ವಾಗ್ಗೇಯಕಾರ ತ್ಯಾಗರಾಜರಿಗೆ ನೃತ್ಯಾರಾಧನೆ
ಕರ್ನಾಟಕ ಶಾಸ್ತ್ರೀಯ ಸಂಗೀತಲೋಕಕ್ಕೆ ಮಹಾನ್ ಕೊಡುಗೆ ನೀಡಿರುವ ಸಂಗೀತ ದಿಗ್ಗಜ, ಶ್ರೀ ತ್ಯಾಗರಾಜರ ಒಂದೊಂದು ಕೃತಿಗಳೂ ಅನುಪಮ-ಅರ್ಥಗರ್ಭಿತ. ಭಕ್ತಿ ರಸಾಯನದಲ್ಲಿ ಮಿಂದೇಳುವ ಕೃತಿಗಳ ಗಾನಮಾಧುರ್ಯಕ್ಕೆ ಮರುಳಗದವರೇ ಇಲ್ಲ. ಸಂಗೀತಕ್ಕೆ ಒಂದು ಹೊಸ ವರ್ಚಸ್ಸು-ಜೀವಕಳೆ ತುಂಬಿದ, ಹೊಸರಾಗಗಳಿಂದ ಕರ್ನಾಟಕ ಸಂಗೀತವನ್ನು ಶ್ರೀಮಂತಗೊಳಿಸಿದ ಮಹಾನ್ ವಾಗ್ಗೇಯಕಾರರು. ಅವರ ಆರಾಧನೆ ಒಂದು ಜನತಾ ಸಂಗೀತೋತ್ಸವ. ಶ್ರೀರಾಮನವಮಿಯಂತೆ ತಿಂಗಳಾನುಗಟ್ಟಲೆ ಸಾರ್ವಜನಿಕವಾಗಿ ನಡೆಯುತ್ತದೆ. ನೃತ್ಯೋತ್ಸವವೂ ಅವರಿಗೆ ಸಮರ್ಪಿತ.
ಶ್ರೀ ತ್ಯಾಗರಾಜರ ಆರಾಧನೆಯ ಪ್ರಯುಕ್ತ ‘ನಟನಂ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್’ ಸಂಸ್ಥೆಯ ನಿರ್ದೇಶಕಿ, ನಾಟ್ಯಗುರು, ಅಭಿನಯ ಚತುರೆ ಡಾ. ರಕ್ಷಾ ಕಾರ್ತೀಕ್, ತ್ಯಾಗರಾಜರ ಹೃದಯಸ್ಪರ್ಶಿ ರಚನೆಗಳಿಗೆ ಮೂರ್ತರೂಪ ನೀಡುವ ಸಾರ್ಥಕ ಪ್ರಯೋಗ ಮಾಡಿದವರಲ್ಲಿ ಮುಖ್ಯರು. ಇಂದಿಗೂ ಈಕೆ, ದಂತವೈದ್ಯೆಯಾಗಿ ವೃತ್ತಿ ನಿರ್ವಹಿಸುತ್ತಾ, ನೃತ್ಯ ಕಲಾವಿದೆಯಾಗಿ ಸುವಿಖ್ಯಾತಿ ಪಡೆದು, ವೃತ್ತಿ-ಪ್ರವೃತ್ತಿಗಳನ್ನು ಸಮಾನವಾಗಿ ತೂಗಿಸಿಕೊಂಡು ಹೋಗುತ್ತಿರುವ ಕ್ರಿಯಾಶೀಲೆ. ಕೋರಮಂಗಲದಲ್ಲಿ ತಮ್ಮದೇ ಆದ ‘’ ನಟನಂ ಇನ್ಸಿಟ್ಯೂಟ್ ಆಫ್ ಡಾನ್ಸ್’’ ಎಂಬ ತಮ್ಮ ನೃತ್ಯಶಾಲೆಯ ಮೂಲಕ ನೂರಾರು ಮಕ್ಕಳಿಗೆ ಭರತನಾಟ್ಯ, ಜಾನಪದ ಮತ್ತು ಕಾನ್ಟೆಂಪೊರರಿ ನೃತ್ಯಗಳಲ್ಲಿ ತರಬೇತಿ ನೀಡುತ್ತಿದ್ದಾರೆ. ದೃಷ್ಟಿ-ಶ್ರವ್ಯ ವಿಶೇಷಚೇತನ ಮಕ್ಕಳಿಗೆ ವಿಶೇಷ ರೀತಿಯ ನೃತ್ಯಪಾಠ ಹೇಳುವ ಕೌಶಲ್ಯ ಇವರದಾಗಿದೆ. ದೇಶ-ವಿದೇಶಗಳಲ್ಲಿ ಇವರ ನೃತ್ಯಪ್ರತಿಭೆ ಗುರುತಿಸಲ್ಪಟ್ಟಿದೆ. ನವರಸಗಳ ಅಭಿನಯಕ್ಕೆ ಹೆಸರಾದ ರಕ್ಷಾಗೆ ಅಭಿನಯ ಪ್ರಾಧಾನ್ಯ ಕೃತಿಗಳ ಬಗ್ಗೆ ಹೆಚ್ಚು ಪ್ರೀತಿ.
ಇದೇ ಭಾನುವಾರ ದಿ. 10 ನೇ ಎಪ್ರಿಲ್ ಸಂಜೆ 5.30 ಗಂಟೆಗೆ ಕೋರಮಂಗಲದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಡಾ.ರಕ್ಷಾ ಕಾರ್ತೀಕ್ ತಮ್ಮ ಶಿಷ್ಯೆಯರೊಂದಿಗೆ ತ್ಯಾಗರಾಜರಿಗೆ ನೃತ್ಯಾರ್ಪಣೆ ಸಲ್ಲಿಸಲಿದ್ದಾರೆ. ತ್ಯಾಗರಾಜರ ಹಲವು ಕೃತಿಗಳನ್ನು ಸಮರ್ಥವಾಗಿ ನೃತ್ಯಕ್ಕೆ ಅಳವಡಿಸಿ ಪ್ರದರ್ಶಿಸಲಿರುವ ಇವರ ಸುಮನೋಹರ ನೃತ್ಯ ಪ್ರಸ್ತುತಿಯನ್ನು ವೀಕ್ಷಿಸಲು ಸರ್ವರಿಗೂ ಆದರದ ಸುಸ್ವಾಗತ.