Image default
Drama Reviews

ತಿಳಿಹಾಸ್ಯದ ಹೊನಲು ಹರಿಸಿದ – ಸತ್ಯಂ ವಧ

ನಾಟಕದ ಶೀರ್ಷಿಕೆ ನೋಡಿದಾಗ ಕೊಂಚ ಗಲಿಬಿಲಿ ಎನಿಸಿತು. `ಸತ್ಯವನ್ನು ಹೇಳು’ ಎಂಬ ಸಂಸ್ಕೃತದ ಸುಪ್ರಸಿದ್ಧ ವಾಕ್ಯ `ಸತ್ಯಂ ವದ ’ ಇಲ್ಲೇಕೆ `ವಧ ‘ ಆಯಿತು ಎಂಬ ಪ್ರಶ್ನೆಗೆ ನಾಟಕ ನೋಡಿದ ಮೇಲೆ ಉತ್ತರ ಸಿಕ್ಕಿತು. ಸತ್ಯದ ವಧೆಯೇ ಈ ನಾಟಕದ ಹೂರಣ.

ಇತ್ತೀಚೆಗೆ ಕಲಾಗ್ರಾಮದಲ್ಲಿ `ಸಂಧ್ಯಾ ಕಲಾವಿದರು’ ಅಭಿನಯಿಸಿದ `ಸತ್ಯಂ ವಧ’ ಸಾಮಾಜಿಕ ನಾಟಕ ಮೊದಲಿನಿಂದ ಕಡೆಯವರೆಗೂ ಅಬ್ಬರವಿಲ್ಲದ ತಿಳಿಹಾಸ್ಯದ ಮಾತುಗಳ ಅಲೆಗಳಲ್ಲಿ ತೇಲಿಸುತ್ತ ಪ್ರೇಕ್ಷಕರನ್ನು ಶುದ್ಧಹಾಸ್ಯದ ಹೊನಲಿನಲ್ಲಿ           ಮೀಯಿಸಿತು. ಸ್ವಾರಸ್ಯಕರ ಸಂಭಾಷಣೆ, ವಿಶಿಷ್ಟ ವಿನ್ಯಾಸ, ರಂಗಸಜ್ಜಿಕೆ-ರಂಗತಂತ್ರಗಳಿಂದ ಸೆಳೆದ ಈ ನಾಟಕದ ರಚನೆ ಹಾಗೂ ನಿರ್ದೇಶನ ಎಸ್.ವಿ.ಕೃಷ್ಣ ಶರ್ಮ.

ನಾಟಕದಲ್ಲಿ ಕಾಣಿಸಿಕೊಳ್ಳುವುದು ಐದೇ ಪಾತ್ರಗಳಾದರೂ ಎಲ್ಲೂ ಏಕತಾನತೆಯಾಗಲಿ, ಬೇಸರವಾಗಲಿ ಕಾಡುವುದಿಲ್ಲ. ಪಾತ್ರಗಳ ಪರಿಪೋಷಣೆ ಅಷ್ಟು ಆಸಕ್ತಿಕರವಾಗಿದೆ. ಒಂದೊಂದು ಪಾತ್ರಗಳಿಗೂ ಅದರದೇ ಆದ ಮ್ಯಾನರಿಸಂ, ಮಾತಿನ ಧಾಟಿ, ವಿಭಿನ್ನ ನಡೆ ಇರುವುದರಿಂದ ಪಾತ್ರಗಳು ವೈವಿಧ್ಯಮಯ. ಯಾವುದೇ `ಲಾ’ ಡಿಗ್ರಿ ಇಲ್ಲದ ಬಾಲೂ ತಾನು ಪ್ರೀತಿಸಿದ ಹುಡುಗಿಗಾಗಿ ತಾನು ಲಾಯರ್ ಎಂದು ಸುಳ್ಳು ಹೇಳಿ, ಮುಂಬರುವ ಪ್ರಸಂಗಗಳಲ್ಲಿ ತನಗೆ ಗೊತ್ತಿಲ್ಲದೇ ಒಂದಕ್ಕೊಂದು ಸುಳ್ಳು ಹೆಣೆಯುತ್ತ, ಸುಳ್ಳಿನ ಸರಪಳಿಯಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುವ ಪೇಚಿನ ಪ್ರಸಂಗವನ್ನು ನಾಟಕ ಹದವಾಗಿ ಬೆಳೆಸುತ್ತ ಸಾಗುತ್ತದೆ. ಕಥೆ ಬಹು ಸಹಜವಾಗಿ ಸಾಗುತ್ತ ಪ್ರತಿ ಪ್ರಸಂಗವೂ ನಗೆಯುಕ್ಕಿಸುತ್ತದೆ. ಬಾಲುವಿನ ಮನೆಗೆ ಅನಿರೀಕ್ಷಿತವಾಗಿ ಬರುವ ಗೆಳೆಯ ಆನಂದ ತೀರ್ಥ ತನ್ನ ಚಿತ್ರಕ್ಕೆ ಮಾಡೆಲ್ ಆಗಿ ಕರೆಸುವ ರೇಖಾಳಿಂದ ಗಂಡ ಹೆಂಡಿರಲ್ಲಿ ತಪ್ಪು ತಿಳುವಳಿಕೆ, ಹೆಂಡತಿ ಮಾಲತಿ ಮನೆ ಬಿಟ್ಟು ಹೋಗುವುದು, ಆ ರಾತ್ರಿ ಊಟಕ್ಕೆ ಬರುವ ಬಾಸ್ ಮುಂದೆ ಮಾನ ಉಳಿಸಿಕೊಳ್ಳಲು ಬಾಲು,  ರೇಖಾಳನ್ನು ಹೆಂಡತಿಯಾಗಿ ನಟಿಸಲು ಹೇಳಿ ಉಂಟಾಗುವ ಫಜೀತಿಗಳು ಒಂದೆರಡಲ್ಲ. ಮುನಿಸಿಳಿದು ಮನೆಗೆ ಹಿಂತಿರುಗುವ ಮಾಲತಿ, ಕಡೆಯಲ್ಲಿ ಎಲ್ಲ ಅನುಮಾನ-ಗೊಂದಲಗಳಿಗೂ ಪರಿಹಾರ, ಬಾಲು ನಿಜವಾಗಿ ಲಾ ಪದವಿ ಪಡೆಯುವ ದಾರಿ ಕಂಡುಕೊಳ್ಳುವ ಸಕಾರಾತ್ಮಕ ಸಂದೇಶ ನೀಡುವಲ್ಲಿ ನಾಟಕ ಸುಖಾಂತ್ಯವಾಗುತ್ತದೆ.

          ಚಕಮಕಿಯ ಸಂಭಾಷಣೆ, ಗೊಂದಲ ಸೃಷ್ಟಿಸುವ ಸನ್ನಿವೇಶಗಳ ರಚನೆ, ಸ್ವಾರಸ್ಯಕರ ಬೆಳವಣಿಗೆಗಳಿಂದ ನಾಟಕ ನೋಡುಗರಿಗೆ ಭರಪೂರ ಮನರಂಜನೆಯನ್ನು ನೀಡುತ್ತದೆ. ನಾಟಕದ  ವಿನ್ಯಾಸ, ಬಿಗಿಬಂಧ ಗಮನ ಸೆಳೆಯುತ್ತವೆ. ನಿರ್ದೇಶಕ ಎಸ್.ವಿ.ಕೃಷ್ಣ ಶರ್ಮರ ನಿರ್ದೇಶನಾ ಶೈಲಿ ಮೆಚ್ಚುಗೆಯುಂಟು ಮಾಡುತ್ತದೆ. ಅಭಿನಯಿಸಿದ ಕಲಾವಿದರೆಲ್ಲ (ಸೌಮ್ಯ, ರಘುನಂದನ್, ಪವನ್ ಮತ್ತು ಗಗನ್) ಉತ್ತಮ ನಟನೆ ನೀಡಿದ್ದಾರೆ. ಮಾಡೆಲ್ ರೇಖಳಾಗಿ ಅನನ್ಯ ಕಶ್ಯಪ್ ತನ್ನ ಲೀಲಾಜಾಲ ಅಭಿನಯದಿಂದ ಇಷ್ಟವಾಗುತ್ತಾರೆ.

Related posts

ಬೆಂಗಳೂರು ನಾಗರತ್ನಮ್ಮನ ಹೃದಯಸ್ಪರ್ಶೀ ಚಿತ್ರಣ

YK Sandhya Sharma

ಅತ್ಯದ್ಭುತವಾಗಿ ಮೂಡಿಬಂದ `ಸುಯೋಧನ’

YK Sandhya Sharma

ಹೊಸ ಮೆರುಗಿನ ಮನೋಜ್ಞ ನಾಟಕ ‘’ಪೌಲಸ್ತ್ಯನ ಪ್ರಣಯ ಕಥೆ’’

YK Sandhya Sharma

Leave a Comment

This site uses Akismet to reduce spam. Learn how your comment data is processed.