ನಗೆ ನಾಟಕಗಳಿಗೆ ಬೇಡಿಕೆ ಹೆಚ್ಚು. ಮನರಂಜನೆ, ಸಂತೋಷ ಬಯಸುವ ಪ್ರೇಕ್ಷಕರು ಕಾಮಿಡಿ ನಾಟಕಗಳನ್ನು ಹುಡುಕಿಕೊಂಡು ಹೋಗುವುದು ಸಹಜ. ಅದರಂತೆ ಇತ್ತೀಚೆಗೆ ಮಲ್ಲತ್ತಳ್ಳಿಯ ಕಲಾಗ್ರಾಮದಲ್ಲಿ ನಡೆದ, ಪ್ರಸಿದ್ಧ ಹವ್ಯಾಸೀ ನಾಟಕತಂಡ `ಸಂಧ್ಯಾ ಕಲಾವಿದರು’ ಅಭಿನಯಿಸಿದ `ಸತ್ಯಂ ವಧ’ ಪ್ರಯೋಗ ಅತ್ಯಂತ ಯಶಸ್ವಿಯಾಗಿ ಪ್ರದರ್ಶಿತವಾಯಿತು.
ಹಿರಿಯ ನಾಟಕಕಾರರಾದ ಎಸ್.ವಿ.ಕೃಷ್ಣ ಶರ್ಮ ಬರೆದು ನಿರ್ದೇಶಿಸಿದ ಈ ನಾಟಕವನ್ನು ಪ್ರೇಕ್ಷಕರು ತುಂಬುಮನದಿಂದ ಸ್ವೀಕರಿಸಿದರು. ಅದಕ್ಕೆ ಸಾಕ್ಷಿಯಾದದ್ದು ನಾಟಕ ನೋಡುತ್ತಿದ್ದ ಮಂದಿ ಎಡೆಬಿಡದೆ ಸತತ ನಗುವಿನ ಮೆಚ್ಚುಗೆಯ ದನಿ ಹೊರಡಿಸುತ್ತಿದ್ದುದು. ನಾಟಕ ವೀಕ್ಷಿಸಿ ಹೊರಬಂದವರೆಲ್ಲ ನೀಡಿದ ಅತ್ಯುತ್ತಮ ಪ್ರತಿಕ್ರಿಯೆ ಪ್ರೋತ್ಸಾಹಕರವಾಗಿತ್ತು. ಇಂಥ ತಿಳಿಹಾಸ್ಯದ ಉತ್ತಮ ಗುಣಮಟ್ಟದ ಪ್ರಯೋಗಗಳು ಹೆಚ್ಚಾಗಬೇಕೆಂದು, ನಾಟಕ ನೋಡಿದ್ದಕ್ಕೂ ಸಾರ್ಥಕವಾಯಿತೆಂದು ಅಭಿಪ್ರಾಯಪಟ್ಟರು.
ನಾಟಕದ ಬರಹ ವಿಶಿಷ್ಟವಾಗಿತ್ತು. ಮೊದಲಿನಿಂದ ಕಡೆಯವರೆಗೂ ನಗು ಉಕ್ಕಿಸಿತು. ತಾನು ಲಾಯರೆಂದು ಸುಳ್ಳು ಹೇಳಿ ಮದುವೆಯಾಗಿ ಸುಖಜೀವನ ನಡೆಸುತ್ತಿದ್ದ ಬಾಲು, ತನ್ನನ್ನು ಲಾ ಕಂಪೆನಿ ಪಾಲುದಾರನನ್ನಾಗಿ ಮಾಡಿಕೊಳ್ಳಲು ಅಂದು ಮನೆಗೆ ಬರುವ ಬಾಸ್ ನ ಮುಂದೆ ಬಿಚ್ಚಿಕೊಳ್ಳುವ ಅನಿರೀಕ್ಷಿತ ಘಟನೆಗಳಿಂದ ಕಂಗಾಲಾಗುವನು. ಗೆಳೆಯ ತೀರ್ಥ ತಂದೊಡ್ಡುವ ಸಮಸ್ಯೆ ಕಡೆಗೆ ಬಗೆ ಹರಿದು, ಹೆಂಡತಿ ಹಾಗೂ ಕೆಲಸ ಎರಡೂ ಉಳಿಸಿಕೊಳ್ಳುವನು. ನಡುವೆ ನಡೆಯುವ ಸಂಗತಿಗಳೆಲ್ಲ ತಮಾಷೆಯಾಗಿ ಸಾಗುವುದರಿಂದ ನೋಡುಗರಿಗೆ ಧಾರಾಳ ಮನರಂಜನೆ. ಲಾಯರಿಗಿರುವ ಅಪ್ಪಟ ಗುಣಗಳೆಲ್ಲ ಬಾಲುವಿಗೆ ಇರುವುದರಿಂದ ಅವನೇ ನಿಜವಾದ ಲಾಯರ್ ಎಂದು ಬಾಸ್ ಅನೌನ್ಸ್ ಮಾಡಿದಾಗ ಜನರೆಲ್ಲಾ ಜೋರಾಗಿ ನಗುವರು.