ನಮ್ಮ ಭಾರತೀಯ ಪರಂಪರೆಯನ್ನು ಎತ್ತಿ ಹಿಡಿಯುವ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳು ಕಥೆಗಳ ಆಗರ, ಪಾತ್ರ ವೈವಿಧ್ಯಗಳ ವಿಪುಲ ಗಣಿ. ಮೊಗೆದಷ್ಟೂ ಮುಗಿಯದ ಮಹಾ ಸಮುದ್ರ. ಇವುಗಳನ್ನಾಧರಿಸಿ ರಚಿತವಾಗಿರುವ ಸಾಹಿತ್ಯರಾಶಿ ಅಗಾಧ-ಅಸಂಖ್ಯ. ಇಲ್ಲಿಲ್ಲದ ಲೋಕವಿಲ್ಲ, ರಸ-ಭಾವ-ಗಂಧಗಳಿಲ್ಲ. ಹೀಗಾಗಿ ಅನೇಕರಿಗೆ ಸ್ಫೂರ್ತಿಯ ಸೆಲೆಯಾಗಿರುವ ಈ ಮಹಾಕಾವ್ಯಗಳು ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಹೊಸ ಆಯಾಮಗಳೊಂದಿಗೆ ರೂಹು ತಳೆಯುತ್ತ ಬಂದಿವೆ.
ಇಂಥದೇ ಒಂದು ಹೊಸ ಆವಿರ್ಭವದ ಕಥಾವಸ್ತುವನ್ನೊಳಗೊಂಡ `ಪೌಲಸ್ಥ್ಯನ ಪ್ರಣಯ ಕಥೆ’ ಲತಾ ಅವರ ತೆಲುಗಿನ ಕಾದಂಬರಿ. ವಂಶಿಯವರಿಂದ ಅದು ಕನ್ನಡಕ್ಕೆ ಅನುವಾದಿತವಾಗಿ , ನಂತರ ನಾಟಕಕಾರ -ನಟ-ನಿರ್ದೇಶಕ ಎಸ್.ವಿ.ಕೃಷ್ಣ ಶರ್ಮ ಅವರಿಂದ ಇದು ರೋಚಕ, ಚಿಂತನಾಪರ ನಾಟಕವಾಗಿ ಹೊರಹೊಮ್ಮಿದೆ.
ಮೂಲತಃ ‘ಹನುಮದ್ರಾಮಾಯಣ’ವನ್ನು ಆಧರಿಸಿ ಈ ಕಾದಂಬರಿಯನ್ನು ಲತಾ ತೆಲುಗಿನಲ್ಲಿ ರಚಿಸಿದಾಗ ಸಂಪ್ರದಾಯಸ್ಥರಿಂದ ತುಂಬಾ ವಿರೋಧ ಬಂದಿತ್ತಂತೆ. ಹನುಮಂತ, ತಾನು ನಿಜವಾಗಿ ಮೆಚ್ಚಿಕೊಂಡ ರಾವಣನ ವ್ಯಕ್ತಿತ್ವವನ್ನು ಕುರಿತು ತನ್ನದೇ ಆದ ದೃಷ್ಟಿಯಲ್ಲಿ ರಾಮಾಯಣ ಗ್ರಂಥವನ್ನು ರಚಿಸಿದ್ದನಂತೆ. ಅದನ್ನು ಸಮುದ್ರಕ್ಕೆ ಎಸೆಯಲಾಯಿತಂತೆ. ಅದು ಹೇಗೂ ಸಮುದ್ರದಲ್ಲಿ ನೌಕೆಯಲ್ಲಿ ತೇಲುತ್ತಿದ್ದ ಋಷಿಗಳ ಕೈಗೆ ಸಿಕ್ಕಿತಾದರೂ ಅದು ಅಷ್ಟು ಪ್ರಚುರಕ್ಕೆ ಬಾರದಿದ್ದರೂ, ಅದರ ಪ್ರತಿಯೊಂದು ಆಂಧ್ರ ವಿಶ್ವವಿದ್ಯಾಲಯದಲ್ಲಿ ಇದೆಯಂತೆ ಎಂಬ ಅಂತೆ ಕಂತೆಗಳು ಬಹಳ. ಬಹುಶಃ ಲೇಖಕಿ ಲತಾ ಇದನ್ನು ಪರಿಶೀಲಿಸಿರಬಹುದು. ಏನೇ ಆಗಲಿ, ಲತಾ ಅವರ ಈ ಕಾದಂಬರಿಯ ಕಥೆ, ಪಾತ್ರಗಳು, ಸನ್ನಿವೇಶಗಳು ತುಂಬ ಕುತೂಹಲಕರವಾಗಿವೆ.
ರಾವಣನ ದೃಷ್ಟಿಯಲ್ಲಿ ಸೃಷ್ಟಿ ತಳೆವ ಈ ಹೊಸ ಆಯಾಮದ ನಾಟಕದಲ್ಲಿ, ರಾಮಾಯಣದ ನಡೆ ಕುತೂಹಲ ಕೆರಳಿಸುತ್ತದೆ. ರಾಮಾಯಣದ ಸಮಷ್ಟಿ ಕಥೆಯನ್ನು ರಸೋತ್ಪತ್ತಿ ಸಂಭಾಷಣೆಗಳಿಂದ , ಪರಿಣಾಮಕಾರಿ ಸನ್ನಿವೇಶಗಳ ಸೃಷ್ಟಿಯಿಂದ ಹರಿತ ನಿರ್ದೇಶನದಿಂದ ಸಿಂಹಾವಲೋಕನ ಕ್ರಮದಿಂದ ಕಟ್ಟಿಕೊಡುವ ‘’ ಸಂಧ್ಯಾ ಕಲಾವಿದರು’ ಅಭಿನಯಿಸುವ `ಪೌಲಸ್ಥ್ಯ’ ನಾಟಕ ಬಹುಕಾಲ ನೆನಪಿನಲ್ಲುಳಿಯುವಂಥದು. ಪೂರ್ವಾಭಿಪ್ರಾಯ ನಿರ್ಮಿತ ಪಾತ್ರಗಳನ್ನು ಮುರಿದು ಕಟ್ಟುವ ಕೆಲಸದಲ್ಲಿ ನಾಟಕಕಾರ ಎಸ್.ವಿ. ಕೃಷ್ಣಶರ್ಮ ಅವರ ಚಿಂತನಾಕ್ರಮ ಮನವರಿಕೆ ಮಾಡಿಕೊಡುವುದರಲ್ಲಿ ಯಶಸ್ಸು ಕಂಡಿದೆ.
ಇದುವರೆಗೂ ಜನಜನಿತವಾದ ರಾವಣನ ವ್ಯಕ್ತಿತ್ವಕ್ಕಿಂತ ತೀರಾ ಭಿನ್ನವಾಗಿ, ಅಷ್ಟೇ ವೈಶಿಷ್ಟ್ಯಪೂರ್ಣವಾಗಿ ಅವನ ಪಾತ್ರಚಿತ್ರಣವನ್ನು ಇಲ್ಲಿ ಕಂಡರಿಸಲಾಗಿದೆ. ಈ ನಾಟಕದಲ್ಲಿ ಪೌಲಸ್ಥ್ಯ ಖಳನಾಯಕನಲ್ಲ, ಪ್ರತಿನಾಯಕ, ಕಥಾ ನಾಯಕನೂ ಹೌದು. ಮಹಾ ಸಂಗೀತಜ್ಞ, ವೈಣಿಕ, ಕವಿ, ವಾಗ್ಮಿ, ರಸಿಕ , ಒಳ್ಳೆಯ ಪತಿ, ಪ್ರೇಮಿ, ಅಣ್ಣ , ಉತ್ತಮ ರಾಜ ಹಾಗೆಯೇ ದೌರ್ಬಲ್ಯಗಳ ದಾಸನೂ ಹೌದು.
ಪುಲಸ್ಥ್ಯ ಬ್ರಹ್ಮನ ಮೊಮ್ಮಗ ಪೌಲಸ್ಥ್ಯ, ಇದು ರಾವಣನ ಇನ್ನೊಂದು ಹೆಸರು. ‘ಕ್ರೌಂಚಿ’ಯ ಮಗನಾದ್ದರಿಂದ ಅವನಿಗೆ ‘ಕ್ರೌಂಚ’ ಎಂತಲೂ ಹೆಸರಿದೆ. ಮಹಾಕವಿ ವಾಲ್ಮೀಕಿಯ ಕಾವ್ಯಕ್ಕೆ ಪ್ರೇರಕಕನಾದದ್ದು ಈ ಕ್ರೌಂಚನೇ!!..ರಾವಣನನ್ನು ಸಂಧಿಸುವವರೆಗೂ ವಾಲ್ಮೀಕಿ ಇನ್ನೂ ಕವಿಯಾಗಿರುವುದಿಲ್ಲ. ಒಮ್ಮೆ, ತಮಸಾ ನದಿಯ ತೀರದಲ್ಲಿದ್ದ ಆಶ್ರಮದಲ್ಲಿ ಶಿಷ್ಯ ಭಾರಧ್ವಾಜನೊಂದಿಗೆ ಪಾಠ-ಪ್ರವಚನಗಳಲ್ಲಿ ತೊಡಗಿದ್ದ ವಾಲ್ಮೀಕಿಯ ಗಮನ ಮರದ ಮೇಲಿದ್ದ ಕ್ರೌಂಚ ಮಿಥುನಗಳ ಅರಚಾಟದತ್ತ ಹರಿಯುತ್ತದೆ. ಕಿರಾತನೊಬ್ಬ ಗಂಡು ಕ್ರೌಂಚವನ್ನು ಕೊಂದ ದೃಶ್ಯ ಕಂಡು ವಾಲ್ಮೀಕಿ, ಕೋಪದಿಂದ ಕಿರಾತನನ್ನು ಶಪಿಸುತ್ತಾನೆ.
‘’ ಮಾ ನಿಷಾಧ ಪ್ರತಿಷ್ಟಾಂ ತ್ವಮಗಮಃ ಶಾಶ್ವತೀ ಸಮಾಃ , ಯತ್ರ್ಕೌಂಚ ಮಿಥುನಾದೇಕಂ ಅವಧೀಹಿ ಕಾಮಮೋಹಿತಂ ’’ –
‘ಎಲವೋ ಕಿರಾತನೇ ಕಾಮಮೋಹಿತವಾದ ಕ್ರೌಂಚ ಮಿಥುನಗಳಲ್ಲಿ ಒಂದನ್ನು ಕೊಂದಿದ್ದೀ , ಆದುದರಿಂದ ನೀನು ಬಹುಕಾಲ ಬದುಕಿರಲಾರೆ ‘ ಎಂದು ಶಾಪ ಕೊಡುತ್ತಾನೆ. ಅವನ ಅರಿವಿಲ್ಲದೆ ಆ ಶಾಪ ಅನುಷ್ಟುಬ್ಹ್ ಛಂದಸ್ಸಿನಲ್ಲಿ ಸಮಾಕ್ಷರ ಪಾದಬದ್ಧವಾದ ಒಂದು ಸುಂದರ ಶ್ಲೋಕವಾಗಿರುತ್ತದೆ. ಹೀಗೆ ಶೋಕದಿಂದ ಶ್ಲೋಕೋದ್ಭವವಾಗುತ್ತದೆ. ಅಲ್ಲಿಗೆ ಅದೇ ಸಮಯಕ್ಕೆ ಬಂದ ರಾವಣ, ವಾಲ್ಮೀಕಿಯ ಶಾಪದ ಉಕ್ತಿಯಲ್ಲಿರುವ ಕಾವ್ಯಗುಣವನ್ನು ಗುರುತಿಸಿ ‘ ಮಹಾಕವಿಗಳೇ’ ಎಂದವರನ್ನು ಸಂಬೋಧಿಸಿ, ಅವರಲ್ಲಿರುವ ಕವಿತ್ವ ಶಕ್ತಿಯನ್ನು ಗುರುತಿಸಿ, ವಾಲ್ಮೀಕಿ ಮುಂದೆ ರಾಮಾಯಣ ಕಾವ್ಯ ರಚಿಸಲು ಪ್ರೇರಕನಾಗುತ್ತಾನೆ. ಆದರೆ ಈ ಕೃತಿಯಲ್ಲಿ ತಾನೇ ಮುಂದೆ ಪ್ರತಿನಾಯಕನಾಗುತ್ತೇನೆಂದು ಮಾತ್ರ ಅವನು ಊಹಿಸಿರುವುದಿಲ್ಲ. ಹೀಗೆ ರಾಮಾಯಣ ಕಥೆಯಲ್ಲಿ ರಾವಣ ಪ್ರತಿನಾಯಕನಾಗುವ ಸಂದರ್ಭ, ಸನ್ನಿವೇಶಗಳ ನಿರ್ಮಾಣಕ್ಕೆ ಕಾರಣನಾಗುವುದು ಚೋದ್ಯವೇ ಸರಿ.
ಜನಕರಾಜನ ಅರಮನೆಯ ಅಂಗಳದಲ್ಲಿ ಪುಟ್ಟ ಬಾಲಕಿಯೊಬ್ಬಳು ಹರಧನಸ್ಸಿದ್ದ ಉಕ್ಕಿನ ಪೀಠವನ್ನು ಸರಾಗವಾಗಿ ಪಕ್ಕಕ್ಕೆ ಜರುಗಿಸಿದ್ದನ್ನು ಕಂಡು ರಾವಣ, ಆಶ್ಚರ್ಯದಿಂದ ಅವಳನ್ನು ಮಾತನಾಡಿಸಿದಾಗ ಆಕೆ ಜಾನಕಿ ಎಂದು ತಿಳಿಯುತ್ತದೆ. ಅವಳ ಉಂಗುರದಲ್ಲಿ, ಮುಂದೆ ಅವಳ ಕೈ ಹಿಡಿಯುವವನು ಶ್ರೀ ರಾಮನೆಂದು ತಿಳಿದು, ಅವರಿಬ್ಬರ ಮದುವೆಗೆ ಅವನೇ ರಾಯಭಾರಿಯಾಗುತ್ತಾನೆ. ಅವರಿಬ್ಬರಿಗೆ ಎಂದೆಂದೂ ಅನ್ಯೋನ್ಯವಾಗಿರಿ ಎಂದು ಮನಸಾರೆ ಹರಸಿ, ಈ ವಿಷಯವನ್ನು ತನ್ನ ಪ್ರಿಯ ಪತ್ನಿ ಮಂಡೋದರಿಗೂ ತಿಳಿಸುವ ತಿಳಿಮನಸ್ಸು ಅವನದಾಗಿರುತ್ತದೆ. ಅನಂತರ, ಕುತೂಹಲದಿಂದ ಆಗಾಗ , ವಾಲ್ಮೀಕಿಗಳ ರಾಮಾಯಣ ಕಾವ್ಯರಚನೆ ಎಲ್ಲಿಯವರೆಗೂ ಬಂತೆಂದು ವಿಚಾರಿಸಿಕೊಂಡು ಬರುತ್ತಿರುತ್ತಾನೆ ರಾವಣ.
ರಾಮ-ಸೀತಾ ಕಲ್ಯಾಣ, ಅನಂತರ ಕೈಕೇಯಿಯ ಬಯಕೆಯಂತೆ ಅವರು ವನವಾಸಕ್ಕೆ ತೆರಳಿದ ವಿಷಯ ತಿಳಿದು ಖೇದಗೊಳ್ಳುತ್ತಾನೆ. ಅರಣ್ಯದಲ್ಲಿ ಪಾಪ ಜಾನಕಿ ಹೇಗಿದ್ದಾಳೋ ಎಂದು ಚಿಂತಿತನಾಗಿ ಮರುಗುವಷ್ಟು ಸಹೃದಯಿ ಈ ರಾವಣ. ಇಷ್ಟರಲ್ಲಿ, ತನ್ನ ತಂಗಿ ಶೂರ್ಪನಖಿ ರಾಮನಲ್ಲಿ ಅನುರಕ್ತಗೊಂಡಿರುವ ವಿಚಾರ ತಿಳಿದೂ, ತನ್ನ ತಂಗಿಯನ್ನು ಮದುವೆಯಾಗೆಂದು ರಾಮನನ್ನು ಒತ್ತಾಯಪಡಿಸದ ಸಜ್ಜನ, ಜಾನಕಿಯ ಇಷ್ಟಾರ್ಥ ಅರಿತು ಅವರಿಬ್ಬರ ಮದುವೆಗೆ ಕಾರಣನಾಗುತ್ತಾನೆ. ಆದರೆ ಮುಂದೆ ಅರಣ್ಯವಾಸಕ್ಕೆ ಬಂದ ರಾಮನ ಬಳಿ ಶೂರ್ಪನಖಿ , ತನ್ನನ್ನು ಮದುವೆಯಾಗೆಂದು ಕೇಳಿದ್ದಕ್ಕಾಗಿ , ಜಾನಕಿ, ಮತ್ಸರದಿಂದ , ಅವಳ ಕಿವಿ-ಮೂಗುಗಳನ್ನು ಕತರಿಸಲು ಲಕ್ಷ್ಮಣನಿಗೆ ಆಜ್ಞಾಪಿಸಿದ ಸಂಗತಿ ತಿಳಿದು ರಾವಣ ಜಾನಕಿಯ ಬಗ್ಗೆ ತೀವ್ರ ಕೋಪಗೊಳ್ಳುತ್ತಾನೆ. ಈ ಅಹಂಕಾರದ ನಡೆಗಾಗಿ ಜಾನಕಿಯನ್ನು ಅಪಹರಿಸಿ, ಅವಳು ವಿರಹದ ನೋವು ಅನುಭವಿಸುವಂತೆ ಮಾಡಲು ಉದ್ದೇಶಿಸಿ, ಮಾರೀಚನ ಸಹಾಯದಿಂದ ಅವಳನ್ನು ಅಪಹರಿಸಿ, ಲಂಕೆಗೆ ಕರೆದುಕೊಂಡು ಬರುತ್ತಾನೆ.
ಇದರ ಹಿನ್ನಲೆಯಲ್ಲಿ ಇನ್ನೂ ಒಂದು ಕಥೆ ಇದೆ. ರಾವಣನಿಗಿಂಥ ಮಹಾ ಬಲಿಷ್ಠನಾದ ವಾಲಿ ಅವನ ಸ್ನೇಹಿತ. ಒಮ್ಮೆ ಅವರು ಕಾಡಿನಲ್ಲಿ ತಿರುಗಾಡುತ್ತ ಇದ್ದಾಗ ‘ಮಂಡೋದರಿ’ ಎಂಬ ಸುಂದರಿ ವಾಲಿಯ ಕಣ್ಣಿಗೆ ಬಿದ್ದು, ಅನಾಮತ್ತು ಅವಳನ್ನೆತ್ತಿಕೊಂಡು ಹೋಗಿ ಅವಳನ್ನು ಬಲಾತ್ಕರಿಸಿ ಅವನು ಅನುಭವಿಸಿಬಿಡುತ್ತಾನೆ. ಇದನ್ನು ಕಂಡ ನಾಗರಿಕನಾದ ರಾವಣ ಅವನನ್ನು ತಡೆಯಲು ಪ್ರಯತ್ನಿಸುತ್ತಾನೆ. ಆದರೆ ಹೃದಯಹೀನ ವಾಲಿ ಅವನ ಬೇಡಿಕೆಯನ್ನು ಲೆಕ್ಕಿಸದೆ, ಅವಳ ಯೋಗಕ್ಷೇಮವನ್ನೂ ವಿಚಾರಿಸದೆ ಅಲ್ಲಿಂದ ಹೊರಟುಹೋದಾಗ, ರಾವಣ ಅವಳನ್ನು ಸಾಂತ್ವನಗೊಳಿಸಿ, ಅವಳನ್ನು ಮದುವೆಯಾಗುವ ಹೃದಯವಂತಿಕೆ ಪ್ರದರ್ಶಿಸುತ್ತಾನೆ. ಅಷ್ಟರಲ್ಲಿ ಆಕೆ ಗರ್ಭವತಿಯಾಗಿ ಅವಳಿಗೆ ಹುಟ್ಟಿದ ಗಂಡುಮಗುವನ್ನು ವಾಲಿಗೆ ಒಪ್ಪಿಸಿ ಬರುತ್ತಾನೆ ರಾವಣ. ಆ ಮಗುವೇ ಅಂಗಧ . ಶೋಷಿತ, ನೊಂದ ಮಂಡೋದರಿಯನ್ನು ಪಟ್ಟಮಹಿಷಿ ಮಾಡಿಕೊಂಡ ರಾವಣ, ಮುಂದೊಮ್ಮೆ ತಪಸ್ಸು ಮಾಡಲು ವರ್ಷಾನುಗಟ್ಟಲೆ ಕಾಡಿಗೆ ಹೊರಟುಹೋದ ನಂತರ, ಒಮ್ಮೆ ಮಂಡೋದರಿ, ಅರಣ್ಯಪ್ರದೇಶದಲ್ಲಿ ತಿರುಗಾಡುತ್ತಿದ್ದಾಗ ಅಕಸ್ಮಾತ್ ವಾಲಿಯ ಕಣ್ಣಿಗೆ ಬಿದ್ದು, ಮತ್ತೆ ಅವನಿಂದ ಬಲಾತ್ಕರಿಸಲ್ಪಪಡುತ್ತಾಳೆ. ಮತ್ತೆ ಗರ್ಭಿಣಿಯಾದ ಆಕೆ, ಜಾನಕಿಗೆ ಜನ್ಮವೀಯುತ್ತಾಳೆ. ಆಗ ಮಾರೀಚ ಈ ವಿಷಯ ರಾವಣನಿಗೆ ತಿಳಿಯುವುದು ಬೇಡವೆಂದು, ತಾನೇ ಆ ಮಗುವನ್ನು ಜನಕರಾಜನ ಅರಮನೆಯ ಅಂಗಳದಲ್ಲಿ ಬಿಟು ಬರುತ್ತಾನೆ. ಆನಂತರ ಜಾನಕಿ, ಜನಕರಲ್ಲಿ ಬೆಳೆಯುತ್ತಾಳೆ. ಆದರೆ ಈ ವಿಚಾರವೊಂದೂ ರಾವಣನಿಗೆ ಗೊತ್ತಿರುವುದಿಲ್ಲ. ಕೋಪೋದ್ರಿಕ್ತ ರಾವಣ, ಸೀತೆಯನ್ನು ಅಪಹರಿಸಲು ನಿರ್ಧಾರ ಕೈಗೊಂಡಾಗ, ಅದನ್ನು ತಪ್ಪಿಸಲು ಮಾರೀಚ ಮಹರ್ಷಿಗಳು, ನಡೆದ ಈ ಎಲ್ಲ ಸಂಗತಿಗಳನ್ನೂ ತಿಳಿಸುತ್ತಾನೆ. ರಾವಣನಿಗೆ ಮಡದಿ ಮಂಡೋದರಿಯ ಬಗ್ಗೆ ಇನ್ನಷ್ಟು ಅನುತಾಪ ಹೆಚ್ಚಿ, ಅವಳನ್ನು ದೀರ್ಘಕಾಲ ನಿರ್ಲಕ್ಷಿಸಿ, ಈ ಘಟನೆಗೆ ತಾನೇ ಪರೋಕ್ಷವಾಗಿ ಕಾರಣನೆಂದು ತನ್ನ ತಪ್ಪು ಒಪ್ಪಿಕೊಂಡು ಅವಳಲ್ಲಿ ಕ್ಷಮೆ ಬೇಡುವ ಸಹೃದಯತೆ ತೋರುತ್ತಾನೆ. ಇಷ್ಟಾದರೂ ಮಂಡೋದರಿ, ಅವನ ಪಾಲಿಗೆ ಪತಿವ್ರತಾರತ್ನವೇ. ತನ್ನ ಹೆಂಡತಿಯ ಮಗಳು ತನಗೂ ಮಗಳೇ ತಾನೇ ಎಂದು ಸೀತೆಯನ್ನು ಮಗಳಾಗಿ ಭಾವಿಸುವ ವಿಶಾಲ ಹೃದಯಿ ರಾವಣ, ಅವಳನ್ನು ಮಗಳೆಂದು ಒಪ್ಪಿಕೊಳ್ಳುತ್ತಾನೆ. . ಆದರೆ, ಸೀತೆ ತನ್ನ ಮಗಳೆಂಬ ಸತ್ಯ ತಿಳಿದ ಮೇಲೆ ಅವನ ನಿರ್ಧಾರ ಬದಲಾಗುವುದಿಲ್ಲ. ಮಗಳು ವನವಾಸದಲ್ಲಿ ಕಷ್ಟಪಡಬಾರದೆಂದು ಯೋಚಿಸಿ, ಅವಳು ತೌರಿನಲ್ಲಿ ಸುಖವಾಗಿರಲೆಂಬ ಸದುದ್ದೇಶದಿಂದ ಅವಳನ್ನು ಕದ್ದು ತರುವ ನಿರ್ಧಾರ ಕೈಗೊಳ್ಳುತ್ತಾನೆ. ಹೊನ್ನಿನ ಜಿಂಕೆಯ ರೂಪದಲ್ಲಿ ಕಾಣಿಸಿಕೊಳ್ಳಲು ಮಾರೀಚನಿಗೆ ಹೇಳುತ್ತಾನೆ. ಸೀತಾಪಹರಣಕ್ಕೆ ಸಹಾಯಕನಾಗಿ ಬಂದ ಮಾರೀಚನ ಬಲಿದಾನವಾಗುತ್ತದೆ.
ಶ್ರೀ ರಾಮಚಂದ್ರ ದೇವರೆಂದು ಬಲ್ಲ ರಾವಣ ಅವನ ಕೈಯಿಂದ ಮುಕ್ತಿ ಪಡೆಯುವ ಬಯಕೆಯಿಂದ , ಅವನ ಹೆಂಡತಿಯನ್ನು ಕದ್ದು, ಅವನನ್ನು ಕೆರಳಿಸಿ, ಅವನ ಕೈಯಿಂದಲೇ ಯುದ್ಧ ಕಂಕಣ ಕಟ್ಟಿಸಿಕೊಂಡು ಕೈವಲ್ಯ ಪಡೆಯುವ ಹೊಸ ತಿರುವಿನ ಮುಕ್ತಾಯ ಕಾಣುವ ರಸಮಯ, ಆಸಕ್ತಿಕರ ಕಥೆಯಿದು.
ರಾಮನ ಬಗ್ಗೆ ಭಕ್ತಿಯ ಪರಾಕಾಷ್ಠತೆಯ ಪ್ರಣಯದ ಗಾಢತೆ ಹೊಂದಿದ ಪೌಲಸ್ಥ್ಯ ರಾವಣ, ಅವನೊಳಗೆ ಒಂದಾಗಬೇಕೆಂಬ ಅಭೀಪ್ಸೆಯಿಂದ , ಬಯಸಿ ಪಡೆಯುವ ಮೋಕ್ಷದ ರೋಮಾಂಚದ ವಿಶಿಷ್ಟ ಕಥೆ ಇದು.
ಈ ನಾಟಕದಲ್ಲಿ ಪ್ರತಿಯೊಂದು ಪಾತ್ರಗಳೂ ಅರ್ಥಪೂರ್ಣವಾಗಿ ಚಿತ್ರಿತವಾಗಿದ್ದು, ಕುತೂಹಲ ಕೆನೆಗಟ್ಟುತ್ತದೆ. ವಿವಿಧ ಆಯಾಮಗಳಿಂದ ಆಪ್ತನಾಗಿ ಬಿಡುವ ರಾವಣ ಎಲ್ಲರ ಮನವನ್ನೂ ಸೂರೆಗೊಳ್ಳುವನು. ನಡೆದ ಕಥೆಯನ್ನು ಅರಿತ ಸೀತೆ, ಮಂಡೋದರಿಯೇ ತನ್ನ ತಾಯಿಯೆಂದು ತಿಳಿದಾಗ, ರಾವಣನ ವಿಶಾಲ ಮನೋಭಾವವನ್ನು ಅರ್ಥ ಮಾಡಿಕೊಂಡಾಗ ಅವಳ ಪ್ರತಿಕ್ರಿಯೆ-ದುಃಖ ಎಂಥವರ ಮನಸ್ಸನ್ನೂ ಮಿಡಿಸುತ್ತದೆ.
ವಾಲಿಯಿಂದ ಎರಡು ಬಾರಿ ಬಲಾತ್ಕರಿಸಲ್ಪಟ್ಟ ಮಂಡೋದರಿಯನ್ನು ಧರ್ಮಪತ್ನಿಯಾಗಿ ಸ್ವೀಕರಿಸಿ ಪಟ್ಟದರಾಣಿಯನ್ನಾಗಿ ಮಾಡಿಕೊಳ್ಳುವಂಥ ಅವನ ಹೃದಯವೈಶಾಲ್ಯ, ಸೀತೆ ತನ್ನ ಹೆಂಡತಿಯ ಮಗಳೆಂದು ತಿಳಿದು ಅವಳ ಯೋಗಕ್ಷೇಮಕ್ಕಾಗಿ ತೌರಿಗೆ ಕರೆತರುವ ಸದುದ್ದೇಶದಿಂದ ಸೀತಾಪಹರಣದ ಅಪವಾದವನ್ನೂ ಲೆಕ್ಕಿಸದೆ ಮಗಳನ್ನು ತೌರಿಗೆ ಕರೆತರುವ ಔದಾರ್ಯ ಕಂಡು, ಅವಳು ತಂದೆಯ ಬಗ್ಗೆ ಮಮತೆಯ ಭಾವನೆಗಳಿಂದ ಅಭಿವ್ಯಕ್ತಿಸುವ ಮಾತುಗಳು ನಾಟಕದ ಹೃದಯಭಾಗ.
ರಾಮನಲ್ಲಿ ಐಕ್ಯನಾಗಿ ಮುಕ್ತಿ ಪಡೆಯುವ ಅಭೀಪ್ಸೆಯಿಂದ ಅಳಿಯನನ್ನು ಕೆರಳಿಸಿ, ಅವನಿಂದಲೇ ಯುದ್ಧಕಂಕಣ ಕಟ್ಟಿಸಿಕೊಂಡು ಕೈವಲ್ಯ ಪಡೆಯುವ ಧೀಮಂತ, ಆಧ್ಯಾತ್ಮಿಕ ಚಿಂತನೆಯ ನೆಲೆಯಲ್ಲಿ ಉನ್ನತಸ್ತರಕ್ಕೇರುವ ರಾವಣನ ಪಾತ್ರ ನಾಟಕದಲ್ಲಿ ಬೇರೊಂದೇ ಖದರನ್ನು ಪಡೆದುಕೊಳ್ಳುವುದು ಈ ನಾಟಕದ ವಿಶೇಷ.
ರಾವಣ ಹಾಗೂ ಸೀತೆಯ ನಡುವಣ ಸಂಭಾಷಣೆಯಿಂದ ತಂದೆ-ಮಗಳಷ್ಟೇ ಆರ್ದ್ರರಾಗುವುದಿಲ್ಲ, ಪ್ರೇಕ್ಷಕರ ಕಣ್ಣಂಚುಗಳೂ ಪಸೆಯಾಗಿರುತ್ತವೆ. ಸ್ತ್ರೀಲೌಲ್ಯವೇ ತನ್ನ ದುರ್ಬಲಗುಣವೆಂಬುದನ್ನು ಬಲ್ಲ ರಾವಣ, ತನಗೊದಗಿದ ಶಾಪಗಳನ್ನು ಹಾಗೆಯೇ ತಾನು ಸಂಪಾದಿಸಿದ ವರಗಳೆಲ್ಲವನ್ನು ಅರಿತವನು, ಬದುಕಿನ ಗುಟ್ಟನ್ನು ತನ್ನ ಅನುಭವದಿಂದಲೇ ಕಂಡುಕೊಂಡವನು, ಅವನು ತನ್ನನ್ನೇ ತಾನು ವಿಶ್ಲೇಷಣೆ ಮಾಡಿಕೊಳ್ಳುವ ಬಗೆ ನಿಜಕ್ಕೂ ಅನನ್ಯ.
ಇವೆಲ್ಲಕ್ಕಿಂತ ಮಹತ್ತರವಾಗಿ ನಿಲ್ಲುವುದು ಅವನು ವಾಲ್ಮೀಕಿಯ ಕಾವ್ಯಪ್ರೇರಕನಾಗಿ ರಾಮಾಯಣದ ಕಥೆ ಬರೆಯಲು ಸೂತ್ರಧಾರನಾಗಿ ಮುಖ್ಯಪಾತ್ರ ವಹಿಸುವ ವೈಶಿಷ್ಟ್ಯ. ಜೋಡಿಯಾಗಿದ್ದ ಕ್ರೌಂಚಗಳಲ್ಲಿ ಗಂಡು ಹಕ್ಕಿಯ ವಧೆಯನ್ನು ಕಂಡು ನೋವಿನಿಂದ ಕಿರಾತನಿಗೆ ಶಾಪ ಕೊಡುವ ವಾಲ್ಮೀಕಿಗೆ ಅದು ಶೋಕದ ಘಟನೆಯಾದರೆ, ರಾವಣ ನಿಗೆ ಅದು ಮಧುರಗಾನ. ಆ ಶಾಪವಾಕ್ಯವನ್ನೇ ಹಾಡಿ ವಾಲ್ಮೀಕಿಯಲ್ಲಿದ್ದ ಕವಿಹೃದಯವನ್ನು ಜಾಗೃತಗೊಳಿಸುತ್ತಾನೆ. ನಾಟಕದ ಸಾಕ್ಷೀಪ್ರಜ್ಞೆಯಂತಿರುವ, ನಡುನಡುವೆ ಪ್ರಶ್ನಿಸುವ ಶಿಷ್ಯ ಭರದ್ವಾಜನ ವಿಮರ್ಶಕ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡುತ್ತ, ಕಥೆಯನ್ನು ಬೆಳೆಸುತ್ತ ಹೋಗುವ ವಿಸ್ಮಯಕಾರೀ ವ್ಯಕ್ತಿತ್ವದ ರಾವಣ ಭೂಮ್ಯಾಂತರಿಕ್ಷವಾಗುತ್ತಾನೆ.
ಸ್ತ್ರೀವಾದೀ ನೆಲೆಯಲ್ಲಿ ರಾಮನೊಡನೆ ವಾಗ್ವಾದಕ್ಕಿಳಿಯುವ, ಸ್ತ್ರೀ ಶೋಷಣೆಯ ವಿರುದ್ಧ ಬಂಡೇಳುವ ಮಂಡೋದರಿಯ ಚಿಂತನಶೀಲ ಮಾತುಗಳು ಮತ್ತೆ ಮತ್ತೆ ಮೆಲುಕು ಹಾಕುವಂತಿವೆ, ಹಾಗೂ ವಾಲ್ಮೀಕಿಯ ಪರಿಸರ ರಕ್ಷಣೆಯ ಕಾಳಜಿಯ ಸಂಭಾಷಣೆಗಳು ಪ್ರಸ್ತುತತೆಗೆ ಹಿಡಿದ ಕೈಗನ್ನಡಿಯಾಗಿದೆ. ರಾವಣ, ವಾಲ್ಮೀಕಿಗೆ ಉಪದೇಶಿಸುವ ‘’ ಮೃತ್ಯುರಹಸ್ಯ’’ದ ಪ್ರತಿ ಸಾಲುಗಳೂ ವೈಜ್ಞಾನಿಕ ನೆಲೆಯ ಸತ್ಯವನ್ನು ಬಿತ್ತರಿಸುತ್ತವೆ. ನೋಡುಗರು ಈ ದೃಶ್ಯದಲ್ಲಿ ತದೇಕಚಿತ್ತರಾಗಿ ವೀಕ್ಷಿಸುತ್ತಾ ಮಂತ್ರಮುಗ್ಧರಾಗುವುದು ವಿಶೇಷ. ಅಂತಿಮ ದೃಶ್ಯದಲ್ಲಿ, ಪೌಲಸ್ಥ್ಯ, ರಾಮನ ಕೈಯಲ್ಲಿ ಯುದ್ಧಕಂಕಣ ಕಟ್ಟಿಸಿಕೊಂಡು ಕೃತಕೃತ್ಯ ಭಾವದಿಂದ ನಿರ್ಗಮಿಸುವ ದೃಶ್ಯ ನೋಡುಗರ ಹೃದಯವನ್ನು ಭಾರವಾಗಿಸುತ್ತದೆ.
ಈ ನಾಟಕದ ಪ್ರಮುಖ ಆಕರ್ಷಣೆಯ ಸನ್ನಿವೇಶ- ರಾವಣ ಹಾಗೂ ದೇವಲೋಕದ ಸುಂದರಿ ರಂಭೆಯ ನಡುವಣ ಗಂಭೀರ ಚರ್ಚೆ, ನಡುನಡುವಣ ಕುಚೋದ್ಯ, ವಿನೋದಗಳ ಲಹರಿಯ ಸಂಭಾಷಣೆಗಳು ನೋಡುಗರ ಗಮನವನ್ನು ಹಿಡಿದಿಟ್ಟುಕೊಳ್ಳುತ್ತದೆ. ಮಹಾ ವೈಣಿಕನಾದ ರಾವಣ, ಕೈಯಲ್ಲಿ ವೀಣೆ ಹಿಡಿದರೆ ಸಾಕು, ದೇವಲೋಕದ ರಂಭೆಯ ಹೆಜ್ಜೆಗಳು ತನ್ನರಿವಿಲ್ಲದೆ ನರ್ತಿಸುತ್ತಾ, ಅವಳು ಅವನ ಮುಂದೆ ಪ್ರತ್ಯಕ್ಷಳಾಗಿ ಬಿಡುತ್ತಾಳೆ. ಗುರು-ಶಿಷ್ಯರ ವೀಣಾವಾದನ-ನರ್ತನ ಸಾಂಗವಾಗಿ ನಡೆಯುತ್ತದೆ.
ದಶಕಂಠನೆಂದು ಪ್ರಖ್ಯಾತನಾದ ರಾವಣನಿಗೆ ವಾಸ್ತವವಾಗಿ ಹತ್ತು ತಲೆಗಳಿರುವುದಿಲ್ಲ. ತನ್ನ ಕಂಠದಿಂದ ಅವನು ಏಕಕಾಲದಲ್ಲಿ ಹತ್ತು ರಾಗಗಳನ್ನು ಹೊರಡಿಸುತ್ತಿದ್ದ ಮಹಾಗಾಯಕ. ಇಂದು ಶಾಸ್ತ್ರೀಯ ಸಂಗೀತದಲ್ಲಿ ಪ್ರಸಿದ್ಧವಾಗಿರುವ ಶಂಕರಾಭರಣ, ಕಲ್ಯಾಣಿ, ಕಾಂಭೋಜಿ, ಭೈರವಿ ಮುಂತಾದ ದಶರಾಗಗಳ ಜನಕನವನು. ಮಹಾಬ್ರಾಹ್ಮಣನಾದ ಅವನು ಕರುಳನ್ನು ಮಿಡಿದು ಸಾಮಗಾನ ನುಡಿಸಿದ ಮಹಾ ಶಿವಭಕ್ತ. ಮಹಾಕವಿಯಾದ ಅವನು ರಚಿಸಿದ ಅನೇಕ ಶಿವಾಷ್ಟಕ, ರಾವಣ ದಂಡಕಗಳನ್ನು ಇವತ್ತಿಗೂ ಎಲ್ಲ ಶಿವ ದೇವಾಲಯಗಳಲ್ಲಿ ಪಠಿಸುವ ಪದ್ಧತಿಯಿದೆ. ಇಷ್ಟೆಲ್ಲಾ ಮಹಾಗುಣಗಳನ್ನು ತನ್ನ ವ್ಯಕ್ತಿತ್ವಕ್ಕೆ ಪ್ರಭಾವಳಿಯಾಗಿ ಹೊಂದಿದ್ದ ರಾವಣನ ಹೊಸದರ್ಶನ ಈ ನಾಟಕದ ಹೊಸ ಕೊಡುಗೆ.
ಸುಮಾರು ಎರಡೂವರೆಗಂಟೆಗಳ ಈ ಕುತೂಹಲಕರ ನಾಟಕವನ್ನು ಎಸ್.ವಿ ಕೃಷ್ಣ ಶರ್ಮ ತಮ್ಮ ಹರಿತವಾದ ನಿರ್ದೇಶನದಿಂದ, ದೃಶ್ಯ-ಪಾತ್ರಗಳು ಒಂದರೊಳಗೊಂದು ಹೆಣೆದುಕೊಂಡ ಉತ್ತಮ ರಂಗತಂತ್ರದ ಜಾಣ್ಮೆಯಿಂದ ಪರಿಣಾಮಕಾರಿಯಾಗಿ ಮೂಡಿಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಲಾತ್ಮಕ ರಂಗಸಜ್ಜಿಕೆ, ರಂಗದ ಮೂರು ಭಾಗಗಳಲ್ಲಿ ನಡೆಯುವ ದೃಶ್ಯಾವಳಿಗಳ ಸೊಗಸು ಹೃದಯಸ್ಪರ್ಶಿ. ಪರಿಣತ ನಟರ ಅತ್ಯುತ್ತಮ ಅಭಿನಯ, ಖ್ಯಾತ ಸಂಗೀತ ಸಂಯೋಜಕ ಪದ್ಮಚರಣರ ಮನೋಜ್ಞ ಸಂಗೀತ ಸಂಯೋಜನೆ, ವಿದ್ವಾನ್ ಎಸ್. ಶಂಕರ್ ಗಾಯನ ಪ್ರೇಕ್ಷಕರನ್ನು ಗಂಧರ್ವಲೋಕಕ್ಕೆ ಕೊಂಡೊಯ್ಯುತ್ತವೆ.