




ಅಭಿನಯ ನಾಟ್ಯಚತುರೆ ಡಾ. ರಕ್ಷಾ ಕಾರ್ತೀಕ್
ಖ್ಯಾತ ‘ನಟನಂ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್’ ನೃತ್ಯಶಾಲೆಯ ನಾಟ್ಯಾಚಾರ್ಯ, ಅಂತರರಾಷ್ಟ್ರೀಯ ನೃತ್ಯ ಕಲಾವಿದೆ ಅಭಿನಯ ನಾಟ್ಯಚತುರೆ ಡಾ. ರಕ್ಷಾಕಾರ್ತೀಕ್ ವೃತ್ತಿಯಿಂದ ದಂತ ವೈದ್ಯರು ಪ್ರವೃತ್ತಿಯಿಂದ ಭರತನಾಟ್ಯ ಕಲಾವಿದೆ ಎನ್ನಬಹುದಾದರೂ ನೃತ್ಯ ಅವರ ಅದಮ್ಯ ಒಲವು. ದಿನವಿಡೀ ನೃತ್ಯಾಕಾಂಕ್ಷಿಗಳಿಗೆ ಬದ್ಧತೆಯಿಂದ ತರಬೇತಿ ನೀಡುವುದು, ಹೊಸ ಪ್ರಯೋಗಗಳ ಚಿಂತನೆ, ನೂತನ ನೃತ್ಯ ಸಂಯೋಜನೆಗಳ ರಚನೆಯಲ್ಲಿ ಇವರು ಸದಾ ನಿರತರು.
ಇಂದು ನಾಟ್ಯರಂಗದಲ್ಲಿ ಡಾ.ರಕ್ಷಾ ಕಾರ್ತೀಕ್ ಉತ್ತಮ ಅಭಿನಯ ಪರಿಣತಿಗೆ ಭಾವಪೂರ್ಣ ಅಭಿನಯಕ್ಕೆ ಹೆಸರುವಾಸಿಯಾಗಿದ್ದಾರೆ. ಪಂದನಲ್ಲೂರು ಶೈಲಿಯ ಭರತನಾಟ್ಯದಲ್ಲಿ ಇವರು ಶಿಕ್ಷಣ ಪಡೆದಿದ್ದಾರೆ.
‘ನೃತ್ಯ ಕಲಾಮಂದಿರ’ದ ಪ್ರಸಿದ್ಧ ನಾಟ್ಯಗುರು ಬಿ.ಭಾನುಮತಿ ಮತ್ತು ಶೀಲಾ ಚಂದ್ರಶೇಖರ್ ಅವರ ಬಳಿ ಇವರು ತರಬೇತಿ ಪಡೆದಿದ್ದಾರೆ. ಅಭಿನಯದ ವಿಭಿನ್ನ ಬಗೆಗಳು ಮತ್ತು ಕೌಶಲ್ಯತಂತ್ರ ಒಳನೋಟಗಳ ಸಾರವನ್ನು ಗ್ರಹಿಸಿ ಬೆಳೆದ ಪ್ರಬುದ್ಧ ಕಲಾವಿದೆಯಾದ ರಕ್ಷಾರ ಭಾವಪೂರ್ಣ ಅಭಿನಯವನ್ನು ಕಲಾರಸಿಕರು ಮೆಚ್ಚಿಕೊಂಡಿದ್ದಾರೆ.









ಇಂದಿಗೂ ದಂತವೈದ್ಯೆಯ ವೃತ್ತಿಯನ್ನು ಬಿಡದೆ, ಸಮಾನವಾಗಿ ವೃತ್ತಿ-ಪ್ರವೃತ್ತಿಗಳನ್ನು ತೂಗಿಸಿಕೊಂಡು ಹೋಗುತ್ತ ಎರಡೂ ಕಡೆ ನ್ಯಾಯ ಒದಗಿಸುತ್ತಿರುವಂಥ ಕ್ರಿಯಾಶೀಲೆ. ಕೋರಮಂಗಲದಲ್ಲಿ ತಮ್ಮದೇ ಆದ ‘’ ನಟನಂ ಇನ್ಸಿಟ್ಯೂಟ್ ಆಫ್ ಡಾನ್ಸ್’’ ಎಂಬ ನೃತ್ಯಶಾಲೆಯನ್ನು ಸ್ಥಾಪಿಸಿ ನೂರಾರು ಮಕ್ಕಳಿಗೆ ಭರತನಾಟ್ಯ, ಜಾನಪದ ಮತ್ತು ಕಾನ್ಟೆಂಪೊರರಿ ನೃತ್ಯಗಳಲ್ಲಿ ತರಬೇತಿ ನೀಡುತ್ತಿದ್ದಾರೆ. ದೃಷ್ಟಿ ವಿಶೇಷಚೇತನ ಮಕ್ಕಳಿಗೆ ಹಾಗೂ ಅಂಗವಿಕಲತೆಯುಳ್ಳ, ಮಾತುಬಾರದ, ಕಿವಿ ಕೇಳಿಸದ ಮಕ್ಕಳಿಗೆ ವಿಶೇಷ ರೀತಿಯ ನೃತ್ಯಪಾಠ ಹೇಳುವ ಕೌಶಲ್ಯ ಇವರದಾಗಿದೆ. ಜೊತೆಗೆ, ರಕ್ಷಾ ಈಗಾಗಲೇ ಅಸಂಖ್ಯ ಸೋಲೋ ನೃತ್ಯ ಪ್ರದರ್ಶನಗಳನ್ನು ನೀಡುತ್ತಾ ಸಕ್ರಿಯರಾಗಿದ್ದಾರೆ. ಇಂಟರ್ ನ್ಯಾಷನಲ್ ಡಾನ್ಸ್ ಕೌನ್ಸಿಲ್, ಯುನೆಸ್ಕೋ ಮತ್ತು ಅಮೇರಿಕಾದ ಡಾನ್ಸ್ ಥೆರಪಿ ಸಂಸ್ಥೆಗಳ ಸದಸ್ಯೆಯಾಗಿದ್ದಾರೆ. ದೇಶ-ವಿದೇಶಗಳಲ್ಲಿ ಇವರ ನೃತ್ಯಪ್ರತಿಭೆ ಗುರುತಿಸಲ್ಪಟ್ಟಿದೆ. ನವರಸಗಳ ಅಭಿನಯಕ್ಕೆ ಹೆಸರಾದ ರಕ್ಷಾಗೆ ಅಭಿನಯ ಪ್ರಾಧಾನ್ಯ ಕೃತಿಗಳ ಬಗ್ಗೆ ಹೆಚ್ಚು ಪ್ರೀತಿ.
ದೂರದರ್ಶನದ ಗ್ರೇಡೆಡ್ ಆರ್ಟಿಸ್ಟ್ ಆಗಿರುವ ರಕ್ಷಾಗೆ ಅನೇಕ ಬಿರುದು, ಗೌರವಗಳು ದೊರೆತಿವೆ.




