ವಿಶಿಷ್ಟಾನುಭೂತಿ ನೀಡಿದ ‘ಭರತೋತ್ಸವ’ದ ಪುರುಷ ನರ್ತಕರ ಅಸ್ಮಿತೆ
ನಾಟ್ಯಾಧಿಪತಿ ನಟರಾಜ ವೀರರಸದಲ್ಲಿ ಆವೇಶಿತನಾಗಿ ಕೈ-ಕಾಲುಗಳನ್ನು ಬಿಡುಬೀಸಾಗಿ ಸ್ವಚ್ಚಂದ ಚಲಿಸುತ್ತ ರಂಗದಮೇಲೆ ತಾಂಡವ ನೃತ್ಯ ಮಾಡುತ್ತಿದ್ದುದನ್ನು ಕಾಣುವಾಗ ಸಾಕ್ಷಾತ್ ಪರಶಿವನೇ ಢಮರು ಝೇಂಕರಿಸುತ್ತ ನರ್ತಿಸುತ್ತಿರುವ ಭಾಸ. ಶಿವನಿಗೆ ಶಿವನೇ ಸಾಟಿ. ಆ ಪೌರುಷ ಮೂರ್ತಿಯ ಮುಖದ ವರ್ಚಸ್ಸು, ದೇಹಧಾರ್ಡ್ಯ, ಖಚಿತ-ಬಲಿಷ್ಠ ಆಂಗಿಕಾಭಿನಯ, ಪಾದಭೇದ-ಅಡವು-ಹಸ್ತಮುದ್ರಿಕೆಗಳ ತನ್ನದೇ ಆದ ಸೌಂದರ್ಯಗಳಿಂದ ಅಂದು ನಡೆದ ‘ಶಿವಪ್ರಿಯ’ದ ‘ಭರತೋತ್ಸವ-2023’ ನೃತ್ಯೋತ್ಸವದಲ್ಲಿ ‘ಸಾಮುದಿಶ್ಯ’ ತಂಡದ ಪುರುಷ ಕಲಾವಿದರು ವೇದಿಕೆಯ ಮೇಲೆ ಮಿಂಚಿದರು.

ಬೆಂಗಳೂರಿನ ಖ್ಯಾತ ‘ಶಿವಪ್ರಿಯ’ ನೃತ್ಯಶಾಲೆಯ ಅಂತರರಾಷ್ಟ್ರೀಯ ನೃತ್ಯ ಕಲಾವಿದ-ಗುರು- ಗಾಯಕ, ವಾಗ್ಗೇಯಕಾರ ಮತ್ತು ನಟುವನ್ನಾರ್ ಆಗಿರುವ ಡಾ. ಸಂಜಯ್ ಶಾಂತಾರಾಂ, ಪುರುಷ ಕಲಾವಿದರ ಪ್ರತಿಭಾ ಪ್ರದರ್ಶನಕ್ಕಾಗಿ ಹುಟ್ಟುಹಾಕಿರುವ ‘ಸಾಮುದಿಶ್ಯ’ -ಒಂಭತ್ತು ಕಲಾವಿದರನ್ನು ( ಕೌಶಿಕ್, ರಿಶಬ್ಹ್, ರೋಷನ್, ಅರ್ಣವ್ ರಾಜ್, ನರೇಶ್, ಸುಬ್ರಮಣ್ಯ, ಸುಧನ್ವ ಆಚಾರ್ಯ , ಪವನ್ ಪ್ರಭು , ತೇಜಸ್) ಒಳಗೊಂಡ ಚೈತನ್ಯದಾಯಕ ಉತ್ಸಾಹಿ ಯುವತಂಡದ ಉದ್ಘಾಟನೆ ಅಂದು. ಜೊತೆಗೆ ಈ ‘ಭರತೋತ್ಸವ-2023’ – ಪ್ರಪ್ರಥಮ ನೃತ್ಯೋತ್ಸವದಲ್ಲಿ ಮನತಣಿಸಿದ ವಿವಿಧ ಶೈಲಿಯ ನೃತ್ಯ ನೈವೇದ್ಯ ಮನಕಾನಂದ ನೀಡಿತು.

ಪ್ರಥಮವಂದಿತ ‘ಗಣೇಶನ ವಂದನೆ’ಯೊಂದಿಗೆ ಶುಭಾರಂಭ. ‘ಗಂ ಗಂ ಗಣಪತೆಯೇ’ ( ರಚನೆ ಡಾ. ಸಂಜಯ್) ಎಂಬ ಕಂಚಿನಕಂಠದ ಬಾಲಸುಬ್ರಮಣ್ಯ ಶರ್ಮ ಅವರ ಗಾಯನದ ವಿಜ್ರುಂಭಣೆಗೆ ಅನುಗುಣವಾಗಿ, ಗಜಮುಖನ ಮಹಿಮಾ- ವಿಶೇಷಗಳನ್ನು ತಮ್ಮ ಮಿಂಚಿನ ಸಂಚಾರದ ಪಾದಭೇದ-ವೇಗದ ನೃತ್ತವೈವಿಧ್ಯ, ಲೀಲಾಜಾಲ ಆಕಾಶಚಾರಿಗಳು, ಆಕರ್ಷಕ ಭಂಗಿಗಳು-ವಿನ್ಯಾಸಗಳೊಡನೆ ಗುರುವಿನೊಂದಿಗೆ ಸಾಮರಸ್ಯದಿಂದ ನರ್ತಿಸಿದ ನವ ಕಲಾವಿದರು ವಿಸ್ಮಯಗೊಳಿಸಿದರು.


ಮುಂದೆ- ಗಣಪತಿಯ ಜನಕ ‘ಮಹಾದೇವ ಶಿವ ಶಂಭೋ’ ವಿನ ಸುಂದರ ರೂಪ-ವೈಶಿಷ್ಟ್ಯಗಳನ್ನು ಪ್ರದರ್ಶಿಸಿದ ರೋಮಾಂಚಕ ಕೃತಿಯಲ್ಲಿ, ಪರಮಭಕ್ತ ರಾವಣನ ಭಕ್ತಿಶಕ್ತಿಯ ಪರಾಕಾಷ್ಠೆಯನ್ನು ಎತ್ತಿತೋರಿಸಿದ ಸಂಚಾರಿ ಕಥಾನಕ ಪರಿಣಾಮಕಾರಿಯಾಗಿ ಅನಾವರಣಗೊಂಡಿತು. ಸಮುದ್ರ ಮಥನ, ಶಿವ ನೀಲಕಂಠನಾದ ಪ್ರಸಂಗದೊಡನೆ, ಕೈಲಾಸವನ್ನು ಗುಡುಗಾಡಿಸಿದ ರಾವಣನನ್ನು ಪಾತಾಳಕ್ಕೊತ್ತಿದಾಗ, ಭಾವುಕತೆಗೆ ಒಳಗಾದ ರಾವಣ, ಭಕ್ತಿ ಪಾರಮ್ಯದಿಂದ ತನ್ನ ಹೊಟ್ಟೆಯನ್ನು ಬಗೆದು ಕರುಳುಗಳಿಂದ ಸಾಮಗಾನವನ್ನು ನುಡಿಸಿ ಶಿವನನ್ನೊಲಿಸಿಕೊಂಡು ಅವನಿಂದ ಆತ್ಮಲಿಂಗ ಪಡೆದುಕೊಂಡ ಕಥಾನಕವನ್ನು ಕಲಾವಿದರು ಅತ್ಯಂತ ಹೃದಯಸ್ಪರ್ಶಿಯಾಗಿ ನಿರೂಪಿಸಿ ರಸಿಕರ ಮೆಚ್ಚುಗೆಯನ್ನು ಗಡಚಿಕ್ಕುವ ಕರತಾಡನ ರೂಪದಲ್ಲಿ ಪಡೆದರು.


ರಾವಣ ಮತ್ತು ಶಿವನಾಗಿ ಸಂಜಯರದು ಸಂಚಲನ ಮೂಡಿಸಿದ ಅದ್ಭುತ ಅಭಿನಯ. ಭುವಿಯಲ್ಲಿ ಸೊಕ್ಕಿ ಹರಿದ ಗಂಗೆಯ ಹಾವಳಿಯಿಂದ ದಿಕ್ಕೆಟ್ಟ ಜನಗಳ ಮೊರೆಯನ್ನು ಆಲಿಸಿದ ಪರಶಿವ, ಪ್ರವಾಹೋಪಾದಿಯಲ್ಲಿ ಸ್ವಚ್ಚಂದ ಉಕ್ಕುತ್ತಿದ್ದ ಗಂಗೆಯನ್ನು ತನ್ನ ಜಟೆಯಲ್ಲಿ ಬಂಧಿಸಿ, ಗಂಗಾಧರನಾದ ಪ್ರಕರಣವನ್ನು ಒಬ್ಬೊಬ್ಬ ಕಲಾವಿದರೂ ಪೂರಕವಾಗಿ ಅಭಿನಯಿಸುತ್ತ ಸಾಮರಸ್ಯದಿಂದ ನರ್ತಿಸಿ, ಅಮೋಘ ನೃತ್ಯವಿನ್ಯಾಸ-ಭಂಗಿಗಳಲ್ಲಿ ತಮ್ಮ ಕಲಾನೈಪುಣ್ಯ ಮೆರೆದರು.






ಶ್ರೀರಾಮನನ್ನು ಕೇಂದ್ರಪಾತ್ರದಲ್ಲಿ ಚಿತ್ರಿಸಿದ ‘ಶ್ರೀರಾಮ ನೂವೇ ನಾ ರಕ್ಷಕುಡು…’ ಎಂದು ಶ್ರೀರಾಮನಿಗೆ ಶರಣಾದ ಅನನ್ಯ ಭಕ್ತಿಯ ‘ವರ್ಣ’ ಸುದೀರ್ಘ ಬಂಧವಾದರೂ ಎಲ್ಲೂ ಯಾಂತ್ರಿಕವೆನಿಸದೆ ವೈವಿಧಪೂರ್ಣ ಕ್ಲಿಷ್ಟಕರ ನೃತ್ತ ಚಮತ್ಕಾರಗಳಿಂದ, ಸುಮನೋಹರ ಭಂಗಿ ವಿನ್ಯಾಸ, ಭಾವ-ಭಂಗಿಗಳ ನಡೆಯ ಸೊಗಸಿನಿಂದ ಶ್ರೀರಾಮಯಣದ ಎಲ್ಲ ಘಟನಾವಳಿಗಳ ಸಂಕ್ಷಿಪ್ತ ದರ್ಶನ ಮಾಡಿಸಿದ ಸಮಗ್ರತೆ ‘ವರ್ಣ’ದ ಬಿಗಿಬಂಧದಲ್ಲಿತ್ತು. ಪ್ರತಿಯೊಂದು ಸಂಚಾರಿಯೂ ನಾಟಕೀಯ ಆಯಾಮದಲ್ಲಿ ದೃಶ್ಯವತ್ತಾಗಿ ಕಣ್ಣಿಗೆ ಕಟ್ಟುವಂತೆ ಸೃಜಿಸುತ್ತ ಸಾಗಿದ ನೃತ್ಯ ಸಂಯೋಜನೆಯ ಪರಿಕಲ್ಪನೆ ಸ್ತುತ್ಯಾರ್ಹವಾಗಿತ್ತು. ಯುವಕಲಾವಿದರ ಅಂಗಶುದ್ಧ ಆಂಗಿಕಾಭಿನಯ-ಹಸ್ತಮುದ್ರೆಗಳು, ಪಾದರಸದ ಚುರುಕಿನ ಆಕಾಶಚಾರಿಗಳ ರಂಗು ಮುದತಂದವು.

‘ನೀ ಸಾಟಿ ದೈವಮು ಲೇಕ…’ ಎಂದು ಪುನರಾವರ್ತನೆಯಾದ ಚರಣದಲ್ಲಿ ಪ್ರಫುಲ್ಲಿಸಿದ ವಿವಿಧ ಪ್ರಸಂಗಗಳ ರಮ್ಯತೆ, ಕೃತಿಯ ಶ್ರೇಷ್ಠತೆಗೆ ಕನ್ನಡಿ ಹಿಡಿಯಿತು. ಜತಿ ಪ್ರಧಾನವಾದ ‘ವರ್ಣ’- ಲಯಬದ್ಧ ತಾಳ-ಮೇಳಗಳ ನರ್ತನಾ ಕೌಶಲ್ಯದಿಂದ, ಮೈನವಿರೇಳಿಸಿದ ಕುಣಿಸುವ ಲಹರಿಯ ನಟುವಾಂಗದ ವಾಗ್ಝರಿ ಕಲಾವಿದರ ಹೆಜ್ಜೆ-ಗೆಜ್ಜೆಗಳಿಗೆ ನಲಿವಿನ ಸ್ಫೂರ್ತಿ ತುಂಬಿದ್ದು ದೃಗೋಚರವಾಗಿತ್ತು. ಸುಮನೋಹರ ‘ವರ್ಣ’ವೊಂದು ಸಮೂಹ ನೃತ್ಯದ ಸೊಗಡಿನಲ್ಲಿ ನೃತ್ಯವ್ಯಾಕರಣದ ಎಲ್ಲ ಅಂಶಗಳನ್ನೂ ಅಂಗಶುದ್ಧವಾಗಿ ಅರ್ಪಿಸುತ್ತ, ಸಾತ್ವಿಕಾಭಿನಯದ ಸೌಂದರ್ಯವನ್ನೂ ಕಾಪಾಡಿಕೊಂಡು ನೋಡುಗರನ್ನು ರಂಜಿಸಿ, ಅದ್ಭುತ ಅನುಭೂತಿ ನೀಡಿತು.





ಮುಂದೆ- ಆಂಧ್ರಪ್ರದೇಶದ ಕುಚಿಪುಡಿ ಗುರು ರಘುಪತ್ರುನಿ ಶ್ರೀಕಾಂತ್ ಅವರ ಶಿಷ್ಯರು ಪೂಜಾರಿ ಬಾಲಚಂದರ್ ಮತ್ತು ರಾಮ್ ಕೌಂಡಿನ್ಯ ಶ್ರೀಭಾಷ್ಯಂ ತ್ರಿಪುರಾಸುರನ ಸಂಹಾರದ ನಂತರ ಶಿವ, ಪಾರ್ವತಿಯೊಡನೆ ಆನಂದತಾಂಡವ ಮಾಡಿದ ಅಮೋಘನೃತ್ಯ, ಕ್ಲಿಷ್ಟಜತಿಗಳ ಸುಂದರ ನಿರೂಪಣೆಯೊಂದಿಗೆ ನರ್ತಕರ ಪರಿಣತ ಅಭಿನಯ-ಶಂಕರನ ವಿವಿಧ ರಸಭಂಗಿಗಳ ಸುಮನೋಹರತೆಯ ಚೆಲುವು ವಿಸ್ಮಯಕರವಾಗಿತ್ತು. ಬಾಲಮುರಳೀಕೃಷ್ಣ ಅವರ ಕದನಕುತೂಹಲ ರಾಗದ ತಿಲ್ಲಾನವೂ ಅಷ್ಟೇ ಚೈತನ್ಯಪೂರ್ಣವಾಗಿತ್ತು.



ಅಂತ್ಯದಲ್ಲಿ ನಡೆದ ಗುರು ಮೈಸೂರು ನಾಗರಾಜ್ ಅವರ ಶಿಷ್ಯ ಡಾ. ಲಕ್ಷ್ಮೀನಾರಾಯಣ್ ಜೇನಾ ಅವರ ರಮ್ಯ ಕಥಕ್ ಪ್ರದರ್ಶನ ನೋಡುಗರಿಂದ ಅತ್ಯಪೂರ್ವ ರೀತಿಯಲ್ಲಿ ಸ್ವೀಕೃತವಾಯಿತು. ಶಿವನ ತಾಂಡವ ನೃತ್ಯವನ್ನು ಮೂಲ ದೃಪದ ಶೈಲಿಯಲ್ಲಿ ತಮ್ಮದೇ ಆದ ವಿಶಿಷ್ಟತೆಯಿಂದ, ಸಾಕ್ಷಾತ್ಕರಿಸಿದ ಕಲಾವಿದ, ಬಲಗೈಯಲ್ಲಿ ಢಮರುಗ ಹಿಡಿದು ಅಲುಗಾಡಿಸುತ್ತ ‘ ಢಮರು ಹರ ಖರ ಭಾಜೆ ಭಾಜೆ ..’ ಎಂಬ ದೈವೀಕ ಸ್ತುತಿಗೆ ಅಭಿನಯವಾದರು. ಕುಣಿಸುವ ಧ್ವನಿಗೆ ತಕ್ಕಂತೆ ಹೆಜ್ಜೆ-ಗೆಜ್ಜೆಗಳ ತತ್ಕಾರದಲ್ಲಿ ರಂಗದ ವಿಸ್ತಾರಕ್ಕೂ ಹರಿಯುತ್ತಾ ವೃತ್ತಗಳಲ್ಲಿ ಪ್ರಸ್ತುತಪಡಿಸಿದ ನಿರಂತರ ‘ಚಕ್ಕರುಗಳು’, ವೇಗಭರಿತ ಪಾದಭೇದಗಳ ಚಮತ್ಕಾರದ ಕಿಂಕಿಣಿಯ ಅಲೆ ಕಿವಿಗಳಲ್ಲಿ ಗುನುಗುನಿಸಿತು. ತಾರಕ ಸ್ವರದ ಗೆಜ್ಜೆಗಳ ಜೋರುಧ್ವನಿ ಕ್ರಮೇಣ ಇಳಿಮುಖವಾಗುತ್ತ ಮಿದುವಾಗುತ್ತ ನಿಶ್ಶಬ್ದದಲ್ಲಿ ಕರಗಿ ಹೋಗುವ ಬಗೆ ಮಂತ್ರಮುಗ್ಧವಾಗಿಸಿತು.



ಮುಂದೆ- ಶಿವನ ರಭಸದ ತಾಂಡವಕ್ಕೆ ವಿರುದ್ಧವಾದ ಸುಕುಮಾರ ತಾಂಡವ- ಲಾಸ್ಯಪೂರ್ಣ, ನವಿರಾದ ನರ್ತನದಲ್ಲಿ ಶ್ರೀಕೃಷ್ಣನ ಅನುಪಮ ವ್ಯಕ್ತಿತ್ವವನ್ನು ಕಲಾವಿದ ರಮ್ಯವಾಗಿ ಚಿತ್ರಿಸಿದನು. ಮುಂದೆ- ಮೃದು ಮಂದಹಾಸದ ಮುಖಭಾವದಲ್ಲಿ ವಯ್ಯಾರದ ನಡೆಯಲ್ಲಿ ಉಲ್ಲಾಸಪೂರ್ಣವಾಗಿ ನಿರೂಪಿಸಿದ ‘ತರಾನ’ದೊಂದಿಗೆ ಪ್ರಸ್ತುತಿ ಸಂಪನ್ನಗೊಂಡಿತು.




ಶಿವಪ್ರಿಯದ ‘ಭರತೋತ್ಸವ’ -ಯುವಕಲಾವಿದರ ಅದಮ್ಯ ಚೈತನ್ಯದ ಅನನ್ಯ ಪ್ರತಿಭೆಯನ್ನು ಪುರುಷ ನರ್ತನದ ಅಸ್ಮಿತೆಯನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಯಿತು.
*************** ವೈ.ಕೆ.ಸಂಧ್ಯಾ ಶರ್ಮ