Image default
Dance Reviews

Nrutyantar-Naman 22

ಮಧುಲಿತಾ  ಆಯೋಜನೆಯ ನಮನ್-22

ಖ್ಯಾತ `ನೃತ್ಯಾಂತರ’ ಸಂಸ್ಥೆಯು ಪ್ರಸಿದ್ಧ ಒಡಿಸ್ಸಿ ನೃತ್ಯ ಕಲಾವಿದೆ ಮಧುಲಿತಾ ಮಹೋಪಾತ್ರ ಅವರ ನೇತೃತ್ವದಲ್ಲಿ ವಿಶ್ವದಾದ್ಯಂತ ವಿನೂತನ ಕಾರ್ಯಕ್ರಮಗಳನ್ನು ಮನಮೋಹಕ ನೃತ್ಯಪ್ರದರ್ಶನಗಳನ್ನು ನೀಡುತ್ತ ಬಂದಿದೆ.  ಅನ್ವೇಷಕ ಮನೋಭಾವದ ಮಧುಲಿತಾ ಪ್ರಯೋಗಶೀಲತೆಗೆ ಹೆಸರಾದವರು. ‘ ನೃತ್ಯಾಂತರ’ -ನಿನ್ನೆ ಎ.ಡಿ.ಎ ರಂಗಮಂದಿರದಲ್ಲಿ ‘ನಮನ್-2022 ಎಂಬ ಅಪೂರ್ವ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿ ರಸಿಕರ ಮನವನ್ನು ಸೂರೆಗೊಂಡಿತು.

 ಪ್ರತಿವರ್ಷ ನವ ಪರಿಕಲ್ಪನೆಗಳಿಂದ ನೃತ್ಯಾಸಕ್ತರಿಗೆ ಭಾರತೀಯ ನೃತ್ಯ ಪ್ರಕಾರಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಸಾಕಾರಗೊಳಿಸಿ ಕಲಾಭಿವೃದ್ಧಿಗೆ ಶ್ರಮಿಸುತ್ತಿರುವ ಸಂಸ್ಥೆ, ವಿಶ್ವದೆಲ್ಲೆಡೆ ಶಾಂತಿಯ ಸಂದೇಶ ಪ್ರಸಾರಕ್ಕಾಗಿ, ಜೀವನದ ಪರಮ ಮೌಲ್ಯವಾದ ಹೊಂದಾಣಿಕೆ, ಐಕ್ಯತೆ, ಹೊಂದಿಬಾಳುವ ಬದುಕಿಗೆ ಮಾರ್ಗದರ್ಶಿಯಾದ ಸೂತ್ರಗಳನ್ನು ಅಳವಡಿಸಿಕೊಂಡು ಏನಾದರೊಂದು ಹೊಸ ಪರಿಕಲ್ಪನೆಯಲ್ಲಿ ನೃತ್ಯರೂಪಕಗಳನ್ನು ಹಾಗೂ ನೂತನ ಕಾರ್ಯಕ್ರಮಗಳನ್ನು ಆಯೋಜಿಸುವುದು ವಾಡಿಕೆ. ಈ ಬಾರಿ ಅಂತರರಾಷ್ಟ್ರೀಯ ಒಡಿಸ್ಸಿ ನೃತ್ಯ ಕಲಾವಿದರಾದ ಆರುಷಿ ಮುದ್ಗಲ್ ಮತ್ತು ಗುರು ರಾಹುಲ್ ಆಚಾರ್ಯ-ಸೌರವ್ ಮೊಹಂತಿ ಅವರ ನಯನ ಮನೋಹರ ನೃತ್ಯ ಕಾರ್ಯಕ್ರಮವನ್ನು ಅರ್ಪಿಸಿತು. ಜೊತೆಗೆ ನೃತ್ಯಾಂತರದ ವಿದ್ಯಾರ್ಥಿಗಳೊಂದಿಗೆ ನರ್ತಕಿ ಮಧುಲಿತಾ ‘ಮೂರ್ತ-ಅಮೂರ್ತ’ ಎಂಬ ವಿಶಿಷ್ಟ ಹಾಗೂ ಆಧ್ಯಾತ್ಮಿಕ ಚಿಂತನೆಯ ಸುಂದರ ನೃತ್ಯರೂಪಕವನ್ನು ಪ್ರಸ್ತುತಪಡಿಸಿದರು.

ಭಾವಪೂರ್ಣ ಅಭಿನಯದಲ್ಲಿ ಪರಿಣಾಮ ಬೀರಿದ ಆರುಷಿ ಮುದ್ಗಲ್ ತಮ್ಮ ಮುದವಾದ ನೃತ್ತ ವಲ್ಲರಿಗಳಿಂದ, ನೃತ್ಯ ಪ್ರಾವೀಣ್ಯವನ್ನು ಪ್ರದರ್ಶಿಸಿ, ಯಶೋದೆ ಹಾಗೂ ಕೃಷ್ಣನ ತಾಯಿ ಮಮತೆಯ ವಿವಿಧ ಮಗ್ಗುಲುಗಳನ್ನು ನವಿರಾಗಿ, ಕಲಾತ್ಮಕವಾಗಿ ಅನಾವರಣಗೊಳಿಸಿ ತಾವೊಬ್ಬ ನುರಿತ ಕಲಾವಿದೆ ಎಂಬುದನ್ನು ಸಾಬೀತುಗೊಳಿಸಿದರು.

ಅನಂತರ ಗುರು ರಾಹುಲ್ ಆಚಾರ್ಯ  ಮತ್ತು ಸೌರವ್ ಮೊಹಂತಿ ಅಂಗಶುದ್ಧ ಆಂಗಿಕಾಭಿನಯದಿಂದ ಶುದ್ಧ ನೃತ್ತ ಬಂಧ ‘ಪಲ್ಲವಿ’ಯನ್ನು ತಮ್ಮ ಖಚಿತ ಹಸ್ತ ಚಲನೆ-ಪಾದಭೇದಗಳಿಂದ ನೃತ್ತಗಳ ವಿವಿಧ್ಯಪೂರ್ಣ ನೋಟವನ್ನು ನೀಡಿದರು. ಪ್ರಬುದ್ಧ ನರ್ತಕ ರಾಹುಲ್ ‘ಸೂರ್ಯಾಷ್ಟಕ’ –ದಲ್ಲಿ  ಹಲವಾರು ಯೋಗಭಂಗಿಗಳ ದಿವ್ಯ ದರ್ಶನ ನೀಡಿ ಅವರೊಬ್ಬ ಅದ್ಭುತ ಕಲಾವಿದರೆಂಬುದನ್ನು ಮನನಗೊಳಿಸಿದರು. ದೇಶದ ವಿವಿಧ ರಾಜ್ಯಗಳ ಅಮೋಘ ಪ್ರತಿಭೆಗಳನ್ನು ಪರಿಚಯಿಸಿದ ಮಧುಲಿತಾ ನಿಜಕ್ಕೂ ಅಭಿನಂದನೀಯರು.

‘ಮೂರ್ತ-ಅಮೂರ್ತ’- ಆಳವಾದ ಚಿಂತನೆಗೆ ಹಚ್ಚುವ ವಿಶಿಷ್ಟ ನೃತ್ಯ ಸಂಯೋಜನೆಯ ನೃತ್ಯರೂಪಕ ನಿಜಕ್ಕೂ ದೃಶ್ಯಕಾವ್ಯವಾಗಿ ಹೃದಯಸ್ಪರ್ಶಿಯಾಗಿ ಜನಮಾನಸದಲ್ಲಿ ಚಿರಸ್ಮರಣೀಯವಾಗಿ ಉಳಿದುಕೊಳ್ಳುತ್ತದೆ ಎಂದರೆ ಖಂಡಿತಾ ಅತಿಶಯೋಕ್ತಿಯಲ್ಲ. ತಾತ್ವಿಕ ನೆಲೆಯಲ್ಲಿ ಸಾಗಿದ ನರ್ತನ ಕಣ್ಮನ ತಣಿಸುವ ಸುಮನೋಹರ ನವಿರಾದ ಹೆಜ್ಜೆ-ಗೆಜ್ಜೆಗಳ ಸಮ್ಮೋಹಕತೆಯಿಂದ, ಐವರು ನರ್ತಕಿಯರ ಅನುಪಮ ಸಾಂಗತ್ಯದಿಂದ, ಆಕರ್ಷಕ ಆಹಾರ್ಯ, ರಮ್ಯನರ್ತನದಿಂದ ಪ್ರಭಾವ ಬೀರಿತು. ವೇದ ಪರಂಪರೆ-ಉಪನಿಷತ್ತುಗಳ ಸಾರ ಸರ್ವಸ್ವವನ್ನು, ಅದರ ಶ್ರೇಷ್ಠತೆಯನ್ನು ಗಹನವಾಗಿ ನಿರೂಪಿಸಿ, ಸರ್ವಾಂತರ್ಯಾಮಿಯಾದ ದೈವಸ್ವರೂಪವನ್ನು ಸೂಫಿ ತತ್ವದವರೆಗೂ ವಿಸ್ತರಿಸಿ ಮಾನವಕುಲಕ್ಕೆ ಶಾಶ್ವತ ನೈತಿಕ ಸಂದೇಶವನ್ನು ಬಿತ್ತರಿಸಿದ್ದು ಮನಮುಟ್ಟಿತು. ಸುಂದರ ಆಷ್ಟೇ ಭಾವುಕತೆ ಮಡುಗಟ್ಟಿದ ಅಭಿನಯ-ಭಾವ ಪ್ರದರ್ಶನದಿಂದ, ನಡುನಡುವೆ ಸೂಕ್ತ ನಿರೂಪಣೆಗಳಿಂದೊಡಗೂಡಿ ಸುಶ್ರಾವ್ಯ ಗಾಯನದಲ್ಲಿ ಕೊಂಡೊಯ್ದ ರೂಪಕದ ನೃತ್ಯ ಸಾರ, ಮೂರ್ತದಿಂದ ಅಮೂರ್ತದತ್ತ ಸಾಗಿ ದಿವ್ಯಾನುಭವ ಮೂಡಿಸಿ, ಪೂರಕ ಬೆಳಕಿನ ವಿನ್ಯಾಸಗಳಿಂದ ಪರಿಣಾಮಕಾರಿಯಾಗಿ ವಿಜ್ರುಂಭಿಸಿತು.

ಸಾಮಾನ್ಯವಾಗಿ ಕಲಾವಿದೆ ಮಧುಲಿತಾ ಯಾವುದನ್ನೇ ಮಾಡಲಿ, ಅದನ್ನು ಆಳವಾಗಿ ಪರಿಭಾವಿಸಿ, ಅತ್ಯಂತ ಕಲಾತ್ಮಕವಾಗಿ-ಮನರಂಜನಾತ್ಮಕ ವಾಗಿ ರೂಪಿಸಿ ತಮ್ಮ ಅಸ್ಮಿತೆಯನ್ನು ಮೆರೆಯುವ ಅಪೂರ್ವ ಕಲಾವಿದೆ ಎಂಬುದನ್ನು ಈ ಬಾರಿಯ  ‘ನಮನ್- 2022’ ಕಾರ್ಯಕ್ರಮದಲ್ಲೂ ನಿರೂಪಿಸಿದ್ದು ಆಕೆಯ ಹೆಗ್ಗಳಿಕೆ.

                        **************************************************  ವೈ.ಕೆ.ಸಂಧ್ಯಾ ಶರ್ಮ

Related posts

ಪ್ರೌಢ ಅಭಿನಯದ ಅನಿಷಳ ಸೊಗಸಾದ ನರ್ತನ

YK Sandhya Sharma

ಶ್ರೇಯಳ ನಯನ ಮನೋಹರ ಕಥಕ್ ಲಾಸ್ಯ

YK Sandhya Sharma

ಪ್ರೌಢ ಅಭಿನಯದ ಸೊಗಸಾದ ನರ್ತನ

YK Sandhya Sharma

Leave a Comment

This site uses Akismet to reduce spam. Learn how your comment data is processed.