Image default
Dance Reviews

Diverse Dance Festival of ‘Kuchipudi Natya Parampara’ 12 th Edition

ಕಣ್ಮನ ತಣಿಸಿದ ಕುಚಿಪುಡಿ ನಾಟ್ಯ ಪರಂಪರ ನೃತ್ಯೋತ್ಸವದ ವೈವಿಧ್ಯತೆ

ವೈವಿಧ್ಯಪೂರ್ಣ ನೃತ್ಯಾವಳಿ- ಕುಚಿಪುಡಿ ಪರಂಪರ 12 ನೇ ನೃತ್ಯೋತ್ಸವ

ಅಂದು- ಯುವ ನರ್ತಕಿಯರು ವರ್ಣರಂಜಿತ ವೇಷಭೂಷಣಗಳಲ್ಲಿ ಮಿನುಗುತ್ತ ಬೆಂಗಳೂರಿನ ‘ಸೇವಾಸದನ’ದ ವೇದಿಕೆಯ ಮೇಲೆ ಸುಮನೋಹರವಾಗಿ ನರ್ತಿಸುತ್ತಿದ್ದರೆ ಕಲಾರಸಿಕರ ಕಣ್ಣುಗಳಿಗೆ ಅದು ನಿಜಕ್ಕೂ ಹಬ್ಬವಾಗಿತ್ತು. ಖ್ಯಾತ ಕುಚಿಪುಡಿ ಕಲಾವಿದೆ ಮತ್ತು ಗುರುವಾದ ಆಚಾರ್ಯ ದೀಪಾ ನಾರಾಯಣ್ ಶಶೀಂದ್ರನ್ ಆಯೋಜಿಸಿದ್ದ ‘ಕುಚಿಪುಡಿ ನಾಟ್ಯ ಪರಂಪರ’ ನೃತ್ಯಸಂಸ್ಥೆಯ 12 ನೆಯ ನೃತ್ಯೋತ್ಸವ ಅತ್ಯಂತ ಯಶಸ್ವಿಯಾಗಿ ನೆರವೇರಿತು. 

        ಶುಭಾರಂಭವೇ ಅತ್ಯಂತ ಮೆರುಗಿನಿಂದ ಕೂಡಿದ ‘ಪ್ರವೇಶ ಧರು’ –ಪ್ರಾರ್ಥನಾ ಪದ್ಯವಾಗಿ ಲಕ್ಷ್ಮೀ ಶ್ಲೋಕದಿಂದ ಪ್ರಪ್ಹುಲ್ಲಿಸಿ ನೋಡುಗರ ಮನಸ್ಸನ್ನು ಸೆರೆಹಿಡಿಯಿತು. ‘ಲಕ್ಷ್ಮೀ ಪ್ರವೇಶಂ’ ಅನ್ನು ಮೂಲತಃ ‘ಕ್ಷೀರ ಸಾಗರ ಮದನಂ’ -ನೃತ್ಯನಾಟಕಕ್ಕೆ ‘ಪ್ರವೇಶ ಧರು’ವಾಗಿ ಪರಿಕಲ್ಪಿಸಿ, ನೃತ್ಯ ಸಂಯೋಜನೆ ಮಾಡಿದವರು ಡಾ. ವೆಂಪಟಿ ಚಿನ್ನ ಸತ್ಯಂ. ಕುಚಿಪುಡಿ ಯಕ್ಷಗಾನ ಮತ್ತು ನೃತ್ಯ ನಾಟಕ ನಿರ್ಮಾಣಗಳಲ್ಲಿ ಈ ‘ಪ್ರವೇಶ ಧರು’ ಅಥವಾ ಪರಿಚಯಾತ್ಮಕ ಹಾಡುಗಳು ಅತ್ಯಗತ್ಯ ಕೃತಿಗಳು. ಈ ಹಾಡುಗಳ ಮೂಲಕ ನಾಟಕದ ಮುಖ್ಯ ಪಾತ್ರಗಳು ತಮ್ಮನ್ನು ತಾವು ಈ ಪದ್ಯಗಳ ಮೂಲಕ ಪರಿಚಯಿಸಿಕೊಂಡು ತಮ್ಮಗುಣಾತ್ಮಕ  ಹಿರಿಮೆಯನ್ನು ಸಾದರಪಡಿಸುತ್ತವೆ.

ಶುಭಾರಂಭಕ್ಕೆ- ನೃತ್ಯ ಕಲಾವಿದೆಯರಾದ ಸಂಯುಕ್ತ ಮತ್ಸ ಮತ್ತು ಆಕುಂಡಿ ಶ್ರೀ ಸೌಮ್ಯ- ‘ಕ್ಷೀರಾಬ್ಧಿ ಕನ್ಯಾ ಶಿರಸಾ ನಮಾಮಿ’ ಎಂದು ಲಕ್ಷ್ಮೀದೇವಿಯ ಮಹಿಮಾತಿಶಯವನ್ನು ಕೊಂಡಾಡುತ್ತ, ಕೂಚಿಪುಡಿ ನೃತ್ಯ ಪ್ರವೇಶದ ವಿಶಿಷ್ಟ ಆಗಮನದ ‘ವಾಣಿ ಪರಾಕು’ವನ್ನು, ರಂಗಾಕ್ರಮಣದಲ್ಲಿ ಆನಂದದ ಹೆಜ್ಜೆ-ಗೆಜ್ಜೆಗಳನ್ನು ಧ್ವನಿಸಿ, ಭಾವಾಭಿವ್ಯಕ್ತಿಯ ನರ್ತನ ಅರ್ಪಿಸಿದರು. ಕಲಾವಿದೆದ್ವಯರು, ಒಬ್ಬರನ್ನೊಬ್ಬರು ಮೀರಿಸುವ ಚೈತನ್ಯ ಪ್ರದರ್ಶಿಸುತ್ತ  ತಮ್ಮ ಸಾಮರಸ್ಯದ, ಚೆಂದದ ನೃತ್ಯ ಆಂಗಿಕಗಳಿಂದ, ಸುಮನೋಹರ ಭಂಗಿಗಳಿಂದ, ಪಾದರಸದ ಮಿಂಚಿನ ವೇಗದಿಂದ ನರ್ತಿಸಿ ವಿಸ್ಮಯಗೊಳಿಸಿದರು. ಅರೆಮಂಡಿಯಲ್ಲಿ ಕುಳಿತು ಪುಟ್ಟ ಪುಟ್ಟ ಸುಂದರ ಹೆಜ್ಜೆಗಳಲ್ಲಿ ಮೆರಗು ಚೆಲ್ಲಿ, ಬಾಗಿ- ಬಳುಕುತ್ತ, ಹೊಳಪಿನ ನವ- ನೂತನ ನೃತ್ತಗಳ ಝೇಂಕಾರ ಮಿಡಿದರು. ಕಲಾವಿದೆಯರ ನಿಷ್ಕ್ರಮಣ ಕೂಡ ಅತ್ಯಂತ ಸೊಗಸಾದ ವೈಖರಿಯಲ್ಲಿತ್ತು. 

ಮುಂದೆ ಚೆಂದದ ಚೆಲುವ ಕನ್ನಿಕೆಯರು, ಡಾ. ಬಾಲಮುರಳೀ ಕೃಷ್ಣ ವಿರಚಿತ ಬ್ರುಂದಾವನೀ ರಾಗದ ಲಯಾತ್ಮಕ ನಡೆಯ ‘ತಿಲ್ಲಾನ’ವನ್ನು ತಮ್ಮ ಅಂಗಶುದ್ಧ ನೃತ್ತದ ಹಾಸು-ಬೀಸುಗಳಿಂದ ಲೀಲಾಜಾಲವಾಗಿ ನರ್ತಿಸುತ್ತ, ವಿವಿಧ ಪಾದಭೇದ, ಹಲವು ವಿನ್ಯಾಸದ ನೃತ್ತಗಳಲ್ಲಿ ಶಿಲ್ಪಾತ್ಮಕ ಭಂಗಿಗಳನ್ನು ರಚಿಸಿ, ಸುಂದರ ಭ್ರಮರಿಗಳೊಂದಿಗೆ, ‘ಜಾರು ನಡೆ’ಯ ಸೊಬಗಿನಿಂದ ಆಕರ್ಷಿಸಿದರು.  

ಅನಂತರ- ಕಲಾವಿದೆ ಡಾ. ಸ್ನೇಹಾ ಶಶಿಕುಮಾರ್ ಕುಚಿಪುಡಿ ಸಂಪ್ರದಾಯದ ಜನಪ್ರಿಯ ಕೃತಿ ‘ಕೃಷ್ಣ ಶಬ್ದಂ’ನಲ್ಲಿ, ಕೃಷ್ಣನನ್ನು ಆರಾಧಿಸುವ ಅಪ್ಪಟ ಪ್ರೇಮಿಯಾಗಿ ಅವನ ಲೀಲಾ ವಿನೋದಗಳನ್ನು ಪಾತ್ರದಲ್ಲಿ ಒಂದಾಗಿ, ಬಹುತನ್ಮಯತೆಯಿಂದ, ನವಿರಾಗಿ ಅಭಿನಯಿಸಿ ತಾನೊಬ್ಬ ನುರಿತ ಕಲಾವಿದೆಯೆಂದು ಸಾಕ್ಷೀಕರಿಸಿದಳು. ಆಕೆಯ ಮಿಂಚಿನ ವೇಗದ ಹರಿಣಿಯ ಕುಪ್ಪಳಿಕೆಯ ಆಂಗಿಕ ನಡೆಗಳು, ವಯ್ಯಾರದ ಮುದಗೊಳಿಸುವ ಅಭಿನಯದ ಗಾಢತೆ ಪರಿಣಾಮಕಾರಿಯಾಗಿದ್ದವು.

  ನಂತರ- ಸ್ನೇಹಾ, ಸಾಕ್ಷಾತ್ಕರಿಸಿದ ಶ್ರೀ ಅಣ್ಣಮಾಚಾರ್ಯರ ಶೃಂಗಾರ ಸಂಕೀರ್ತನವು ಸಾಮಾಜಿಕ ಆಯಾಮದಲ್ಲಿ, ನಾಟಕೀಯ ದೃಶ್ಯಗಳಲ್ಲಿ ಸಾಗುತ್ತ, ಕಲಾವಿದೆಯ ಸೂಕ್ಷ್ಮ ಭಾವನೆಗಳ ಅನಾವರಣ, ಹುಸಿಮುನಿಸು, ಶೃಂಗಾರದ ಅಭಿವ್ಯಕ್ತಿ , ಸುಕೋಮಲ, ಭಾವಪ್ರದ ಅಭಿನಯ, ಹಲವು ಭಾವ ತರಂಗಗಳಲ್ಲಿ ಹರಿದು ಹೃದಯಸ್ಪರ್ಶಿಯಾಗಿದ್ದವು.

ಮುಂದೆ-ನೃತ್ಯಾಂಗನೆ ಡಾ. ಸ್ಮೃತಿ ವಿಷ್ಣು,  ಕುಚಿಪುಡಿ ನೃತ್ಯದ ಶೋಭೆಯನ್ನು ಮತ್ತಷ್ಟು ವೃದ್ಧಿಸಿ ತನ್ನ ವಿಶಿಷ್ಟ ನರ್ತನದ ಛಾಪು ಬೀರಿದಳು. ಬಳ್ಳಾರಿ ಸಹೋದರರು ರಚಿಸಿದ ಗುರು ದೀಪಾ ನಾರಾಯಣ್ ಕಲಾತ್ಮಕವಾಗಿ ನೃತ್ಯ ಸಂಯೋಜಿಸಿದ ಚಂದ್ರಕೌನ್ಸ್ ರಾಗ- ಆದಿತಾಳದ ‘ಚಂದ್ರಶೇಖರಂ ಭಜಾಮಿ ಸತತಂ’- ಶಿವಸ್ತುತಿಯಲ್ಲಿ ಕಲಾವಿದೆ ಅದೆಷ್ಟು ಬಗೆಯ ವಿಶಿಷ್ಟ ಶಿವಭಂಗಿಗಳನ್ನು ಅಭಿವ್ಯಕ್ತಿಸಿದಳೆಂದರೆ, ಪ್ರತಿಯೊಂದೂ ಶಿಲ್ಪಸದೃಶ ಭಂಗಿಗಳೂ ಅನನ್ಯವಾಗಿತ್ತು. ಆಂಗಿಕಗಳಲ್ಲಿ ಚೈತನ್ಯ ಚಿಮ್ಮುತ್ತಿತ್ತು. ಆಕೆಯ ಸ್ನಿಗ್ಧಕಳೆಯ ಅಚ್ಚುಕಟ್ಟಾದ ನರ್ತನ, ದೈವೀಕ ಭಾವಾನುಬಂಧದಲ್ಲಿ ಮನದುಂಬಿತು. ನಂತರ- ಕಲಾವಿದೆ, ಶ್ರೀಜಯದೇವ ಕವಿಯ ‘ಗೀತ ಗೋವಿಂದ’ದ 23 ನೆಯ ಅಷ್ಟಪದಿ ‘ಕಿಸಲಯ ಸಯನ’ ಎಂಬ ಶೃಂಗಾರಭರಿತ ಭಾವ ಸಮುಚ್ಚಯದ ಸಾರವನ್ನು ಸಮರ್ಥವಾಗಿ ಸಾಕಾರಗೊಳಿಸಿದಳು. ಪ್ರಕೃತಿಯ ರಸಮಯ ಕ್ಷಣಗಳನ್ನು ತನ್ನ ಮುದಗೊಳಿಸುವ ಸುಕೋಮಲ ಅಭಿನಯದಲ್ಲಿ ಸೆರೆಹಿಡಿದ ಕಲಾವಿದೆ ತನ್ನ ವಿರಹದ ಸಮ್ಮೋಹಕ ಭಾವನೆಗಳನ್ನು, ಭಾವತನ್ಮಯತೆಯಿಂದ ಅಭಿವ್ಯಕ್ತಿಸಿ ನೋಡುಗರಿಗೆ ನಾಟ್ಯದ ಸುಖಾನುಭವ ನೀಡಿದಳು.

ಕಾರ್ಯಕ್ರಮದ ಅಂತ್ಯದಲ್ಲಿ ‘ರುದ್ರಶತಕಂ’ -ಪಂಡಿತ್ ರಾಜೇಂದ್ರ ಗಂಗಾನಿ ಅವರು ನೃತ್ಯ ಸಂಯೋಜಿಸಿದ ರಮ್ಯ – ರಮಣೀಯ ನೃತ್ಯ, ಗುರು ಆರತಿ ಶಂಕರ್ ಮತ್ತು ಅವರ ಶಿಷ್ಯವೃಂದ, ಹಾಲು- ಜೇನಿನ ಮೋಹಕ ಸಾಮರಸ್ಯದಲ್ಲಿ ಸಾಕಾರಗೊಳಿಸಿದರು. ಸುಮನೋಹರ ಕಥಕ್ ನೃತ್ಯದ ನವಿರು ಹೆಜ್ಜೆಗಳ, ಮನಾಪಹಾರಿ ಮೃದುಹಾಸದ ಆಂಗಿಕಾಭಿನಯ ತಂಗಾಳಿ ಬೀಸಿದಂತೆ ಹಿತ ನೀಡಿತ್ತು. ಕಲಾವಿದೆಯರು ಲೀಲಾಜಾಲ ಭ್ರಮರಿಗಳಲ್ಲಿ ಮಿಂಚಿ ‘ತತ್ಕಾರ’ ಝಣತ್ಕಾರದಲ್ಲಿ ರೋಮಾಂಚಗೊಳಿಸಿದರು.

ನಂತರದಲ್ಲಿ,  ಗುರು ಆರತಿ ಶಂಕರ್ ನೃತ್ಯ ಸಂಯೋಜನೆ ಮತ್ತು ಆಕೆಯ ಏಕವ್ಯಕ್ತಿ ನೃತ್ಯ ಪ್ರದರ್ಶನ ತೀನ್ ತಾಳದ ‘ಓಂ ನಮೋ ನಾರಾಯಣ’ -ಭಕ್ತಿ ತಾದಾತ್ಮ್ಯತೆಯಿಂದ ಅನಾವರಣಗೊಂಡಿತು. ಸತತ ‘ಚಕ್ಕರ್’ ಗಳ ತಿರುಗುವಿಕೆಯಲ್ಲಿ ಕಲಾವಿದೆ ಧರಿಸಿದ್ದ ವರ್ಣಮಯ ಲಂಗವು, ಛತ್ರಿಯಂತೆ ಕಲಾತ್ಮಕವಾಗಿ ಅರಳಿ, ಮಿಂಚಿನ ವೇಗದ ಆಂಗಿಕಾಭಿನಯದ ಸೊಗಸಿನಲ್ಲಿ ಹೊಸನೋಟ ನೀಡಿತು. ನಾರಾಯಣನ ವಿವಿಧ ಭಂಗಿಗಳ ದೈವೀಕ ಭಂಗಿಗಳು ಮನಮುಟ್ಟಿದವು.

ಅಂತ್ಯದ ಕೃತಿ – ‘ಚದುರಂಗ್’ – ಪ್ರಕೃತಿಯ ಆರಾಧನೆ- ಮಹತ್ವ ಹಾಗೂ ಸೌಂದರ್ಯದ ಪಾರಮ್ಯವನ್ನು ಕಲಾವಿದೆಯರ ಉಲ್ಲಾಸದ ನರ್ತನ ವಿಲಾಸದಲ್ಲಿ ಮನರಂಜನೆಯನ್ನು ನೀಡಿತು.

 ಒಟ್ಟಾರೆ ದೀಪಾ ಶಶೀಂದ್ರನ್  ಅವರ ವಿಶಿಷ್ಟ ಪರಿಕಲ್ಪನೆಯ ನೃತ್ಯ ವೈವಿಧ್ಯ ‘ಕುಚಿಪುಡಿ ನಾಟ್ಯ ಪರಂಪರೆ’ಯ ಅರ್ಥಪೂರ್ಣ ನೃತ್ಯೋತ್ಸವವಾಗಿ ಬೆಂಗಳೂರಿಗರ ಗಮನ ಸೆಳೆದು ಬಹು ಮೆಚ್ಚುಗೆಯನ್ನು ಗಳಿಸಿತು.

         ************************************  ವೈ.ಕೆ.ಸಂಧ್ಯಾ ಶರ್ಮ   

Related posts

ತ್ಯಾಗರಾಜರ ಚೇತನವನ್ನು ಸಾಕ್ಷಾತ್ಕರಿಸಿದ ಅಪೂರ್ವ ಕ್ಷಣಗಳು

YK Sandhya Sharma

ಶಾಲಿವಾಹನ ಸುಂದರ ನೃತ್ಯರೂಪಕ

YK Sandhya Sharma

ಕಣ್ಮನ ತುಂಬಿದ ಪವಿತ್ರ ಪ್ರಿಯಳ ಭಾವಸ್ಫುರಣ ನೃತ್ಯ

YK Sandhya Sharma

Leave a Comment

This site uses Akismet to reduce spam. Learn how your comment data is processed.