Image default
Dance Reviews Events

ತ್ಯಾಗರಾಜರ ಚೇತನವನ್ನು ಸಾಕ್ಷಾತ್ಕರಿಸಿದ ಅಪೂರ್ವ ಕ್ಷಣಗಳು

ಕರ್ನಾಟಕ ಶಾಸ್ತ್ರೀಯ ಸಂಗೀತಲೋಕಕ್ಕೆ ಮಹಾನ್ ಕೊಡುಗೆ ನೀಡಿರುವ ಶ್ರೀ ತ್ಯಾಗರಾಜ ಸ್ವಾಮಿ ಸಂಗೀತ ಜಗತ್ತಿನ ಅಮೂಲ್ಯ ರತ್ನವೆಂದರೆ ಅತಿಶಯೋಕ್ತಿಯಲ್ಲ. ಅವರ ಹೃದಯಸ್ಪರ್ಶಿ ರಚನೆಗಳು ಇಂಪಾಗಿರುವುದಷ್ಟೇ ಅಲ್ಲದೆ ಅರ್ಥಪೂರ್ಣವಾಗಿಯೂ ಇರುವುದು ಅವುಗಳ ವೈಶಿಷ್ಟ್ಯ. ವಿಶ್ವವ್ಯಾಪಿ ಇವುಗಳು ಜನಪ್ರಿಯವಾಗಿದ್ದು, ಈ ಕೃತಿಗಳನ್ನು ನೃತ್ಯಕ್ಕೆ ಅಳವಡಿಸುವ ಪ್ರಯತ್ನಗಳು ಸತತ ನಡೆದಿದ್ದು, ಹೃದಯಂಗಮ ನೃತ್ಯ ಪ್ರದರ್ಶನ-ಪ್ರಯೋಗಗಳನ್ನು ಪ್ರಸ್ತುತಪಡಿಸುತ್ತಿರುವುದು ಅಷ್ಟೇ ಜನಜನಿತ.

ಇಂಥ ಒಂದು ಅಪರೂಪದ ಪ್ರಯೋಗವನ್ನು ಖ್ಯಾತ ‘ನಟನಂ ಇನ್ಸ್ಟಿಟ್ಯುಟ್ ಆಫ್ ಡಾನ್ಸ್’ ಸಂಸ್ಥೆಯ ನಿರ್ದೇಶಕಿ, ಅಂತರರಾಷ್ಟ್ರೀಯ ನೃತ್ಯ ಕಲಾವಿದೆ-ಗುರು ಡಾ. ರಕ್ಷಾ ಕಾರ್ತೀಕ್, ದಿಗ್ಗಜ ಕರ್ನಾಟಕ ಸಂಗೀತ ಪಿತಾಮಹ ತ್ಯಾಗರಾಜರಿಗೆ ನೃತ್ಯನಮನ ರೂಪದಲ್ಲಿ ಶ್ರದ್ಧಾಪೂರ್ವಕವಾಗಿ ನೃತ್ಯಾರಾಧನೆ ಸಮರ್ಪಿಸಿ ಕಲಾಪ್ರಿಯರ ಮೆಚ್ಚುಗೆಯನ್ನು ಗಳಿಸಿದರು.

ಹೃದಯಸ್ಪರ್ಶೀ ಅನುಭವವನ್ನು ನೀಡುವ ಶ್ರೀ ತ್ಯಾಗರಾಜರ ಕೀರ್ತನೆಗಳ ಸವಿಯನ್ನು ಆಸ್ವಾದಿಸಿದಷ್ಟೂ ಇನ್ನೂ ಆಲಿಸಬೇಕೆನ್ನುವ ಅಲೌಕಿಕ ಆನಂದ ಉಂಟಾಗುವುದು ಸಹಜ. ಇತ್ತೀಚಿಗೆ ರಕ್ಷಾ ಕಾರ್ತೀಕ್ ಅವರು ಕೋರಮಂಗಲದ ಪ್ರಸನ್ನ ಗಣಪತಿ ದೇವಾಲಯದ ವೇದಿಕೆಯಲ್ಲಿ ‘ತ್ಯಾಗರಾಜರ ಆರಾಧನೆ’ಯ ಪ್ರಯುಕ್ತ ತ್ಯಾಗರಾಜರ ಆರಾಧ್ಯದೈವ ‘ಶ್ರೀರಾಮನವಮಿ’ಯ ಪ್ರಶಸ್ತ ದಿನದಂದೇ ಸಮರ್ಪಿಸಿದ್ದು ಅಂದು ಶ್ರೀರಾಮನಿಗೆ ‘ನೃತ್ಯ ನೈವೇದ್ಯ’ವಾಯಿತು.

ಡಾ. ರಕ್ಷಾ ಕಾರ್ತೀಕ್ ತಮ್ಮ ಶಿಷ್ಯೆಯರೊಡನೆ ನಡೆಸಿಕೊಟ್ಟ ನೃತ್ಯಪ್ರಸ್ತುತಿ ಸಂಪೂರ್ಣವಾಗಿ , ತ್ಯಾಗರಾಜ ರಚಿತ ಕೃತಿಗಳೇ ಆಗಿದ್ದು ಅಂದಿನ ವಿಶೇಷ. ಸುಮಾರು ಇಪ್ಪತ್ತೈದು ಜನ ನೃತ್ಯ ಕಲಾವಿದೆಯರು ಭಕ್ತಿಪೂರ್ವಕವಾಗಿ ನೃತ್ಯಾಂಜಲಿಯನ್ನು ಅರ್ಪಿಸಿದರು.

ಶುಭಾರಂಭಕ್ಕೆ ‘ಪುಷ್ಪಾಂಜಲಿ’ ಯಿಂದ ಕಣ್ಮನ ತಣಿಸಿದ ನೃತ್ಯವೃಂದ ಲಂಬೋದರನಿಗೆ ಪ್ರಥಮ ವಂದನೆಯಾಗಿ ‘ಶ್ರೀ ಗಣಪತಿನಿ’ ( ಸೌರಾಷ್ಟ್ರ ರಾಗ – ಆದಿ ತಾಳ)ಯನ್ನು ತಮ್ಮ ಅಚ್ಚುಕಟ್ಟಾದ ನೃತ್ಯ ನೈದಿಲೆಯಿಂದ ಭಕ್ತಿಪೂರ್ವಕವಾಗಿ ನಿವೇದಿಸಿದರು. ಅನಂತರ ಗಣಪನ ಸೋದರ ಸ್ಕಂಧಸ್ವಾಮಿ ‘ವರಶಿಖಿ ವಾಹನ’-( ರಾಗ -ಸುರದೀಪಂ, ಆದಿತಾಳ) ನ ಮಹಿಮೆ- ಸೌಂದರ್ಯವನ್ನು ಕಲಾವಿದೆಯರು ತಮ್ಮ ಸುಮನೋಹರ ಆಂಗಿಕಾಭಿನಯದಿಂದ, ಸಾಮರಸ್ಯದ ಹೆಜ್ಜೆಗಳಿಂದ ಸ್ತುತಿಸಿದರು. ಕುಮಾರಸ್ವಾಮಿಯ ಅನೇಕ ಮಹಿಮೆಗಳನ್ನು ಸಾರುವ ಸಂಚಾರಿ ಕಥಾನಕ ರಮ್ಯವಾಗಿ ಅಭಿವ್ಯಕ್ತಗೊಂಡವು. ಗುರು ರಕ್ಷಾ ಅವರ ಉತ್ತಮ ತರಬೇತಿ ಸುವ್ಯಕ್ತವಾದವು. ಪ್ರಸ್ತುತಿಯ ಕಡೆಯ ಸುಂದರಭಂಗಿ- ವಿನ್ಯಾಸಗಳು ನೆನಪಿನಲ್ಲುಳಿ ಯುವಂತಿದ್ದವು.

ಮುಂದೆ- ಜಗದಾನಂದಕಾರಕ- ದೇವಾಧಿದೇವ ರಾಮನ ವೈಶಿಷ್ಟ್ಯಗಳನ್ನು ಬಣ್ಣಿಸಲಾಯಿತು. ಕಲಾವಿದೆಯರು ಪ್ರದರ್ಶಿಸಿದ ಆಕಾಶಚಾರಿಗಳು, ಸುಂದರ ಹಸ್ತ ವಿನಿಯೋಗಗಳ ನರ್ತನ ಆಹ್ಲಾದಕರವಾಗಿತ್ತು.  ‘ಸಾಧಿಂಚನೆ…’- ಕೃತಿಯಲ್ಲಿ ನಿಂದಾಸ್ತುತಿಯಂತೆ ವಾಗ್ಗೇಯಕಾರ ಶ್ರೀಕೃಷ್ಣನ ಉನ್ನತ ಮಹಿಮೆಗಳನ್ನು ಸಾಹಸ-ವಿನೋದಗಳನ್ನು ಬಣ್ಣಿಸಲಾಗಿದೆ. ಕೃತಿಯನ್ನು ಕಲಾವಿದೆಯರು ಸುಂದರ ಭಂಗಿಗಳೊಂದಿಗೆ ಸುಂಸರವಾಗಿ ಸಾದರಪಡಿಸಿದರು.  ‘ನಾದ ತನುಮನಿಷಂ’ ( ಚಿತ್ತರಂಜಿನಿ ರಾಗ )- ಎಂದು ಪರಶಿವನ ಐದು ಮುಖಗಳನ್ನು ಐದು ಶ್ಲೋಕಗಳಲ್ಲಿ ಮತ್ತು ‘ಎಂದರೋ ಮಹಾನುಭಾವುಲು’ ಮುಂತಾದ ಕೀರ್ತನೆಗಳನ್ನು ಸುಮನೋಹರವಾಗಿ ಸಾಕ್ಷಾತ್ಕರಿಸಿ ನೆರೆದ ಕಲಾರಸಿಕರ ಮನತಣಿಸಿದರು.

ಡಾ. ರಕ್ಷಾ, ಶಿಷ್ಯರನ್ನು ಬಹು ಬದ್ಧತೆ -ಪರಿಶ್ರಮಗಳಿಂದ ಸೊಗಸಾಗಿ ತಯಾರು ಮಾಡಿದ್ದು ದೃಗ್ಗೋಚರವಾಗಿತ್ತು. ಪ್ರತಿ ಕಲಾವಿದೆಯರೂ ತನ್ಮಯತೆಯಿಂದ ಲವಲವಿಕೆಯಿಂದ ನರ್ತಿಸಿದ್ದು ಆಹ್ಲಾದಕರವಾಗಿತ್ತು.

ಮುಂದೆ- ಡಾ. ರಕ್ಷಾ ಕಾರ್ತೀಕ್ ತಾವು ಅತ್ಯುತ್ತಮ ಕಲಾವಿದೆ ಎಂಬುದನ್ನು ಸ್ವತಃ ನರ್ತಿಸಿ ಸಾಬೀತುಗೊಳಿಸಿದರು. ಪರಿಣತ ಅಭಿನಯವೇ ಅವರ ಶಕ್ತಿ ಮತ್ತು ವೈಶಿಷ್ಟ್ಯ.!!!.. ತ್ಯಾಗರಾಜರ ಪ್ರತಿಯೊಂದು ಕೀರ್ತನೆಗಳೂ ರಸದೂಟೆಗಳು!!… ಅರ್ಥಗರ್ಭಿತ ಅಷ್ಟೇ ಭಾವಪೂರ್ಣ!!.. ತ್ಯಾಗರಾಜರ ಘನ ಪಂಚರತ್ನ ಕೀರ್ತನೆಗಳಿಗೆ ಜೀವತುಂಬಿದ ರಕ್ಷಾ, ಭಕ್ತಿ ಪರವಶತೆಯಿಂದ, ಕಾರುಣ್ಯದ ಸಾಕಾರಮೂರ್ತಿಯಾಗಿ ಅವರ ಕೃತಿಗಳ ಸಾರಸರ್ವಸ್ವವನ್ನು ಕಣ್ಮುಂದೆ ತಂದು ನಿಲ್ಲಿಸಿ ಪ್ರೇಕ್ಷಕರ ಹೃದಯವನ್ನು ತುಂಬಿದರು.

ಪಶ್ಚಾತ್ತಾಪದಿಂದ ದಗ್ಧನಾಗಿ ಹೋದ ಆರ್ದ್ರ ಭಕ್ತನಾಗಿ, ತನ್ನ ದುಡುಕಿನ ವರ್ತನೆಗಳ ಬಗ್ಗೆ ಆತ್ಮನಿಂದನೆ ಮಾಡಿಕೊಳ್ಳುವ, ‘ದುಡುಕುಗಳ ನನ್ನೀ ದೂರ…’- ಎಂದು ದುಃಖದಿಂದ ಕುಬ್ಜನಾಗಿ ಶರಣಾಗತನಾಗುವ ಭಕ್ತನ ಪಾತ್ರವನ್ನು ರಕ್ಷಾ, ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ತಮ್ಮ ಪ್ರೌಢ ಅಭಿನಯದಿಂದ ನೋಡುಗರ ಹೃದಯವನ್ನು ಕಲಕಿದರು. ತಮ್ಮ ಅಸ್ಖಲಿತ ಆಂಗಿಕಾಭಿನಯದಿಂದ, ಸೌಮ್ಯ ನೃತ್ತಮಾಲೆಗಳಿಂದ, ಭಾವಪೂರ್ಣ- ಅಮೋಘ ಅಭಿನಯದಿಂದ ಭಾವಸಮಾಧಿಗೊಯ್ದರು.

ತ್ಯಾಗರಾಜರ ಜೀವನ ಚಿತ್ರಣವನ್ನು, ಸನ್ನಿವೇಶಕ್ಕೆ ಹೊಂದುವಂತೆ ಅವರ ವಿವಿಧ ಕೀರ್ತನೆಗಳನ್ನು ಆಯ್ದುಕೊಂಡು, ಕಥಾ ಎಳೆಯೊಂದನ್ನು ಕೋದು, ಅವರ ಸಮಗ್ರ ಜೀವನಚಿತ್ರ -ವ್ಯಕ್ತಿತ್ವವನ್ನು ಸೊಗಸಾಗಿ ಅನಾವರಣಗೊಳಿಸಿದ್ದು ಹೃದಯಸ್ಪರ್ಶಿಯಾಗಿತ್ತು. ‘ಶೋಬಿಲ್ಲು ಸಪ್ತಸ್ವರ…’-ಭಕ್ತ ಆಂಜನೇಯನ ಅಸೀಮ ಭಕ್ತಿಯನ್ನು ಕಣ್ಮುಂದೆ ಕಟ್ಟುವಂಥ ಅಭಿನಯ ಅವರದಾಗಿತ್ತು. ‘ಎಂದುಕು ದಯರಾದುರಾ..’ಎಂದು ರಾಮನಲ್ಲಿ ಶರಣು ಹೋಗುವ ತ್ಯಾಗರಾಜರು, ರಾಜನ ಕೃಪಾಶ್ರಯ ಒಲ್ಲದೆ  ‘ ನರ ಸ್ತುತಿ ಸುಖಮಾ..’ ಎಂದು ವಿಲಪಿಸುವರು. ‘ನಿಧಿ ಚಾಲ ಸುಖಮಾ..’ ಎಂದು ಪ್ರಶ್ನಿಸುವ ಸನ್ನಿವೇಶವನ್ನು ರಕ್ಷಾ ಹೃದಯಂಗಮವಾಗಿ ಕಟ್ಟಿಕೊಡುತ್ತಾರೆ. ಒಮ್ಮೆ ತನ್ನ ಆರಾಧ್ಯದೈವ  ಶ್ರೀರಾಮನ ವಿಗ್ರಹವನ್ನು ಕಾಣದೆ ‘ಮರುಗೇಲರಾ ಓ ರಾಘವಾ…’ ಎಂದು ಕರುಣಾಜನಕವಾಗಿ ಶೋಕಿಸುತ್ತ ಕಡೆಗೆ ನೀರಿನಲ್ಲಿ ರಾಮನನ್ನು ಕಂಡುಕೊಂಡು ಧನ್ಯತೆಯ- ರೋಮಾಂಚಕ ಕ್ಷಣಗಳನ್ನು ಅನುಭವಿಸಿ, ಜನ್ಮಸಾರ್ಥಕತೆ ಕಂಡುಕೊಳ್ಳುವ ದಿವ್ಯ ಕ್ಷಣಗಳನ್ನು ನುರಿತ ಕಲಾವಿದೆ ತಮ್ಮ ಅಭಿನಯ ಪರಿಣತಿಯಿಂದ ಅತ್ಯಂತ ಭಾವಪೂರ್ಣವಾಗಿ ಸಾಕ್ಷಾತ್ಕರಿಸುತ್ತಾರೆ.

ಹೃದಯ ತುಂಬಿದ ರಸಪೂರ್ಣ ಗಾಯನ- ನೃತ್ಯಾರಾಧನೆ ನೋಡುಗರನ್ನು ಬೇರೊಂದುಲೋಕಕ್ಕೆ ಕರೆದೊಯ್ದಿತ್ತು. ಇಡೀ ವಾತಾವರಣದಲ್ಲಿ ದೈವೀಕತೆ ತಾಂಡವವಾಡುತ್ತಿತ್ತು.

ನಿಜಕ್ಕೂ ತ್ಯಾಗರಾಜರು ಅಲ್ಲೆಲ್ಲೋ ತಂಬೂರಿ ಮೀಟುತ್ತ, ನರ್ತನದ ಸೌಂದರ್ಯವನ್ನು ಮನಸಾರೆ ಆಸ್ವಾದಿಸುತ್ತಾ ಹೆಜ್ಜೆಗಳನ್ನು ಹಾಕುತ್ತಿದ್ದುದು ಸೂಕ್ಷ್ಮಗ್ರಾಹ್ಯ ಚೇತನಗಳ ಅನುಭವಕ್ಕೆ ಬಂದಿದ್ದೀತು.!!!

                             ********************

Related posts

ರಸಾನುಭವದ ರಸಸಂಜೆ- ನೀಲಾ ಮಾಧವ ನೃತ್ಯರೂಪಕ

YK Sandhya Sharma

ಉದಯೋನ್ಮುಖ ಉತ್ಸಾಹೀ ಪ್ರತಿಭೆಗಳ ಗೆಜ್ಜೆನಾದ

YK Sandhya Sharma

‘ಭರತದರ್ಶನ’ದ ಮನಸೆಳೆದ ರಮ್ಯನರ್ತನ

YK Sandhya Sharma

Leave a Comment

This site uses Akismet to reduce spam. Learn how your comment data is processed.