ಪದ್ಮಿನಿ ಪ್ರಿಯ -ರಜತ ವರ್ಷದ ವಿಶಿಷ್ಟ ನೃತ್ಯೋತ್ಸವ
ಒಂದು ನಾಟ್ಯಶಾಲೆ ಎಂದರೆ ಕೇವಲ ನೃತ್ಯಶಿಕ್ಷಣ ನೀಡುವದಷ್ಟೇ ಅಲ್ಲ. ಅಲ್ಲಿಗೆ ಬಂದ ನೃತ್ಯಾಕಾಂಕ್ಷಿ ವಿದ್ಯಾರ್ಥಿಯ ಸರ್ವತೋಮುಖ ಉನ್ನತಿ ಮತ್ತು ಪರಿಪೂರ್ಣತೆಯನ್ನು ನೀಡುವುದು ಶಾಲೆಯ ಗುರಿಯಾಗಬೇಕು. ಈ ನಿಟ್ಟಿನಲ್ಲಿ ಬೆಂಗಳೂರಿನ ಬಾನಸವಾಡಿಯ ಮುಖ್ಯರಸ್ತೆಯಲ್ಲಿರುವ ನಾಟ್ಯಾಚಾರ್ಯ ಮಿಥುನ್ ಶ್ಯಾಂ ನೇತೃತ್ವದ ‘ವೈಷ್ಣವಿ ನಾಟ್ಯಶಾಲೆ’ ಹೆಮ್ಮೆಯ ಕಾರ್ಯ ನಿರ್ವಹಿಸುತ್ತಿದೆ. ಭಾರತೀಯ ಗುರು-ಶಿಷ್ಯ ಪರಂಪರೆಯನ್ನು ಶುದ್ಧವಾಗಿ ಸಂರಕ್ಷಿಸುವ ದಿಸೆಯಲ್ಲಿ ಇಲ್ಲಿಗೆ ನೃತ್ಯ ಕಲಿಯುವ ವಿದ್ಯಾರ್ಥಿಗಳಿಗೆ ದೈವೀಕ ಕಲೆಯನ್ನು ಆಳವಾಗಿ ಅಭ್ಯಾಸ ಮಾಡಲು ಅನುವು ಮಾಡಿಕೊಡುವುದಲ್ಲದೆ, ಇದಕ್ಕೆ ಪೂರಕವಾಗಿ ಕರ್ನಾಟಕ ಸಂಗೀತ, ಯೋಗ ಇತ್ಯಾದಿ ವಿದ್ಯೆಗಳನ್ನು ಕಲಿಸುವಲ್ಲಿ ಆಸಕ್ತಿ ವಹಿಸುತ್ತದೆ. ಸುಮಾರು ಎಪ್ಪತ್ತು ಚದರ ವಿಸ್ತೀರ್ಣದ ವಿಶಾಲವಾದ ನೃತ್ಯಸ್ಥಳದಲ್ಲಿ ನರ್ತನ ಮಾಡಲು ಸಾಕಷ್ಟು ವಿಶಾಲವಾದ ಅಂಗಳ, ಹೆಚ್ಚಿನ ಓದಿಗೆ ನೃತ್ಯದ ಬಗೆಗಿನ ಉತ್ತಮ ಪುಸ್ತಕ ಭಂಡಾರ, ವೇಷಭೂಷಣ-ಅಲಂಕರಣಗಳ ಸೌಲಭ್ಯ ಮುಂತಾದವುಗಳು ಇಲ್ಲಿನ ಪ್ರಮುಖ ಆಕರ್ಷಣೆ.
ಭರತನಾಟ್ಯದ ಶುದ್ಧನೃತ್ಯದ ಸೊಬಗಿಗೆ ನಾಟ್ಯಾಚಾರ್ಯ ಮಿಥುನ್ ಶ್ಯಾಂ ಅವರ ನರ್ತನ ವೈವಿಧ್ಯವನ್ನು ಕಣ್ಣಾರೆ ಕಾಣಬೇಕು. ಅಪರೂಪದ ಕೆಲವೇ ಪುರುಷ ನೃತ್ಯಕಲಾವಿದರಲ್ಲಿ ಇವರೂ ಒಬ್ಬರು. ‘ವೈಷ್ಣವಿ ನಾಟ್ಯಶಾಲೆ’ಯಲ್ಲಿ ಬಹು ಬದ್ಧತೆಯಿಂದ ಕಲಿಯುತ್ತಿರುವ ಶಿಷ್ಯವೃಂದಕ್ಕೆ ನಾಟ್ಯಕಲಿಸುತ್ತಿರುವುದು ಇವರ ಪಾಲಿಗೆ ಒಂದು ನೃತ್ಯಾರಾಧನೆ. ಕಾಲಿಗೆ ಗೆಜ್ಜೆಕಟ್ಟಿ ಮೂವತ್ತು ವರ್ಷಗಳನ್ನು ಕ್ರಮಿಸಿದ್ದು, ನರ್ತನವೇ ಉಸಿರಾಗಿ ಬಾಳುತ್ತ, ವೃತ್ತಿಪರತೆಗೆ ನಿಷ್ಠರಾಗಿರುವ ಇವರು, ದೇಶ-ವಿದೇಶಗಳಲ್ಲಿ ನೂರಾರು ಉತ್ತಮ ಕಾರ್ಯಕ್ರಮಗಳನ್ನು ನೀಡಿ ಅಂತರರಾಷ್ಟ್ರೀಯ ಕಲಾವಿದರಾಗಿ ಹೆಸರು ಪಡೆದವರು.
ಒಂದುಕಾಲದಲ್ಲಿ ಚತುರ್ಭಾಷಾ ನಟಿಯಾಗಿ ತಮ್ಮ ಅಮೋಘ ನೃತ್ಯಶೈಲಿಯಿಂದ ಗಮನ ಸೆಳೆದ ಅಭಿನೇತ್ರಿ ಪದ್ಮಿನಿ ರಾಮಚಂದ್ರನ್ ಅರ್ಥಾತ್ ಪದ್ಮಿನಿ ಪ್ರಿಯದರ್ಶಿನಿ ‘ವಳವೂರು ಬಾನಿ’ಯ ಒಂದು ಘನ ಪರಂಪರೆಯನ್ನೇ ಸೃಷ್ಟಿಸಿ ಹೋದ ಸ್ಮರಣೀಯ ನೃತ್ಯ ಕಲಾವಿದೆ ಹಾಗೂ ಹಿರಿಯ ನಾಟ್ಯಗುರು. ಇಂಥ ಗುರುಗಳ ಹೆಜ್ಜೆಯನ್ನು ಶ್ರದ್ಧೆಯಿಂದ ಅನುಸರಿಸುತ್ತ ಬಂದಿರುವ ‘ವೈಷ್ಣವಿ ನಾಟ್ಯಶಾಲೆ’ಯ ನಾಟ್ಯಾಚಾರ್ಯ ಮಿಥುನ್ ಶ್ಯಾಂ ಇತ್ತೀಚಿಗೆ ಕೊಂಡಜ್ಜಿ ಬಸಪ್ಪ ಸಭಾಭವನದಲ್ಲಿ ನಾಟ್ಯಶಾಲೆಯ ರಜತ ಮಹೋತ್ಸವವನ್ನು ‘ಪದ್ಮಿನಿ ಪ್ರಿಯ-ನೃತ್ಯೋತ್ಸವ’ದ ಸ್ಮರಣಾಂಜಲಿಯನ್ನು ನವವಿನ್ಯಾಸದಲ್ಲಿ ಅರ್ಪಿಸಿದರು.
ಬದ್ಧತೆಯ ಗುರು-ಪ್ರಾಯೋಗಿಕ ನೆಲೆಯ ಅನ್ವೇಷಕರಾದ ಮಿಥುನ್ ಅವರ ಹದಿನೈದು ಜನ ನಿಪುಣ ನರ್ತಕರ ತಂಡದ ಒಂದೊಂದು ನರ್ತನಗಳೂ ನಯನ ಮನೋಹರವಾಗಿದ್ದವು. ಗುರುಗಳಿಂದ ದತ್ತ ಪರಿಣತ ಶಿಕ್ಷಣಕ್ಕೆ ಶಿಷ್ಯರ ನೈಪುಣ್ಯ ಕನ್ನಡಿ ಹಿಡಿದಿದ್ದವು.
ನೃತ್ಯಾಧಿಪತಿ ನಟರಾಜನ ಕುರಿತ ಭಕ್ತಿಪ್ರಧಾನ ‘ವರ್ಣ’- ‘ಆರುಂ ದೈವಂ ಅರುಳ್ ವಾಯ್’ -ಎಂದು ಭಕ್ತ, ಭಕ್ತಿಪರವಶನಾಗಿ ದೈವವನ್ನು ಬಗೆಬಗೆಯಾಗಿ ಕರೆಯುವ ಆರ್ದ್ರತೆ, ವರ್ಚಸ್ವೀ ಅಭಿನಯದ ಬಗೆ ಮನನೀಯವಾಗಿತ್ತು. ನೃತ್ಯ ವ್ಯಾಕರಣದ ಪ್ರತಿಯೊಂದು ಅಂಶಗಳೂ ಮಿನುಗುವ ನೃತ್ಯ ಪ್ರಸ್ತಾರದ ಭಕ್ತಿ ತಾದಾತ್ಮ್ಯತೆಯ ನಿಮಗ್ನತೆ ನೋಡುಗರೆದೆಯಲ್ಲಿ ರಸಾನುಭವವನ್ನು ಜಿನುಗಿಸಿತು. ಮಿಥುನರ ಅವ್ಯಾಹತ ಕಂಚಿನ ಕಂಠದ, ಸ್ಫುಟವಾದ ನಟುವಾಂಗದ ಶೊಲ್ಲುಕಟ್ಟುಗಳು ಝೇಂಕಾರ ಗಮನಾರ್ಹವಾಗಿತ್ತು.
ಮುಂದೆ- ಸೀತಾ ಸ್ವಯಂವರದ ಸುತ್ತ ಪರಿಭ್ರಮಿಸಿದ ಹೃದಯಸ್ಪರ್ಶೀ ಘಟನೆಗೆ, ದೃಶ್ಯಾತ್ಮಕ ಜೀವಂತಿಕೆ ಎರೆದ ಗುರು ಪದ್ಮಿನೀ ರಾಮಚಂದ್ರನ್ ನೃತ್ಯಸಂಯೋಜನೆಯ ‘ಅಗೋ ಬರುತಿಹನೆ ಶ್ರೀರಾಮ’-ಎಂಬ ಸುಮನೋಹರ ಕೃತಿ ರೋಮಾಂಚಕರವಾಗಿತ್ತು.
ಅಂತ್ಯದಲ್ಲಿ ಪ್ರಸ್ತುತವಾದ ‘ತಿಲ್ಲಾನ’ದ ವೈಶಿಷ್ಟ್ಯವೆಂದರೆ, ಇಡೀ ಮಾರ್ಗ ಸಂಪ್ರದಾಯದ ಎಲ್ಲ ಕೃತಿಗಳ ಸಾರವನ್ನು ಹೂರಣದಂತೆ ತುಂಬಿದ ಮೋದಕದ ಸವಿ ಬಡಿಸಿದ, ವಿಶಿಷ್ಟ ಲಯವಿನ್ಯಾಸದಲ್ಲಿ ಮೂಡಿಬಂದ ಒಟ್ಟಂದದ ಸಮಷ್ಟಿ ಬಂಧ. ಇದು ಗುರು ಪದ್ಮಿನಿಯವರ ವಿಶಿಷ್ಟ ಕಾಣ್ಕೆ. ಪುಷ್ಪಾಂಜಲಿಯ ನೃತ್ತಾರ್ಚನೆ, ಜತಿಗಳ ಝಲಕ್, ಶಬ್ದದ ಸೊಗಡು, ವರ್ಣದ ಅಭಿನಯ ಪ್ರೌಢತೆ, ನವರಸಗಳ ಸೌದರ್ಯವನ್ನು ಒಳಗೊಂಡ ಲಯಾತ್ಮಕ ವಿನ್ಯಾಸದ ನೆಲೆಯಲ್ಲಿ ಪ್ರಸ್ತುತವಾದ ಈ ’ತಿಲ್ಲಾನ’-ಒಂದು ಅಪರೂಪದ ಸಂಯೋಜನೆಯಾಗಿತ್ತು.
****************