Image default
Dancer Profile

ಭರತನಾಟ್ಯ ಪ್ರವೀಣೆ ದೀಪಾ ಭಟ್

ನೃತ್ಯ ಕ್ಷೇತ್ರದಲ್ಲಿ ನಾವು ಸಾಮಾನ್ಯವಾಗಿ ಗಮನಿಸಬಹುದಾದ ಅಂಶವೆಂದರೆ,  ಅನೇಕ ನೃತ್ಯ ಕಲಾವಿದರು ತಾವು ಓದಿದ್ದು, ವಿದ್ಯಾಭ್ಯಾಸ ನಡೆಸಿದ್ದು ಒಂದು, ಆದರೆ ತಮ್ಮ ಸಾಧನೆಗೆ ಬಯಸಿ ಆರಿಸಿಕೊಂಡದ್ದು ಮಾತ್ರ ನೃತ್ಯರಂಗವಾಗಿರುತ್ತದೆ. ಆ ಪೈಕಿ ದೀಪಾಭಟ್ ಕೂಡ ಒಬ್ಬರು. ಶಾಲಾ ದಿನಗಳಿಂದಲೂ ವಿದ್ಯಾಭ್ಯಾಸದಲ್ಲಿ ಚುರುಕಾಗಿದ್ದು, ಎಂಜಿನಿಯರಿಂಗ್ ಪದವೀಧರೆಯಾಗಿ, ಮುಂದೆಯೂ ಓದಿನಲ್ಲಿ ಅಪಾರ ಆಸಕ್ತಿ ತಳೆದು ಮುಗಿಸಿದ್ದು ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್. ಆದರೆ ಅವರ ಒಲವು ಚಿಕ್ಕಂದಿನಿಂದ ನೃತ್ಯದತ್ತ. ಯಾವುದೋ ಸಂಸ್ಥೆಯಲ್ಲಿ ತಾಂತ್ರಿಕ ಹುದ್ದೆಯಲ್ಲಿ ಕೆಲಸ ಮಾಡುತ್ತಾ ಹವ್ಯಾಸವಾಗಬಹುದಾಗಿದ್ದ ಈ ನೃತ್ಯ ಇಂದು ಅವರ ವೃತ್ತಿಯಾಗಿದೆ. ದಿನವಿಡೀ ನೃತ್ಯ ಚಟುವಟಿಕೆಯೇ ಅವರ ದಿನಚರಿ. ಪ್ರಸ್ತುತ ಡೆಕ್ಕನ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ನೃತ್ಯ ಶಿಕ್ಷಕಿ. ಜೊತೆಗೆ ಅವರದೇ ಆದ ‘’ನೃತ್ಯ ಕುಟೀರ’’ ಶಾಲೆಯ ನಾಲ್ಕು ಶಾಖೆಗಳಲ್ಲಿ ನೂರಾರು ಮಕ್ಕಳಿಗೆ ನಾಟ್ಯಶಿಕ್ಷಣ ನೀಡುತ್ತ ಅವರನ್ನು ಕಲಾರಂಗದಲ್ಲಿ ಬೆಳೆಸುವ ಗುರಿ.

ದೀಪಾಭಟ್ ಮೂಲತಃ ದಕ್ಷಿಣ ಕನಡದ ಸಿದ್ಧಾಪುರದವರು. ತಂದೆ ಪುಟ್ರಾಯ ಭಟ್-ತಾಯಿ ಜಯಲಕ್ಷ್ಮೀ , ಇಬ್ಬರೂ ಬ್ಯಾಂಕ್ ಉದ್ಯೋಗಿಗಳು ಹಾಗೂ ಸಾಹಿತ್ಯ-ಕಲಾಪ್ರಿಯರು. ಹೀಗಾಗಿ ಮಗಳು ನೃತ್ಯಸಾಧನೆ ಮಾಡಲು ಪ್ರೋತ್ಸಾಹಿಸಿದವರು. ತನ್ನ ಎಂಟರ ವಯಸ್ಸಿನಲ್ಲೇ ನೃತ್ಯ ಕಲಿಯಲಾರಂಭಿಸಿದ ಇವಳ ಮೊದಲ ನೃತ್ಯಗುರು ವಂದ್ಯಾ ಶ್ರೀನಾಥ್. ಅನಂತರ ‘ಕಲಾಕ್ಷಿತಿ’ ಖ್ಯಾತಿಯ ಪ್ರೊ.ಎಂ.ಆರ್. ಕೃಷ್ಣಮೂರ್ತಿ ಅವರ ಬಳಿ ಹೆಚ್ಚಿನ ನಾಟ್ಯಾಭ್ಯಾಸ. ಕರ್ನಾಟಕ ಸರ್ಕಾರ ನಡೆಸುವ  ‘ವಿದ್ವತ್ ’ನೃತ್ಯಪರೀಕ್ಷೆಯಲ್ಲಿ ಉತ್ತಮಶ್ರೇಣಿ, ಭರತನಾಟ್ಯ ಕಲಿಕೆಗಾಗಿ ಶಿಷ್ಯವೇತನ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜ್ಯೂನಿಯರ್ ಪರೀಕ್ಷೆ ತೇರ್ಗಡೆ. ಕಲೈ ಕಾವೇರಿ ವಿಶ್ವವಿದ್ಯಾಲಯದಿಂದ  ಭರತನಾಟ್ಯದಲ್ಲಿ ಎಂ.ಎಫ್.ಎ. ಪದವೀಧರೆ ಕೂಡ. ಕೇಂದ್ರಸರ್ಕಾರದಿಂದ ಹಿರಿಯದರ್ಜೆ ವಿಭಾಗದಲ್ಲೂ ಶಿಷ್ಯವೇತನ ಪಡೆದ ಹಿರಿಮೆ. ಬೆಂಗಳೂರು ದೂರದರ್ಶನದ ಹಾಗೂ ಸಾಂಗ್ ಅಂಡ್ ಡ್ರಾಮಾ ಡಿವಿಶನ್ನಿನ ‘ಬಿ’ ಗ್ರೇಡ್ ಕಲಾವಿದೆ ಕೂಡ. ಕಳೆದ ಮೂರು ದಶಕಗಳಿಂದ ನೃತ್ಯರಂಗದಲ್ಲಿ ತೊಡಗಿಕೊಂಡಿರುವ ದೀಪಾ, ದೇಶಾದ್ಯಂತ ಅನೇಕ ಏಕವ್ಯಕ್ತಿ ನೃತ್ಯ ಪ್ರದರ್ಶನಗಳನ್ನು ನೀಡಿ ಮೆಚ್ಚುಗೆ ಗಳಿಸಿದ್ದಾರೆ.

ತಮಿಳುನಾಡು ಸರ್ಕಾರದಿಂದ ಭರತನಾಟ್ಯ ಯುವ ಕಲಾವಿದೆಯಾಗಿ ಆಯ್ಕೆಯಾಗಿ ಚೆನ್ನೈ, ಶಿವಕಾಶಿ, ಮಧುರೈ ಮತ್ತು ನೈವೇಲಿಯಲ್ಲಿ ನೃತ್ಯ ಪ್ರದರ್ಶನ, ಹಲವು ಯುವ ನೃತ್ಯೋತ್ಸವ,ನ್ರುತ್ಯವಾಹಿನಿ, ಸಾಂಸ್ಕೃತಿಕ ಸೌರಭ ಕಾರ್ಯಕ್ರಮ, ರಸಸಂಜೆ, ನಟರಾಜೋತ್ಸವಗಳಲ್ಲಿ ಭಾಗವಹಿಸಿ, ಚಂದನ ವಾಹಿನಿಯಲ್ಲಿ ನೂಪುರನಾದ ಭರತನಾಟ್ಯ ಪ್ರಸ್ತುತಿ ಇವರ ಹೆಮ್ಮೆ. ತಸಮೂಹ ನೃತ್ಯ ಪ್ರದರ್ಶನದಲ್ಲಿ ಪ್ರತಿಷ್ಟಿತ ದಸರ ಉತ್ಸವ, ಇಸ್ಕಾನ್ ಬ್ರಹ್ಮೋತ್ಸವ, ತಂಜಾವೂರು, ಚಿದಂಬರ ಬೃಹನ್ ನಾಟ್ಯಾಂಜಲಿ ಮುಂತಾದವು.  

ಹಲವಾರು ನೃತ್ಯ ಕಾರ್ಯಕ್ರಮಗಳ ನಿರೂಪಕಿಯಾಗಿಯೂ ಅನುಭವ ಪಡೆದಿರುವ ದೀಪಾ, ಸಮಿತ್ಯಾ.ಕಾಂ ವೆಬ್ ಸೈಟ್ ಮೂಲಕ ಕಲಾಕ್ಷೇತ್ರ ಶೈಲಿಯಲ್ಲಿ ‘ಭರತನಾಟ್ಯ ಕಲಿಕೆ’ ಎಂಬ ಮಾಲಿಕೆಯನ್ನು ಪ್ರಾರಂಭಿಸಿ ನೃತ್ಯಾಭ್ಯಾಸಿಗಳಿಗೆ ‘ದಾರಿದೀಪ’ವಾಗಿದ್ದಾರೆ.

ತಮ್ಮ ಶಾಲೆಗಾಗಿ ಅನೇಕ ನೃತ್ಯರೂಪಕಗಳನ್ನು ನಿರ್ಮಿಸಿರುವ ಇವರು ಉತ್ತಮ ನೃತ್ಯಸಂಯೋಜಕಿ ಎಂದು ಗುರುತಿಸಿಕೊಂಡಿದ್ದಾರೆ. ಕೆಲವು ನಾಟಕಗಳಿಗೂ ನೃತ್ಯ ಸಂಯೋಜನೆ ಮಾಡಿರುವ ಇವರು ಭಾಗವಹಿಸಿರುವ ಕೆಲವು ಪ್ರಖ್ಯಾತ ನೃತ್ಯರೂಪಕಗಳೆಂದರೆ, ದೈವೇಚ್ಛೆ, ರುಕ್ಮಿಣಿ ಕಲ್ಯಾಣ, ಗೋಕುಲ ನಿರ್ಗಮನ, ಪಂಚಕನ್ಯ, ದಶಾವತಾರ, ನವರಸ ಲಲಿತೆ ಮುಂತಾದವು.ಶಾಲಾ ಮಕ್ಕಳಿಗಾಗಿ ಭಾರತೀಯ ಹಬ್ಬಗಳು, ಕರ್ನಾಟಕ ವೈಭವ, ಕವಿ-ಕಾವ್ಯ ಪರಂಪರೆ ಮುಂತಾದ ನೃತ್ಯ ರೂಪಕಗಳಿಗೆ ಹಾಗೂ ಹಲವಾರು ಬಗೆಯ ಜಾನಪದ ನೃತ್ಯಗಳಿಗೂ ನೃತ್ಯ ಸಂಯೋಜಿಸಿ ಪ್ರದರ್ಶಿಸಿದ್ದಾರೆ.

ಇವರ ನೃತ್ಯಕುಟೀರದ ಶಿಷ್ಯಂದಿರು, ನಾಡಿನ ಎಲ್ಲ ಪ್ರಮುಖ ದೇವಾಲಯಗಳಲ್ಲಿ ನೃತ್ಯ ಸೇವೆಯಾಗಿ ಪ್ರದರ್ಶನ, ಸ್ವಾನಂದಾಶ್ರಮ ಕಲಾ ಮಹೋತ್ಸವ, ದಸರಾ, ಕಲಾ ಪ್ರತಿಭೋತ್ಸವ, ಕರೂರು ಆರುದ್ರ, ಮರುಧಾ ಉತ್ಸವಗಳಲ್ಲಿ ಭಾಗವಹಿಸಿ, ಲೀಲಾಮಯ ಕೃಷ್ಣ, ನವರಸ ನಟರಾಜ, ದುರ್ಗಾ ದುರ್ಗತಿ ನಾಶಿನಿ , ವಚನಾಮೃತ ಮುಂತಾದ ರಂಜನೀಯ ನೃತ್ಯ ಪ್ರದರ್ಶನ ನೀಡಿ ಕಲಾರಸಿಕರ ಗಮನ ಸೆಳೆದಿದ್ದಾರೆ.

ನೃತ್ಯ ಕುಟೀರದ ವೇದಿಕೆಯಲ್ಲಿ ‘ನೃತ್ಯಧಾರೆ’ ಎಂಬ ಸರಣಿಯಲ್ಲಿ ಕಿರಿಯ ನೃತ್ಯ ಕಲಾವಿದರಿಗೆ ಅವಕಾಶ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ‘ನರ್ತನ -ಚಿಂತನ’ ಎಂಬ ನೃತ್ಯ ಕಮ್ಮಟ ನಡೆಸುತ್ತ ನೃತ್ಯ ತಜ್ಞರನ್ನು ಕರೆಸಿ ವಿಶೇಷ ಜ್ಞಾನಾರ್ಜನೆಗೆ ಅನುವು ಮಾಡಿಕೊಡುತ್ತಿದ್ದಾರೆ.

ಪ್ರತಿಷ್ಠಿತ ಆರ್ಯಭಟ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿರುವ ದೀಪಾ ಅವರ ಪತಿ ಗುರುನಂದನ್  ಡಿಸೈನ್ ಎಂಜಿನಿಯರ್, ಇವರ ನೃತ್ಯ ಚಟುವಟಿಕೆಗಳಿಗೆ ಬೆನ್ನೆಲುಬಾಗಿದ್ದು, ಪ್ರಸಾಧನ, ಬೆಳಕು, ಧ್ವನಿವ್ಯವಸ್ಥೆ ಮುಂತಾದ ಎಲ್ಲ ನೆರವುಗಳನ್ನೂ ನೀಡುತ್ತಾರೆ. ಮಗಳು ನಿಸರ್ಗ ಕೂಡ ನೃತ್ಯ ಕಲಿಯುತ್ತಿದ್ದು ಇವರೆಲ್ಲ ನೃತ್ಯರೂಪಕಗಳಲ್ಲಿ ಪಾಲ್ಗೊಳ್ಳುತ್ತಿರುವ ಯುವಪ್ರತಿಭೆ.

Related posts

ಉದಯೋನ್ಮುಖ ನೃತ್ಯಗಾರ್ತಿ ಎಂ. ಅಮೃತಾ

YK Sandhya Sharma

ಬಹುಮುಖ ನೃತ್ಯಪ್ರತಿಭೆ ಮೋನಿಷಾ ನವೀನ್ ಕುಮಾರ್

YK Sandhya Sharma

ನೃತ್ಯಸಾಧನೆಯ ಛಲಗಾರ್ತಿ ಅನುಪಮಾ ಮಂಗಳವೇಡೆ

YK Sandhya Sharma

Leave a Comment

This site uses Akismet to reduce spam. Learn how your comment data is processed.