Image default
Dance Reviews

Graceful dance – Vismaya ‘s Saatvik Abhinaya

ಮನದುಂಬಿದ ವಿಸ್ಮಯಳ ಸಾತ್ವಿಕ ಅಭಿನಯ

ಸೊಗಸಾದ ಅಷ್ಟೇ ಕಲಾತ್ಮಕವಾಗಿದ್ದ ರಂಗಸಜ್ಜಿಕೆ, ಅಪೂರ್ವ ದೇವಾಲಯದ ಆವರಣದಲ್ಲಿ ಬಹು ಭಕ್ತಿಯಿಂದ ದೈವೀಕ ನರ್ತನ ಅರ್ಪಿಸಿದ  ಉದಯೋನ್ಮುಖ ನೃತ್ಯ ಕಲಾವಿದೆ ವಿಸ್ಮಯ ಸುಧೀರಳ ಸೌಮ್ಯ ನರ್ತನ ನೆರೆದಿದ್ದ ಕಲಾರಸಿಕರ ಮೆಚ್ಚುಗೆಯ ಕರತಾಡನ ಪಡೆಯಿತು. ನೃತ್ಯಕ್ಕೆ ಹೇಳಿ ಮಾಡಿಸಿದ ಮೈಮಾಟ- ಅಭಿವ್ಯಕ್ತಿ ಸೂಸುವ ಮುಖಭಾವ ಹೊಂದಿದ್ದ ಬಾಲಕಿ ಕು. ವಿಸ್ಮಯ ಇತ್ತೀಚೆಗೆ ಕೋರಮಂಗಲದ ‘ಪ್ರಭಾತ್ ಕಲಾದ್ವಾರಕ’ ಮಂದಿರದಲ್ಲಿ  ತನ್ನ ಭರತನಾಟ್ಯದ ರಂಗಪ್ರವೇಶವನ್ನು ಯಶಸ್ವಿಯಾಗಿ ನೆರವೇರಿಸಿಕೊಂಡಳು.

 ಅಭಿನಯಕ್ಕೆ ಹೆಸರಾದ ‘ಆವಾಹನಂ’ ನೃತ್ಯಶಾಲೆಯ ವಿದುಷಿ ದೀಪಾ ಮನೋಹರ ಅವರ ನೆಚ್ಚಿನ ಶಿಷ್ಯೆಯಾದ ಇವಳು ಅಂದು ‘ಮಾರ್ಗಂ’ ಸಂಪ್ರದಾಯದ ಕೃತಿಗಳನ್ನು ಬಹು ಅಚ್ಚುಕಟ್ಟಾಗಿ ನಿರೂಪಿಸಿದ್ದು ವಿಶೇಷವಾಗಿತ್ತು.

ವಿಸ್ಮಯಳ ದೈವೀಕ ನೃತ್ಯ ಕೃತಿಗಳ ಪ್ರದರ್ಶನಕ್ಕೆ ಪೂರಕವಾಗಿದ್ದ ದೇವಾಲಯದ ಮನಮೋಹಕ  ರಂಗಸಜ್ಜಿಕೆ, ಪರಿಸರ, ದೀಪಗಳ ವಿನ್ಯಾಸ, ಸುಮಧುರ ಸಂಗೀತದ ಸಾಂಗತ್ಯ ನೀಡಿದ ವಾದ್ಯಮೇಳ- ಗುರು ದೀಪಾ ಮನೋಹರ್ ಅವರ ಸುಸ್ಪಷ್ಟ-ಖಚಿತ ನಟುವಾಂಗದಿಂದ  ದಿವ್ಯ ಪರಿಸರ ರೂಪಿತವಾಗಿತ್ತು.   

ಶುಭಾರಂಭಕ್ಕೆ ವಿಸ್ಮಯ, ಪಾರಂಪರಿಕ ಕೃತಿಯಾದ ಗಂಭೀರ ನಾಟರಾಗದ ತಿಶ್ರ ತ್ರಿಪುಟ ತಾಳದ ‘ಮಲ್ಲಾರಿ’ಯನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದಳು. ಸಾಮಾನ್ಯವಾಗಿ ಭರತನಾಟ್ಯ ಪ್ರಸ್ತುತಿಗಳಲ್ಲಿ ಇದು ಆರಂಭದ ಕೃತಿಯಾಗಿ ನರ್ತಿಸಲ್ಪಡುತ್ತದೆ. ಇದರ ಲಯದ ವಿನ್ಯಾಸವೇ ಒಂದು ದೈವೀಕ ವಾತಾವರಣವನ್ನು ನಿರ್ಮಿಸುತ್ತದೆ. ದೇವಾಲಯ ಸಂಪ್ರದಾಯದ ಸಂಗೀತ ಪದ್ಧತಿಗಳಲ್ಲಿ 5 ಬಗೆಯ ಮಲ್ಲಾರಿಗಳಿವೆ. ದೇವರಿಗೆ ಸಲ್ಲಿಸುತ್ತಿದ್ದ ಪೂಜಾ ವಿಧಾನಗಳಿಗೆ ತಕ್ಕಂತೆ, ತೀರ್ಥ ಮಲ್ಲಾರಿ, ತಳಿಗೈ ಮಲ್ಲಾರಿ, ಕುಂಭ ಮಲ್ಲಾರಿ, ತೇರ್ ಮಲ್ಲಾರಿ ಮತ್ತು ಕಡೆಯದಾಗಿ, ಪುರಾತನ ದೇವಸ್ಥಾನದ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗುವಾಗ ನಾದಸ್ವರ ಕಲಾವಿದರು ತಮಿಳು ವಾದ್ಯ ಮತ್ತು ಡೋಲುಗಳ ಸಹಕಾರದೊಂದಿಗೆ ಉತ್ಸವಗಳನ್ನು ಮುನ್ನಡೆಸುತ್ತಿದ್ದುದಕ್ಕೆ ‘ಪುರಪಟ್ಟು’ ಮಲ್ಲಾರಿ ಎಂದು ಹೆಸರು. ಪ್ರಾರಂಭದಲ್ಲಿ ಗಾಯನರೂಪದಲ್ಲಿರುತ್ತಿದ್ದ ಇದು ಕ್ರಮೇಣ ನೃತ್ಯರೂಪಕ್ಕೆ ಅಳವಟ್ಟು ಜನಪ್ರಿಯತೆಯನ್ನು ಪಡೆಯಿತು. ಇಂಥ ಒಂದು ಮನೋಹರ ಮಲ್ಲಾರಿಯನ್ನು ಕಲಾವಿದೆ ದೃಶ್ಯಾತ್ಮಕವಾಗಿ ಕಟ್ಟಿಕೊಟ್ಟಳು.

  ಅನಂತರ ಪ್ರಥಮ ಪೂಜಿತ ಗಣೇಶನನ್ನು ಭಕ್ತಿಪೂರ್ವಕವಾಗಿ ಅರ್ಚಿಸಿ, ಆತನ ಗುಣಾವಳಿ- ಮಹಿಮೆಯನ್ನು ವರ್ಣಿಸಿ, ವಿನಾಯಕನ ಅನೇಕ ಭಾವ-ಭಂಗಿಗಳನ್ನು ತೋರಿದಳು. ಮುಂದೆ ‘ಅಲರಿಪು’ ವಿನಲ್ಲಿ ನಿರೂಪಿಸಿದ ಆಂಗಿಕಾಭಿನಯ ಸೊಗಸೆನಿಸಿತು.

ಇಷ್ಟದೇವತಾ ಸ್ತುತಿ, ಪದ್ಯದ ಮಾದರಿಯ ಕವಿತ್ವಂ ಎಂಬುದನ್ನು ಕೆಲವೊಮ್ಮೆ ‘ಕೌತ್ವಂ’ ಎಂದೂ ಕರೆಯಲಾಗುತ್ತದೆ. ಇದರಲ್ಲಿ ಸೊಲ್ಲುಕಟ್ಟುಗಳು ಮತ್ತು ಸಾಹಿತ್ಯ ಹದವಾಗಿರುತ್ತದೆ. ಮುಂದಿನ ‘ನಟೇಶ ಕೌತ್ವಂ’ ( ರಚನೆ- ಗಂಗೈ ಮುತ್ತು ನಟುವನ್ನಾರ್, ಹಂಸಧ್ವನಿ ರಾಗ ಮತ್ತು ಚತುರಶ್ರ ಏಕ ತಾಳ ) ನಲ್ಲಿ ನಾಟ್ಯಾಧಿಪತಿಯ ವರ್ಣನೆ ಸುಮನೋಹರವಾಗಿ ಮೂಡಿಬಂತು. ವಿಸ್ಮಯಳ ಮುಗ್ಧತೆ ಬೆರೆತ ಮುಖಭಾವದ, ಸರಳ ನೃತ್ತಗಳ ನಿರೂಪಣೆ, ಮನೋಹರ ನಟೇಶನ ಭಾವ-ಭಂಗಿಗಳು  ಕಲಾರಸಿಕರ ಮನಸೆಳೆಯಿತು. ಗುರು  ದೀಪಾ ಮನೋಹರ್ ಅವರ ಸುಂದರ ಕವಿತ್ವಂ ನಿರೂಪಣೆ ಮತ್ತು ಲಯಾತ್ಮಕ ನಟುವಾಂಗ ಸೊಗಸಾಗಿತ್ತು.

ಪ್ರಸ್ತುತಿಯ ಪ್ರಮುಖ ಕೃತಿ ‘ಧರು ವರ್ಣ’ – ಸುದೀರ್ಘ ಬಂಧ. ಸಂಕೀರ್ಣ ಜತಿಗಳ ಸಂಗತದೊಂದಿಗೆ ಕಲಾವಿದೆಯ ಅಭಿನಯ ಮೇಳೈವಿಸಿತ್ತು. ನಾಲ್ವಡಿ ಕೃಷ್ಣರಾಜರ ಆಶ್ರಯದಲ್ಲಿದ್ದ ಮುತ್ತಯ್ಯ ಭಾಗವತರ್ ಅವರನ್ನೇ ನಾಯಕನನ್ನಾಗಿ ಕಲ್ಪಿಸಿಕೊಂಡು, ನರ್ತಕಿಯನ್ನು ನಾಯಕಿಯನ್ನಾಗಿಸಿಕೊಂಡು, ಮಹಿಷಾಸುರ ಮರ್ಧಿನಿಯಾದ ಆ ಶಕ್ತಿದೇವತೆಯನ್ನು ಕುರಿತು ‘ಶ್ರೀ ರಾಜರಾಜೇಶ್ವರಿ’ ( ರಾಗ- ಕಾಪಿ, ತಾಳ -ಮಿಶ್ರಚಾಪು ) ಎಂಬ ದೈವೀಕ ಕೃತಿಯನ್ನು ರಚಿಸಿದ್ದಾರೆ. ಇಂಥ ಸಕಲ ಭುವನಮಾತೆಯ ಕಣ್ಮನ ಸೂರೆಗೊಳ್ಳುವ ವರ್ಣನೆ ಮತ್ತು ಆಕೆಯ ಶಕ್ತಿ-ಸಾಮರ್ಥ್ಯವನ್ನು ಮಹಿಷಾಸುರನ ಮರ್ಧಿನಿಯಾಗಿ ಗೈದ ಲೋಕಕಲ್ಯಾಣಕರ ಚಿತ್ರವನ್ನು ಕಲಾವಿದೆ ವಿಸ್ಮಯ, ಸಂಚಾರಿ ಕಥಾನಕದಲ್ಲಿ ಅಯಗಿರಿ ನಂದಿನಿಯಾಗಿ ತನ್ನ ಕ್ರೌರ್ಯ ರೂಪವನ್ನು ಮೆರೆದು, ಪ್ರಸನ್ನತೆಯನ್ನು ತನ್ನ ದೇವೀ ಸ್ವರೂಪದಲ್ಲಿ ಮಹೋನ್ನತವಾಗಿ ನಿರೂಪಿಸಿದಳು.

ಅನಂತರ ಮೂಡಿಬಂದ ಶ್ರೀತುಳಸೀದಾಸರ ‘ಶ್ರೀರಾಮಚಂದ್ರ ಕೃಪಾಳು ಭಜಮನ’ ಭಜನೆ ರಾಮಾಯಣದ ಅನೇಕ ಕಿರು ಸಂಚಾರಿಗಳೊಂದಿಗೆ ಮನನೀಯವಾಗಿ ಪ್ರಪ್ಹುಲ್ಲಿಸಿತು. ನಂತರ- ‘ಕೃಷ್ಣ ನೀ ಬೇಗನೆ ಬಾರೋ’-( ರಚನೆ- ವ್ಯಾಸರಾಯರು)  ಯಶೋದೆಯ ವಾತ್ಸಲ್ಯಭಾವದಲ್ಲಿ ಬಾಲಕೃಷ್ಣನ ಅನೇಕ ಲೀಲೆಗಳನ್ನು ವಿಸ್ಮಯ, ರಮ್ಯವಾಗಿ ಅನಾವರಣಗೊಳಿಸಿದಳು. ಬೃಂದಾವನಿ ರಾಗದ ಶ್ರೀ ಬಾಲಮುರಳೀಕೃಷ್ಣರ ರಚನೆಯ ‘ತಿಲ್ಲಾನ’ದೊಂದಿಗೆ ಪ್ರಸ್ತುತಿಯನ್ನು ಸಂಪನ್ನಗೊಳಿಸಿದಳು ಕಲಾವಿದೆ. ಈಕೆ, ತನ್ನ ಪರಿಶ್ರಮ- ಅಭ್ಯಾಸಗಳಿಂದ ಗುರುಗಳು ಹೇಳಿಕೊಟ್ಟಿದ್ದನ್ನು ತುಂಬ ಅಚ್ಚುಕಟ್ಟಾಗಿ ನಿರೂಪಿಸಿದ್ದರಲ್ಲಿ ವಿದುಷಿ ದೀಪಾ ಅವರ ಸುಂದರ ನೃತ್ಯ ಸಂಯೋಜನೆ ಮತ್ತು ಶಿಷ್ಯೆಗೆ ನೀಡಿದ ಬದ್ಧತೆಯ ಶಿಕ್ಷಣ ಎದ್ದುಕಂಡಿತು.

ರಘುರಾಮ್ ಅವರ ಪ್ರಬುದ್ಧ ಗಾಯನ, ಮಹೇಶಸ್ವಾಮಿ ಅವರ ಕೊಳಲ ಮಾಧುರ್ಯ, ಸುಮಾರಾಣಿ ಸಿತಾರ್ ಮಧುರ ನಿನಾದ ಮತ್ತು ವಿದ್ಯಾಶಂಕರ್ ಮೃದಂಗ ಸಾಂಗತ್ಯ ನೃತ್ಯಪ್ರದರ್ಶನಕ್ಕೆ ಚೆಂದ ನೀಡಿತ್ತು. 

                                       ************************* ವೈ.ಕೆ. ಸಂಧ್ಯಾ ಶರ್ಮ

Related posts

ಚೇತೋಹಾರಿ ಗುರು-ಶಿಷ್ಯ ಪರಂಪರೆಯ ಒಡಿಸ್ಸಿ ನೃತ್ಯ ಲಾಸ್ಯ

YK Sandhya Sharma

ಉದಯೋನ್ಮುಖ ಉತ್ಸಾಹೀ ಪ್ರತಿಭೆಗಳ ಗೆಜ್ಜೆನಾದ

YK Sandhya Sharma

ಪ್ರೌಢ ಅಭಿನಯದ ಸೊಗಸಾದ ನರ್ತನ

YK Sandhya Sharma

Leave a Comment

This site uses Akismet to reduce spam. Learn how your comment data is processed.