In Kannada

YK Sandhya Sharma

ಆತ್ಮೀಯ ಸ್ನೇಹಿತರೇ,

ತಮಗೆಲ್ಲ ಶುಭಾಕಾಂಕ್ಷೆಗಳು. ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ವರದಿಗಳು, ಪ್ರಕಟಣೆಗಳು, ಲೇಖನಗಳು ಮುಂತಾದ ಕಲಾಸಂಬಂಧಿಯಾದ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ನಾನು, ನನ್ನ ಪ್ರಧಾನ ಸಂಪಾದಕತ್ವದಲ್ಲಿ ‘’ ಸಂಧ್ಯಾ ಪತ್ರಿಕೆ’’ಯನ್ನು ತಮ್ಮಲ್ಲರ ಹಿತಾಭಿಲಾಷೆಯಿಂದ ನೂತನವಾಗಿ ಅನಾವರಣಗೊಳಿಸುತ್ತಿದ್ದೇನೆ.

‘’ಸಂಧ್ಯಾ ಪತ್ರಿಕೆ’’- ಇದು ನಿಮ್ಮ ಪತ್ರಿಕೆ. ನಿಮ್ಮ ಆಶೋತ್ತರ-ಅಭಿಪ್ರಾಯ-ದನಿಗಳಿಗೆ ಸ್ಪಂದಿಸುವ, ದಕ್ಷತೆಯಿಂದ ಅಷ್ಟೇ ಬದ್ಧತೆಯಿಂದ ಶ್ರಮಿಸುವ ಅಕ್ಷರರೂಪದಲ್ಲಿ ನಿಮ್ಮ ಪ್ರತಿಬಿಂಬವಾಗಲಿರುವ ಹೊತ್ತಿಗೆ.

ಇಂದು ಕರ್ನಾಟಕ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪಡೆದ ಉನ್ನತ ಕಲೆಗಳ ತವರೂರು. ವಿವಿಧ ಕಲಾಪ್ರಕಾರಗಳ ಕಲಾವಿದರ ನೆಲೆವೀಡು. ವಿಶ್ವದ ಭೂಪಟದಲ್ಲಿ ಅತ್ಯಂತ ಗಮನ ಸೆಳೆದ ಕಲಾವಂತಿಕೆಯ ನಗರಿ ಈ ಬೆಂಗಳೂರು. ಇಲ್ಲಿ ಇಲ್ಲದ ಕಲಾಪ್ರಕಾರಗಳಿಲ್ಲ. ವರ್ಷವಿಡೀ ಚಟುವಟಿಕೆಯಿಂದಿರುವ ನೂರಾರು ನಾಟಕತಂಡಗಳು ಸಕ್ರಿಯವಾಗಿವೆ. ಪ್ರತಿನಿತ್ಯ ನೂತನ ಪ್ರಯೋಗಗಳು, ಸೃಜನಾತ್ಮಕ ಪ್ರದರ್ಶನಗಳು, ಅರ್ಥಪೂರ್ಣ ವಿಚಾರಸಂಕಿರಣ, ಚಿಂತನೆಗಳ ವಿನಿಮಯ ನಡೆಯುತ್ತ ಯುವ ಕಲಾವಿದರಿಗೆ ಅಭಿನಯಶಾಲೆಗಳಾಗಿ ಪ್ರೋತ್ಸಾಹ ನೀಡುತ್ತ ಮುನ್ನಡೆಸುತ್ತಿವೆ.

ಅದೇರೀತಿ ಇಲ್ಲಿ ಕರ್ನಾಟಕ ಶಾಸ್ತ್ರೀಯ ಪರಂಪರೆಯನ್ನು ಉಳಿಸಿ-ಬೆಳೆಸಿಕೊಂಡು ಬರುತ್ತಿರುವ ಅಸಂಖ್ಯಾತ ನೃತ್ಯಶಾಲೆಗಳಿವೆ, ಸಮರ್ಥ ನಾಟ್ಯಾಚಾರ್ಯರಿದ್ದಾರೆ, ಉತ್ಸಾಹದಿಂದ-ನಿಷ್ಠೆಯಿಂದ ನಾಟ್ಯ ತರಬೇತಿ ಪಡೆಯುತ್ತಿರುವ ಸಹಸ್ರಾರು ನೃತ್ಯಾಕಾಂಕ್ಷಿ ವಿದ್ಯಾರ್ಥಿಗಳಿದ್ದಾರೆ. ಪ್ರತಿನಿತ್ಯ ವಿವಿಧ ಶಾಸ್ತ್ರೀಯ ನೃತ್ಯಪ್ರಕಾರಗಳಾದ ಭರತನಾಟ್ಯ, ಕೂಚಿಪುಡಿ, ಒಡಿಸ್ಸಿ, ಮೋಹಿನಿಯಾಟ್ಟಂ ಮತ್ತು ಕಥಕ್ ಮುಂತಾದ ನೃತ್ಯಶೈಲಿಗಳ ಕಲಿಕೆ, ಪ್ರದರ್ಶನ ಕಾರ್ಯಕ್ರಮಗಳು ನಡೆಯುತ್ತಲೇ ಇರುವುದು ನಮ್ಮ ಕಲೆಗಳ ಜೀವಂತಿಕೆಯ ಸಂಕೇತ, ಅಷ್ಟೇ ನಮಗೆ ಹೆಮ್ಮೆಯ ಸಂಗತಿ ಕೂಡ. ನೂತನ ನೃತ್ಯ ಪರಿಕಲ್ಪನೆಯ ನೃತ್ಯ ನಾಟಕಗಳು, ರೂಪಕಗಳು, ಆಸಕ್ತಿಕರವಾದ ವಸ್ತು, ನೃತ್ಯ ಸಂಯೋಜನೆಯನ್ನೊಳಗೊಂಡು ವೇದಿಕೆಗಳ ಮೇಲೆ ಹೊರಹೊಮ್ಮುತ್ತ ಕಲಾರಸಿಕರನ್ನು ರಂಜಿಸುತ್ತಿರುವುದು ನಿಜಕ್ಕೂ ಅಗ್ಗಳಿಕೆ. ವರ್ಷದುದ್ದಕ್ಕೂ ಹೊಸ ಹೊಸ ಪ್ರಯೋಗಗಳ ನೃತ್ಯ ಪ್ರದರ್ಶನಗಳು, ರಂಗಪ್ರವೇಶ ಕಾರ್ಯಕ್ರಮಗಳು, ತಜ್ಞರ ನೇತೃತ್ವದಲ್ಲಿ ಅರ್ಥಪೂರ್ಣ ಉಪಯುಕ್ತ ಕಾರ್ಯಾಗಾರಗಳು, ಪ್ರಾತ್ಯಕ್ಷಿಕೆ ಶಿಬಿರಗಳು, ಸೋದಾಹರಣ ಉಪನ್ಯಾಸಗಳ ವೈವಿಧ್ಯಪೂರ್ಣ ಚಿಂತನಶೀಲ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಲೇ ಇರುತ್ತವೆ. ಜೊತೆಗೆ ಉತ್ತಮ ಸಂಗೀತ ಕಾರ್ಯಕ್ರಮಗಳೂ ನಡೆಯುತ್ತಿರುತ್ತವೆ. ಇವೆಲ್ಲವುಗಳ ಉಪಯೋಗ-ಸದ್ಬಳಕೆ ಎಲ್ಲ ಕಲಾಕಾಂಕ್ಷಿಗಳ ಹಕ್ಕು ಮತ್ತು ಅಪೇಕ್ಷೆ ಕೂಡ.

ಬೆಂಗಳೂರಿನ ಮೂಲೆ ಮೂಲೆಗಳಲ್ಲಿ ನಡೆಯುವ ಪ್ರತಿಯೊಂದು  ಕಾರ್ಯಕ್ರಮಗಳೂ ಎಲ್ಲರ ಗಮನಕ್ಕೂ ಬರುವುದು ಕಷ್ಟಸಾಧ್ಯವಾದ ವಿಚಾರ. ಅದಕ್ಕಾಗಿ ಈ ವೇದಿಕೆಯನ್ನು ಸಜ್ಜುಗೊಳಿಸಿದ್ದೇನೆ.  ಕಾರ್ಯಕ್ರಮಗಳ ಪ್ರಕಟಣೆ, ವಿಮರ್ಶೆ, ವರದಿಗಳು ಪ್ರಕಟವಾಗುತ್ತವೆ. ಕಲಾಸಕ್ತರಾದ ಪ್ರತಿಯೊಬ್ಬರಿಗೂ ಈ ವೇದಿಕೆ ಉಪಯೋಗವಾಗಬೇಕು ಎಂಬುದು ನನ್ನ ಸದಾಶಯ. ಇದನ್ನು ಎಲ್ಲ ಕಲಾವಿದರೂ, ಗುರುಗಳೂ, ಕಾರ್ಯಕ್ರಮ ಆಯೋಜಕರೂ ದಯವಿಟ್ಟು ಬಳಸಿಕೊಳ್ಳಬೇಕು ಎಂಬುದು ನನ್ನ ಅಭಿಲಾಷೆ. ಎಲ್ಲ ಕಲಾಪ್ರಕಾರಗಳ ವಿವಿಧ ರಂಗದವರನ್ನೂ ಬೆಸೆಯುವುದು, ಪರಸ್ಪರ ಸಂಪರ್ಕ ಕಲ್ಪಿಸುವುದು ನನ್ನ ಉದ್ದೇಶ. ಕಲಾವಿದರುಗಳೆಲ್ಲ ಪರಸ್ಪರ ಹತ್ತಿರವಾಗಬೇಕೆನ್ನುವುದೇ  ನನ್ನ ‘’ಸಂಧ್ಯಾ ಪತ್ರಿಕೆ’’ಯ ಅಂತರಂಗದ ಆತ್ಮೀಯ ಅಭಿಪ್ರಾಯ ಮತ್ತು ಈ ವೇದಿಕೆಗೆ ಎಲ್ಲರಿಗೂ ಹಾರ್ದಿಕ ಆಹ್ವಾನ.

ಕಲೆಗಾಗಿ ಮೀಸಲಾದ ಈ ವೇದಿಕೆಯನ್ನು ತಾವೆಲ್ಲ ಸುಮನಸ್ಸಿನಿಂದ ಭಾವೈಕ್ಯತೆಯ ಒತ್ತಾಸೆಯಿಂದ ಬೆಂಬಲಿಸುತ್ತಿರೆಂದು ನಂಬಿದ್ದೇನೆ.  

ಇದೇ ಪ್ರಕಾರ ಇಲ್ಲಿ ಸಾಹಿತ್ಯಕ್ಕೂ ಸಮಾನ ಆದ್ಯತೆ ಇರುತ್ತದೆ. ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳ ಬರಹಕ್ಕೂ ಸ್ವಾಗತ ಉಂಟು. ಆರೋಗ್ಯಕರ ಚರ್ಚೆಗೆ ಅನುವು ಮಾಡಿಕೊಡುತ್ತೇನೆ. ಉತ್ತಮ ಬರಹಗಳನ್ನು ಪ್ರಕಟಿಸುವ, ಓದಲು ಸಹಕಾರಿಯಾಗುವ ವ್ಯವಸ್ಥೆ ಇರುತ್ತದೆ. ಅವಶ್ಯಕವಾದಲ್ಲಿ ಪ್ರಚಾರಕ್ಕೂ ಈ ಪತ್ರಿಕೆಯ ಅಂಕಣಗಳನ್ನು ಬಳಸಿಕೊಳ್ಳಬಹುದು.

ಇದು ನಿಮ್ಮ ಕೂಸು. ಇದೇ ತಾನೇ ಜನಿಸಿ, ಪೌಷ್ಟಿಕ ಬೆಳವಣಿಗೆ ಹೊಂದುವ ಮಹತ್ವಾಕಾಂಕ್ಷೆಯೊಡನೆ ಕಣ್ಣು ಬಿಟ್ಟಿದೆ. ಇದನ್ನು ಬೆಳೆಸುವ, ಪೋಷಿಸುವ ಜವಾಬ್ದಾರಿ ನಿಮ್ಮದು. ಪರಸ್ಪರ ಬೆಳವಣಿಗೆಯ ಆರೋಗ್ಯಕರ ಚಿಂತನ-ಮಂಥನಗಳು ನಡೆಯಲಿ ಎಂದು ಮುಕ್ತಮನದಿಂದ ಹಾರೈಸುತ್ತೇನೆ.

ಇಂತು ನಿಮ್ಮ ಗೆಳತಿ,

ವೈ.ಕೆ.ಸಂಧ್ಯಾ ಶರ್ಮ

ಪ್ರಧಾನ ಸಂಪಾದಕಿ- ಸಂಧ್ಯಾ ಪತ್ರಿಕೆ

ಕನ್ನಡ ಲೇಖಕಿ, ಪತ್ರಕರ್ತೆ, ರಂಗಕರ್ಮಿ, ಅಂಕಣಕಾರ್ತಿ, ನೃತ್ಯ-ನಾಟಕಗಳ ವಿಮರ್ಶಕಿ.

ದೂರವಾಣಿ-9448094949