ತುಂಬು ತಾರುಣ್ಯ ತುಳುಕಿಸುತ
ಒನಪಿಂದ ಕುಲುಕುತ ನಗುವ
ಬಾಂದಳದ ಮಿನುಗುತಾರೆಗಳ ಹಬ್ಬ
ನನ್ನ ಕನಸು
ಸಪ್ತವರ್ಣಗಳ ಸೊಗ ಹೊಳಪಿಗೆ
ಶ್ರಾವಣದ ಮುತ್ತೈದೆ ತಂಪಿಗೆ
ಹರ್ಷದಿ ಗರಿಬಿಚ್ಚುವಾ ನವಿಲು
ನನ್ನ ಕನಸು
ಮೊದಲ ಮಳೆಗೆ ಮೈನವಿರೆದ್ದು
ಇಳೆವೆಣ್ಣು ತನಿಯಾಗಿ ಪುಟಿಯಿಸುವ
ದಟ್ಟ ಪ್ರಣಯದ ಗಂಧ
ನನ್ನ ಕನಸು
ಸುರಿವ ಸೋನೆಯಲಿ ಜೀಕುತ್ತ
ಕಣ್ ಪಿಳುಕಿಸುವ ಚಿಗುರೆಲೆಗಳು
ಕಂಪನದಿ ತೊಟ್ಟಿಡುವ ರಸಜೇನು
ನನ್ನ ಕನಸು
ಮುಂಗಾರ ಸವಿಯುಂಡು
ಮೈಮರೆತು ನರ್ತಿಸುವ
ಹಾದಿ ಇಕ್ಕೆಲದ ತಿಳಿಗೆಂಪು
ನನ್ನ ಕನಸು
ಬೆಟ್ಟ-ಗುಡ್ಡಗಳ ಮೈ ನೇವರಿಸಿ
ತಿಳಿ ಹಸಿರು ಸಿಂಪಡಿಸಿ
ಚೆಲುವು ಹೊನಲಾಗಿ
ಕಣಿವೆಯಾಳಕ್ಕಿಳಿದ ಗೂಢ
ನನ್ನ ಕನಸು
ಕಡಲ ಹೆಡೆಗಳಲಿ ಹೊಳೆವ ಮಣಿ
ಮುಗಿಲೊಡಲ ಚುಂಬಿಸುವ
ಜೊನ್ನ ಸುರಿಸುವ ಬೆರಗು
ನನ್ನ ಕನಸು
ಕಣ್ಣ ವಿಸ್ತಾರ ವಿಸ್ಮಯ ಜಾತ್ರೆ
ದೈವೀಕ ಸಂಚಾರ ಮೃದುಸ್ಪರ್ಶದಿ
ಹೃದಯವರಳಿಸುವ ನವಚೈತನ್ಯ
ನನ್ನ ಕನಸು