Image default
Dance Reviews

Natarang School of Dance-Nrityaavishkaar-

ವೈವಿಧ್ಯಪೂರ್ಣ ಮನಮೋಹಕ ‘ನೃತ್ಯಾವಿಷ್ಕಾರ’

ನೃತ್ಯ ವಿದುಷಿ ಪ್ರೀತಿ ಸೊಂಡೂರ್ ನೇತೃತ್ವದ ‘ನಟರಂಗ್ ಸ್ಕೂಲ್ ಆಫ್ ಡ್ಯಾನ್ಸ್’ ನೃತ್ಯಶಾಲೆಯ 9 ನೆಯ ವಾರ್ಷಿಕೋತ್ಸವದಲ್ಲಿ ಸಾಕಾರಗೊಂಡ ‘ನೃತ್ಯಾವಿಷ್ಕಾರ್’ ದ ಪ್ರತಿಯೊಂದು ನೃತ್ಯಗಳೂ ಹೆಸರಿಗೆ ಅನ್ವರ್ಥಕವಾಗಿ ವಿವಿಧ ಆಯಾಮಗಳಲ್ಲಿ ಹೊಸನೋಟವನ್ನು ನೀಡಿದವು.

   ಎ.ಡಿ.ಎ. ರಂಗಮಂದಿರದಲ್ಲಿ ಇತ್ತೀಚಿಗೆ ‘ನಟರಂಗ್ ಸ್ಕೂಲ್ ಆಫ್ ಡ್ಯಾನ್ಸ್’ ಸಂಸ್ಥೆಯ ಉದಯೋನ್ಮುಖ ನೃತ್ಯ ವಿದ್ಯಾರ್ಥಿಗಳ ವೈವಿಧ್ಯಪೂರ್ಣ ಹೆಜ್ಜೆ-ಗೆಜ್ಜೆಗಳ ಝಣತ್ಕಾರ ನರ್ತನಗಳು  ಅತ್ಯಂತ ಮನೋಹರವಾಗಿ ಪ್ರಸ್ತುತವಾದವು. ಶುಭಾರಂಭದಲ್ಲಿ ಪುಟಾಣಿ ಮಕ್ಕಳಿಂದ ಭಗವದ್ಗೀತೆ ಮತ್ತು ಇನ್ನಿತರ ಶ್ಲೋಕಗಳು ಸುಶ್ರಾವ್ಯವಾಗಿ, ಸ್ಫುಟವಾಗಿ ನಿರೂಪಿತವಾಗಿ ಕಲಾರಸಿಕರ ಮೆಚ್ಚುಗೆಗೆ ಪಾತ್ರವಾಯಿತು. ನಟರಂಗ್ ಶಾಲೆಯಲ್ಲಿ ದೊರೆತ ಶಿಸ್ತಿನ ಶಿಕ್ಷಣದ ಪ್ರತಿಬಿಂಬವಾಗಿದ್ದವು ಅವು.

ಶುಭಾರಂಭದಲ್ಲಿ ಗುರು ಪ್ರೀತಿ ಸೊಂಡೂರ್, ದೇವಾನುದೇವತೆ-ಗುರು-ಹಿರಿಯರಿಗೆ, ಸಭಾಸದನದಲ್ಲಿ ಸಾಕ್ಷೀಭೂತರಾದ ಪ್ರೇಕ್ಷಕರಿಗೆ ವಿನಮ್ರ ಪ್ರಣಾಮ ಅಂಗಶುದ್ಧವಾದ ಸುಂದರ ನೃತ್ತಗಳ ಮೂಲಕ  ‘ಪುಷ್ಪಾಂಜಲಿ’ಯನ್ನು ಸಲ್ಲಿಸಿದರು. ಅನಂತರ- ಅವರೊಡನೆ ಸಾಮರಸ್ಯದಿಂದ ನರ್ತಿಸಿದ ಸಹ ನರ್ತಕಿಯರು ಗುರುಗಳೊಂದಿಗೆ ಅಷ್ಟಲಕ್ಷ್ಮಿಯರ ರೂಪ, ಲಾವಣ್ಯಗಳ ವರ್ಣನೆ ಮತ್ತು ಅವರ ಮಹಿಮೆಗಳನ್ನು ತಮ್ಮ ಸುಂದರಾಭಿನಯ, ಆಂಗಿಕ ಚಲನೆ-ಮುದನೀಡುವ ಹಸ್ತಮುದ್ರಿಕೆ, ಮನೋಜ್ಞ ಭಂಗಿಗಳೊಂದಿಗೆ ಸೊಗಸಾಗಿ ನರ್ತಿಸಿದರು. ವಿವಿಧ ದೇವರುಗಳನ್ನು ಕುರಿತ ಅವರ ಶ್ಲೋಕಾಭಿನಯ ಆರಂಭಿಕ ನೃತ್ತ ಬಂಧವಾಗಿ ನಾಟ್ಯಾವಳಿಗೆ ಉತ್ತಮ ನಾಂದಿ ಹಾಡಿತು.

ಪ್ರತಿಯೊಬ್ಬ ಮಕ್ಕಳಿಗೂ ವೇದಿಕೆ ಒದಗಿಸುವ ಸದುದ್ದೇಶದಿಂದ ಪುಟಾಣಿಗಳು ಕಲಿತ ವಿವಿಧ ಅಡವು, ಹಸ್ತಮುದ್ರೆಗಳನ್ನು ಪ್ರದರ್ಶಿಸುವ ಅವಕಾಶವನ್ನು ಕಲ್ಪಿಸಿದ್ದು, ಮಕ್ಕಳು ಉತ್ಸಾಹಭರಿತರಾಗಿ ನಿರೂಪಿಸಿದ್ದು ನಿಜಕ್ಕೂ ವಿಶೇಷವಾಗಿತ್ತು. ಅವರು ಅರ್ಪಿಸಿದ ಸರಳ-ಸುಂದರ ನೃತ್ತಮಾಲೆ ನಿಷ್ಠೆಯಿಂದ ಸಾಕಾರಗೊಂಡವು.  ಹಾಗೆಯೇ ಅವರು ನಿರೂಪಿಸಿದ ಹಲವಾರು ನೃತ್ಯಗಳು ರಂಜಿಸಿದವು.

ಅನಂತರ ಮೋಹನರಾಗ-ಆದಿತಾಳದ ‘ಗಿರಿಧರ ಗೋಪಾಲ’ನನ್ನು ವೇದಿಕೆಯ ಮೇಲೆ ಕರೆತಂದ ಚತುಷ್ಕನ್ಯೆಯರು ಬಾಲಕೃಷ್ಣನ ಲೀಲೆಗಳನ್ನು ಸುಂದರ ಪುಟ್ಟ ಪುಟ್ಟ ಸಂಚಾರಿಗಳ ಕಥಾನಕಗಳೊಂದಿಗೆ ಕಣ್ಮುಂದೆ ತಂದು ನಿಲ್ಲಿಸಿದರು. ದಾಸಶ್ರೇಷ್ಠ ಪುರಂದರದಾಸರು ರಚಿಸಿದ ಸುಬ್ರಹ್ಮಣ್ಯನ ರೂಪ-ಚೆಲುವು-ಮಹಿಮಾತಿಶಯವನ್ನು ಬಣ್ಣಿಸುವ ಸುಂದರ ಕೃತಿ-  ‘ಸುಬ್ರಹ್ಮಣ್ಯನೇ ಸುಂದರರೂಪನೇ ಸುರ ಸೇನಾಪತಿ ಸುಕುಮಾರ…’-ಗಜಮುಖ ಸೋದರನನ್ನು ಮನಸಾರೆ ಸ್ತುತಿಸುತ್ತ ಕಲಾವಿದೆಯರು ಕುಮಾರಸ್ವಾಮಿಯ ವೈಶಿಷ್ಟ್ಯವನ್ನು ತಮ್ಮ ಸಂದರಾಭಿನಯದಿಂದ ಕಟ್ಟಿಕೊಟ್ಟರು. ಅನಂತರ- ಜಗಜ್ಜನನಿ ಕಲ್ಯಾಣಿಯನ್ನು ಕುರಿತ ದೈವೀಕ ಕೃತಿಯನ್ನು  ಅಭಿನಯಿಸಲಾಯಿತು.

 ಅನಂತರ- ಡಾ. ಸುಶ್ಮಿತಾ ಸುಂದರವಾಗಿ ನಿರೂಪಿಸಿದ ‘ನಾರಾಯಣ ಹರಿ ಗೋವಿಂದ ‘ ದೇವರನಾಮ ಹಾಗೂ ಪುಟ್ಟ ಕಲಾವಿದರ ‘ಮುದಾಕರತ್ತ ಮೋದಕಂ’ ಗಣೇಶನಿಗೆ ಜಯ ಹಾಡಿದ ಮುದ ನೀಡಿದ ಕೃತಿಗಳಾಗಿದ್ದವು. ನುರಿತ ನರ್ತಕಿಯಾದ  ಪಿ. ಚಂದನಳ ‘ಜಯ ಜಾನಕಿ ರಾಮ’ನನ್ನು ಕುರಿತಾದ ‘ತೋಡಯ ಮಂಗಳಂ’ ಮಿಂಚಿನ ಸಂಚಾರದ ನೃತ್ತಗಳಿಂದ ಮತ್ತು ರಮ್ಯಾಭಿನಯದಿಂದ ಮನಸೆಳೆದವು. ಚಂದನಳ ಉತ್ತಮ ಆಂಗಿಕಗಳು, ಪರಿಣಾಮಕಾರಿಯಾಗಿದ್ದು, ಅವಳ ಮನೋಹರ ಭಂಗಿಗಳು ಇಷ್ಟವಾದವು.

ಅಂತ್ಯದಲ್ಲಿ ಪ್ರೀತಿ ಸೊಂಡೂರು ವಾಸುದೇವನನ್ನು ಕುರಿತ ಕೃತಿಯನ್ನು ತಮ್ಮ ಪ್ರೌಢ ಅಭಿನಯದಿಂದ, ಸುಮನೋಹರ ಚಲನೆ-ನೃತ್ತಗಳಿಂದ ಸಾಕಾರಗೊಳಿಸಿ ಪ್ರಸ್ತುತಿಯನ್ನು ಸಂಪನ್ನಗೊಳಿಸಿದರು.                                  

  ****************          

Related posts

ಪ್ರೌಢ ಅಭಿನಯದ ಚೇತೋಹಾರಿ ನೃತ್ಯಸಂಭ್ರಮ

YK Sandhya Sharma

‘ಶ್ರೀರಾಮಾಯಣ ದರ್ಶನ’ದ ದಿವ್ಯಾನುಭೂತಿಯ ಸುಂದರ ದೃಶ್ಯಕಾವ್ಯ

YK Sandhya Sharma

ಅಮರಪ್ರೇಮದ ರಸಲೋಕ `ಗೀತಗೋವಿಂದ’

YK Sandhya Sharma

Leave a Comment

This site uses Akismet to reduce spam. Learn how your comment data is processed.