Image default
Dance Reviews

Danseuse Vidhatri’s Heart-Touching Visual Poetry

ಬಹುಮುಖ ಪ್ರತಿಭೆ ವಿಧಾತ್ರಿಯ ಹೃದಯಸ್ಪರ್ಶೀ ನೃತ್ಯಕಾವ್ಯ

ಅದೊಂದು ಅಪೂರ್ವ ಅನುಭವ. ಸಾಂಪ್ರದಾಯಕ ರಂಗಪ್ರವೇಶ ಕಾರ್ಯಕ್ರಮ ಎನಿಸಲಿಲ್ಲವದು. ಕನ್ನಡಪ್ಪ್ರಿಯೆ – ಅಭಿಮಾನಿ, ಪ್ರಯೋಗಶೀಲೆ ಎಂಬ ಅಸ್ಮಿತೆಯುಳ್ಳ ನೃತ್ಯಗುರು ಹೇಮಾ ಪ್ರಭಾತ್ ಎಂದಿನಂತೆ ತಮ್ಮ ಶಿಷ್ಯೆ ‘ವಿಧಾತ್ರಿ’ಯ ‘ನರ್ತನಧಾತ್ರಿ’ – ಎ.ಡಿ.ಎ. ರಂಗಮಂದಿರದಲ್ಲಿ ನಡೆದ ರಂಗ ಪದಾರ್ಪಣೆಯ ಸನ್ನಿವೇಶವನ್ನು ಚಿರಸ್ಮರಣೀಯವಾಗಿಸಿದ್ದರು. ಹೇಮಾ, ಪ್ರತಿ ರಂಗಪ್ರವೇಶದ ನೃತ್ಯಪ್ರಸ್ತುತಿಗೂ ನೀಡುವ ಶೀರ್ಷಿಕೆಗಳು  ಅನ್ವರ್ಥಕವಾಗಿರುವುದಲ್ಲದೆ ಅಷ್ಟೇ ವಿಶಿಷ್ಟವಾಗಿಯೂ ಇರುತ್ತವೆ.

ಬಹುಮುಖ ಪ್ರತಿಭೆ, ನರ್ತನಕ್ಕೆ ಹೇಳಿಮಾಡಿಸಿದ ಮಾಟವಾದ ತನುವಿನ ನೃತ್ಯ ಕಲಾವಿದೆ ವಿದುಷಿ ವಿಧಾತ್ರಿ ತನ್ನ ಪ್ರಥಮ ಹೆಜ್ಜೆ-ಗೆಜ್ಜೆಯ ಸಂಭ್ರಮದ ಸಂಜೆಯಲ್ಲಿ, ರಂಗದ ಮೇಲೆ ಪಾದರಸದ ನಡೆಗಳೊಂದಿಗೆ ಲೀಲಾಜಾಲದ ಆಂಗಿಕಾಭಿನಯದ ಸೊಗಸಿನೊಂದಿಗೆ ನರ್ತಿಸಿದ್ದು ಕಲಾರಸಿಕರ ಹೃದಯವನ್ನು ಸ್ಪರ್ಶಿಸಿ ಅಪಾರ ಮೆಚ್ಚುಗೆಯನ್ನು ಗಳಿಸಿತು. ಪ್ರಾರಂಭದಿಂದ ಅಂತ್ಯದವರೆಗೂ ಕಲಾತ್ಮಕ ರಂಗಸಜ್ಜಿಕೆಯ ಆ ಆವರಣದ ಪವಿತ್ರ ರಂಗಸ್ಥಳದಲ್ಲಿ ದೈವೀಕತೆಯೇ ತಾಂಡವವಾಡುತ್ತಿತ್ತು. ಕಣ್ಮನ ಸೆಳೆಯುವಂತಿದ್ದ ಆಕರ್ಷಕ ವೇಷಭೂಷಣ – ಕೇಶವಿನ್ಯಾಸಗಳಲ್ಲಿ ಕಂಗೊಳಿಸಿದ ಕಲಾವಿದೆ ವಿಧಾತ್ರಿ ತನ್ನ ಸಮತೋಲನದ ನೃತ್ಯ ವೈವಿಧ್ಯತೆಯಿಂದ, ಭಕ್ತಿ ತಾದತ್ಮ್ಯತೆ ಮೇರೆವರಿದ ನುರಿತ ಅಭಿನಯದಿಂದ, ಮಿಂಚಿನ ಸಂಚಾರದ ನೃತ್ತ ಪ್ರಪ್ಹುಲ್ಲತೆಯಿಂದ, ವೀಕ್ಷಕರು ಒಂದು ಕ್ಷಣವೂ ರೆಪ್ಪೆ ಮಿಟುಕಿಸದಂತೆ ಹಿಡಿದಿಟ್ಟುಕೊಂಡ ಸೂಜಿಗಲ್ಲಾಗಿತ್ತು ಅಂದಿನ ನೃತ್ಯ ಪ್ರಸ್ತುತಿ. ಹೆಚ್ಚೇನು, ಎಲ್ಲ ಕೃತಿಗಳ ಸಾಕ್ಷಾತ್ಕಾರದಲ್ಲಿ ಕಾವ್ಯಾತ್ಮಕ ಧಾರೆ ಹರಿದಿತ್ತು.

ಕೃತಿಗಳ ಪ್ರಸ್ತುತಿ ‘ಮಾರ್ಗ’ದ ಸಾಂಪ್ರದಾಯಕ ಚೌಕಟ್ಟಿನಲ್ಲೇ ಇದ್ದರೂ ಹೆಜ್ಜೆ – ಗೆಜ್ಜೆಗಳ ಗತಿ, ಚಲನೆಯ ಸೌಂದರ್ಯ, ನೃತ್ತಗಳ ಬೆಡಗು, ಅಂಗಿಕಾಭಿನಯದ ರಮ್ಯತೆ ಸಾತ್ವಿಕಾಭಿನಯದ ಸೊಗಸು ಮೋಡಿ ಮಾಡಿತು.

ಶುಭಾರಂಭದಲ್ಲಿ ಸುಶ್ರಾವ್ಯ ದನಿಯ ಒಡತಿ ಕಲಾವಿದೆ ವಿಧಾತ್ರಿ, ವಿಘ್ನಹರನನ್ನು ಮನದುಂಬಿ ಸ್ತುತಿಸಿ, ವೀಣೆಯನ್ನು ನುಡಿಸಿ ಶಾರದೆಯನ್ನು ಆಹ್ವಾನಿಸಿ, ನಂತರ ದೇವಾನುದೇವತೆಗಳನ್ನು ರಂಗಸನ್ನಿಧಿಗೆ ಹಾರ್ದಿಕವಾಗಿ ಬರಮಾಡಿಕೊಂಡದ್ದು ಮನನೀಯ. ನಂತರ- ಮೋಹನ ಕಲ್ಯಾಣಿ ರಾಗ- ಖಂಡಚಾಪು ತಾಳದ ವಿ. ಶ್ರೀ ಜಿ. ಗುರುಮೂರ್ತಿ ವಿರಚಿತ ‘ಗಣೇಶನ ವಂದನೆ’ಯನ್ನು ತನ್ನ ವಿಶಿಷ್ಟ ಭಾವ- ಭಂಗಿಗಳಲ್ಲಿ ಪ್ರಥಮಪೂಜಿತನನ್ನು ಕಣ್ಮುಂದೆ ತಂದು ನಿಲ್ಲಿಸಿದಳು. ಅವಳ ಪ್ರತಿ ಹೆಜ್ಜೆಯ ಮೆರುಗು, ನೃತ್ತದ ಶೋಭೆ ಎದ್ದುಕಾಣುತ್ತಿತ್ತು.

  ಅನಂತರ- ಜನಸಂಮೋದಿನಿ ರಾಗದಲ್ಲಿ ಸ್ವತಃ ವಿಧಾತ್ರಿಯೇ ರಚಿಸಿದ ‘ಕಚ್ಚಪಿ ಧಾರಿಣಿ’ ಕೃತಿ ಅನನ್ಯವಾಗಿ ಮೂಡಿಬಂತು.

 ಮುಂದೆ ಅನಾವರಣಗೊಂಡದ್ದು ದಿವ್ಯಲೋಕ. ದೇವಿತ್ರಯರ ದಿವ್ಯ ಮಹಿಮೆ – ವಿನೂತನ ಕಥನವನ್ನು ಅರುಹಿದ ದೃಶ್ಯ ಕಾವ್ಯ. ರಾಗಮಾಲಿಕೆ- ತಾಳಮಾಲಿಕೆಯಲ್ಲಿ ಝೇಂಕರಿಸಿದ ವಿ. ಬಾಲಸುಬ್ರಹ್ಮಣ್ಯ ಶರ್ಮರ ಕಂಚಿನ ಕಂಠದಲ್ಲಿ ಹೊರಹೊಮ್ಮಿದ ಭಾವಪೂರ್ಣ ‘ತ್ರಯಾಕ್ಷಿ ಸ್ತುತಿ’  ( ಸಂಭಾಷಣೆ ರಚನೆ ಮತ್ತು ನಿರೂಪಣೆ- ವಿಧಾತ್ರಿ ವಿ.) ಗೆ ಮೈದುಂಬಿ ನರ್ತಿಸಿದ ವಿಧಾತ್ರಿಯ ಬಹುಮುಖ ಅಭಿನಯ ಪ್ರಖರವಾಗಿ ಮೈದೆರೆದುಕೊಂಡಿತ್ತು.  ಶಕ್ತಿ ತುಂಬಿದ – ರೋಮಾಂಚನ ಉಂಟು ಮಾಡಿದ ಪರಿಣಾಮಕಾರಿ ‘ನೃತ್ಯ ಝೇಂಕಾರ’ ಅದಾಗಿತ್ತು.

ಸಾಕ್ಷಾತ್ ಅನ್ನಪೂರ್ಣೆಶ್ವರಿಯ ರೂಪವಾದ ವಿಶಾಲಾಕ್ಷಿಯ ಅನನ್ಯ ಮಾತೃರೂಪಿಣಿಯ ಉದಾತ್ತ ನಡೆ, ಶಕ್ತಿ- ಮಹತ್ವಗಳನ್ನು ವಿಧಾತ್ರಿ ಹೃದಯಂಗಮ ಅಭಿನಯದಲ್ಲಿ ಮನದುಂಬಿದರೆ, ಶ್ರೀಚಕ್ರ ರಾಜೇಶ್ವರಿ ಸಿಂಹಾಸನೇಶ್ವರಿ ಲಲಿತಾಂಬಿಕೆ ಕಾಮಾಕ್ಷಿಯ ಶಿಷ್ಟ ರಕ್ಷಣೆ- ದುಷ್ಟ ಶಿಕ್ಷೆಯ ಸಂಚಾರಿಯಲ್ಲಿ ರಣ ಭಯಂಕರಿಯಾಗಿ ಗುಡುಗಿದ ದೇವಿ ಅಷ್ಟೇ ಪ್ರಸನ್ನವದನಳಾಗಿ ಕೃಪೆ ದೋರಿ ಶ್ರೀರಕ್ಷೆ ನೀಡಿದ ಆನಂದದಾಯಿನಿಯಾಗಿ ದರ್ಶನ ನೀಡಿ,  ಹೃನ್ಮನ ತಣಿಸಿದ ನರ್ತನದಲ್ಲಿ  ಚೈತನ್ಯಪೂರ್ಣೆಯಾದಳು. ಇನ್ನು ಮೂರನೆಯ ಮಹಿಮಾನ್ವಿತೆ ಮೀನಾಕ್ಷಿದೇವಿಯ ವೃತ್ತಾಂತ ಬಹು ಸ್ವಾರಸ್ಯವಾಗಿ ನೋಡುಗರ ಮುಂದೆ ಅನಾವರಣಗೊಂಡಿತು. ಮತ್ತು ಅವಳ ಪಾತ್ರ ಬೆಳೆದ ಬಗೆ ಇನ್ನಷ್ಟು ಆಸಕ್ತಿ – ಕುತೂಹಲಗಳನ್ನು ಉಂಟುಮಾಡಿತು. ಮಧುರಾಪುರಿಯ ಅರಸ ಪಾಂಡ್ಯ ಹಾಗೂ ಅವನ ರಾಣಿ ಕಾಂಚನಮಾಲೆಯರಿಗೆ, ದೇವರಿತ್ತ ವರದ ಫಲವಾಗಿ ಜನಿಸಿದ ಮುದ್ದಿನ ಮಗಳಾದ ಮೀನಾಕ್ಷಿ ಜನ್ಮಜಾತವಾಗಿ ಸ್ತನತ್ರಯಗಳನ್ನು ಹೊಂದಿ, ಅದು ಅವಳ ಮದುವೆಯ ಸಂದರ್ಭದಲ್ಲಿ ಮಾಯವಾಗುವುದಾಗಿ ಅಶರೀರವಾಣಿಯಾಗಿರುತ್ತದೆ.

ವೀರೋಚಿತವಾಗಿ ಬೆಳೆದ ರಾಜಕುಮಾರಿ ಮುಂದೆ ರಾಜ್ಯವಿಸ್ತರಣೆಯ ಸಂದರ್ಭದಲ್ಲಿ ಮುಖಾಮುಖಿಯಾದ ಸ್ಫುರದ್ರೂಪಿ ವೀರರಮಣ ಶಿವನಲ್ಲಿ ಅನುರಕ್ತಳಾದಾಗ ಅವಳ ಮೂರನೆಯ ಸ್ತನ ಮಾಯವಾಗುತ್ತದೆ ಮತ್ತು ಅವರಿಬ್ಬರು ಶಾಸ್ತ್ರೋಕ್ತವಾಗಿ ಗುರು- ಹಿರಿಯರ ಆಶೀರ್ವಾದದೊಂದಿಗೆ ವಿವಾಹವಾಗುವ ಅದ್ಭುತ ಸನ್ನಿವೇಶದ ದೃಶ್ಯ ರಚನೆ ನಿಜಕ್ಕೂ ಅನ್ಯಾದೃಶ. ದೇವಾನುದೇವತೆಗಳ ಸಾಕ್ಷಿಯಾಗಿ ನಡೆಯುವ ಮೀನಾಕ್ಷಿ ಮತ್ತು ಸುಂದರೇಶ್ವರರ ಸುಮನೋಹರ ವಿವಾಹದ ದೃಶ್ಯಗಳು ನಾಟಕೀಯ ಆಯಾಮದಲ್ಲಿ ಸಾಂಗವಾಗಿ ಸಾಗುತ್ತಾ, ವೇದಘೋಷ- ಮಂಗಳ ಮಂತ್ರಗಳ ಸಾಕ್ಷಾತ್ಕಾರದಲ್ಲಿ ವಿದ್ಯುಕ್ತವಾಗಿ ನೆರವೇರುವ ಸಂಭ್ರಮದ ಮೆರುಗು ವರ್ಣಿಸಲಸದಳ.

ಸಣ್ಣ ನೃತ್ಯರೂಪಕದ ಅನುಭವ ತರುವ ಈ ಅಪೂರ್ವ ವಿವಾಹ ಮಹೋತ್ಸವ ‘ದೃಶ್ಯ ಕಾವ್ಯ’ವಾಗಿ ಅರಳಿ ನೋಡುವವರ ಮನಗಳಿಗೆ ಆಹ್ಲಾದತೆಯ ಸುಖವನ್ನು ಧಾರೆ ಎರೆದವು ಎಂದರೆ ಅತಿಶಯೋಕ್ತಿಯಲ್ಲ.  ಇದೊಂದು ವೈಭವೋಪೇತ ನೋಟವಾಗಿ ಹೊರಹೊಮ್ಮಿತು.

       ವಿಧಾತ್ರಿಯ ನರ್ತನಧಾತ್ರಿಯ ಪರಿಕಲ್ಪನೆಯಲ್ಲಿ ವಿಶಿಷ್ಟ ಸ್ಥಾನ ಪಡೆದ ದೇವಿತ್ರಯರ ಮಹಿಮೆ ಸಾರುವ ಈ ಕೃತಿಗಾಗಿ ಮಾಡಿಕೊಂಡ ಸಿದ್ಧತೆ -ಸಂಶೋಧನೆ ಸುವ್ಯಕ್ತವಾಗಿತ್ತು. ರಂಗದ ಮೇಲೆ ಸೃಜಿಸಲಾದ ಕಲಾತ್ಮಕ ದೈವೀಕ ಸನ್ನಿಧಿಯಲ್ಲಿ  ಇದಕ್ಕಾಗಿಯೇ ವಿಶೇಷವಾಗಿ ಸಜ್ಜಿಸಿದ ದೇವಿತ್ರಯರ ದಿವ್ಯರೂಪದ ಮೂರ್ತಿಗಳು, ಆಯಾ ಸಂದರ್ಭದಲ್ಲಿ ಪ್ರತ್ಯಕ್ಷವಾಗುವಂತೆ ರೂಪಿಸಿದ ವಿಶಿಷ್ಟ ಯೋಜನೆ ಪರಿಣಾಮಕಾರಿಯಾಗಿ ಮೂಡಿಬಂತು. ಜೊತೆಗೆ ಅವರ ಮಹತ್ವವನ್ನು ಅಷ್ಟೇ ಶೋಭಾಯಮಾನವಾಗಿ ಮನಗಾಣಿಸಿದ ಕಲಾವಿದೆಯ ಅಪೂರ್ವ ಕಲಾವಂತಿಕೆಯ ನೃತ್ಯಾಭಿನಯ ವಿಶೇಷವಾಗಿತ್ತಲ್ಲದೆ, ಮೀನಾಕ್ಷಿ ಮತ್ತು ಸುಂದರೇಶ್ವರರ ಕಲ್ಯಾಣ ಪರ್ವದ ಸಡಗರದಲ್ಲಿ ಹಲವಾರು ಕಲಾವಿದರು ಪೂರಕ ಪಾತ್ರಗಳಾಗಿ ಪಾಲ್ಗೊಂಡ ದೃಶ್ಯಗಳು ನಾಟಕೀಯ ಆಯಾಮದಲ್ಲಿ ಮಿಂಚಿ ರಂಜನೀಯವಾಗಿ ಕಂಗೊಳಿಸಿತ್ತು.

ಮುಂದೆ- ಪ್ರಸ್ತುತಿಯ ಹೃದಯ ಭಾಗ ಮತ್ತು ಅಷ್ಟೇ ಹೃದ್ಯವಾಗಿದ್ದ, ಸಂಕೀರ್ಣ ನೃತ್ತಗಳ ಹೆಣಿಗೆಯನ್ನು ಒಳಗೊಂಡಿದ್ದ ದೀರ್ಘ ಬಂಧ ‘ವರ್ಣ’ –ವಿಧಾತ್ರಿಯ ಕಲಾ ನೈಪುಣ್ಯದ ಪರಾಕಾಷ್ಠೆಯ ಗರಿಗಳನ್ನು ಅರಳಿಸಿ ಅದರ ಸಮ್ಮೋಹಕ ವೈಭವದ ದರ್ಶನವನ್ನು ಮಾಡಿಸಿತು. ‘ನವವಿಧ ಭಕ್ತಿಯ ಮಾರ್ಗ’ ವನ್ನು ವಿವಿಧ ಸಂಚಾರಿ ಕಥಾನಕಗಳ ಮೂಲಕ ಕಲಾವಿದೆ, ಭಕ್ತಿಯ ಸುಲಭದ ಮಾರ್ಗಗಳನ್ನು ದೃಶ್ಯವತ್ತಾಗಿ ಕಟ್ಟಿಕೊಟ್ಟಳು. ಮಹಾ ಹರಿಭಕ್ತರಾದ ಪ್ರಹ್ಲಾದ, ಗೋದಾದೇವಿ, ಆಂಜನೇಯ ಮುಂತಾದವರ ಭಕ್ತಿ ತಾದಾತ್ಮ್ಯತೆಯನ್ನು ವಿಧಾತ್ರಿ ಸಾಕರಗೊಳಿಸಿದಳು. ನಡು ನಡುವೆ ಮೂಡಿಬಂದ ವಿವಿಧ ವಿನ್ಯಾಸಗಳ ಹರಿತ ನೃತ್ತಗಳ ವೈವಿಧ್ಯವೂ ಅಷ್ಟೇ ಮನಮೋಹಕವಾಗಿದ್ದವು. ವಿಧಾತ್ರಿಯ ಅಪಾರ ತಾಳ- ಲಯಜ್ಞಾನಗಳು ಸುವ್ಯಕ್ತವಾಗಿ ಬೆರಗುಂಟು ಮಾಡಿದವು. ಅನುದಿನವೂ ನವವಿಧ ಭಕ್ತಿ ಮಾರ್ಗದಲ್ಲಿ ಹರಿಯ ಭಜಿಸಲು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ಅಂಶವನ್ನು ಮನಮುಟ್ಟುವಂತೆ ಅರುಹಿದ ‘ವರ್ಣ’ ಪ್ರಬುದ್ಧ ಮಟ್ಟದಲ್ಲಿ ನಿರೂಪಿತವಾಯಿತು.    

ಮುಂದೆ- ನಟರಾಜ ಸ್ತುತಿ ( ರಾಗ- ಮೋಹನ, ತಾಳ- ಖಂಡಚಾಪು) ಯಲ್ಲಿ ಸದಾಶಿವನ ಮಹಿಮೆಯನ್ನು, ಅವನ ವೈಶಿಷ್ಟ್ಯವನ್ನು ವಿಧಾತ್ರಿ ತನ್ನ ಚೈತನ್ಯಪೂರ್ಣ ಹಾಗೂ ಶಕ್ತಿಶಾಲಿಯಾದ ಅಭಿನಯಗಳಿಂದ ಪ್ರಸ್ತುತಿಗೊಳಿಸಿದಳು.

‘ಸೀತಾ ಮಾತೆಯ ಆತ್ಮಗೌರವ’ ವನ್ನು ಎತ್ತಿ ಹಿಡಿದ ‘ಸೀತಾ ಕೃತಿ’ – ಆಕೆಯ ವ್ಯಕ್ತಿ  ವೈಶಿಷ್ಟ್ಯಹಾಗೂ ಅವಳ ಸ್ತ್ರೀ ‘ಅಸ್ಮಿತೆ’ಯನ್ನು ರಾಮಾಯಣದ  ವಿವಿಧ ಪ್ರಮುಖ ಘಟನೆಗಳ ಮೂಲಕ ಚಿತ್ರಿಸಲಾಯಿತು. ಸೀತೆಯಂಥ ‘ಸ್ತ್ರೀವಾದೀ ಚಿಂತನೆ’ಗೆ ಎಡೆಮಾಡಿದ ಈ ಕೃತಿ ಗಮನಾರ್ಹವೆನಿಸಿತು. ಸೀತಾಮಾತೆಯ ಇಡೀ ಅನುಪಮ ಕಥನವನ್ನು ಕುತೂಹಲಕರವಾಗಿ ಹರವಿ, ಮನಸ್ಸಿಗೆ ಪುಳಕ ತಂದ ಕೃತಿ ‘ಸೀತೆ’ಯ ಅಂತರಾಳದ ಭಾವನೆಗಳಿಗೆ ಕನ್ನಡಿ ಹಿಡಿದ ಕೃತಿ ನೋಡುಗರ  ಹೃದಯವನ್ನು ಮಿಡಿಯಿತು.

  ಅಂತ್ಯದಲ್ಲಿ ಮೂಡಿಬಂದ ಜನಪ್ರಿಯ ಕದನ ಕುತೂಹಲ ರಾಗದ ಡಾ. ಎಂ. ಬಾಲ ಮುರಳೀಕೃಷ್ಣ ವಿರಚಿತ ‘ತಿಲ್ಲಾನ’ದ ಆನಂದ ನರ್ತನದಲ್ಲಿ ವಿಧಾತ್ರಿಯ ಅಸೀಮ ಚೈತನ್ಯ ಅಭಿವ್ಯಕ್ತಗೊಂಡಿತ್ತು. ಕುರಿಂಜಿ ರಾಗದ ಶ್ರೀ ಭದ್ರಾಚಲ ರಾಮದಾಸರ ಮಂಗಳದೊಂದಿಗೆ ಕಲಾವಿದೆ ತನ್ನ ಅದ್ಭುತ ನೃತ್ಯ ಪ್ರಸ್ತುತಿಯನ್ನು ಸಂಪನ್ನಗೊಳಿಸಿದಳು.

ವಿಶಿಷ್ಟ ರಂಗಸಜ್ಜಿಕೆ, ಬೆಳಕಿನ ವಿನ್ಯಾಸ, ಪರಿಕರಗಳ ಬಳಕೆಯೊಂದಿಗೆ ವಾಚಿಕಾಭಿನಯದ ವೈಶಿಷ್ಯವನ್ನು ಮೆರೆದ ಕಲಾವಿದೆ ವಿಧಾತ್ರಿ ಹಾಗೂ ಹರಿ ಸಂಕೀರ್ತನೆಯಲ್ಲಿ ಅವಳೊಂದಿಗೆ ಜೊತೆಯಾಗಿ ಹೆಜ್ಜೆ ಹಾಕಿದ ಗುರು ಹೇಮಾ ಅವರಿಗೆ ಅಭಿನಂದನೆಗಳು.  

                        ***************                   ವೈ.ಕೆ.ಸಂಧ್ಯಾ ಶರ್ಮ

Related posts

ಪವಿತ್ರಾ – ಲಕ್ಷ್ಮೀ ಸುಂದರ ಜೋಡಿಯ ಸುಮನೋಹರ ನೃತ್ಯ

YK Sandhya Sharma

ಲಾವಂತಿಯ ಪ್ರೌಢ ಅಭಿನಯದ ಸುಮನೋಹರ ನೃತ್ಯ

YK Sandhya Sharma

ಸಂಸ್ಕೃತಿಯ ಮುದ ನೀಡಿದ ನೃತ್ಯ ಸಂಭ್ರಮ

YK Sandhya Sharma

Leave a Comment

This site uses Akismet to reduce spam. Learn how your comment data is processed.