Image default
Dance Reviews

Vibha Prasad`s Heart touching Rangapravesha

ಭರವಸೆಯ ನೃತ್ಯ ಕಲಾವಿದೆ ವಿಭಾ ಪ್ರಸಾದಳ ವಿಶಿಷ್ಟ ನೃತ್ಯವಲ್ಲರಿಯ ಮಿಂಚು


ಕರ್ನಾಟಕ ಕಲಾಶ್ರೀ ಹಿರಿಯ ನಾಟ್ಯಗುರು ವಿದುಷಿ. ಮಂಜುಳಾ ಪರಮೇಶ್ ನೃತ್ಯರಂಗದಲ್ಲಿ ಖ್ಯಾತನಾಮರು. ‘ಸಪ್ತಸ್ವರ ಆರ್ಟ್ಸ್ ಮತ್ತು ಕ್ರಿಯೇಷನ್ಸ್’ ನೃತ್ಯಸಂಸ್ಥೆಯ ಸ್ಥಾಪಕ ನಿರ್ದೇಶಕರಾದ ಈಕೆ ನಾಲ್ಕುದಶಕಗಳ ಅನುಭವಿ ನೃತ್ಯಜ್ಞೆಯಾಗಿದ್ದು, ಸಾವಿರಾರು ನೃತ್ಯಾಕಾಂಕ್ಷಿಗಳಿಗೆ ಬದ್ಧತೆಯಿಂದ ಅತ್ಯುತ್ತಮವಾಗಿ ವಿದ್ಯಾಧಾರೆಯನ್ನು ಎರೆದಿದ್ದು, ಇವರ ಶಿಷ್ಯರು ಇಂದು ವಿಶ್ವದಾದ್ಯಂತ ನಾಟ್ಯಗುರುಗಳಾಗಿ ಇವರ ಹೆಸರನ್ನು ಉತ್ಕರ್ಷಗೊಳಿಸಿ ಎರಡನೆಯ ಶಿಷ್ಯ ಪರಂಪರೆಯನ್ನು ಬೆಳೆಸುತ್ತಿರುವುದು ಶ್ಲಾಘ್ಯಾರ್ಹ ಸಂಗತಿ.

ಮಂಜುಳಾ ಪರಮೇಶ್ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತಗಳಲ್ಲೂ ಪರಿಣತೆಯಾಗಿದ್ದು, ತಮ್ಮ ಶಿಷ್ಯರ ರಂಗಪ್ರವೇಶಕ್ಕೆ ಅವರೇ ಗಾಯನದ ಸಾಂಗತ್ಯ ನೀಡುತ್ತ ನಟುವಾಂಗವನ್ನೂ ನಿರ್ವಹಿಸುವುದು ಇವರ ಅಸ್ಮಿತೆ. ನೃತ್ಯಗುರುಗಳೇ ಶಿಷ್ಯರ ರಂಗಪ್ರವೇಶಗಳಿಗೆ ಗಾಯನದ ಸಹಕಾರವನ್ನೂ ನೀಡಿ ನಟುವಾಂಗವನ್ನು ನಿರ್ವಹಿಸುವುದು ಅತ್ಯಂತ ವಿರಳ. ಅಂತರರಾಷ್ಟ್ರೀಯ ಮಟ್ಟದ ಗುರುಗಳು ಮತ್ತು ಕಲಾವಿದರಾದ ಇವರ ನುರಿತ ಗರಡಿಯಲ್ಲಿ ರೂಹುಗೊಂಡ ಕಲಾಶಿಲ್ಪ ವಿಭಾ ಎಸ್. ಪ್ರಸಾದ್ ಇತ್ತೀಚೆಗೆ ಎ.ಡಿ.ಎ. ರಂಗಮಂದಿರದಲ್ಲಿ ತನ್ನ ‘ರಂಗಪ್ರವೇಶ’ವನ್ನು ವಿದ್ಯುಕ್ತವಾಗಿ ಯಶಸ್ವಿಯಾಗಿ ನೆರವೇರಿಸಿಕೊಂಡಳು.
ಅಪೂರ್ವ ರಂಗಸಜ್ಜಿಕೆಯ ವೇದಿಕೆ ಕಣ್ಮನ ಸೆಳೆಯುವಂತಿದ್ದು ಅತ್ಯಂತ ಆಕರ್ಷಕವಾಗಿ ಅಷ್ಟೇ ಕಲಾತ್ಮಕವಾಗಿತ್ತು. ರಂಗದ ಮೇಲೆ ವಿಭಾಳ ಮೊದಲ ಹೆಜ್ಜೆ-ಗೆಜ್ಜೆಯ ಪ್ರವೇಶವೇ ಅತ್ಯಂತ ವಿಶೇಷವಾಗಿತ್ತು. ಹಸನ್ಮುಖದಿಂದ, ಅತ್ಯಂತ ಲವಲವಿಕೆಯಿಂದ ವಿಭಾ, ಪುಷ್ಪಾಂಜಲಿ, ಗಣೇಶ ಶ್ಲೋಕದಿಂದ ತನ್ನ ಅಂಗಶುದ್ಧ ನೃತ್ಯ ಪ್ರಸ್ತುತಿಯನ್ನು ಶುಭಾರಂಭಿಸಿ ನೋಡುಗರ ಮೆಚ್ಚುಗೆಯ ಕರತಾಡನ ಪಡೆದಳು. ಕಲಾವಿದೆಯ ಪ್ರತಿಯೊಂದು ಹಾವ ಭಾವ, ಆಂಗಿಕಾ ಚಲನೆಗಳು ಗಮನ ಸೆಳೆದವು. ಸರಸ್ವತಿಯನ್ನು ಕುರಿತ ಶ್ಯಾಮಲಾ ದಂಡಕದ ಶ್ಲೋಕಗಳ ರಮ್ಯ ನಿರೂಪಣೆಯಲ್ಲಿ ಶಂಕರಾಚಾರ್ಯ ವಿರಚಿತ ‘ಅಯಗಿರಿ ನಂದಿನಿ’ -ದೇವಿಯ ಸಾಕ್ಷಾತ್ಕಾರವನ್ನು ಅತ್ಯಂತ ಪರಿಣಾಮಕಾರಿಯಾಗಿ ತನ್ನ ವಿವಿಧ ಸುಂದರಭಂಗಿಗಳು, ನೃತ್ತಾಭಿನಯಗಳಿಂದ ದೈವೀಕ ಆಯಾಮದ ಭಕ್ತಿ ಗುಚ್ಚವನ್ನು ಭಕ್ತಿ ತಾದಾತ್ಮ್ಯತೆಗಳಿಂದ ಸಮರ್ಪಿಸಿದ್ದು ಅತ್ಯಂತ ವಿಶೇಷವಾಗಿತ್ತು. ಬಸವಣ್ಣನವರ ವಚನಗಳನ್ನೂ ಅಷ್ಟೇ ತನ್ಮಯತೆಯಿಂದ ಸೊಗಸಾದ ಅಭಿನಯದಿಂದ ಸಾಕಾರಗೊಳಿಸಿ, ರಸಾನುಭವವನ್ನು ಅನುಭವಜನ್ಯವಾಗಿ ಕಟ್ಟಿಕೊಟ್ಟಳು.


ಅನಂತರ –‘ಶ್ರೀಕೃಷ್ಣ ಕಮಲಾನಾಥ’ನನ್ನು ಸುದೀರ್ಘ ‘ವರ್ಣ’ದಲ್ಲಿ ತನ್ನ ಸುಮನೋಹರ ಅಭಿನಯದಿಂದ ದರ್ಶನ ಮಾಡಿಸಿದಳು. ಮಿಂಚಿನ ಸಂಚಾರದ ನೃತ್ತಗಳ ಝೇಂಕಾರ, ಹೃದಯಸ್ಪರ್ಶೀ ಸಾತ್ವಿಕಾಭಿನಯ ಶ್ರೀಕೃಷ್ಣನ ಸಮಗ್ರ ಜೀವನಸಾರವನ್ನು ಅತ್ಯಂತ ಮನೋಹರವಾಗಿ ಸಾಕ್ಷಾತ್ಕರಿಸಿತು. ಗುರು ಮಂಜುಳಾ ಮತ್ತವರ ಪುತ್ರಿ ಹಾಗೂ ಶಿಷ್ಯೆ ಶಾಲಿನಿಯವರ ಅಮೋಘ ನಟುವಾಂಗ ಕಲಾವಿದೆಯ ಅಸ್ಖಲಿತ ನೃತ್ಯಧಾರೆಗೆ ಓಘ ನೀಡಿತ್ತು. ಸಂಚಾರಿ ಕಥಾನಕಗಳು ನಾಟಕೀಯ ಆಯಾಮದಲ್ಲಿ ಸಾಗಿದ ಪ್ರತಿಯೊಂದು ಘಟನೆಯನ್ನೂ ಕಣ್ಮುಂದೆ ತಂದು ನಿಲ್ಲಿಸಿದ ಮಂಜುಳಾ ಅವರ ಕಲಾತ್ಮಕ ನೃತ್ಯ ಸಂಯೋಜನೆ, ಪ್ರಯೋಗಶೀಲ ಪರಿಕಲ್ಪನೆ ಗಮನ ಸೆಳೆಯಿತು.


ಅನಂತರದ ‘ಶ್ರೀರಾಮನ ನೆನೆ ಮನವೇ …’- ಶ್ರೀರಾಮಸ್ತುತಿಯೂ ರಾಮಾಯಣದ ಪ್ರಮುಖ ಘಟನೆಗಳ ಮೇಲೆ ಬೆಳಕು ಚೆಲ್ಲಿ ಸಾಂದ್ರವಾಗಿ ಹಿಡಿದಿಟ್ಟು ಭಾವಾಭಿವ್ಯಕ್ತಿಯ ಸುಂದರ ಚಿತ್ರಣ ಸೃಜಿಸಿತ್ತು. ಕಲಾವಿದೆ ವಿಭಾ ನಿರೂಪಿಸಿದ ವರ್ಚಸ್ವೀ ಸಂಚಾರಿ ಕಥಾನಕಗಳು ನೆನಪಿನಲ್ಲಿ ಉಳಿಯುವಂತಿದ್ದವು.

‘ಸಾಕು ನಿನ್ನ ಸ್ನೇಹ…’ ಕನ್ನಡದ ಜಾವಳಿ ಆಪ್ತವಾಗಿ ಮೂಡಿಬಂದು, ಖಂಡಿತಾ ನಾಯಕಿಯಾಗಿ ವಿಭಾ ಪ್ರೌಢ ಅಭಿನಯ ನೀಡಿದ್ದು ಮೆಚ್ಚುಗೆಯಾಯಿತು. ಲಯಬದ್ಧ ‘ತಿಲ್ಲಾನ’ದಲ್ಲಿ ಸವಾಲ್-ಜವಾಬ್ ಮಾದರಿಯ ಸಂಕೀರ್ಣ ಜತಿಗಳನ್ನು ಕರಾರುವಾಕ್ಕಾಗಿ ಹೆಜ್ಜೆ-ಗೆಜ್ಜೆಗಳ ಮೇಳದಲ್ಲಿ ಹಲವು ರೀತಿಯ ಲಯವಿನ್ಯಾಸಗಳನ್ನು ವರ್ಣರಂಜಿತವಾಗಿ ನಿರೂಪಿಸುತ್ತ ಕಲಾವಿದೆ ತನ್ನ ಚೈತನ್ಯಪೂರ್ಣ ಪ್ರಸ್ತುತಿಯನ್ನು ಸಂಪನ್ನಗೊಳಿಸಿದಳು.

****

Related posts

ಕಣ್ಮನ ಸೆಳೆದ ಅನಘಾ-ನಿಧಿ ಬೋಳಾರ್ ಅಪೂರ್ವ ನೃತ್ಯ

YK Sandhya Sharma

ಸೊಗಸು ಬೀರಿದ ರಮ್ಯ ನೃತ್ಯ ವೈವಿಧ್ಯ

YK Sandhya Sharma

ಮನಸೆಳೆದ ಪವಿತ್ರಳ ಪ್ರಫುಲ್ಲ ನರ್ತನ

YK Sandhya Sharma

Leave a Comment

This site uses Akismet to reduce spam. Learn how your comment data is processed.