ಕಥಕ್ ನೃತ್ಯಜ್ಞೆ -ಚಿತ್ರಾ ವೇಣುಗೋಪಾಲ್ ಗೆ ಆತ್ಮೀಯ ಗುರುವಂದನೆ
ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿವೆತ್ತ, ಏಳುದಶಕಗಳ ಅನುಭವಿ, ಹಿರಿಯ ಕಥಕ್ ನೃತ್ಯಕಲಾವಿದೆ ಮತ್ತು ಉತ್ತಮ ನೃತ್ಯಗುರುಗಳಾದ ಚಿತ್ರಾ ವೇಣುಗೋಪಾಲ್ ಅವರನ್ನು ‘ವ್ಯಾಸ ಗುರುಪೂರ್ಣಿಮೆ’ ಪ್ರಶಸ್ತ ದಿನದಂದು ಅವರ ಹಳೆಯ ಶಿಷ್ಯೆಯರು ಅವರು ಕಲಿಸಿದ ವಿದ್ಯಾಸಂಪನ್ನತೆಯನ್ನು ಭಾರತೀಯ ವಿದ್ಯಾಭವನದಲ್ಲಿ ಅವರ ಮುಂದೆ ಸುಮನೋಹರವಾದ ಕಥಕ್ ನೃತ್ಯ ಪ್ರದರ್ಶನ ನೀಡುವ ಮೂಲಕ ‘ಗುರು ಪೂರ್ಣಿಮೆ’ಯ ಅರ್ಥವಂತಿಕೆಯನ್ನು ಹೆಚ್ಚಿಸಿದರು.
ಚಿತ್ರ ದೀದಿ ಎಂದೇ ಪರಿಚಿತರಾದ ಚಿತ್ರಾ ವೇಣುಗೋಪಾಲ್ ಅವರ ಹನ್ನೆರಡು ಮಂದಿ ಶಿಷ್ಯೆಯರು, ಕಣ್ಮನ ತಣಿಸುವ ವೇಷಭೂಷಣಗಳಲ್ಲಿ ಆಕರ್ಷಕ ದ್ರುಪದ್ ಶೈಲಿಯ ಲಕ್ನೋ -ಜೈಪುರ ಘರಾನಾದ ವಿಶಿಷ್ಟ ಕಥಕ್ ನೃತ್ಯಾವಳಿಗಳನ್ನು ಮನಮೋಹಕವಾಗಿ ಪ್ರದರ್ಶಿಸಿ, ಕಲಾರಸಿಕರ ಮನಸ್ಸುಗಳನ್ನು ಸೂರೆಗೊಂಡರು. ಶುಭಾರಂಭಕ್ಕೆ ಸರಸ್ವತಿ ಸ್ತೋತ್ರ, ಗಣೇಶ್ ಪರನ್ ಸಾಂಪ್ರದಾಯಕ ದೈವೀಕ ರಚನೆಗಳನ್ನು ಹಸನ್ಮುಖದ ಕಲಾವಿದೆಯರು ತಮ್ಮ ಸುಕೋಮಲ ಆಂಗಿಕಾಭಿನಯ, ಚಕ್ಕರ್ ಗಳು, ಪಾದಭೇದದ ತತ್ಕಾರದ ಅನುರಣನದಲ್ಲಿ ದೈವೀಕವಾಗಿ ನರ್ತಿಸಿದರು. ಭಾಗೇಶ್ರೀ ರಾಗದ ಮಾತಾ ಭವಾನಿಯ ಸ್ತುತಿಯೂ ಅಷ್ಟೇ ಹೃದಯಸ್ಪರ್ಶಿಯಾಗಿ ಮೂಡಿಬಂತು. ಅಂತ್ಯದ ನೃತ್ಯವಿನ್ಯಾಸ ಶಿಲ್ಪಿ, ಶಿಲೆಯಲ್ಲಿ ಮೂಡಿಸಿದಂಥ ಕಲಾತ್ಮಕತೆಯಿಂದ ಕೂಡಿತ್ತು.
ಕಥಕ್ ನೃತ್ಯ ಶೈಲಿಯಲ್ಲಿ ‘ಚತುರಂಗ್’ ಗೆ ಒಂದು ವಿಶಿಷ್ಟ ಸ್ಥಾನವಿದೆ. ಇದು, ದ್ರುಪದಶೈಲಿಯ ಸಂಗೀತ-ನೃತ್ಯ-ಸಾಹಿತ್ಯ, ಪರನ್, ಗತಭಾವಗಳಿಂದ ನೇಯ್ದ ಒಂದು ರಮ್ಯಪ್ರಸ್ತುತಿಯಾಗಿತ್ತು. ನಡುನಡುವೆ ಝೇಂಕರಿಸಿದ ಮೃದಂಗದ ಬೋಲ್ ಗಳು, ಪಕ್ವಾಜ್ ಮತ್ತು ತಬಲದ ಧ್ವನಿಕಲಾವಿದೆಯರ ಮಿಂಚಿನ ಸಂಚಾರದ ಜತಿಗಳಿಗೆ ಸಮವಾಯಿಯಾಗಿ ಮಿಡಿದವು. ಖಮಾಚ್ರಾಗದ ತೀನ್ ತಾಳದ ಶಿವ-ಪಾರ್ವತಿಯರ ತಾಂಡವ-ಲಾಸ್ಯದ ಭಾವಕಾರಂಜಿ,ಕಲಾವಿದೆಯರ ಉತ್ಸಾಹದ ನರ್ತನದಲ್ಲಿ ರಂಜಿಸಿತು. ಸಾಹಿತ್ಯ, ಸ್ವರಗಳು, ಬೋಲ್ ಗಳು ಮತ್ತು ತಾಳದಿಂದ ಕೂಡಿದ ಕಮಾಚ್ ರಾಗದ, ತೀನ್ ತಾಳದ `ಚತುರಂಗ್’ (ನೃತ್ಯಸಂಯೋಜನೆ ಮಾಯಾರಾವ್) ಹದವಾಗಿ ಮೇಳೈವಿಸಿ ನಯನ ಮನೋಹರವೆನಿಸಿತು. ಶಿವಪಾರ್ವತಿಯರ ನೃತ್ಯವನ್ನು ವರ್ಣಿಸುವ ಈ ಕೃತಿಯಲ್ಲಿ ಮೂಡಿಬಂದ ಮಿಂಚಿನ ಸಂಚಾರದಮನೋಹರ ನೃತ್ತಗಳು, ಅಲೆಯಂತೆ ತೇಲುವ ಕಲಾವಿದೆಯ ಹಸ್ತಚಲನೆಯ ಸೊಗಸು,ರಂಗದ ತುಂಬ ಹಂಸದಂತೆ ಮೆಲುಹೆಜ್ಜೆಗಳಲ್ಲಿ ಚಲಿಸುತ್ತಿದ್ದ ಹರಿದಾಟ ಆಪ್ಯಾಯಮಾನವೆನಿಸಿತು. ಚೆಂದದ ತತ್ಕಾರಗಳ ಜೊತೆ ಕಲಾವಿದೆಯ ರಂಗಪ್ರವೇಶ ಮತ್ತುನಿಷ್ಕ್ರಮಣಗಳೂ ಅಷ್ಟೇ ಕಲಾಪೂರ್ಣವಾಗಿದ್ದವು.
ಮುಂದೆ- ಅನುಪಮ ನೃತ್ಯ ಸಂಯೋಜಕಿ ಮಾಯಾರಾವ್ ನೃತ್ಯ ಸಂಯೋಜನೆಯ ಸೂರದಾಸ್ ರಚನೆಯ ‘ಶ್ರೀನಂದ ನಂದ್ ..’ ಶುದ್ಧ ನಟವರ ನೃತ್ಯ ಶೈಲಿಯ ಕಥಕ್ ನರ್ತನ, ಕಲಾವಿದೆಯರ ಸಾಮರಸ್ಯ, ಲವಲವಿಕೆಯ ಹೆಜ್ಜೆ-ಗೆಜ್ಜೆಗಳ ಸದ್ದಿನಲ್ಲಿ ಅಲೆಅಲೆಯಾಗಿ ತೇಲಿಬಂದ ಸಾತ್ವಿಕಾಭಿನಯದ ಸೌಂದರ್ಯ ನೋಡುಗರನ್ನು ರಸಾನುಭಾವದಲ್ಲಿ ತೇಲಿಸಿತು. ನರ್ತಕಿಯರ ಉತ್ಸಾಹದ ರಂಗು, ಸ್ಪರ್ಧಾತ್ಮಕ ಸಂಕೀರ್ಣ ಜತಿಗಳ ನಿರೂಪಣೆಯ ಸೊಗಸು, ಲಂಗದ ಚುಂಗು ಹಿಡಿದು, ತಲೆಯನ್ನು ವಾರೆಯಾಗಿ ಒನಪಿಸುತ್ತ, ಮಿನುಗುನೋಟ ಒಸರಿಸುತ್ತ ಗೆಜ್ಜೆದನಿಗೈದ ವೈಖರಿಗೆ ಪ್ರೇಕ್ಷಕರಿಂದ ಚಪ್ಪಾಳೆಯ ಗಡಚಿಕ್ಕಿನ ಪ್ರತಿಕ್ರಿಯೆ ಸುರಿಮಳೆಯಾಯಿತು. ಕಡೆಯಲ್ಲಿ ಮುಜುರೆಯ ನಮನ ಸಲ್ಲಿಸಿ, ತೆಳುನಡಿಗೆಯಲ್ಲಿ ನರ್ತಕಿಯರು ನಿಷ್ಕ್ರಮಿಸಿದ್ದು ವಿಶೇಷವಾಗಿತ್ತು.
ಅಂತ್ಯದ ನೃತ್ಯಬಂಧವಾಗಿ ಮನರಂಜಿಸಿದ ಕೃತಿ- ‘ತರಾನಾ’. ಭರತನಾಟ್ಯದಲ್ಲಿ ತಿಲ್ಲಾನವಿದ್ದಂತೆ. ಶಂಕರ ಶಾನಭಾಗ್ ಅವರ ರೋಮಾಂಚಕ ಸಂಗೀತಕ್ಕೆ ಗುರು ಚಿತ್ರಾದೀದಿಯವರ ನೃತ್ಯಸಂಯೋಜನೆ ಕಣ್ಮನ ಸೆಳೆಯಿತು. ಇದರಲ್ಲಿ ಪರನ್ ಗಳಿಗೆ ಮತ್ತು ಮಿಂಚಿನ ಸಂಚಾರದ ಪಾದಭೇದ -ತತ್ಕಾರ-ಬೋಲ್ ಗಳನ್ನು ಪೂರ್ಣ ಪ್ರಮಾಣದಲ್ಲಿ ಅನಾವರಣಗೊಳಿಸುವ ಅವಕಾಶ ಒದಗಿತ್ತು.
‘ದುರ್ಗ ತರಾನಾ’ವನ್ನು ಶ್ವೇತವಸ್ತ್ರಾನ್ವಿತ ನಾಲ್ಕುಜನ ಮೋಹಕ ಕಲಾವಿದೆಯರು ಮುಗುಳ್ನಗೆಯಲ್ಲಿ ವೇದಿಕೆಯ ತುಂಬಾ ಉಲ್ಲಾಸವನ್ನು ಹರಡುತ್ತಾ, ನೃತ್ತ ರಂಗೋಲಿಯನ್ನು ಬಿಡಿಸುತ್ತ, ಒನಪು-ವಯ್ಯಾರದ ಭಾವದಲ್ಲಿ ನಸುವಾಗಿ ಬಾಗಿ-ಬಳುಕಿ ಸಂಚಲನವನ್ನುಂಟು ಮಾಡಿದರು. ಸಂಭ್ರಮ ಚೆಲ್ಲುತ್ತ, ತಾಳಕ್ಕನುಗುಣವಾಗಿ ನಿರಾಯಾಸವಾಗಿ ನರ್ತಿಸಿದ ಲಲನೆಯರ ಚೈತನ್ಯ ಮೆಚ್ಚುಗೆ ಪಡೆಯಿತು.
ಗುರುವಂದನೆಯ ಸಂದರ್ಭದ ಈ ವಿಶೇಷ ನೃತ್ಯನಮನದಲ್ಲಿ ಭಾಗವಹಿಸಿದ ಕಲಾವಿದೆಯರೆಂದರೆ- ಅಂಜನಾ ಗುಪ್ತ, ಚೈತ್ರ ಪಿ.ವೈ.,ದೇವಿಕಾ ವಿಷ್ಣು, ಮಾಳವಿಕಾ ನಾಯಕ್, ಮಿಹಿಕಾ ಹೆಗ್ಡೆ, ನಿಧಿ ಬೀಡು, ಪ್ರಭಾತಿ ಕಿಸ್ಕು, ಸನಂ ಶೆಂಡೆ, ಶ್ರುತಿ ಗುಪ್ತ, ಸುಮನ ಸಚ್ಚಿದಾನಂದ, ಸುರಯ್ಯ ಮಿರ್ಜಿ ಮತ್ತು ದೀಪಾ ಓಝಾ ಮುಂತಾದವರು. ಶಿಷ್ಯರ ಪ್ರತಿಭಾ ನರ್ತನ ಕಂಡು ಗುರುಗಳ ಮೊಗದಲ್ಲಿ ಸಾರ್ಥಕತೆಯ ಹಿಗ್ಗಿನ ನಗೆ ಅರಳಿತ್ತು.
*********************