Image default
Dance Reviews

Adithi Jagadeesh Rangapravesha-Review

ಅದಿತಿಯ ಅನುಪಮ ಅಭಿನಯದ ಸಾಕ್ಷಾತ್ಕಾರ

ಖ್ಯಾತ ನೃತ್ಯಾಚಾರ್ಯ ವಿದುಷಿ ಅಕ್ಷರ ಭಾರಧ್ವಾಜ್ ಅವರ ಪ್ರಯೋಗಾತ್ಮಕ ನೃತ್ಯ ಪ್ರಸ್ತುತಿಗಳು ಎಂದೂ ಸೊಗಸು. ಬಹು ಬದ್ಧತೆಯಿಂದ ನೃತ್ಯಶಿಕ್ಷಣ ನೀಡುವ ಅಕ್ಷರ ತಮ್ಮ ಶಿಷ್ಯರ ಪ್ರತಿ ರಂಗಪ್ರವೇಶಗಳನ್ನೂ ವಿಭಿನ್ನವಾಗಿ ಸಂಯೋಜಿಸುತ್ತಾರೆ. ಅದರಂತೆ ಇತ್ತೀಚೆಗೆ ಎ.ಡಿ.ಎ. ರಂಗಮಂದಿರದಲ್ಲಿ ನಡೆದ ಹನ್ನೆರಡರ ಪುಟ್ಟಬಾಲೆ ಅದಿತಿ ಜಗದೀಶಳ ರಂಗಪ್ರವೇಶದಲ್ಲಿ ಅವಳು,  ತನ್ನ ವಯಸ್ಸಿಗೂ ಮೀರಿದ ನರ್ತನ ವೈಖರಿಯಿಂದ ವಿಸ್ಮಯಗೊಳಿಸಿದಳು. ಬಳ್ಳಿಯಂತೆ ಬಾಗುವ ತನು, ಲೀಲಾಜಾಲ ಲವಲವಿಕೆಯ ಚಲನೆಗಳು, ಅಂಗಶುದ್ಧ ಮುದ್ರೆ-ಅಡವುಗಳು, ಸುಮನೋಹರ ಕರಣಗಳು, ರಮ್ಯ ಆಂಗಿಕಾಭಿನಯ, ಅಚ್ಚರಿ ಹುಟ್ಟಿಸುವ ಯೋಗದ ಭಂಗಿಗಳು, ಮೊದಲಿನಿಂದ ಕಡೆಯವರೆಗೂ ಚೈತನ್ಯಭರಿತ ಹಸನ್ಮುಖದ ನಿರಾಯಾಸ ನರ್ತನ ಈ ಕಲಾವಿದೆಯ ಧನಾತ್ಮಕ ಅಂಶಗಳು.

ಭರತನಾಟ್ಯದ ಮೈಸೂರುಶೈಲಿಯ ಒಂದು ಪ್ರಮುಖ ಬಂಧ ‘ಮೈಸೂರು ಜತಿ’. ಸಂಕೀರ್ಣ ಜತಿಗಳಿಂದ ಕೂಡಿದ್ದ ಜತಿಗಳನ್ನು ಅದಿತಿ ನಿರ್ವಹಿಸಿದ ಬಗೆ ಮನಸೆಳೆಯಿತು. ರಂಗದ ಮೇಲೆ ತೇಲಾಡುತ್ತಿರುವಂಥ ಭಾಸವುಂಟು ಮಾಡುವ ಹಗುರಹೆಜ್ಜೆಯಲ್ಲಿ ಅದಿತಿ, ಗಾಳಿಯಲ್ಲಿ ಕೈಕಾಲುಗಳು ಗಾಳಿಯಲ್ಲಿ ಒನೆದಾಡುತ್ತಿರುವಂತೆ ಕುಪ್ಪಳಿಸುತ್ತ ಚಿನಕುರುಳಿಯಂತೆ ಮೇಲಕ್ಕೆ ನೆಗೆಯುತ್ತ, ಆಕಾಶಚಾರಿ, ಅರೆಮಂಡಿ, ಚಮತ್ಕಾರದ ಕರಣಗಳಿಂದ ಕೂಡಿದ ಅಪೂರ್ವ ನೃತ್ಯಸಂಯೋಜನೆಗೆ ಜೀವ ನೀಡಿದಳು. ಇದಕ್ಕೆ ಮುನ್ನ ಶುಭಾರಂಭದಲ್ಲಿ ಅದಿತಿ, ‘ಗಜವದನ ಬೇಡುವೆ’ ಎಂದು ಪ್ರಥಮಪೂಜಿತನ ಆಶೀರ್ವಾದ ಬೇಡಿ, ಅಂತರ್ಗತವಾಗಿ ಹೆಣೆದ ಹೊಸಮಿಂಚುಗಳ ಬಂಧ ‘ಅಲರಿಪು’ವಿನ ಬೆಡಗು ತೋರಿದಳು.

ಅಂದು ಅದಿತಿಯ ಇಡೀ ಪ್ರಸ್ತುತಿಯ ಕೇಂದ್ರಬಿಂದು ‘ಶ್ರೀರಾಮ’ನೇ ಆಗಿದ್ದದ್ದು ಪ್ರಸ್ತುತ ನಮ್ಮ ಇಂದಿನ ಸಂದರ್ಭಕ್ಕೆ ಶಿಖರಪ್ರಾಯವಾಗಿತ್ತು. ಮಹಾರಾಜ ಸ್ವಾತಿರುನಾಳರು ರಚಿಸಿದ ‘ಭಾವಯಾಮಿ ರಘುರಾಮಂ’- ಸುಮಾರು ಒಂದುಗಂಟೆಯ ಕಾಲಾವಧಿಯ ಸುದೀರ್ಘ ‘ವರ್ಣ’ದ ಅರ್ಪಣೆಯಲ್ಲಿ ಅದಿತಿ, ಇಡೀ ರಾಮಾಯಣದ ಪ್ರತಿಕಾಂಡದ ಪ್ರಮುಖ ಘಟನೆಗಳ ಮೇಲೆ ಕೇಂದ್ರೀಕರಿಸಿ ಅದ್ಭುತ ಚಿತ್ರಣಗಳನ್ನು ನೀಡಿ, ಸಮಗ್ರ ರಾಮಾಯಣದ ಕಥೆಯನ್ನು ಸಂಕ್ಷಿಪ್ತವಾಗಿ ತನ್ನ ಭಾವಪೂರ್ಣವಾದ  ರಮ್ಯಾಭಿನಯದಿಂದ ಚಿತ್ರಿಸಿದ್ದು ವಿಶೇಷವಾಗಿತ್ತು. ರಾಮ, ಸೀತೆ, ಲಕ್ಷ್ಮಣ, ಹನುಮಂತ, ರಾವಣ ಮುಂತಾದ ಅನೇಕ ಬಗೆಯ ವಿಭಿನ್ನ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ವೈವಿಧ್ಯಪೂರ್ಣವಾಗಿ ಏಕವ್ಯಕ್ತಿ ಪ್ರದರ್ಶನ ನೀಡಿದ್ದು, ಕಲಾವಿದೆಯ ಸೂಕ್ಷ್ಮಾಭಿನಯ ಪ್ರತಿಭೆಗೆ ಹಿಡಿದ ಕನ್ನಡಿಯಾಗಿತ್ತು. ಆಕೆ ಪ್ರದರ್ಶಿಸಿದ ಒಂದೊಂದು ಯೋಗದ ಭಂಗಿಗಳೂ ಅನುಪಮ-ಕೌಶಲ್ಯಪೂರ್ಣ. ಜತಿಗಳ ಲೀಲಾವಿನೋದ ಕಲಾತ್ಮಕ. ಕಲಾವಿದೆಯ ನೃತ್ಯದ ಹೊಳಪು ವೃದ್ಧೀಕರಿಸುವಂತೆ ಗುರು ಅಕ್ಷತಾ ತಮ್ಮ ಸುಸ್ಪಷ್ಟ ನಿಖರಧ್ವನಿಯಲ್ಲಿ ನಟುವಾಂಗದ ಜತಿಗಳನ್ನು ಅನುರಣಿಸಿದ, ಹೊಸ ಆಯಾಮದ ವಿವಿಧ ಜತಿಗಳ ಪಕಳೆ ಪಕಳೆಗಳನ್ನು ಅದಿತಿ, ಮಿಂಚಿನೋಪಾದಿಯಲ್ಲಿ ಅನಾವರಣಗೊಳಿಸಿ ಮುದನೀಡಿದಳು. 

‘ಸರ್ವಂ ರಾಮಮಯ’ವಾದ ಸುಮ್ಮಾನದ ನರ್ತನದಲ್ಲಿ ಕಲಾವಿದೆ ತುಳಸೀದಾಸರ ಭಜನೆ ‘ಠುಮಕ ಚಲಿತು ರಾಮಚಂದ್ರ’ನ  ಬಾಲಲೀಲೆಗಳನ್ನು, ತಾಯಿ ಕೌಸಲ್ಯ ಹಾಗೂ ಪುಟ್ಟರಾಮನ ನಡುವಣ ವಾತ್ಸಲ್ಯಭಾವವನ್ನು ಅದಿತಿ ಭಾವಪೂರ್ಣವಾಗಿ ಎರಕಹುಯ್ದಳು. ನಂತರ- ‘ನಿಂದಾಸ್ತುತಿ’ಯ ರೂಪದಲ್ಲಿದ್ದ ದಶಾವತಾರದ ಹರಿಯ ಪ್ರತಿ ವ್ಯಕ್ತಿತ್ವದ ನಡೆ-ಉದ್ದೇಶಗಳನ್ನು ಮೇಲ್ನೋಟಕ್ಕೆ ಪ್ರಶ್ನಿಸುವಂತೆ ಕಂಡರೂ ಅದರೊಳಗೆ ಹುದುಗಿದ್ದ ಭಕ್ತಿಭಾವವನ್ನು ಎತ್ತಿಹಿಡಿದ ದೈವೀಕ ಕೃತಿ ಮನಮುಟ್ಟಿತು. ಮೊದಲಿನಿಂದ ಕಡೆಯವರೆಗೂ ಅದಿತಿ ಅದಮ್ಯಚೈತನ್ಯದಿಂದ ನರ್ತಿಸಿ ಇಡೀ ನೃತ್ಯಪ್ರಸ್ತುತಿಯನ್ನು ಪರಿಣಾಮಕಾರಿಯಾಗಿ ಸಾಕಾರಗೊಳಿಸಿದಳು.

 ಶುಭಾಂತ್ಯದ ‘ತಿಲ್ಲಾನ’ದಲ್ಲಿ ಬಾಲಕೃಷ್ಣನ ಲೀಲಾವಿನೋದಗಳ ಪ್ರತಿಬಿಂಬವಾಗಿ ಕಲಾವಿದೆ ಬಾಲರಾಮನ ಸರ್ವಕೇಳಿಗಳನ್ನೂ ಪುಟಾಣಿಯಾಗಿ ರಂಗದ ಮೇಲೆ ಆಡಿ ನಲಿದದ್ದೂ, ನೋಡುಗರನ್ನೂ ಕುಣಿಸಿದ್ದು ಆನಂದದಾಯಕವಾಗಿತ್ತು. ‘ಮಂಗಳ’ದಲ್ಲಿ ಅದಿತಿ, ಸಿಹಿಯಾದ ‘ರಾಮನಾಮ ಪಾಯಸ’ವನ್ನು ಸಮೃದ್ಧವಾಗಿ ಹಂಚಿ ನೋಡುಗರಿಗೆ ಹರ್ಷದಿಂದ ರಸಾನುಭವವನ್ನು ಉಣಿಸಿದಳು.                           

****************   

Related posts

ಸಂಜನಳ ಮನೋಜ್ಞ ನೃತ್ಯದ ಮನಮೋಹಕ ಅಭಿನಯ

YK Sandhya Sharma

ವಿಸ್ಮಯ ಸೃಷ್ಟಿಸಿದ ‘ಅರಣ್ಯೇ ನಿನಗೆ ಶರಣು’ ಹೃದಯಸ್ಪರ್ಶೀ ನೃತ್ಯರೂಪಕ

YK Sandhya Sharma

ಸಾತ್ವಿಕಾಭಿನಯದ ನಿವೇದಿತಳ ಮನತಣಿಸಿದ ನೃತ್ಯ

YK Sandhya Sharma

Leave a Comment

This site uses Akismet to reduce spam. Learn how your comment data is processed.