಪ್ತ.

ಪಂಚೆಯ ಚುಂಗನ್ನು ಕೈಯಲ್ಲಿ ಹಿಡಿದು ಜಬ್ಬನ ಹಿಂದೆ ನಡೆದ ಪಾಟೀಲರು, ದಿಬ್ಬವೇರಿ ಹುಬ್ಬಿಗೆ ಕೈ ಹಚ್ಚಿ `ಹೌದಲಾ, ಯಾರೋ ಬರಾಂಗಿದೆ!’ ಎಂದು ಉದ್ಗರಿಸುವ ವೇಳೆಗಾಗಲೇ, ಈ ಸುದ್ದಿ ಬಿರ್ರನೆ ಸುತ್ತ ಎರಚಿ ಇಡೀ ಹಳ್ಳಿಯೇ ಅವರ ಹಿಂದೆ ನೆರೆದಿತ್ತು.

`ಹೊಸ ಮಂದಿ ಬರಾಕ್ ಹತ್ತಾರಂತ!’- ಕಾಲಂದಿಗೆ, ಬಳೆ-ಕಡಗಗಳು ಪಿಸುಗುಟ್ಟಿದವು. ಅರ್ಧ ಕೆಲಸದಲ್ಲೇ ಧಾವಿಸಿಬಂದಿದ್ದ ಹೈಕಳೆಲ್ಲ ಕೊಡಲಿ, ಪಿಕಾಸಿ, ಬುಟ್ಟಿಗಳನ್ನು ಹೊತ್ತುಕೊಂಡೇ ದಿಬ್ಬವೇರಿ ಬಡಗಣ ದಿಕ್ಕಿಗೆ ಕಣ್ಣು ಅಂಟಿಸಿ ನಿಂತಿದ್ದರು.

ದೂರದಲ್ಲಿ ಸಣ್ಣದಾಗಿ ಕಾಣುತ್ತಿದ್ದ ಬಣ್ಣದ ಚುಕ್ಕೆಗಳು, ಮನುಷ್ಯರಾಕಾರವಾಗಿ ಹತ್ತಿರ ಹತ್ತಿರ ಬರತೊಡಗಿದವು. ಹಳ್ಳಿಯ ಮಂದಿ ಕಣ್ ಕಣ್ ಬಿಟ್ಟು ದಿಟ್ಟಿಸಿತು. ಶಿಸ್ತಾಗಿ ಧರಿಸಿದ್ದ ಉಡುಪು, ನುಣ್ಣಗೆ ಬಾಚಿದ ಕೂದಲು, ಘಮ್ಮೆನ್ನುವ ಪರಿಮಳ ಕಾಲಿಕ್ಕಿದವು….. ಹತ್ತಿರ ಬಲು ಹತ್ತಿರ ಬಂದ ಹಲ್ಲುಕಿರಿದ ಮುಖಗಳು, ಮುಖ್ಯಪ್ರಾಣನಂತೆ ಕೈಜೋಡಿಸಿ ನಿಂತವು.

ಪಾಟೀಲರು ಹಾರ್ದಿಕ ನಗೆ ಚೆಲ್ಲಿ-`ಎತ್ಲಾಗಿಂದ?’ ಎಂದು ವಿಚಾರಿಸಿಕೊಳ್ಳುತ್ತ ಅವರನ್ನು ಹಳ್ಳಿಯೊಳಗೆ ಕರೆದುಕೊಂಡು ಹೊರಟಾಗ ಅವರ ಹಿಂದೆ ದೊಡ್ಡ ಮೆರವಣಿಗೆ. ದೇಸಾಯಿಯವರ ಮನೆಯಂಗಳದಲ್ಲಿ ಕಿಕ್ಕಿರಿದ ಜನಜಾತ್ರೆ!

ಅಡವಿಯಿಂದ ನಡೆದು ಬಂದವರದು ಸುಮಾರು ಹದಿನೈದು-ಇಪ್ಪತ್ತು ಮಂದಿಯ ಗುಂಪು. ಜಗುಲಿಯ ಕಟ್ಟೆಯ ಮೇಲೆ ಪಂಚಾಯಿತಿ ಸಭೆಯೊಡನೆ ಈ ಗುಂಪು ಮಂಡಿಸಿದಾಗ, ಕಂಬಗಳ ಮರೆಯಲ್ಲಿ, ಕಿಟಕಿಯ ಓರೆಯಲ್ಲಿ ಹೆಂಗೆಳೆಯರ ಮೂಗುತಿಗಳು.

ಆ ಗುಂಪಿನ ಮುಖಂಡ, ತಾವು ಬಂದ ಉದ್ದೇಶವನ್ನು ವಿವರವಾಗಿ ತಿಳಿಸಿದಾಗಲೇ ದೆಮ್ಮರಡಿಯವರ ಪ್ರಜ್ಞೆಗೆ ಹೊಸದೊಂದು ವಿಚಾರ ಥಾಡಿಸಿದ್ದು. ಒಂದು ತಾಸಿಗೂ ಮೀರಿ ಸಾಗಿದ ಅವರ ಭಾಷಣದ ಸಾರ, ಅರ್ಥ ಅಲ್ಲಿ ಹರಡಿನಿಂತ ಮಂದಿಯ ಮಂಡೆಯೊಳಗೆ ನಿಧಾನವಾಗಿ, ಪದರಪದರವಾಗಿ ಇಳಿಯತೊಡಗಿತು. ಬಿಚ್ಚಿದ ಕಿವಿಯೊಳಗೆ ಹೊಸ ವಿಷಯ ಹನಿ ಹನಿಯಾಗಿ ತೊಟ್ಟಿಕ್ಕಿತು. ಆದರೂ ಸಂಪೂರ್ಣ ಅರ್ಥವಾಗದೆ ಪಿಳಿಪಿಳಿಗುಡುವ ಕಣ್ರೆಪ್ಪೆಗಳು.

ಎದುರಿಗೆ ನೆಟ್ಟಿದ್ದ ಹಾರಾಡುವ ಬಣ್ಣದ ಬಟ್ಟೆ, ಆಸೆ, ಆಮಿಷ-ಭರವಸೆಗಳನ್ನು ತೇಲಿಬಿಟ್ಟ ಬಂದವರ ಸಿಹಿನುಡಿಗಳೆಲ್ಲ ದೆಮ್ಮರಡಿಯ ಜನರಿಗೆ ವಿಸ್ಮಯ ಚೆಲ್ಲಿ ಮೂಕರನ್ನಾಗಿಸಿತು. ಕಿವಿಗಳಿಗೆ ಎಂದೂ ಕೇಳಿರದ ಜೇನ ಸೊಬಗಿನ ಸಿಂಚನ. ಬೆಪ್ಪಾಗಿ ಕುಳಿತವರ ಬಾಯ್ಗಳು ಬಿಟ್ಟ ಹಾಗೇ ಬಿರಿದಿದ್ದವು!…ಸಭೆ ಚೆದುರಿದರೂ ಜನ ನೆಲಕ್ಕೆ ಕಚ್ಚಿಕೊಂಡವರಂತೆ ಹಾಗೇ ಅಂಟಿ ಕೂತಿದ್ದರು. ಬಂದ ಆಗಂತುಕ ಗುಂಪಿನವರು ಇಬ್ಬಿಬ್ಬರು ಒಂದೊಂದು ಗುಂಪಾಗಿ ಕವಲೊಡೆದು, ಹಳ್ಳಿಯ ಸೀಳೊಳಗೆ ಮರೆಯಾದರು.

ಬಂದವರು ಹಳ್ಳಿಯ ಉದ್ದಗಲಕ್ಕೂ ಸಂಚರಿಸಿ ಕಣ್ಣಲ್ಲೇ ಅಳತೆ ಹಾಕಿದರು. ತಮ್ಮ ತಮ್ಮೊಳಗೆ ಪಿಸುನುಡಿಗಳಲ್ಲಿ ಆಂಗಿಕ ಸನ್ನೆಗಳಲ್ಲಿ ಮಾತನಾಡಿಕೊಳ್ಳುತ್ತ ಮುಚ್ಚಿದ ಮನೆಯ ಬಾಗಿಲುಗಳನ್ನು ಬಡಿದರು. ಓಣಿಯ ಮೂಲೆ ಮನೆಯ ಮರದ ಬಾಗಿಲು ಕಿರ್ರೆನ್ನುತ್ತ ಸರಪಣಿಯ ಸದ್ದಿನೊಂದಿಗೆ ಮೆಲ್ಲನೆ ತೆರೆದುಕೊಂಡಿತು. ಜಗುಲಿಯ ಮೇಲೆ ಕಂಬಳಿಕುಪ್ಪೆಯಲ್ಲಿ ಮುದ್ದೆಯಾಗಿ ಮಲಗಿದ್ದ ಅಜ್ಜ ಮುಲುಕುತ್ತ ಮೇಲೆದ್ದವನೆ ಹೊಸ ಮುಖಗಳನ್ನು ಕಂಡು ಹಿಮ್ಮೆಟ್ಟಿದ.

ಬಂದವರದು ನಯವಾದ ದನಿ…ಮುಖದಲ್ಲಿ ಮಾರ್ದವತೆ…ತುಟಿಯಂಚಿನಲ್ಲಿ ಕಿರುನಗು!…`ಅಜ್ಜಾ, ನಾವು ಅಜ್ಜಾ’- ಎನ್ನುತ್ತ ಆತ್ಮೀಯವಾಗಿ ಅಜ್ಜನನ್ನು ಎತ್ತಿ ನೇರವಾಗಿ ಗೋಡೆಗೊರಗಿ ಕೂಡಿಸಿ, ಅವನ ಪಕ್ಕದಲ್ಲಿ ವಿನಯದ ಭಂಗಿಯಲ್ಲಿ ಮುದುರಿ ಕೂತು, `ನಿಮ್ಮ ಸೇವೆಗೋಸ್ಕರ ರಾಜಧಾನಿಯಿಂದ ಬಂದಿದ್ದೀವಜ್ಜಾ’ ಎಂದು ಒಬ್ಬ ನುಡಿಯುತ್ತಿದ್ದರೆ, ಹಜಾರದಲ್ಲಿ ಕುಟ್ಟಾಣಿಯಲ್ಲಿ ಕೈಯಾಡಿಸುತ್ತಿದ್ದ ಮುದುಕಿಯ ಬಳಿ ಇನ್ನೊಬ್ಬ ವಿಷಯವನ್ನು ವಿಸ್ತರಿಸುತ್ತಿದ್ದ.

ಬಾವಿಯಕಟ್ಟೆಯ ಬಳಿ ವಿನಯದಿಂದ ಕೈಮುಗಿದು ನಿಂತವರು ಕೆಲವರು. ಹರೆಯದ ಯುವತಿಯರು ತಮ್ಮ ಉಬ್ಬಿದೆದೆಯ ಮೇಲೆ ಅಸ್ತವ್ಯಸ್ತವಾಗಿದ್ದ ಸೆರಗನ್ನು, ಸೊಂಟದ ನೆರಿಗೆಯನ್ನು ಸರಿಪಡಿಸಿಕೊಂಡು, ಕಾಲಂದಿಗೆಯನ್ನೇ ದಿಟ್ಟಿಸುತ್ತ ನಾಚಿ ತಲೆಬಾಗಿಸಿ ಅವರ ಮಾತುಗಳನ್ನು ಆಲಿಸುತ್ತಿದ್ದರು. ಕೆರೆಯ ದಂಡೆಯ ಮೇಲೆ ಸೀರೆಗಳನ್ನು ಕಸುಕುತ್ತಿದ್ದ ನಡುವಯಸ್ಸಿನ ಮಹಿಳೆಯರೂ, ಪರಪುರುಷರ ಆಗಮನದಿಂದ ಗಲಿಬಿಲಿಗೊಂಡು ಧಢಕ್ಕನೆ ಮೇಲೆದ್ದು, ಮುಜುಗರದಿಂದಲೋ, ನಾಚಿಕೆಯಿಂದಲೋ ಕೆಂಪಾಗಿದ್ದರು. ಹೊಲದಲ್ಲಿ ಮತ್ತಷ್ಟು ಆಗಂತುಕ ಜನ, ನಾಟಿ ಮಾಡುತ್ತಿದ್ದ ಆಳುಗಳು ಎದ್ದು ಬಗ್ಗಿದ ಹಾಗೆಲ್ಲ ಅವರ ಜೊತೆ ಬಗ್ಗಿ ಏಳುತ್ತ, ಏನೋ ಗಹನವಾಗಿ ಅವರ ಕಿವಿಗಳಲ್ಲಿ ಉಸುರುತ್ತಲೇ ಸಾಗಿದ್ದರು.

ರಾತ್ರಿ ನಿಶ್ಶಬ್ದದೊಳಗೆ ತೂಕಡಿಸುತ್ತಿದ್ದ ದೆಮ್ಮರಡಿಗೆ ಇಂದು ಗೆಜ್ಜೆ ಕಟ್ಟಿದಂತಾಗಿತ್ತು. ಒಳಗೊಳಗೇ ಕುಸುಪಿಸು ವಿನಿಮಯ-ಸಡಗರ, ಭರಭರನೆ ಓಡಾಟ. ನೆಲಕ್ಕೆ ತಲೆ ತಾಗಿಸುತ್ತಿದ್ದಂತೆ ಕೊರಡಾಗುತ್ತಿದ್ದವರಿಗೆ, ಇದೀಗ ತಮ್ಮ ಮೆದುಳಿನ ಅಸ್ತಿತ್ವ ನೆನಪಿಗೆ ಬಂದಂತೆ ತಲೆಗೆ ಕೆಲಸ ಹಚ್ಚಲು ಸುರುವಾಗಿದೆ. ತುಟಿ,ಗಲ್ಲ,ತಲೆ, ಮಂಡಿಗಳ ಮೇಲೆ ಕೈ-ಗದ್ದಗಳನ್ನೂರಿ, ಪಿಳಿಪಿಳಿ ಕಣ್ಣು ಪಿಳುಕಿಸುತ್ತ ಹೊಸ ಅಲೆಯ ಯೋಚನೆಯ ಲಹರಿಯೊಳಗೆ ಮೀಯುತ್ತ ಚಿಂತಿಸತೊಡಗಿದ್ದರು ಹಳ್ಳಿಯ ಹೈಕಳು.

ಇಂದು, ಹಿಂದಿನ ಮಿಕ್ಕೆಲ್ಲ ಬೆಳಗುಗಳಿಗಿಂತ ಭಿನ್ನವಾದ ಹೊಸರಂಗಿನ ಬೆಳಗನ್ನು ತೊಟ್ಟುಕೊಂಡಿತ್ತು ದೆಮ್ಮರಡಿ. ಮೂಡಲು ಕೆಂಪಾಗುವ ಮುನ್ನವೇ ಕಾಡಿನ ಹೊಕ್ಕಳಿಂದ ಮಿಡಿದು ಬರಬಹುದಾದ ಯಾವುದರದೋ ಕುತೂಹಲದ ನಿರೀಕ್ಷಣೆ. ನೋಟದಲ್ಲಿ ಅಚ್ಚರಿಯ ಕೆನೆ! ಮೈಯಲ್ಲಿ ಎಂದೂ ಕಾಣದ ನವಪುಲಕ!

ನಾಲ್ಕೇ ದಿನಗಳಲ್ಲಿ ದೆಮ್ಮರಡಿಯ ಜನಸಂಖ್ಯೆಗಿಂತ ಮುಮ್ಮಡಿ ಜನ, ಹೊರಗಿನಿಂದ ಬಂದವರು ದೆಮ್ಮರಡಿಯಲ್ಲಿ ತುಂಬಿಹೋದರು! ರಾಜಧಾನಿಯಿಂದ ದೆಮ್ಮರಡಿಯನ್ನು   ಬೇರ್ಪಡಿಸಿದ್ದ ದುರ್ಗಮಕಾಡು, ಹಳ್ಳ ಕೊಳ್ಳ-ಬಂಡೆಗಳನ್ನು ಸವರಿ ಸಮಮಾಡುವುದರಿಂದ ಪ್ರಾರಂಭವಾಗಿ, ನೇರಸಂಪರ್ಕದ ಕಾಲುಹಾದಿಗಳನ್ನು ಶೀಘ್ರದಲ್ಲೇ ಸಮೆಯಲಾಯ್ತು.  ಎಡ ಬಲದಲ್ಲಿ ತಡಕಾಡುತ್ತಿದ್ದ ಸೊಪ್ಪು ಸದೆಗಳು, ಮುಳ್ಳುಕಂಟಿಗಳನ್ನು ನುಣ್ಣಗೆ ಸವರಿ, ತೇಪೆ ಹಚ್ಚಿದಂತೆ ದೆಮ್ಮರಡಿಯನ್ನು ದೊಡ್ಡ ರಸ್ತೆಗೆ ಬೆಸೆಯಲಾಯ್ತು.

ತೂಬು ಒಡೆದಂತೆ ದುಬುದುಬು ಮಂದಿಸಾಲು, ಪಟ್ಟಣದಿಂದ ಕಾಲುದಾರಿಯೊಳಗೆ ಹರಿದುಬರಲಾರಂಭಿಸಿತು. ಮೂಡಣದಲ್ಲಿ ಸೂರ್ಯ ಕಣ್ಣುಜ್ಜಿ ಏಳುವುದರಲ್ಲಿ ಗಿಜಿಗಿಜಿ ರಾಶಿ   ಜನ…ವಟಗುಟ್ಟುವ ಮಾತುಗಳ ಗುಜು ಗುಜು ಸದ್ದು ಅಲೆಯಲೆಯಾಗಿ ಓಣಿ ಓಣಿಗಳಲ್ಲಿ ಇಟ್ಟಾಡಿದವು. ಅತ್ತಿಂದಿತ್ತ ಸುಮ್ಮನೆ ಅಲೆದಾಡುತ್ತಿದ್ದ ಮಂದಿಯ ವೈಖರಿ ಕಂಡು ಮೆತ್ತಿಕೊಂಡಿದ್ದ ಹಳ್ಳಿಗರ ಜಡತುಟಿಗಳು ಮೆಲ್ಲ ಮೆಲ್ಲಗೆ ಸುಲಿಯತೊಡಗಿದವು. ಕಣ್ಣು ಹರಿಸಿದಲ್ಲೆಲ್ಲ ಗುಪ್ಪೆ ಗುಪ್ಪೆ ಜನಗಳು, ಗಹನವಾಗಿ ದಿಟ್ಟಿಸುವ ನೋಟಗಳು, ಮಾತಿನ ಕಂತೆಗಳು…

ಒಟ್ಟಾರೆ ದೆಮ್ಮರಡಿಯ ಒಡಲಲ್ಲಿ ಕೌತುಕ ಹೆಪ್ಪುಗಟ್ಟಿತ್ತು!…

ನಿದ್ದೆ ಕದ್ದಂತಾಗಿ ಹಳ್ಳಿಯ ಓಸೂ ಮಂದಿ ಹೊದ್ದಿದ್ದ ಕಂಬಳಿಕುಪ್ಪೆಯ ಸಮೇತ ಹೊರಗೋಡಿ ಬಂದಿದ್ದರು. ಅತ್ತಿತ್ತ ಎತ್ತೂ ಜನಗಳೇ…ರಸ್ತೆಗುಂಟ ನಿಂತವರು ಗಂಭೀರವಾಗಿ ಹುಬ್ಬುಹೆಣೆದು ಹಾರಿಸುತ್ತ, ಅದ್ಭುತಭಾವವನ್ನು ತೊಟ್ಟು ಮಾತನಾಡುತ್ತಿದ್ದರೆ, ಸುತ್ತ ಬಿರಿದ ಬಾಯ್ಗಳು. ಜೋಭದ್ರ ಮೋರೆಗಳು, ಬೆಪ್ಪು ಪ್ರಶ್ನೆಗಳು!

ಯಾರೂ ನಿಂತಲ್ಲಿಂದ ಕದಲಲಿಲ್ಲ. ಕೆಲಸಗಳೆಲ್ಲ ಅರ್ಧಂಭರ್ಧ ನಿಂತುಹೋಗಿದ್ದವು. ನಾಟಿಯಾಗದ ಸಸಿಗಳೆಲ್ಲ ಬೇರು ಕಳಚಿಕೊಂಡಂತೆ ಕಟ್ಟುಕಟ್ಟುಗಳಲ್ಲಿ ಗುಂಪಾಗಿ ಗದ್ದೆಗಳ ಮೈಯಲ್ಲಿ ನಿಷ್ಪಂದವಾಗಿ ಮಲಗಿವೆ. ಮರಕ್ಕೊರಗಿದ ಕೊಡಲಿಗಳು, ಮೂಕ ಸಂಭಾಷಣೆಯಲ್ಲಿ ನಿರತವಾಗಿದ್ದ ಎತ್ತು-ನೇಗಿಲುಗಳು, ಧ್ಯಾನಾರೂಢವಾಗಿದ್ದ ಕಪಿಲೆ, ರಾಟೆಗಳು, ಕಡೆಗೆ ಜುಳು ಜುಳು ಹರಿಯುತ್ತಿದ್ದ ಕಾಲುವೆ ನೀರೂ ಕೂಡ ಸ್ತಬ್ಧವಾಗಿ ಆಗಂತುಕರ ಕಲರವವನ್ನು ವಿಸ್ಮಯದಿಂದ ಆಲಿಸುತ್ತಿದ್ದವು.

`ಅಯಾ ನಮಗೇನ್ ಕಮ್ಮಿಯಾಗದ…ಭೇಷಾಗಿದ್ದೀವಿ ಬಿಡ್ರಲ…ನಮಗ್ಯಾಕ್ ಇಲ್ಲದ ಉಸಾಬರಿ ತೆಗೀರಿ…’-ಎಂದು ಉದಾಸೀನವಾಗಿ ಮುಖ ಸಿಂಡರಿಸುತ್ತ ಮುಂಡಾಸು ಒದರಿ ಮೇಲೇಳುವ ಪ್ರಯತ್ನದಲ್ಲಿದ್ದ ಒಂದಿಬ್ಬರನ್ನು ಒತ್ತಿ ಕೂಡಿಸುತ್ತ, ಅವರ ಮನವೊಲಿಸುವ ಜಾಣ್ಮೆ ಬಂದವರಿಗೆ ಕರಗತವಾಗಿತ್ತು.

ಕಣ್ಣು ಹಾಸಿದಲೆಲ್ಲ ಕಾಮನಬಿಲ್ಲುಗಳು…ದೆಮ್ಮರಡಿಯ ನೆಮ್ಮದಿಯನ್ನು ಕದಡಿದಂತೆ ಗುಡುಗು-ಸಿಡಿಲು, ವೀರಾವೇಶದ ಚುನಾವಣಾ ಭಾಷಣಗಳು…ಅಲ್ಲಲ್ಲಿ ಗುಡ್ಡೆ ಗುಡ್ಡೆಯಾಗಿ ಕುಳಿತ ಹಳ್ಳಿಗರ ಮಧ್ಯೆ ಟಿಸಿಲಂತೆ ಸೆಟೆದುನಿಂತ ಕಲ್ಪವೃಕ್ಷ-ಕಾಮಧೇನುಗಳು. ವಿವಿಧ ಆಶೋತ್ತರಗಳ ಕೊಡುಗೈ ಸುರಿ. ಇದ್ದಕ್ಕಿದ್ದ ಹಾಗೆ ತಮ್ಮಲ್ಲೇನೋ ತುಂಬಿಕೊಂಡ ಅನುಭವ ಹಳ್ಳಿಗರಿಗೆ. ಜೀವಂತಿಕೆ, ಜಾಗೃತಿ ನರನಾಡಿಗಳಲ್ಲಿ ಮಂದಗತಿಯಲ್ಲಿ ಪ್ರವಹಿಸಲಾರಂಭಿಸಿದಂತೆ ಭಾಸ…ಬುದ್ಧಿ ,ಮನಸ್ಸುಗಳು ಮಿಸುಕಾಡತೊಡಗಿದ್ದವು.

ದೆಮ್ಮರಡಿಯ ಅಷ್ಟದಿಕ್ಕುಗಳೂ ಎಂಟು ಬಣ್ಣ ತಳೆದು, ಕಳೆಯನ್ನು ಏರಿಸಿಕೊಂಡಿದ್ದವು. ಹೊಲಗೇರಿಯಲ್ಲಿ ಬೀಡುಬಿಟ್ಟಿದ್ದ `ವೃಕ್ಷ’ದ ಪತಾಕೆಯನ್ನು ಕಂಡು ಲಟಿಕೆ  ಮುರಿದು `ಛತ್ರಿ’ ಗುರುತಿನವರು ಗೌಡರ ಪಾಳ್ಯದತ್ತ ಬಿರುಸು ಹೆಜ್ಜೆ ಎಸೆದರು.

ಕುಲಕರ್ಣಿಯವರ ಮನೆಯ ಎಡಬಲಗಳಲ್ಲಿ ದ್ವಾರಪಾಲಕರಂತೆ ಎರಡು ಗುಡಾರಗಳು ಬೇರೆ ಬೇರೆಯ ಚಿತ್ರಗಳನ್ನು ಅಚ್ಚೊತ್ತುಕೊಂಡು ಮುಖ ತಿರುಗಿಸಿ ಅರಚುತ್ತಿದ್ದವು. ದೆಮ್ಮರಡಿಯ ಹೃದಯಭಾಗದಲ್ಲಿ ತ್ರಿಶೂಲದಂತೆ ನೆಟ್ಟ ಮೂರು ವಿಮುಖ ಬಿದಿರು ಹಲಗೆಗಳು….ಅಕ್ಷರಾಭ್ಯಾಸದ ಮೊದಲದಿನಗಳನ್ನು ನೆನೆಯುತ್ತ, ಕಷ್ಟಪಟ್ಟು ಒಂದೊಂದನ್ನೇ ಕೂಡಿಸಿಕೊಂಡು ಓದುವುದರಲ್ಲಿ ತಡವರಿಸುತ್ತ, ಚಿತ್ರಗಳ ಕೆಳಗೆ ಬರೆದಿದ್ದುದರ ಅರ್ಥವನ್ನು ಹೀರಿಕೊಳ್ಳಲಾಗದವ ಮುಗ್ಧರನ್ನು ಮುಕುರುವ, ತಮ್ಮತ್ತ ಬಾಚಿಕೊಳ್ಳುವ ಆತುರದ ಪ್ರಯತ್ನದಲ್ಲಿದ್ದ ಆಗಂತುಕರು. ಆಗೆಲ್ಲ ಹಳ್ಳಿಜನಕ್ಕೆ ದಿಗ್ಭ್ರಮೆ!…ಚಿತ್ರಪಟಗಳ ಮೂಲಕ ಓದು ಕಲಿಸುವ ಯೋಜನೆಯೇನೋ ಇದು ಎಂಬ ಕುತೂಹಲ!

`ಬನ್ನಿ…ಬನ್ನಿ ಈ ಕಡೆ…ಹೂಂ ಇಲ್ಲಿ ನಮ್ಮ ಹತ್ತಿರ’- ಪರಸ್ಪರ ಹುರುಡಿನ ಕಿಡಿಗಣ್ಣುಗಳು.

`ನೀವು ಎಷ್ಟು ಬೇಕಾದರೂ ಶಂಖ ಊದಿ, ಪರವಾಗಿಲ್ಲ…ಆದ್ರೆ ನಮ್ಮ ಪಕ್ಷದ ಮೇಲೆ ಅಪಪ್ರಚಾರ ಮಾಡಿದರೆ ಖಂಡ ಉರುಳಿಸಿ ಬಿಡ್ತೀವಿ’- ಹಲ್ಲುಮಸೆದ ಸವಾಲುಗಳು.

ಆಗಂತುಕ ಪಕ್ಷಗಳ ಕಿತ್ತಾಟದ ಮೂಲವರಿಯದೆ, ಬೆಪ್ಪಾಗಿ ನಿಲ್ಲುವ ಹಳ್ಳಿಗರನ್ನು, ಮೂರನೆಯವರು ಸುಳಿವಿಲ್ಲದೆ ತಮ್ಮತ್ತ ಸೆಳೆದುಕೊಂಡು ಹೋಗಿದ್ದು, ಹಣಾಹಣಿಯುತ್ತ ನಿಂತ ಆ ಎರಡು ಪಕ್ಷದವರಿಗೂ ತಿಳಿಯಲಿಲ್ಲ.

ನಾಟಿಮಾಡುತ್ತಿದ್ದ ಸಿಂಗ್ರನ ಪಕ್ಕ, ಗದ್ದೆಬದುವಿನ ಮೇಲೆ ನಿಂತ ಜುಬ್ಬದ ವ್ಯಕ್ತಿ, ಅವನ ಕಿವಿಯತ್ತ ಬಾಗಿ, ಉಸಿರಿಕ್ಕದೆ ಒಂದೇಸಮನೆ ಅವನ ಕಿವಿಯಲ್ಲಿ ಉಸುರುತ್ತಲೇ ಇದ್ದ. ಅದನ್ನು ಕೇಳಿ ಜಬ್ಬನೂ ಮೈಕೊಡವಿ ನಿಂತ. ಮೀಸೆ ಹುರಿಮಾಡಿ ಹೆಗಲ ಮೇಲೆ ಕೊಡಲಿಯನ್ನೆಸೆದು, ದಾಪುಗಾಲಲ್ಲಿ ದೇಸಾಯಿಯವರ ಮನೆಯತ್ತ ಹೆಜ್ಜೆ ಹಾಕಿದ ದೇಮಾ.

ಏಕಾಏಕಿ ಎಂದೂ ಇಲ್ಲದ ವರಸೆಯಲ್ಲಿ ನಡುಮನೆಯೊಳಗೆ ಕಾಲಿಕ್ಕಿ ತಮ್ಮುದ್ದಕ್ಕೂ ಎದೆಸೆಟೆಸಿ ನಿಂತ, ಮಿದುಮನುಷ್ಯ ದುಮ್ರಿಯ ಪೊಗರುಗಣ್ಣ ನೋಟವನ್ನು          ಅಪ್ಪಳಿಸುವಂತೆ ಜೋರಾಗಿ ಅಬ್ಬರಿಸುತ್ತಿದ್ದರು ಪಾಟೀಲರು.

`ಈಟು ಧೈರ್ಯ ಬಂತಾ ನಿನಗಾ ಮಗನೆ?!’ -ಎಂದು ಮಗ್ಗುಲ ಮೂಲೆಗೊರಗಿಸಿದ್ದ ಮಚ್ಚು ಹಿರಿದು ಬೀಸುವುದರಲ್ಲಿ, ಅವರ ಹೆಂಡತಿ ಬಂದು-`ಅರೇ, ಇದೇನ್ ಮಾಡಾಕ್ ಹತ್ರಿ?!’ ಎಂದವರನ್ನು ಗಪ್ಪನೆ ತಡೆದರು. ಆಕೆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬಾರದೇ ಹೋಗಿದ್ದರೆ ದೊಡ್ಡ ಅನಾಹುತವೇ ನಡೆದುಹೋಗುತ್ತಿತ್ತು.

ಅಮ್ಮಾವರನ್ನು ಕಂಡ ಕೂಡಲೇ, ಅರ್ಧ ಅಳತೆಯಾಗಿ, ಕಣ್ಣನ್ನು ನೆಲದಲ್ಲಿ ಸಿಗಿಸಿ, ಶಿಖಂಡಿಯ ತದ್ರೂಪಿಯಾಗುತ್ತಿದ್ದ ದುಮ್ರಿ, ಇಂದು ಇನ್ನಿಲ್ಲದ ಎಗ್ಗಿನಿಂದ ಇಂಚೂ ಕುಗ್ಗದೆ ಆಕೆಯನ್ನು ಕೆಕ್ಕರಿಸಿಕೊಂಡು ನೋಡಿದಾಗ, ಆಕೆಯ ಎದೆಯಲ್ಲೂ ತಮಟೆ ಬಾರಿಸಿತು. ಕ್ಷಣವೂ ವಿಳಂಬಿಸದೆ ಆಕೆ ಸೆರಗಿನ ಚುಂಗನ್ನು ಬಾಯಲ್ಲಿ ಕಚ್ಚಿಕೊಂಡು, ಕಾಲಂದಿಗೆ ಸದ್ದು ಬಿಸಾಕುತ್ತ,ಹೆದರಿ ಕೋಣೆಯೊಳಗೆ ನುಸುಳಿಕೊಂಡು ಕದವಿಕ್ಕಿಕೊಂಡಳು.

`ನಾಳ್ನಿಂದ ನಾನ್ ನಿಮ್ ಜೀತ ಅಲ್ಲ ತಿಳೀರಿ…ನನಗಾ ಹಕ್ಕೈತಿ, ಎದಿ ಸೋಸಿ ದುಡಿಮಿ ಮಾಡೀನಿ…ನನ್ದು ಭೂಮಿ ನೆಪ್ಪಿರ್ಲಿ’

ದುಮ್ರಿಯ ಗರ್ಜನೆ ಕೇಳಿ ಆಳೆತ್ತರದ ಆಜಾನುಬಾಹು ಪಾಟೀಲರು ಅವಾಕ್ಕಾಗಿ ತತ್ತರಿಸಿಹೋದರು!

ಕುಲಕರ್ಣಿಗಳೂ ಹಾಗೇ ತತ್ತರಿಸುತ್ತಿದ್ದರು ಇತ್ತ ತೆಳ್ಳಗೆ ನಡುಗುತ್ತ!…ಎಂದೂ ಜಗುಲಿಯಿಂದ ಮಾರುದೂರಕ್ಕೆ ಅಂಗಳದ ಅಂಚಿನಲ್ಲಿ ಹಿಡಿಯಾಗಿ ನಡುಗುತ್ತಿದ್ದ ಬಪ್ಪ , ಇಂದು ಒಳಮನೆಯವರೆಗೂ…!!…ತಮ್ಮ ಕಣ್ಣನ್ನೇ ತಾವು ನಂಬದಾಗಿದ್ದರವರು.

ಸಂಧ್ಯಾವಂದನೆ ಮುಗಿಸಿ ಆಚಮನದ ನೀರನ್ನು ತುಳಸೀಕಟ್ಟೆಗೆ ಚೆಲ್ಲಿ ಒಳಬರುತ್ತಿದ್ದ, ಮಡಿಯಲ್ಲಿದ್ದ ತಮ್ಮ ಮಗ ಮಧ್ವೇಶನನ್ನು ತಡೆದು, ಮೈಲಿಗೆಗೊಳಿಸಿದ ಆಘಾತದ  ಸುದ್ದಿಯನ್ನು ಸರ್ರನೆ ಹೊತ್ತು ತಂದಿದ್ದಳು ಮಗಳು ಯಮುನಾ.

`ಅಬ್ಬಾ ನಿನ ಸೊಕ್ಕೇ ?!…ನಮ್ಮನ್ನ ಮುಟ್ತೀಯೇನೋ?…ಎಷ್ಟೋ ಧಿಮಾಕು ನಿನಗ…ಥೂ , ಕೊಳಕ’- ಎಂದು, ತಿಳುವಳಿಕೆ ಇದ್ದೋ ಇಲ್ಲದೆಯೋ ಗದರಿದ ಹದಿಹರೆಯದ ಯಮುನಳ ಸೊಕ್ಕನ್ನು ಬಪ್ಪ ಸಂಜೆ ಬಾವಿಕಟ್ಟೆಯ ಬಳಿ ಮುರಿದಿದ್ದ. ಕೆನ್ನೆಗೆ ತಾಟಿಸಿಕೊಂಡು ಬಂದಿದ್ದ ಯಮುನಳನ್ನು ಜೊತೆಗಾತಿಯರು ಹಾಸ್ಯ ಮಾಡಿದಾಗ, ಅವಳು ಬಾವಿಗೆ ಹಾರಿಕೊಳ್ಳುವವರೆಗೂ ಪ್ರಸಂಗ ಮುಂದುವರೆದಿತ್ತು. ಆಗವಳಿಗೆ ಸಮಾಧಾನ ಹೇಳಿ ಕೋಣೆಯಲ್ಲಿ ಕೂಡಿಹಾಕಿ, ಕಣ್ಣು ನೆನೆಸಿಕೊಂಡರು ತುಂಗಾಬಾಯಿ.

ತಮ್ಮ ಜೀತದಾಳುಗಳಲ್ಲಾದ ಹಟಾತ್ ಬದಲಾವಣೆ, ಬೆಳಗಿನಿಂದ ನಡೆದ ಘಟನಾವಳಿಗಳನ್ನು ಕಂಡು ಕುಲಕರ್ಣಿಗಳ ಮೈ ಕಾವೇರಿ ಏನೇನೋ ಬಡಬಡಿಸ ಹತ್ತಿದ್ದರು. ಜ್ವರದ ತಾಪದಿಂದ ನರಳುತ್ತಿದ್ದ ಅವರನ್ನು ಸುತ್ತವರೆದಿದ್ದ ಅವರ ಮಡದಿ-ಮಕ್ಕಳು ಕಂಗಾಲಾಗಿದ್ದರು.

ತತ್‍ಕ್ಷಣ ಈ ಸುದ್ದಿ ದೇಶಪಾಂಡೆಯವರನ್ನು ತಲುಪಿದರೂ, ಅವರು ಮನೆಯಿಂದ ಕದಲುವಂತಿರಲಿಲ್ಲ. ಕಾರಣ ಅವರ ಮನೆ ರಾಣಾರಂಪವಾಗಿತ್ತು. ಕೂಲಿಯಾಳುಗಳೊಬ್ಬರೂ ಕೆಲಸಕ್ಕೆ ಬಂದಿರಲಿಲ್ಲ. ಬರಲೆತ್ನಿಸಿದ ಒಂದಿಬ್ಬರನ್ನು ಉಳಿದವರು ಬರಗೊಡದೆ ಗಲಾಟೆ ಮಾಡುತ್ತಿದ್ದರು. ಅಡಿಗೆ ಸಹಾಯಕ ಹೆಂಗಸರೂ ನಾಪತ್ತೆ!…ವಿದುರ ದೇಶಪಾಂಡೆಯವರೇ ಕೈಯಲ್ಲಿ ಊದುಗೊಳವೆ ಹಿಡಿದು, ಒಲೆಯ ಮುಂದೆ ಹೊಗೆ ತುಂಬಿದ ಕಣ್ಣನ್ನು ಉಜ್ಜಿಕೊಂಡು ಉಬ್ಬಸಪಡುತ್ತ ಕೂತಿದ್ದರು.

ರಾತ್ರೋ ರಾತ್ರಿ ಅವರ ತುಂಬಿದ ಕಣಜಗಳೆಲ್ಲ ಬರಿದಾಗಿ ಅವರಿಗೆ ರಾವು ಬಡಿದಂತಾಗಿತ್ತು. ` ದ್ಯಾವ, ಲಕ್ಕಿ, ಡಾಕ, ಶಾಣ್ಯಾ’- ಎಂದು ಲಬೊಲಬೊ ಬಡಿದುಕೊಂಡರೂ ನರಪಿಳ್ಳೆಯ ಸುಳಿವೂ ಇಲ್ಲ!….ಕೈ ಕಾಲಿಗೆ ತೊಡರುತ್ತಿದ್ದ ಅಪರಿಚಿತ ಜನಗಳ ಮಧ್ಯೆ ದಾರಿಮಾಡಿಕೊಳ್ಳುತ್ತ ದೇಶಪಾಂಡೆಯವರು ತಾವೇ ಕಾಲೆಳೆದುಕೊಂಡು ಹೊಲಗೇರಿಯೊಳಗೆ ಅಳುಕುತ್ತ ಹೆಜ್ಜೆಯಿರಿಸಿ ತಮ್ಮ ಆಳುಗಳ ಹಟ್ಟಿಯ ಕದಗಳನ್ನು ತಟ್ಟಿದರು. ಕುಡುಗೋಲು, ಕತ್ತಿಹಿರಿದು ದುಬುದುಬು ಮೇಲೆಬಿದ್ದ ಆಳುಮಕ್ಕಳ ಭರಾಟೆಯನ್ನು ಕಂಡು ಹಿಮ್ಮೆಟ್ಟಿ ಗಾಬರಿಯಿಂದ ಸತ್ತೆನೋ ಬಿದ್ದೆನೋ ಎಂದು ಉಸಿರುಗಟ್ಟಿ ಹಿಂದಕ್ಕೋಡಿ ಬಂದಿದ್ದರು. ದೇಶಪಾಂಡೆಯವರ ಮನೆಯ ಸುತ್ತಲೂ ಜೀತದಾಳುಗಳ ಘೇರಾವು!!..

`ಶ್ಯಾಣ್ಯಾನಂಗ ನಮ್ ಸಾಲ ಪತ್ರಾನೆಲ್ಲ ಹಿಂದಕ್ ಕೊಟ್ರೋ ಸಮ…ಇಲ್ಲಾ ನಿಮ್ ತೆಲೀ ಉಳೀಲಿಕ್ಕಿಲ್ಲ’

ಭುಗಿಲೆದ್ದ ಯುದ್ಧದ ಕಾವಿನಿಂದ ಶಕ್ತಿ ಸೋರಿ ಕೆಳಗೆ ಕುಸಿದು ಬಿದ್ದಿದ್ದರು ದೇಶಪಾಂಡೆ.

ಇಡೀ ದೆಮ್ಮರಡಿಗೆ ದೆಮ್ಮರಡಿಯೇ ಹಾಯಿಪಟವಾಗಿ ಹೋಗಿತ್ತು. ಹಳ್ಳಿಯ ತುಂಬ ಗಲಭೆ ಹಾಸಿ ಕುಣಿಯುತ್ತಿತ್ತು. ಬೀದಿ ಬೀದಿಯಲ್ಲೂ ಮಚ್ಚು-ಕೊಡಲಿ ಹೊತ್ತು ಅಂಡಲೆಯುತ್ತಿದ್ದ ಯುವಪಡೆಗಳು. ವಿವಿಧ ವರ್ಣದ ಬಾವುಟಗಳಡಿಯಲ್ಲಿ ಬೀಡುಬಿಟ್ಟು, ಚರ್ಚಿಸುತ್ತಿದ್ದ ಪಕ್ಷ-ಪಂಗಡಗಳು. `ಶಾಂತಿ…ಶಾಂತಿ’ ಎಂದು ಮೈಕುಗಳಲ್ಲರಚುತ್ತ ಪ್ರತಿಭಟನೆಗೆ ತೊಡಗಿದ್ದ ಜನಗಳ ಬಳಿಸಾರಿ, ರಾಜಧಾನಿಯ ಮಂದಿ ಅವರಿಗೆ ಸಾಂತ್ವನ ಹೇಳಿದಷ್ಟೂ ಬೊಬ್ಬೆಯಿಟ್ಟರು ರೊಚ್ಚೆದ್ದ ಹಳ್ಳಿ ತುಡುಗರು.

ಹೊಸ ಭರವಸೆಗೆ ಹುಚ್ಚೆದ್ದಿತ್ತು ಗರಿಗೆದರಿದ್ದ ಜನತೆ. ತಮತಮಗೆ ಹಿಡಿಸಿದ ಲಾಂಛನಗಳನ್ನು ಕೈಗೆತ್ತಿಕೊಂಡು ಬೀಸುತ್ತ, ಓಣಿ ಓಣಿಗಳಲ್ಲಿ ಕೂಗುತ್ತ ಹಾಯಿಕ್ಕಿದರು. ಹತ್ತು ನೂರಾಗಿ ಒಡೆದು ಘೋಷಿಸಿ ಮುಯ್ಯಿಕ್ಕಿದರು. ರಾತ್ರಿ-ಬೆಳಗು ಸುರಿಯುವುದರಲ್ಲಿ ಮನೆಗೆರಡು ಪಕ್ಷಗಳು, ನಡುವೆ ಗೋಡೆಯೆದ್ದು ಬೇರೆ ಬೇರೆ ಬಾವುಟಗಳು ಹಾರಾಡಿದವು.

ತಿಂಗಳೆರಡರಲ್ಲಿ ದೆಮ್ಮರಡಿ, ಗುರುತು ಕಾಣಿಸದಷ್ಟು ಬದಲಾವಣೆ ಹೊದ್ದಿತ್ತು. ತಲೆಯೊಳಗಿನ ಮೆದುಳು ಚುರುಕುಗೊಂಡಿತ್ತು. ಮನೆಗೆರಡು ಗುಂಪು-ಗುರುತುಗಳು, ಹತ್ತಿಕ್ಕಲಾರದಷ್ಟು ಉಲ್ಬಣಗೊಂಡ ಹುರುಪು,ಹುರುಡು, ಗಂಟಲೊಣಗುವಷ್ಟು ಅರಚಾಟ….ಹಸಿಬಿಸಿಯ ಘಟನೆಗಳು,ಹಾಹಾಕಾರ….ಇದ್ದಕ್ಕಿದ್ದ ಹಾಗೆ ಜ್ಞಾನೋದಯವಾದ ಹಾಗೆ ಹಟ್ಟಿಯ ಎಲ್ಲ ಹೈಕಳ ಬುದ್ಧಿಮತ್ತೆ ಹೆಡೆಯಾಡಿಸಿ, ಬೀಗಿದ ಸುದ್ದಿಗಳು ಓತಪ್ರೋತ…!

ಅಣ್ಣ-ತಮ್ಮಂದಿರಂತೆ ಸದಾ ಒಬ್ಬರಿಗೊಬ್ಬರು ಕಚ್ಚಿಕೊಂಡಿರುತ್ತಿದ್ದ ಬಸೆಣ್ಣಿಗೂ ಹಿರೇಗೌಡನಿಗೂ ಈಗ ಎಣ್ಣೆ-ಸಿಗೇಕಾಯಿ !…ಅದೇ ತಾನೆ ಅರಳಿದ್ದ `ಛತ್ರಿ’ಗುಂಪಿನವರು, ಬಸೆಣ್ಣಿಯನ್ನು ಇನ್ನಿಲ್ಲದ ಪ್ರತಿಷ್ಠೆಯಿಂದೆತ್ತಿ ಮೆರೆಸುತ್ತಿದ್ದುದು, ದೊಡ್ಡಮನಿ ಸಾವುಕಾರ ಹಿರೇಗೌಡನಿಗೆ ಅವಮಾನವಾದಂತಾಗಿ ಕಣ್ಣು ಕಿಸುರಾಯಿತು. ಇದಕ್ಕೆ ಸರಿಯಾಗಿ `ಸೂರ್ಯ’ ಪಕ್ಷದವರು ಅವನ ಕಿವಿಯೂದಿ ಕುಮ್ಮಕ್ಕು ಕೊಟ್ಟಾಗ, ಬಸಿರು ಹೊತ್ತುರಿದು ಗೌಡನ ಬುದ್ಧಿ ಬೆತ್ತಲಾಗಿತ್ತು. `ಸೂರ್ಯ’ ಪಕ್ಷದವರೊಡನೆ ನಡೆಸಿದ ಸಮಾಲೋಚನೆಯಂತೆ, ಗೌಡ ತನ್ನ ಕಬ್ಬಿಣದ ಪೆಟ್ಟಿಗೆ ಬೀಗ ಸಡಿಲಿಸಿ, ಬಸೆಣ್ಣಿಯ ಹಟ್ಟಿಗೆ ಬೆಂಕಿಯಿಡಿಸಿದ. ಅನಂತರ ಎಂಟುದಿನ ಮಾಲೇರ ಜಿಂಗನ ಗುಡ್ಲಲ್ಲಿ ಮುಖಮರೆಸಿಕೊಂಡಿದ್ದ.

ಬಸೆಣ್ಣಿಯ ಹಟ್ಟಿಯ ಬೂದಿಯಲ್ಲಿ ಅವನ ಮಗುವಿನ ಬೂದಿಯೂ ಬೆರೆತುಹೋಗಿತ್ತು. ತನ್ನ ಕಿರೀಕೂಸು ಬೆಂದುಹೋದ ಹುಚ್ಚು ಆವೇಶದಲ್ಲಿ ಬಸೆಣ್ಣಿ, ಹಿರೇಗೌಡನಿಗಾಗಿ ಮಚ್ಚುಮಸೆದು ಮೂರುದಿನ ಎಡೆಬಿಡದೆ, ಒಂದೇಸಮನೆ ಹಳ್ಳಿ ಪೂರ ಜಾಲಿಸಿದ.

ಬಡವನಾದರೂ ನಿಷ್ಠಾವಂತನಾಗಿದ್ದ ಹನುಮಗುಡಿ ಪೂಜಾರಿ ಸಾದೇವನ ಕೈಲಿ ಈಚೀಚೆಗೆ ಧಂಡಿ ರೊಕ್ಕ ಓಡಾಡುವುದರ ಮೂಲ, ದೇಸಾಯಿಯವರಿಗೆ ಮಾಟದ ಪೂಜೆಯನ್ನು ಈ ಪೂಜಾರಿ ಮೂಲಕವೇ ನಡೆದಿದೆಯೆಂಬ ವಾರ್ತೆಗಳನ್ನು ಭೋಜ ಶೋಧಿಸಿ ತಂದು ಮನೆ ಮನೆಗೆ ಬಿತ್ತಿದ. ಇದಾಗಿ ನಾಕೇದಿನಗಳಲ್ಲಿ ಆ ಭೋಜ ವಾಂತಿಭೇದಿಯಿಂದ ಹಾಸಿಗೆ ಕಚ್ಚಿದ. `ಗದೆ’ಯ ಗುರುತಿನ ಗುಡಾರದೊಳಗೆ, ಕಣ್ಣು ತೇಲಿಸುತ್ತ ಕೂತು, ತೊದಲುತ್ತ ಮಂತ್ರ ಹೇಳುತ್ತಿದ್ದ ಪೂಜಾರಿಯೊಡನೆ ಪಾಟೀಲರನ್ನು ಕಂಡವರಲ್ಲಿ ಕೆಲವರು, ಯಾರಲ್ಲೂ ಅದನ್ನುಸುರದೆ ತೆಪ್ಪಗಾಗಿದ್ದುಂಟು.

ಕದ ತೆರೆದು ಜಗುಲಿಗಿಳಿಯಲು ಭಯ ಅಮರಿಕೊಂಡಿತ್ತು ಹಲವರಿಗೆ. ಬಿಚ್ಚುಗತ್ತಿಯಂತೆ ಬಡಿಗೆ ಹಿಡಿದು ಅಡ್ಡಾಡುವ ತುಡುಗರನ್ನು ಕಂಡು, ಕಿಟಕಿಯಲ್ಲಿಣುಕಿದ ತರುಣಿಯರು ಒಳಗೇ ಕರಗಿಹೋದರು. ಹೆಂಗಸರೇ ಏಕೆ, ಎಷ್ಟೋ ಗಂಡೆದೆಗಳೂ ಕೂಡ ಹೊರಬರಲು ತಡವರಿಸುತ್ತಿದ್ದವು. ಹಸುವಿನಂತೆ ಸಾಧುವಾಗಿದ್ದ ಹೊಲೆಯರ ಗುಡ್ಲುಗಳೆಲ್ಲ ಸಿಂಹಗರ್ಜನೆಯಿಂದ ಬೆನ್ನಟ್ಟಿ ಬರುತ್ತಿದ್ದವು. ದೆಮ್ಮರಡಿಯ ತಾವೊಳಗೆ ನಿತ್ಯ ಸದ್ದಿನ ಮೆರವಣಿಗೆ. ನೆಲಕ್ಕೆ ಗುದ್ದುವ ಗುಡು ಗುಡು ಹೆಜ್ಜೆಗಳು. ಕಿವಿಗಡಚಿಕ್ಕುವ ಜೈಕಾರ-ಪ್ರಚಾರದ ಬೊಬ್ಬಿರಿತ. ನಿಮಿಷಕ್ಕೆರಡು ತಂಡಗಳು ಬೆದೆಗೆ ಬಂದವಂತೆ ಬೀದಿಗುಂಟ ಹಾರಾಡುತ್ತಿದ್ದವು. ಬೆಪ್ಪಾಗಿ ಕುಂತವರು ಭಾಳಾನೇ ಕಡಿಮೆ ಮಂದಿ. ಪ್ರಚಾರ ಮುಗಿಲಿಗೇರುತ್ತಿದ್ದಂತೆ ಮನೆಗಳೆಲ್ಲ ಬಿಕೋ ಎನ್ನುತ್ತ ರಸ್ತೆಗಳಲ್ಲಿ ಜನಜಾತ್ರೆ. ದಿನದಿನಕ್ಕೆ ದೊಂಬಿ-ಗದ್ದಲವೇರುತ್ತಹೋಯಿತು. ಜನಗಡಿಬಿಡಿಯಲ್ಲಿ ನೆಲವೆಲ್ಲ ಕಮರಿ, ಬಾಯಾರಿ ಅನಾಥವಾಗಿ ಬಿದ್ದುಕೊಂಡಿದ್ದವು. ಕಳೆ-ಜೊಂಡು ಹೆಣೆದುಕೊಂಡು ಒತ್ತಾದ ಹೊಲಗಳು ಕೊಬ್ಬಿ ಹಿಗ್ಗುತ್ತಿದ್ದುದರತ್ತ ಯಾರ ಗಮನವೂ ಹರಿಯಲಿಲ್ಲ!

ಹಸುಗೂಸಿನಿಂದ ಹಿಡಿದು ಉಸಿರಡಗುವ ಮುದಿಜೀವಿಗಳವರೆಗೂ ಅದೇ ವಿಷಯವನ್ನು ಚೀಪುತ್ತಿದ್ದವು. ಭಾವನೆ ಮಿಸುಕಾಡುವ ಸ್ನಾಯುಗಳು. ಕೆಲವರಿಗೆ ಮನಸ್ಸಿಗೆ ತೋಚಿದ್ದನ್ನು ಒದರುವ ನಿರ್ಭಿಡೆಯ ವಾತಾವರಣವೆನಿಸಿದರೆ, ಮತ್ತೆ ಕೆಲವರಿಗೆ ಕುತ್ತಿಗೆ ಅಮುಕುವ ಬಿಗಿಪಟ್ಟು. ಬೆಳಗಾದರೆ ಕಣ್ಣಲ್ಲಿ ಹೊಸ ನಿರೀಕ್ಷೆ; ಮಿಂಚು, ಕಾಣದ ಭಯ; ಆತಂಕ…   ಏನೇ ಜರುಗಿದರೂ ಅರಗಿಸಿಕೊಳ್ಳುವಂಥ ಕಲ್ಲು ಮನಸ್ಸು ಹಲವರಿಗೆ.

ಹಾಗಾಗಿ, ದೆಮ್ಮರಡಿಯ ಹೃದಯದಂತ್ತಿದ್ದ ಕುಲಕರ್ಣಿಯವರು ತೀರಿಕೊಂಡ ಸುದ್ದಿ ಯಾರನ್ನೂ ಗರಬಡಿಸಲಿಲ್ಲ. ಹಲವರಿಗೆ ವ್ಯಥೆ ಉಕ್ಕಿಬಂದರೂ ಅದನ್ನು ವ್ಯಕ್ತಪಡಿಸಲು ಪುರುಸೊತ್ತಿಲ್ಲ. ಸಭೆ-ಪ್ರಚಾರ-ಚರ್ಚೆ ನೂರೆಂಟು ಕರ್ತವ್ಯಗಳ ಗಡಿಬಿಡಿ.

ತಮ್ಮ ಮಾಂತ್ರಿಕಸ್ಪರ್ಶದಿಂದ ಇಡೀ ದೆಮ್ಮರಡಿಯನ್ನೇ ಬುಡಮೇಲುಗೊಳಿಸಿದ, ಆಗಂತುಕರು ನೀಡಿದ ಎರವಲು ಕೆಚ್ಚು-ಸ್ವಾಭಿಮಾನಗಳಿಂದ ಸೊಕ್ಕಿದ ಯುವಕರ ತಂಡಕ್ಕೆ ಬಲಿಯಾಗಿ ಹೋಗಿದ್ದಳು ಕುಲಕರ್ಣಿಗಳ ಮಗಳು ಸೋನಾ. ಧಾಷ್ಟೀಕದ ಹುಡುಗಿಯವಳು. ಸೋನಾ, ಹಿಂದ್ಯಾವಾಗಲೋ ಚೇಷ್ಟೆಗಾಡಿದ ಮಾತುಗಳನ್ನು ಜರಡಿಯಾಡಿ, ಈಗವಳ ಮೈಮೇಲೇರಿ ಹೋಗಿದ್ದರು ದ್ಯಾವ, ಬಪ್ಪ. ಇರುಕಿಕೊಂಡಿದ್ದ ಅವರ ಬಯಕೆಗಳಿಗೆಲ್ಲ ಬಿಡುಗಡೆ ದೊರೆತಿತ್ತು. ಎದೆಯೊಡೆದುಕೊಂಡು ಅಲ್ಲಿಗೆ ಧಾವಿಸಿದ್ದ ಕುಲಕರ್ಣಿಯವರ ಹೆಂಡತಿಯನ್ನು `ಕ್ಯಾರೆ’ ಎನ್ನದೆ ದ್ಯಾವ ಅವರೆದುರು ದೆವ್ವದಂತೆ ಸಿಡಿದುನಿಂತಿದ್ದ. ತನ್ನ ಕೈತುತ್ತು ಉಂಡು ಅರಳಿದ ಹೂವು ಹಾವಿನಂತೆ ಭುಸುಗುಟ್ಟಿದಾಗ, ದುಃಖ ಧುಮ್ಮಿಕ್ಕಿ ಆಕೆ ಕ್ಷಣಕಾಲವೂ ಅಲ್ಲಿ ನಿಲ್ಲಲಾಗದೆ ಮನೆಗೋಡಿ ಬಂದವರೇ ಕೊರಳನ್ನು ತೊಲೆಗೆ ಬಿಗಿದುಕೊಂಡರು.

ಇದಕ್ಕಿಂತ ಕೆಲವೇ ದಿನಗಳ ಮುಂಚೆ, ರಾಡಿಯಾಗಿ ಹೊಲಸೆದ್ದ ದೆಮ್ಮರಡಿಯ ಅವಾಂತರಗಳನ್ನು ಕಂಡು,ಕೇಳಿಯೆ ನೆಲಕಚ್ಚಿದ್ದ ಕುಲಕರ್ಣಿಗಳು ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನವೇ ಹೆಣವಾಗಿ ಹೋಗಿದ್ದು ಅವರ ಪುಣ್ಯ. ದಿಕ್ಕಾಪಾಲಾದ ಮನೆಯ ಸ್ಥಿತಿಯನ್ನು ಕಂಡು ಕೆರಳಿದ ಅವರ ಹಿರಿಮಗ ಆನಂದ, ಹೆತ್ತವರಿಗೆ ಚಟ್ಟ ಸಿದ್ಧ ಮಾಡುವ ಬದಲು, ನೇರ ದ್ಯಾವನೆದೆಗೆ ಚೂರಿಯಿಟ್ಟು ಅವನನ್ನು ಚಟ್ಟಗೊಳಿಸಿದ ತತ್‍ಕ್ಷಣವೇ ಹಳ್ಳಿಯ ಉದ್ದಗಲವೂ ಕೋಲಾಹಲದಿಂದ ಭಗ್ಗೆಂದಿತು.

`ಕಡಿ…ಕೊಲ್ಲು…ಹಾ…ಹೂಂ…ಇದು ಆ ಪಕ್ಷದವರ ಕೆಲಸ…ಇದು…’- ನೂರೆಂಟು ಹಾಹಾಕಾರ;ಘರ್ಜನೆ. ತಡಮಾಡದೆ ಆನಂದ, ದ್ಯಾವನ ವಿರೋಧ ಪಂಗಡದ ಮೊರೆಹೊಕ್ಕ. ಹೆಣಗಳು ನಾರುತ್ತ ಬಿದ್ದಿರುವುದನ್ನೂ ಗಮನಿಸದೆ ವಿರೋಧಿಗಳು ಸೇಡಿಗಾಗಿ ಕುದಿಯತೊಡಗಿದರು. ಆದರೂ ಈ ಮಧ್ಯೆ ಎಡೆಬಿಡದ ಪ್ರಚಾರ ಕಾರ್ಯ!

ದೆಮ್ಮರಡಿಯ ಮಂದಿ, ಅಂದು, ಹಿಂದಿನ ಘಟನೆಗಳನ್ನೆಲ್ಲ ಮರೆತು ಉತ್ಸಾಹಭರಿತರಾಗಿ ಒಬ್ಬರ ಹಿಂದೆ ಒಬ್ಬರು ಸಾಲಿನಲ್ಲಿ ನಿಂತಿದ್ದರು. ಚಿಲಿಪಿಲಿ ಸಂಭಾಷಣೆ…ಬೆರಳಿಗೆ ಮಸಿ ಚಿಕ್ಕಿ ಒತ್ತಿಸಿಕೊಂಡು ಹಿಂತಿರುಗಿ ಬಂದವರ ಮೊಗಗಳಲ್ಲಿ ಮಹತ್ಕಾರ್ಯ ಸಾಧಿಸಿದ ಹೆಮ್ಮೆ; ತೃಪ್ತಿಯ ಕಳೆ.

ಹೊತ್ತೇರುತ್ತಿದ್ದಂತೆ ಕುತೂಹಲ ಮೇರೆವರಿದ ಚರ್ಚೆಗಳು, ಚಡಪಡಿಕೆ; ಆತಂಕ. ಹೊಂಗನಸನ್ನು ಹೆಣೆದು,ಕುಣಿದು ಕುಪ್ಪಳಿಸುವ ಸಿದ್ಧತೆಗಳು ಕೆಲೆವೆಡೆ. ಇಷ್ಟಕ್ಕೆಲ್ಲ ಕಾರಣರಾದ ಆಗಂತುಕರು ಮಾತ್ರ ಈಗ ಮೌನದ ಬಂಡೆಗಲ್ಲು!

ಹಟಾತ್ತನೆ ಸಂತಸದ ಕೇಕೆ;ಹಾರಾಟ-ಚೀರಾಟ ಉಸಿರು ತಳೆದಾಗ ಅದರಲ್ಲಿ ದೆಮ್ಮರಡಿಯ ಕೆಲವರೂ ಸೇರಿದ್ದರು. ಉತ್ಸಾಹದ ಲಗ್ಗೆ…. ಖುಷಿಯಲ್ಲಿ ಲಾಗಾ ಹಾಕಿದವರು ಹಲವರು. ಸಿಹಿ ಹಂಚಿ, ಕುಣಿದಾಡುತ್ತ ಹ್ಯಾಪುಮೋರೆ ಹಾಕಿದವರನ್ನು ಕಂಡು ಅಣಕಿಸಿದರು. ಇನ್ನು ಕೆಲವರ ಹಲ್ಲುಗಳು ಪುಡಿಯಾಗುವಷ್ಟು ರಭಸವಾಗಿ ಕಟಕಟಾಯಿಸುತ್ತಿದ್ದವು.  ಕಿಚ್ಚಿನ ಹೊಮ್ಮುಸಿರು, ಕಾಲಪ್ಪಳಿಸಿ ಕೆಂಡ ಕಾರಿದರು.

ವಿಜಯದ ತುತ್ತತುದಿಯ ಕೆನೆತ, ಸೇಡಿನ ದಾಹದ ಮೊರೆತದಲ್ಲಿ ತಲ್ಲೀನರಾದ ದೆಮ್ಮರಡಿಯ ಜನಗಳಿಗೆ, ಥಟ್ಟನೆ ದಟ್ಟ ನಿಶ್ಶಬ್ದ ಕವಿದುಕೊಂಡ ಕಡುಮೌನದ ಅನುಭವ !!…  ತಮ್ಮ ಧ್ವನಿಗಳನ್ನಡಗಿಸಿ ಸುತ್ತ ಮುತ್ತ ತಿರುಗಿ ನೋಡಿದರು. ಯಾರೂ ಇಲ್ಲ!!..ಬರಿದೋ ಬರಿದು…ಬರೀ ದೆಮ್ಮರಡಿಯ ಪರಿಚಿತ ಅದೇ ಮುಖಗಳು!…ಕಕ್ಕಾಬಿಕ್ಕಿಯಾಗಿ ಮುಖ ಮುಖ ದಿಟ್ಟಿಸಿಕೊಂಡು ಸರಬರ ಸಂದಿಗೊಂದಿಗಳಲ್ಲಿ ಹರಿದಾಡಿ ಕಣ್ಣು ಕಿಸಿದರೂ ಅವರವರೇ ಎದುರಾದಾಗ, ಮುಖಗಳು ಜೋತುಬಿದ್ದವು. ಇಡೀ ಹಳ್ಳಿಯೆಲ್ಲ ಸೋಸಿದರೂ, ಸ್ವರ್ಗದ ಕನಸು ಎದೆಯಲ್ಲಿ ಹೆಪ್ಪಿಟ್ಟ ಆ ರಾಜಧಾನಿಯವರ ನೆರಳೇ ಇಲ್ಲ!!!..ಹಳ್ಳ-ಕೊಳ್ಳ,ಪೊದೆ ಕಾಡುಗಳನ್ನು ಬಗೆದು ನೋಡಿದರೂ ಅವರ ಸುಳಿವಿಲ್ಲ…ಮಡುಗಟ್ಟಿದ ಮಹಾಮೌನ!!..ಯುದ್ಧಭೂಮಿಯಲ್ಲಿ ಇಟ್ಟಾಡುವಂಥ ಜುಗುಪ್ಸಿತ ನೀರವ!… ದೆಮ್ಮರಡಿಯ ಮಣ್ಣನ್ನು ಆಗಂತುಕರು ತುಳಿದದ್ದೇ ಸುಳ್ಳೆನ್ನಿಸುವ ಭ್ರಾಂತಿ!

ದೆಮ್ಮರಡಿಯ ಜನತೆ ತಟಸ್ಥರಾಗಿ ನಿಂತು, ಸಾವಧಾನವಾಗಿ ಕಣ್ಣರಳಿಸಿ ಸುತ್ತ ನೋಡಿದರು. ಸುಂಟರಗಾಳಿಗೆ ಬುಗುರಿಯಾಡುತ್ತಿದ್ದ ಚುನಾವಣಾ ಪ್ರಚಾರದ ಬಣ್ಣಬಣ್ಣದ ಕರಪತ್ರ- ಚೀಟಿಗಳು ಸುತ್ತಿಕೊಂಡು ಬಂದು ಮುಖಕ್ಕೆ ಪಟ್ಟನೆ ಅಪ್ಪಳಿಸಿದವು. ಕಾಲು ಕಾಲಿಗೆ ತೊಡರಿ, ಸುತ್ತಿಕೊಳ್ಳುವ ಬಾವುಟದ ತುಂಡು ಬಟ್ಟೆಗಳು. ಕಾಲೊತ್ತುವ ತಗಡಿನ, ಬಿದಿರಿನ ಹಲಗೆಗಳು, ಮೈಕೈಗೆ ತರಚುತ್ತಿದ್ದ ಮುರಿದು ವಾಲಿಬೀಳುತ್ತಿದ್ದ ಕಂಬಕ್ಕಂಟಿದ ಪಟಗಳು. ಹಬ್ಬದ ನಂತರ ಒಣಗಿದ ತೋರಣದಂತೆ ಅಲ್ಲಲ್ಲಿ ಜೋತುಬಿದ್ದ ಲಾಂಛನಗಳು. ಕೈಯಿಟ್ಟೆಡೆ, ಕಣ್ಬಿಟ್ಟೆಡೆ ದೆಮ್ಮರಡಿಯ ಒಡಲಿನ ಭರ್ತಿ ಆಗಂತುಕರ ಅವಶೇಷಗಳು!…ಮನೆ ಮನೆಯ ಗೋಡೆಗಳೂ ಹೊತ್ತಿಗೆಯಾಗಿ,ವಿಕಾರದ ದಪ್ಪ ಅಕ್ಷರಗಳನ್ನು, ಬಣ್ಣದ ಪಟ್ಟೆಗಳನ್ನು ಧರಿಸಿ ಬಿಮ್ಮನೆ ನಿಂತಿದ್ದವು.

ಹಳ್ಳಿಯಂಚಿನಲ್ಲಿ ನಿಂತು ಬಡಗಣ ತೋಪಿಗುಂಟ ಹುಬ್ಬಿಗೆ ಕೈಹಚ್ಚಿ ನೋಡಿದರೆ ರಾಜಧಾನಿಯ ನೆಲವನ್ನು ದರ್ಶನ ಮಾಡಿಸುವ ಪಾರದರ್ಶಕ ತೆಳುವಾದ ಕಾಡು. ತುಳಿತಕ್ಕೆ ಪಕ್ಕಾಗಿ, ಬಂಜೆಯಾಗಿ ಬಿದ್ದಿದ್ದ, ವೈಶಿಷ್ಟ್ಯ ಕಳೆದುಕೊಂಡಿದ್ದ ಹಳ್ಳ-ಕೊಳ್ಳದ ನೆಲ. ಹಳ್ಳಯತ್ತ ಮುಖ ಹೊರಳಿಸಿದರೆ ಅಪಸ್ವರ; ಮಸಣದ ಗೂಗೆಯ ದನಿ. ದೆಮ್ಮರಡಿಯ ಅಂದಗೆಡಿಸಿ ಎದ್ದುನಿಂತ ಕುರೂಪ ಗೋಡೆಗಳು.

ಏನೇ ಆದರೂ ದೆಮ್ಮರಡಿಯ ಮೇಲೆ ಹಗಲು-ರಾತ್ರಿಗಳು ಮಾತ್ರ ಮುನಿಯಲಿಲ್ಲ. ಬೆಳಗಾಯಿತು…ದೇಶಪಾಂಡೆಯವರು ಹಿಂದಿನ ತಮ್ಮ ಗತವೈಭವ ನೆನೆದು ಮರುಗುತ್ತ ಊದುಗೊಳವೆಯನ್ನು ಪುಂಗಿಯಂತೆ ಬಾಯಿಗೆ ಸಿಕ್ಕಿಸಿಕೊಂಡು ಪುಸಪುಸನೆ ಉಸಿರು ಹೊಮ್ಮಿಸಿದರು.

ಬಸಣ್ಣಿಗೆ ಹಗಲು ರಾತ್ರಿಯ ವ್ಯತ್ಯಾಸವೇ ತಿಳಿಯದಂತಾಗಿತ್ತು. ಅವನ ಕಣ್ಣ ತುಂಬ ದ್ವೇಷದ ಕಡಲು…ಪಕ್ಕದ ಜಗುಲಿಯಲ್ಲಿ ಈರ್ಷೆಯಿಂದ ಕುಳಿತಿದ್ದ ಹಿರೇಗೌಡನನ್ನೇ ನುಂಗುವಂತೆ ನೋಡುತ್ತ ಏದುಸಿರು ಕಕ್ಕುತ್ತಿದ್ದ. ಹಾಳಾಳು ಬಿದ್ದಿದ್ದ ಜಮೀನನ್ನು ಶೂನ್ಯವಾಗಿ ದಿಟ್ಟಿಸುತ್ತ ಹುಚ್ಚರಂತೆ ನಿಂತಿದ್ದ ಪಾಟೀಲರು,ಇದಕ್ಕೆ ಕಾರಣವಾಗಿದ್ದ    ದೇಸಾಯಿಯವರನ್ನು ಜರಿಯುತ್ತ, ನಿಟ್ಟುಸಿರುಗರೆದು ತಮ್ಮ ಮನೆಯತ್ತ ಕಾಲು ಎಳೆದರು.

ಜಬ್ಬ,ಅಪ್ಪು ಮುಂತಾದವರು ಪಾಟೀಲರನ್ನು ಮುಗಿಸುವ ಹವಣಿಕೆಯಲ್ಲಿ ಶಾರಿಯ ಹಟ್ಟಿಯಲ್ಲಿ ಠಿಕಾಣಿ ಹೂಡಿ ಚಿಂತಿಸುತ್ತಿದ್ದರು. ದೆಮ್ಮರಡಿಯ ಹಲವು ಬಿಗಿದ ಬಾಗಿಲುಗಳ  ಹಿಂದೆ ಇನ್ನೂ ಅನೇಕರು ಏನೇನೋ ಲೆಕ್ಕಾಚಾರಗಳಲ್ಲಿ ತೊಡಗಿದ್ದರು.

ಭಣಗುಡುತ್ತಿದ್ದ ಬೋಳು ಅಂಗಳದಿಂದ ದಣಪೆ ದಾಟಿ ಆಚೆ ಕಾಲಿಕ್ಕಿದ ಸೋನಾ ಕಣ್ಣೀರು ಚಿಮ್ಮಿಸುತ್ತ ಸುತ್ತಮುತ್ತ ಅಳುಕಿನ ನೋಟ ಚೆಲ್ಲಿ, ಸೀಗೇಮೆಳೆಯ ಬಾವಿಯತ್ತ ಭರಭರನೆ ನಡೆದಳು. ಕಾಲುವೆಯ ಅರಳೀಕಟ್ಟೆಯ ಬಳಿ ಹರಟುತ್ತಿದ್ದ ಹೆಂಗೆಳೆಯರ ತಂಡ, ಗುಳ್ಳನ ಶಿಳ್ಳೆಯ ದನಿ ಕೇಳಿ ಬೆಚ್ಚಿಬಿದ್ದು ತಟ್ಟನೆ ಚೆದುರಿತು. ಅವರ ಕಣ್ಣು ತಪ್ಪಿಸುವ  ಧಾವಂತದಲ್ಲಿ ಬೆವರೊರೆಸಿಕೊಳ್ಳುತ್ತ ಮರೆಗೆ ಓಡಲೆತ್ನಿಸಿದ ಸೋನಾ ಮುಗ್ಗರಿಸಿಬಿದ್ದಳು. ತನ್ನ ಕಾಲಿಗೆ ತೊಡರಿದ ಪ್ರಚಾರದ ಆ ಹಲಗೆಯನ್ನು ಉರಿಗೋಪದಿಂದ ದಿಟ್ಟಿಸಿದಳು.

`ನಿಮ್ಮ ಪ್ರಗತಿಯೇ ನಮ್ಮ ಗುರಿ’

ವಿಷಾದದಿಂದ ತನ್ನ ಉಬ್ಬಿದ ಹೊಟ್ಟೆಯನ್ನವಳು ಸವರಿಕೊಳ್ಳುತ್ತ ಬಡಗಣ ಬರಡು ಕಾಡಿನತ್ತ ಶೂನ್ಯದೃಷ್ಟಿ ತೇಲಿಸಿದಳು.

Related posts

ನಂಟು

YK Sandhya Sharma

ಧರ್ಮ

YK Sandhya Sharma

ಕೂಸು-ಸ್ಕೂಲು

YK Sandhya Sharma

Leave a Comment

This site uses Akismet to reduce spam. Learn how your comment data is processed.