Image default
Dance Reviews

Venkatesha Natya Mandira-Rasasanje-2022

ರಸಾನುಭವ ನೀಡಿದ ನೃತ್ಯಾರಾಧನೆ-ಅನನ್ಯ ‘ರಸಸಂಜೆ’


ನೃತ್ಯಜಗತ್ತಿನಲ್ಲಿ ಇಂದು ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ರಾಧಾ ಶ್ರೀಧರ್ ಅವರ ಹೆಸರು ಜಗದ್ವಿಖ್ಯಾತ. ಉತ್ತಮ ಗುಣಮಟ್ಟದ ಶಿಕ್ಷಣ, ಬದ್ಧತೆಯ ತರಬೇತಿ, ನಿಷ್ಕಾಮಸೇವೆಗೆ ಆದರ್ಶಪ್ರಾಯರು ಈ ಹಿರಿವಯಸ್ಸಿನ ನುರಿತ ಶ್ರೇಷ್ಠ ಗುರು. ಕಳೆದ ಐವತ್ತೈದು ವರ್ಷಗಳಿಂದ ನಿರಂತರ ನಾಟ್ಯರಂಗದಲ್ಲಿ ಸಕ್ರಿಯರಾಗಿರುವ ಇವರಿಗೆ ಸದಾ ಹೊಸಪ್ರಯೋಗಗಳ ಚಿಂತನೆ, ನೂತನ ಪರಿಕಲ್ಪನೆಯ ಕಾರ್ಯಕ್ರಮಗಳ ಆಯೋಜನೆ ಅವರ ಕನಸು. ನೃತ್ಯಗುರುಗಳಿಗೆ ಅತ್ಯವಶ್ಯವಾದ ವ್ಯಾಯಾಮಭರಿತ ಚಟುವಟಿಕೆಯ ಜೀವನ ನಡೆಸುತ್ತಿರುವ, ಆರೋಗ್ಯಪೂರ್ಣ-ತೆಳ್ಳನೆಯ ಎತ್ತರದ ನಿಲುವನ್ನು ಕಾಪಾಡಿಕೊಂಡು ಬಂದಿರುವ ಎಂಭತ್ತಾರರ ಹರೆಯದಲ್ಲೂ ಚಿಮ್ಮುವ ಅವರ ಉತ್ಸಾಹ-ಸಡಗರ ಕಂಡರೆ ಎಂಥವರಿಗೂ ಬೆರಗು.

ಪ್ರತಿದಿನ ಶಿಷ್ಯರಿಗೆ ನಾಟ್ಯಬೋಧೆ, ನಟುವಾಂಗ, ಮುಖಾಭಿವ್ಯಕ್ತಿಯ ಅಭಿನಯ ಹೇಳಿಕೊಡುವ ಪರಿಪಾಠ. ಅಗತ್ಯ ಬಂದಾಗ ಎದ್ದುನಿಂತು ಅಡವು-ಆಂಗಿಕಾಭಿನಯಗಳನ್ನು ಹೇಳಿಕೊಡುವುದಕ್ಕೂ ಸೈ.
ಐವತ್ತೈದು ವರ್ಷಗಳ ಹಿಂದೆ ಅವರು ಹುಟ್ಟು ಹಾಕಿದ ಸಂಸ್ಥೆ ‘ವೆಂಕಟೇಶ ನಾಟ್ಯ ಮಂದಿರ’ ಇಂದು ಸುಪ್ರಸಿದ್ಧ ಅಷ್ಟೇ ಅಲ್ಲ, ಜಗತ್ತಿನುದ್ದಗಲ ತನ್ನ ಶಿಷ್ಯರ ಮೂಲಕ ಕ್ರಿಯಾಶೀಲವಾಗಿದೆ, ನೃತ್ಯ ಸಂಸ್ಕೃತಿಯನ್ನು ವಿಸ್ತಾರವಾಗಿ ಪ್ರಚುರಪಡಿಸುತ್ತಿದೆ. ನಾಲ್ಕು ತಲೆಮಾರುಗಳ ಕಲಾವಿದರನ್ನು ಸೃಷ್ಟಿಸಿರುವ ಶ್ರೀಮತಿ ರಾಧಾ ಶ್ರೀಧರ್, ಕಳೆದ ಮೂರು ದಶಕಗಳಿಂದ ಸತತವಾಗಿ, ದೇಶ-ವಿದೇಶದ ಉದಯೋನ್ಮುಖ ಮತ್ತು ಪ್ರತಿಷ್ಟಿತ ನೃತ್ಯಕಲಾವಿದರಿಗೆ ವೇದಿಕೆಯನ್ನು ನೀಡಿ, ಅವರ ಪ್ರತಿಭಾ ಪ್ರಕಾಶಕ್ಕೆ ಉತ್ತೇಜನ ನೀಡುತ್ತ ಬಂದಿರುವ ಪ್ರತೀಕ, ‘ವೆಂಕಟೇಶ ನಾಟ್ಯಮಂದಿರ’ದ ‘’ರಸಸಂಜೆ’’ ಪ್ರತಿಷ್ಠಿತ ನೃತ್ಯೋತ್ಸವ. ಪ್ರತಿವರ್ಷ ನಡೆಸಿಕೊಂಡು ಬಂದಿರುವ ಈ ‘ವಾರ್ಷಿಕೋತ್ಸವ’ ಸಮಾರಂಭ ತುಂಬಾ ಅರ್ಥಪೂರ್ಣವಾಗಿ ಆಯೋಜಿಸಲಾಗುತ್ತದೆ.


ಪ್ರಸಕ್ತ ವರ್ಷದ ಶುಭಾರಂಭದ ‘ರಸಸಂಜೆ’ಯು ಹಳೆ ಬೇರು-ಹೊಸ ಚಿಗುರು ಕೂಡಿರಲು ಮರ ಸೊಬಗು ಎನ್ನುವಂತಿತ್ತು. ಅಂದು-ಹಿರಿಯ ನೃತ್ಯಗುರು-ಕಲಾವಿದೆ ಗಾಯತ್ರೀ ಕೇಶವನ್ ತಂಡ ಹಾಗೂ ನವಝೇಂಕಾರದ ನೃತ್ಯಕಲಾವಿದ-ಗುರು ‘ವೈಷ್ಣವಿ ನಾಟ್ಯಶಾಲೆ’ಯ ನಾಟ್ಯಾಚಾರ್ಯ ಮಿಥುನ್ ಶ್ಯಾಮ್ ಅವರಿಗೆ ತಕ್ಕ ಶಿಷ್ಯ ಶಶಾಂಕ್ ಕಿರಣ್ ನಾಯರ್, ವೇದಿಕೆಯ ಮೇಲೆ ಇಬ್ಬರೂ ಸಾತ್ವಿಕ ಮತ್ತು ಮಿಂಚಿನ ಬೆರಗನ್ನು ಚೆಲ್ಲಿದ ಅನುಪಮ ಕಾರ್ಯಕ್ರಮವನ್ನು ನೀಡಿದರು.
ಗುರು ಗಾಯತ್ರಿ ಕೇಶವನ್ ಅವರೊಂದಿಗೆ ಮೈತ್ರೇಯಿ ಬಾರ್ವೇ, ಬಿಂದುಮತಿ ಸತೀಶ್, ಅಮೃತವಲ್ಲಿ, ತ್ರಿಶಾಲ ಸಿದ್ದಯ್ಯ, ಅನನ್ಯ ಬಾರ್ವೇ ಮತ್ತು ಕೀರ್ತನಾ ಸುರೇಶ್ ತಮ್ಮ ನುರಿತ ಹೆಜ್ಜೆಗಳಲ್ಲಿ ಸುಮನೋಹರ ಆಂಗಿಕಾಭಿನಯಗಳ ಸೊಗಡಿನಲ್ಲಿ ನರ್ತಿಸಿದರು. ಮೊದಲ ಪ್ರಸ್ತುತಿಗಳಾದ ಗಣೇಶಶ್ಲೋಕ ಮತ್ತು ದಕ್ಷಿಣಭಾಗದ ಭಜನೆಯ ಸಂಪ್ರದಾಯದಂತೆ ಇಷ್ಟದೇವತೆಗಳ ಪ್ರಾರ್ಥನೆ, ರಾಮ-ಕೃಷ್ಣನನ್ನು ಕುರಿತ ‘ತೋಡಯಂ’ ಕೃತಿ ಹಾಗೂ ಶಂಕರಾಚಾರ್ಯರ ‘ಶಿವಾನಂದ ಲಹರಿ’ಯ ‘ಶಿವಶ್ಲೋಕ’ವು ಪಂದನಲ್ಲೂರು ಬಾನಿಯ ಶಾಸ್ತ್ರೀಯ ನೆಲೆಯ ಅಂಗಶುದ್ಧ ನರ್ತನ ಬಹು ಅಚ್ಚುಕಟ್ಟಾಗಿ ಮೂಡಿಬಂದವು.
ಹನ್ನೆರಡನೆಯ ಶತಮಾನದ ದಾರ್ಶನಿಕ ಶರಣ ಬಸವಣ್ಣನವರು, ಧಾರ್ಮಿಕ ಅಸಮಾನತೆಯನ್ನು ಖಂಡಿಸಿದವರು, ಸಾಮಾಜಿಕ ಬದಲಾವಣೆಗಾಗಿ ಶ್ರಮಿಸಿದವರು. ಅವರ ಸಾಮಾಜಿಕ ಜಾಗೃತಿಯ ಎರಡು ಅರ್ಥಪೂರ್ಣ ವಚನಗಳನ್ನು ದೃಶ್ಯಾತ್ಮಕವಾಗಿ ಗಾಯತ್ರಿ ಮತ್ತು ಶಿಷ್ಯರು ಸೊಗಸಾಗಿ ಪ್ರಸ್ತುತಪಡಿಸಿದರು.

‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ’ ಮತ್ತು ‘ಕಲ್ಲನಾಗರ ಕಂಡರೆ’ -ಜೀವನದಲ್ಲಿ ಪಾಲಿಸಬೇಕಾದ ಮಹತ್ವದ ಸತ್ಯಗಳನ್ನು ಅರಹುವ ಸಾರವತ್ತಾದ, ಜೀವನದ ವೈರುಧ್ಯ-ವಿಪರ್ಯಾಸಗಳನ್ನು ವಿಡಂಬಿಸುವ ಎರಡು ವಚನಗಳನ್ನು ಮನನೀಯವಾಗಿ ಸಾಕಾರಗೊಳಿಸಿದರು.
ಜಯದೇವನ ‘ಗೀತಗೋವಿಂದ’ದ ‘ಅಷ್ಟಪದಿ’ ಭಾವದೀಪ್ತಿಯ ಹೃದಯಸ್ಪರ್ಶೀ ಮನಮೋಹಕ ರಚನೆಗಳು. ಭೇಟಿ ಮಾಡುವುದಾಗಿ ರಾಧೆಗೆ ಮಾತುಕೊಟ್ಟ ಕೃಷ್ಣ ಮಾತಿಗೆ ತಪ್ಪಿದ್ದಾನೆ. ಅವಳ ವಿರಹದ ನೋವಿನ ಅನಂತ ಮುಖಗಳನ್ನು ಕಲಾವಿದೆ ಗಾಯತ್ರಿ ತಮ್ಮ ಪ್ರೌಢ ಅಭಿನಯದಲ್ಲಿ ಸಂಯಮದ ಆಯಾಮದಲ್ಲಿ ಅನಾವರಣಗೊಳಿಸಿದರು. ಸೌಮ್ಯವಾದ ನೃತ್ತಗಳಿಂದ ಕೂಡಿದ್ದ ‘ತಿಲ್ಲಾನ’ದೊಂದಿಗೆ ನೃತ್ಯಪ್ರಸ್ತುತಿ ಸಂಪನ್ನಗೊಂಡಿತು.


ಕಾರ್ಯಕ್ರಮದ ಉತ್ತರಾರ್ಧದ ನೃತ್ಯಶೈಲಿ ಸಂಪೂರ್ಣ ಭಿನ್ನವಾಗಿತ್ತು. ಯುವಕಲಾವಿದ ಶಶಾಂಕ್ ಕಿರಣ್ ತಮ್ಮ ಚೈತನ್ಯಭರಿತ ಆಂಗಿಕಾಭಿನಯಗಳಿಂದ ಇಡೀ ರಂಗವನ್ನು ಬಳಸಿಕೊಂಡು ಪಾದರಸದ ರಸಸ್ಪರ್ಶ ನೃತ್ತಗಳ ಝೇಂಕಾರದಲ್ಲಿ ಮಂತ್ರಮುಗ್ಧಗೊಳಿಸಿದರು.
ಆಕರ್ಷಕ ಅಂಗಸೌಷ್ಟವದ ಕಲಾವಿದ ರಂಗವನ್ನು ಪ್ರವೇಶಿಸಿದ ಬಗೆಯೇ ಅನನ್ಯವಾಗಿತ್ತು. ಮೊದಲಿಗೆ ಅಂಗಶುದ್ಧ ನರ್ತನದಿಂದ ‘ಪುಷ್ಪಾಂಜಲಿ’ಯನ್ನು ಸಲ್ಲಿಸಿ, ಉಚ್ಚಿಷ್ಠರೂಪದ ಗಣಪತಿಯ 32 ರೂಪಗಳನ್ನು ತಂತ್ರರೂಪದಲ್ಲಿ ವಿಶಿಷ್ಟವಾಗಿ ಕಂಡರಿಸಿದರು. ವರ್ಚಸ್ವೀ ಮುಖಾಭಿವ್ಯಕ್ತಿಯ, ತೀವ್ರಭಾವನೆಗಳು ಒಸರುವ ಅವರ ಅಭಿನಯ ಮನಸೂರೆಗೊಳ್ಳುವಂತಿತ್ತು. ಮಿಂಚಿನ ಸಂಚಾರದ ನೃತ್ತಾವಳಿಗಳ ಓಘ ವಿಶೇಷವಾಗಿತ್ತು. ಸಾಹಿತ್ಯವಿಲ್ಲದೆಯೂ ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲಂಥ ಸ್ಫುಟವಾದ ಆಂಗಿಕಗಳು, ಅಭಿನಯ ಅತ್ಯಾಕರ್ಷಕವಾಗಿದ್ದವು. ಅಂತ್ಯದ ಗಣಪತಿಯ ಭಂಗಿ ಮನಮೋಹಕವಾಗಿತ್ತು.


ಅನಂತರ-ಶ್ರೀ ಸ್ವಾತಿ ತಿರುನಾಳ್ ಮಹಾರಾಜರ ರಚನೆ ‘ಭಾವಯಾಮಿ ರಘುರಾಮಂ’-ರಾಮಾಯಣದ ಪ್ರಮುಖ ಘಟನೆಗಳು ಸಂಕ್ಷಿಪ್ತವಾಗಿ ಅಷ್ಟೇ ಪರಿಣಾಮಕಾರಿಯಾಗಿ ಬಿತ್ತರಗೊಂಡವು. ಇಲ್ಲಿ ಸ್ವತಃ ಶ್ರೀರಾಮನೇ ಕಥೆಯನ್ನು ನಿರೂಪಿಸುತ್ತ ಹೋದಂತೆ, ವಾಗ್ಗೇಯಕಾರ ಅದನ್ನು ಬರೆದುಕೊಂಡಂತೆ ಚಿತ್ರಿಸಿರುವ ಕಲ್ಪನೆ ಅನುಪಮ. ಶ್ರೀರಾಮನ ವರ್ಣನೆಯನ್ನು ಶಶಾಂಕ್ ತಮ್ಮ ಉತ್ಕೃಷ್ಟ ಅಭಿನಯದಲ್ಲಿ ಸಾಕ್ಷಾತ್ಕರಿಸಿದರು. ರಾಮನ ವಿವಿಧ ಭಂಗಿಗಳನ್ನು ನೃತ್ತಗಳಲ್ಲೇ ಸಾಕಾರಗೊಳಿಸಿದ ಬಗೆ ಮನಮೋಹಕ. ರೋಮಾಂಚಕ ಆಕಾಶಚಾರಿಗಳು, ಮಿಂಚಿನ ವೇಗದ ಭ್ರಮರಿಗಳು, ಸುಮನೋಹರ ಕರಣಗಳು, ಲೀಲಾಜಾಲ ನೃತ್ತಾಮೋದ ಆನಂದದಾಯಕವಾಗಿದ್ದವು. ನರ್ತಕನ ಸಾತ್ವಿಕಾಭಿನಯ ಹೃದಯಸ್ಪರ್ಶಿಯಾಗಿ ಮನಮುಟ್ಟಿತು.


ನಾಟ್ಯಾಧಿಪತಿ ನಟರಾಜನ ಆನಂದತಾಂಡವದ ಸೊಗಸನ್ನು ಕಟ್ಟಿಕೊಟ್ಟ ‘ಕಾಲ್ ಮಾರಿ ಆಡಿಯಾಡಿಯಾರ್ ಕನಕಸಭೇಶ’ ಕೃತಿಯನ್ನು ಕಲಾವಿದ ಅಮೋಘವಾಗಿ ನಿರೂಪಿಸಿ, ತನ್ನ ಮಿಂಚಿನ ನೃತ್ತಧಾರೆಯಿಂದ ರೋಮಾಂಚಗೊಳಿಸಿದರೆ, ಗುರು ಮಿಥುನರ ಅಸ್ಖಲಿತ ನಟುವಾಂಗದ ಬನಿ ಮೈನವಿರೇಳಿಸಿತು. ಲೀಲಾಜಾಲದ ಮಂಡಿ ಅಡವು, ಕಾಲನ್ನು ಊರ್ಧ್ವ ಮುಖವಾಗಿ ಸಲೀಸಾಗಿ ಎತ್ತಿದ ಭಂಗಿಯ ಆಕಾಶಚಾರಿ, ಢಮರುಗ ಹಿಡಿದು ನರ್ತಿಸಿದ ವಿಶಿಷ್ಟ ಪರಿ ಮನವನ್ನು ಆವರಿಸಿದವು. ಮುರುಗನ ದರ್ಶನಕ್ಕೆ ಹಾತೊರೆದ ಭಕ್ತನ ವಿಹ್ವಲತೆ, ಭಕ್ತಿಯ ತೀವ್ರತೆಯನ್ನು ಶಶಾಂಕ್, ‘ಪದಂ’ನಲ್ಲಿ ಅತ್ಯಂತ ಮನಮುಟ್ಟುವಂತೆ ಚಿತ್ರಿಸಿದರು. ಕಾವಡಿ ಹೊತ್ತ ಭಕ್ತನಾಗಿ ಜಾನಪದ ಲಹರಿಯಲ್ಲಿ ಉತ್ಸಾಹದಿಂದ ಕುಣಿತದ ಹೆಜ್ಜೆ ಹಾಕಿದ ಕಲಾವಿದ ಮುಂದೆ- ದೈವದರ್ಶನವಾಗದೆ ಸಂಕಟಪಡುವ ಭಕ್ತಿ ಪರಾಕಾಷ್ಠೆಯ ಅಭಿನಯವನ್ನು ಕರುಣಾರ್ದ್ರ ಭಾವದ ಸಾಂದ್ರತೆಯಲ್ಲಿ ಘನೀಕರಿಸಿದರು.
ಅಂತ್ಯದಲ್ಲಿ- ಬಾಣದೋಪಾದಿಯಲ್ಲಿ ವೇದಿಕೆಯ ಉದ್ದಗಲಕ್ಕೂ ಹರಿದಾಡುತ್ತ, ರಂಗಾಕ್ರಮಣದಲ್ಲಿ ಮಿಂಚಿನ ವೇಗದ ನೃತ್ತ ಸಲಿಲವನ್ನು ಹರಿಸಿದ ಶಶಾಂಕ್ ‘ತಿಲ್ಲಾನ’ ವನ್ನು ಚಿರಸ್ಮರಣೀಯವಾಗಿ ನಿರೂಪಿಸಿದರು.

Related posts

ರಸಾನುಭವ ನೀಡಿದ ಕಥಕ್ ರಂಗಾವಳಿ

YK Sandhya Sharma

ತಾಯಿ-ಮಗನ ಅಪರೂಪದ ರಂಗಪ್ರವೇಶ

YK Sandhya Sharma

ಅಪೂರ್ವ ವರ್ಚಸ್ವೀ ಅಭಿನಯದ ಸಾಕ್ಷಾತ್ಕಾರ

YK Sandhya Sharma

Leave a Comment

This site uses Akismet to reduce spam. Learn how your comment data is processed.