Image default
Dance Reviews Events

Mahamaya Arts Foundation – Mahamaya Festival -2025

‘ಮಹಾಮಾಯ’- ತೆರೆದ ವಿಶಿಷ್ಟ ಕಲಾಲೋಕ
ಚಳಿಗಾಲದ ತಂಪೆರೆವ ಆ ಮುದ ಸಂಜೆಯಲ್ಲಿ ಬೆಂಗಳೂರಿನ ಮಲ್ಲೇಶ್ವರದ ಸೇವಾಸದನ ರಂಗಮಂದಿರದಲ್ಲಿ ಕಿಕ್ಕಿರಿದಿದ್ದ ಕಲಾರಸಿಕರ ಜನಸ್ತೋಮ. ವೇದಿಕೆಯ ಮೇಲೆ ಅನೇಕ ಬಗೆಯ ಅತ್ಯಾಕರ್ಷಕ ನೃತ್ಯ ವಿಸ್ಮಯಗಳು. ಭಾರತೀಯ ನೃತ್ಯ ಪರಂಪರೆಯ ಎಲ್ಲ ಶಾಸ್ತ್ರೀಯ ನೃತ್ಯ ಶೈಲಿಗಳ ಸುಂದರ ಅನಾವರಣ. ‘ಮಹಾಮಾಯ ಆರ್ಟ್ಸ್ ಫೌಂಡೇಶನ್’ ನ ಪ್ರಸಿದ್ಧ ನೃತ್ಯ ದಂಪತಿಗಳಾದ ಸೂರ್ಯ ಎನ್. ರಾವ್ ಮತ್ತು ಪ್ರಥಮಾ ಪ್ರಸಾದ್ ರಾವ್ ಅವರ ಸಹಭಾಗಿತ್ವದಲ್ಲಿ ಸುರತ್ಕಲ್ಲಿನ ಖ್ಯಾತ ನೃತ್ಯಗುರು ವಿದ್ವಾನ್. ಕೆ. ಚಂದ್ರಶೇಖರ ನಾವಡ ಅವರ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಸಂಸ್ಥೆಯ 40 ರ ಸಂಭ್ರಮಕ್ಕಾಗಿ, ಅಂದು, ಹಮ್ಮಿಕೊಂಡಿದ್ದ ಎರಡು ದಿನಗಳ ಕಲೋತ್ಸವ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಕಣ್ಮನ ಸೂರೆಗೊಂಡ ಸುಮನೋಹರ ನೃತ್ಯವೈಭವ ಮನ ತಣಿಸಿತು.


ಕಾರ್ಯಕ್ರಮದ ಶುಭಾರಂಭಕ್ಕೆ ವಿದುಷಿ. ಪ್ರಥಮಾ ಪ್ರಸಾದ್ ರಾವ್ ಅವರಿಂದ ಪ್ರಸ್ತುತವಾದ ರಂಜನೀಯ ಏಕವ್ಯಕ್ತಿ ಕಥಕ್ ನೃತ್ಯ ಪ್ರದರ್ಶನ ಗಮನಾರ್ಹವಾಗಿತ್ತು. ‘ಜೈ ಜೈ ಜೈ ದುರ್ಗೇ ಮಾತಾ ಭವಾನಿ’ಯ ಪ್ರಖರಶಕ್ತಿಯನ್ನು ಕಡೆದಿರಿಸಿದ ನೃತ್ಯಾಭಿನಯ, ಮಹಿಷಾಸುರಮರ್ಧಿನಿಯಾದ ಭವಾನಿಯ ವಿವಿಧ ಅನುಪಮ ಭಂಗಿಗಳು ರಮ್ಯತೆಯಿಂದ ಕೂಡಿದ್ದವು. ದುರ್ಗೆಯ ದುಷ್ಟ ಶಿಕ್ಷಣದ ಕೋಪಾವೃತ ಭಾವನೆಗಳಷ್ಟೇ, ಆಕೆಯ ಪ್ರಸನ್ನ ವದನದ ಸುಂದರ ಅಭಿವ್ಯಕ್ತಿಯೂ ಸಮರ್ಥವಾಗಿ ಹೊರಸೂಸಿದವು. ಮುಂದೆ- ಶ್ರೀಕೃಷ್ಣನ ಕುರಿತು ಅನುರಾಗಪೂರಿತಳಾದ ಗೋಪಿಕೆಯೊಬ್ಬಳ ಅಂತರಂಗದ ಪ್ರಣಯೋಲ್ಲಾಸವನ್ನು ಅನಾವರಣಗೊಳಿಸುವ ಮಹಾರಾಜ್ ಬಿಂದಾದೀನ್ ರಚಿಸಿದ ‘ಆವತ ಶ್ಯಾಮ್ …’ ಶೃಂಗಾರಪೂರ್ಣ ‘ಟುಮರಿ’ – ಮೊದಲಭಾಗದಲ್ಲಿ ನಾಯಿಕೆಯು ಕಟ್ಟಿದ ಕನಸುಗಳ ವರ್ಣರಂಜಿತ ದೃಶ್ಯ ಚಿತ್ರಣಗಳ ಸಂಭ್ರಮ ಕ್ಷಣಗಳು ಮನಮೋಹಕವಾಗಿ ವಿಜ್ರುಂಭಿಸಿದವು. ಕೃಷ್ಣನ ಸ್ವಾಗತಕ್ಕಾಗಿ ಅವಳು ಮಾಡಿಕೊಂಡ ಸಿದ್ಧತೆಗಳು, ತೋರಿದ ಉತ್ಸಾಹ- ಕಾತರ-ಕಾಳಜಿಗಳನ್ನು ಕಲಾವಿದೆ ತನ್ನ ಲವಲವಿಕೆಯ ಆಂಗಿಕಾಭಿನಯ – ಸುಕೋಮಲ ಅಭಿನಯದ ಮೂಲಕ ನೋಡುಗರ ಹೃದಯಕ್ಕೆ ಸಂಭ್ರಮ ಸಿಂಚನದಲ್ಲಿ ಲಗ್ಗೆ ಹಾಕಿದಳು. ಮುಂದಿನ ಹಂತದಲ್ಲಿ ಅದೇ ಉತ್ಸಾಹಮೂರ್ತಿ ಇನಿಯನ ಪರಸ್ತ್ರೀ ಸಂಗವನ್ನು ಕಂಡು ನಿರಾಶೆಯ ಪಾತಾಳಕ್ಕೆ ಇಳಿದು, ಅತೀವ ದುಃಖದಿಂದ ಕುಸಿದು ಹೋಗುವ ನೋವಿನ ಸನ್ನಿವೇಶವನ್ನು ಅಷ್ಟೇ ಪರಿಣಾಮಕಾರಿಯಾಗಿ ಕಂಡರಿಸಿದಳು ಕಲಾವಿದೆ ಪ್ರಥಮಾ.

ವಿಪ್ರಲಂಭ ನಾಯಿಕೆಯ ಮನದ ಅತೀವ ನೋವು, ವಿರಹ-ತಲ್ಲಣಗಳಿಗೆ ಕನ್ನಡಿ ಹಿಡಿದ ಆಕೆಯ ಅಭಿನಯ, ಅನಂತರ ಖಂಡಿತ ನಾಯಿಕೆಯ ಕಾಠಿಣ್ಯ ನಿಲುವು, ಮನಸ್ಸು ಮುರಿದ ಅವನ ಚಾಂಚಲ್ಯ ನಡವಳಿಕೆಯ ಕಾರಣದ ಕಡುಗೋಪ, ಕೃಷ್ಣನನ್ನು ನಿರಾಕರಿಸುವ ಅವಳ ದೃಢ ತೀರ್ಮಾನ, ಖಂಡನೆ- ವ್ಯಂಗ್ಯದ ಪ್ರಶ್ನಾವಳಿಗಳಿಂದ ಅವನನ್ನು ಚುಚ್ಚುವ ಕಲಾವಿದೆಯ ಭಾವಾಭಿನಯ ಗಾಢವಾಗಿದ್ದು, ಪ್ರಣಯಿನಿಯ ಇಬ್ಬಗೆಯ ಈ ವ್ಯಕ್ತಿತ್ವದ ಅನಾವರಣ ಮನನೀಯವಾಗಿತ್ತು. ಮುಂದೆ- ಅಲ್ಲಮ ಪ್ರಭುವಿನ ವಚನ- ‘ಭೂಮಿ ನಿನ್ನದಲ್ಲ… ಹೇಮ ನಿನ್ನದಲ್ಲ…’- ಎಂಬ ಅರ್ಥಪೂರ್ಣ ಸಾಹಿತ್ಯದ ಸಾಕಾರ ಅಷ್ಟೇ ಅರ್ಥಪೂರ್ಣ ನೆಲೆಯಲ್ಲಿ ಪ್ರಸ್ತುತವಾಯಿತು.


ಅನಂತರ- ಚಂದ್ರಶೇಖರ ನಾವಡರ ಸಮರ್ಥ ನೃತ್ಯಸಂಯೋಜನೆ, ನಿರ್ದೇಶನದಲ್ಲಿ ಅವರ ಶಿಷ್ಯೆಯರಿಂದ ಮೂಡಿಬಂದ ‘ ಸಂಭವಾಮಿ ಯುಗೇ ಯುಗೇ’ – ವಿದ್ವಾನ್. ಶ್ರೀವತ್ಸ ರಚಿತ ‘ದಶಾವತಾರ’ದ ಉತ್ತಮ ಸಾಹಿತ್ಯ ಮತ್ತು ಗಾಯನದ ಸಾಂಗತ್ಯದಲ್ಲಿ, ನವ ಕಲಾವಿದೆಯರು ಪರಿಣಾಮಕಾರಿಯಾಗಿ ಸಾದರಪಡಿಸಿದ ಅನನ್ಯ ನೃತ್ಯರೂಪಕ ಹೃದಯವನ್ನು ಗೆದ್ದಿತು. ‘ಪಾದ ಸೇರುವುದೇ ಪಾವನ…’ ಎಂಬ ಅಂತಿಮ ಗಂತವ್ಯದ ಧ್ವನಿಯನ್ನು ಪ್ರತಿಪಾದಿಸಿದ ದಶಾವತಾರಗಳ ಆಶಯವನ್ನು ಬಹು ಆಕರ್ಷಕ ನೃತ್ತಾವಳಿಗಳೊಡನೆ ನಾಟಕೀಯ ಆಯಾಮದ ಘಟನೆಗಳನ್ನು ಸೊಗಸಾದ ನರ್ತನ ವಿಲಾಸದಲ್ಲಿ ಅರ್ಪಿಸಿದ್ದು ಶ್ಲಾಘನೀಯವಾಗಿತ್ತು. ಹತ್ತೂ ಅವತಾರಗಳು ಚುರುಕಾದ ಗತಿಯಲ್ಲಿ ಸಾಗುತ್ತ, ಕಲಾವಿದೆಯರ ನಾಟ್ಯಾಭಿನಯ ಸಾಮರಸ್ಯದಲ್ಲಿ ಮಿಂದೆದ್ದು, ಆಯಾ ಅವತಾರಗಳ ಕೇಂದ್ರಬಿಂದುವಂತಿದ್ದ ಪ್ರಮುಖ ಘಟನೆಯ ಮೇಲೆ ಬೆಳಕು ಚೆಲ್ಲಿ, ತನ್ನದೇ ಆದ ಅಸ್ಮಿತೆಯನ್ನು ಕಂಗೊಳಿಸಿ, ಸುಂದರ ನೃತ್ಯಸಂಯೋಜನೆಯ ಪ್ರಭಾವಳಿಯಲ್ಲಿ ಮೆರಗು ಪಡೆಯಿತು.


ಮುಂದೆ ಅತ್ಯಂತ ಸಂಚಲನ ಉಂಟು ಮಾಡಿದ, ಮಿಂಚಿನ ಝೇಂಕಾರದಲ್ಲಿ ನೋಡುಗರನ್ನು ವಿಸ್ಮಯಗೊಳಿಸಿ ತನ್ನ ಪ್ರವಾಹದಲ್ಲಿ ಸೆಳೆದುಕೊಂಡು ಹೋದ ‘ಅಯನಾ ಡ್ಯಾನ್ಸ್ ಕಂಪೆನಿ’ –ಅರ್ಪಿಸಿದ ‘ಧೃವ’ – ನೃತ್ಯ ಚಮತ್ಕಾರ ವಿನೂತನ- ವಿಶಿಷ್ಟತೆಯಿಂದ ಚಿರಸ್ಮರಣೀಯವಾಗಿತ್ತು. ಕಣ್ಮಿಂಚು ಕಣ್ಮಾಯದ ಪಾದರಸ ಚಲನೆಯ ವಿನ್ಯಾಸದಿಂದ ದಂಗುಬಡಿಸಿತು ಎಂದರೆ ಅತಿಶಯೋಕ್ತಿಯಲ್ಲ. ವಾನರ ವೀರ, ಪರಮಭಕ್ತ ಆಂಜನೇಯನ ವಿವಿಧ ಆಯಾಮಗಳ ಭಕ್ತಿ ತಾದಾತ್ಮ್ಯತೆಯ ರಾಮಭಕ್ತಿ ರಸಾಯನವನ್ನು ಉಣಬಡಿಸಿದ ಅತ್ಯದ್ಭುತ ನೃತ್ಯ ಝೇಂಕಾರ, ಮಿಂಚಿನ ಸ್ಪರ್ಶದ ಮಾಂತ್ರಿಕ ಚಲನೆಗಳ ವಿಸ್ಮಯಕರ ನೃತ್ಯರೂಪಕವಾಗಿ ಬೆರಗು ಉಂಟುಮಾಡಿತು.


ಇಂಥ ಅವಿಸ್ಮರಣೀಯ ಅನುಭವ ನೀಡಿದ ಪ್ರಥಮ ದಿನದ- ವಿಭಿನ್ನ ಆಯಾಮದ ನೃತ್ಯ ಕಾರ್ಯಕ್ರಮಗಳು ಒಂದಕ್ಕಿಂತ ಒಂದು ಪರಿಣಾಮಕಾರಿಯಾಗಿ, ಹೃನ್ಮನ ತಣಿಸುವಂತೆ ಸುಮನೋಹರವಾಗಿ ಮೂಡಿಬಂದವು. ನಿರಂತರ ಮೆಚ್ಚುಗೆಯ ಕರತಾಡನದಿಂದ ಪ್ರತಿ ನೃತ್ಯವನ್ನೂ ಸ್ವಾಗತಿಸಿದ ಕಲಾರಸಿಕರ ರಾಸಿಕ್ಯ ಪ್ರತಿಕ್ರಿಯೆ ಪ್ರೋತ್ಸಾಹದಾಯಕವಾಗಿತ್ತು.

*********

Related posts

Shivapriya School Of Dance – Bharatotsava- 2023

YK Sandhya Sharma

ರಸಾನುಭವ ನೀಡಿದ ಮಧುಶ್ರೀ ನರ್ತನ

YK Sandhya Sharma

ಪಕ್ವಾಭಿನಯದ ‘ರಮ್ಯ’ ನೃತ್ಯರಂಜನೆ

YK Sandhya Sharma

Leave a Comment

This site uses Akismet to reduce spam. Learn how your comment data is processed.