ತ್ಯಾಗರಾಜರ ಸಂಪೂರ್ಣ ರಾಮಾಯಣದ ಸಾಕ್ಷಾತ್ಕಾರ
ಶ್ರೀ ಸಂತ ತ್ಯಾಗರಾಜರು ಕರ್ನಾಟಕ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಶ್ರೀಮಂತಗೊಳಿಸಿದ ಪ್ರಮುಖ ವಾಗ್ಗೇಯಕಾರರು. ಪರಮಾತ್ಮನ ಸಾಕ್ಷಾತ್ಕಾರಕ್ಕೆ ನಿಜವಾದ ಭಕ್ತಿಯೇ ಸಾಧನ ಎಂಬುದನ್ನು ಅವರು ತಮ್ಮ ಭಕ್ತಿಪೂರ್ಣ ಹೃದಯಸ್ಪರ್ಶಿ ರಚನೆಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಅವರ ಆರಾಧ್ಯದೈವ ಶ್ರೀರಾಮಚಂದ್ರನನ್ನು ಕುರಿತು ಹಾಡಿರುವ ಅವರ ರಚನೆಗಳು ಇಂಪಾಗಿರುವುದಷ್ಟೇ ಅಲ್ಲದೆ ಅರ್ಥಪೂರ್ಣವಾಗಿಯೂ ಇರುವುದು ಅವುಗಳ ವೈಶಿಷ್ಟ್ಯ. ಶ್ರೀರಾಮನನ್ನು ಕುರಿತು ರಚಿಸಿದ ಅವರ 26 ಅಪರೂಪದ ಜನಪ್ರಿಯ ಕೃತಿಗಳನ್ನು, ಇಡೀ ರಾಮಾಯಣದ ಕಥಾಗುಚ್ಚವನ್ನು ಸಾವಯವವಾಗಿ ಅಷ್ಟೇ ಅಚ್ಚುಕಟ್ಟಾಗಿ ಪೋಣಿಸಿ ಪ್ರೇಕ್ಷಕರ ಮನಸೂರೆಗೊಳ್ಳುವಂಥ ಮನಮೋಹಕ ದೈವೀಕ ರಾಮಾಯಣಧಾರೆಯನ್ನು ಕಟ್ಟಿಕೊಟ್ಟವರು ಪ್ರತಿಭಾವಂತ ಅಂತರರಾಷ್ಟ್ರೀಯ ನೃತ್ಯ ಕಲಾವಿದೆ, ಆಚಾರ್ಯ ಡಾ. ರಕ್ಷಾ ಕಾರ್ತೀಕ್.
ಇತ್ತೀಚಿಗೆ ನಯನ ಸಭಾಂಗಣದಲ್ಲಿ ಇಂಥ ಒಂದು ಅಪರೂಪದ ಸ್ಮರಣೀಯ ಪ್ರಯೋಗವನ್ನು ಎರಡು ಗಂಟೆಗಳ ಕಾಲ ಖ್ಯಾತ ‘ನಟನಂ ಇನ್ಸ್ಟಿಟ್ಯುಟ್ ಆಫ್ ಡಾನ್ಸ್’ ಸಂಸ್ಥೆಯ ನಿರ್ದೇಶಕಿ, -ಗುರು ಡಾ. ರಕ್ಷಾ ತಮ್ಮ ಇಪ್ಪತ್ತು ಮಂದಿ ಶಿಷ್ಯೆಯರೊಂದಿಗೆ ಭಕ್ತಿಪೂರ್ವಕವಾಗಿ ನೃತ್ಯಾಂಜಲಿಯನ್ನು ಅರ್ಪಿಸಿದರು.
ಬಾಲ್ಯಕಾಂಡ, ಕಿಷ್ಕಿಂಧ ಕಾಂಡ ಮತ್ತು ಉತ್ತರಕಾಂಡ ಎಂಬ ಮೂರು ಭಾಗಗಳಲ್ಲಿ ರಾಮಾಯಣದ ಪ್ರತಿ ಘಟನೆಗಳನ್ನೂ ತ್ಯಾಗರಾಜರ ಸಾಹಿತ್ಯಕ್ಕೆ ದೃಶ್ಯಾತ್ಮಕ ಚಿತ್ರಣಗಳನ್ನು ರೂಪಿಸಿ ಕಣ್ಮುಂದೆ ತಂದು ನಿಲ್ಲಿಸಿ ಮರ್ಯಾದಾ ಪುರುಷೋತ್ತಮ ಶ್ರೀರಾಮನಿಗೆ ಮನೋಜ್ಞ ನೃತ್ಯನಮನವನ್ನು ನೇರ ಸಂಗೀತ ಸಹಕಾರದಲ್ಲಿ ಸಮರ್ಪಿಸಿದರು.
ಪ್ರಖ್ಯಾತ ನೃತ್ಯ ವಿದ್ವಾಂಸ ಬಾಲಸುಬ್ರಹ್ಮಣ್ಯ ಶರ್ಮ ಅವರ ಸುಶ್ರಾವ್ಯ ಸಂಗೀತ ಸಂಯೋಜನೆ ರೂಪಕದ ಜೀವನಾಡಿಯಾಗಿತ್ತು. ಭಕ್ತಿಯೇ ಮೈ ತಾಳಿದಂತೆ ಭಕ್ತಿಸ್ವರೂಪಳಾಗಿ ತಾದಾತ್ಮತೆಯಿಂದ ಪರಕಾಯ ಪ್ರವೇಶ ಮಾಡಿ ಅಭಿನಯವೇ ತಾನಾಗುವ ಪರಿಣತ ಕಲಾವಿದೆ ರಕ್ಷಾ ಅನೇಕ ಪ್ರಧಾನ ಪಾತ್ರಗಳಲ್ಲಿ ನರ್ತಿಸಿದರೆ, ಉಳಿದ ವಿವಿಧ ಅಸಂಖ್ಯಾತ ಪೋಷಕ ಪಾತ್ರಗಳಲ್ಲಿ ಅವರ ಪ್ರತಿಭಾವಂತ ಶಿಷ್ಯೆಯರು ಪರಿಣಾಮಕಾರಿ ಅಭಿನಯದಲ್ಲಿ ಮಿಂಚಿದರು.
‘ಶ್ರೀರಾಮ, ಜಯರಾಮ, ಶೃಂಗಾರ ರಾಮ…’ – ದಶರಥನ ಪುತ್ರಕಾಮೇಷ್ಟಿ ಯಾಗ, ಪಾಯಸ ಪ್ರಾಪ್ತಿ ಇತ್ಯಾದಿ ಘಟನೆಗಳೊಂದಿಗೆ ಶ್ರೀರಾಮನ ಜನನ, ಲಾಲನೆ-ಪಾಲನೆ, ಆಟಪಾಟ, ಬಾಲಲೀಲೆಗಳ ಲೀಲಾ ವಿನೋದಾವಳಿಗಳ ಹೃದಯ ತುಂಬುವ ನರ್ತನದ ಸುಗ್ರಾಸ ರಸಪಾಕ.
ಯಾಗರಕ್ಷಣೆಗಾಗಿ ವಿಶ್ವಾಮಿತ್ರರೊಡನೆ ರಾಮ-ಲಕ್ಷ್ಮಣರು ತೆರಳುವುದು, ತಾಟಕಿ ಮುಂತಾದ ರಕ್ಕಸರೊಡನೆ ಹೋರಾಟ, ದುಷ್ಟ ದಮನ, ‘ಶ್ರೀರಾಮ ಪಾದಮೆನಿ..’ ಅಹಲ್ಯೆ ಶಾಪ ವಿಮೋಚನೆ, ಉದ್ಯಾನವನದಲ್ಲಿ ಸೀತೆ ಸಖಿಯರೊಡನೆ ಚೆಂಡಾಟ, ಲಾವಣ್ಯ ರಾಮನನ್ನು ಕಂಡು ಅನುರಕ್ತ ಳಾಗಿ ಮಂತ್ರಮುಗ್ಧಳಾಗುವುದು, ಸೀತಾ ಸ್ವಯಂವರ, ಶಿವಧನಸ್ಸು ಛೇದನ, ತಳಿರು ತೋರಣದ ಸಿದ್ಧತೆ ‘ ಮದುವೆಯ ಸಂಭ್ರಮ, ಸೀತಾನಾಯಕ, ಶ್ರಿತಜನ ಪೋಷಕ…’ ನಾದ ಸೀತಾ-ರಾಮರ ಕಲ್ಯಾಣದ ಪ್ರತಿಶಾಸ್ತ್ರಗಳೂ ಪಾಂಗಿತವಾಗಿ ಪ್ರದರ್ಶಿತವಾದದ್ದು ವಿಶೇಷವಾಗಿತ್ತು. ಪ್ರತಿಯೊಂದು ಘಟನೆಗಳೂ ನಾಟಕೀಯ ಆಯಾಮದಲ್ಲಿ ತೆರೆದುಕೊಳ್ಳುತ್ತಾ ಕಥೆಯನ್ನು ಲವಲವಿಕೆಯಿಂದ ಮುನ್ನಡೆಸಿದವು. ಕಿವಿದುಂಬಿದ ರಾಮನ ಕುರಿತ ಪ್ರತಿಕೃತಿಯ ಗಾಯನ ಕರ್ಣರಸಾಮೃತವಾದವು. ಘಟನೆಗಳ ಚಿತ್ರಣದಲ್ಲಿ ಅನಾವರಣಗೊಂಡ ಸಂಚಾರಿ ಕಥಾನಕಗಳು ಅತ್ಯಂತ ಸೂಕ್ಷ್ಮಾಭಿನಯ ಸ್ತರದಲ್ಲಿ ಪ್ರತಿ ವಿವರಗಳನ್ನೂ ಹರಡುತ್ತಾ ಹೋದ ಬಗೆ ಮುದನೀಡಿದವು.
ಎರಡನೆಯ ಭಾಗದಲ್ಲಿ ಅಯೋಧ್ಯ ಕಾಂಡ ಮತ್ತು ಅರಣ್ಯಕಾಂಡದಲ್ಲಿ ರಾಮಪಟ್ಟಾಭಿಷೇಕ ಸಿದ್ಧತೆ, ಮಂಥರೆಯ ದುರ್ಬೋಧನೆಯಿಂದ ಕೈಕೇಯಿ ದೆಸೆಯಿಂದ ರಾಮನ ವನವಾಸ, ಭರತ ಪಾದುಕೆ ಪಡೆಯುವುದು, ಶೂರ್ಪನಖಿ ಪ್ರಸಂಗ, ಮಾಯಾ ಜಿಂಕೆ ಪ್ರಕರಣ, ರಾವಣನಿಂದ ಸೀತಾಪಹರಣ, ಜಟಾಯು ಮೋಕ್ಷ, ಕಬಂಧ ರಕ್ಕಸನ ವಧೆ, ಶಬರಿ ‘ಕನುಲಾರ ಸೇವಿಂಚಿ..’ ಧನ್ಯತೆಯಿಂದ ಮೋಕ್ಷಗಾಣುವ ಮತ್ತು ಸುಗ್ರೀವನ ಸಖ್ಯದವರೆಗೂ ಪ್ರಕರಣಗಳು ನೃತ್ಯ ಸಾಂಗತ್ಯದಲ್ಲಿ ರಮಣೀಯವಾಗಿ ಕಣ್ತುಂಬಿದವು.
ತ್ಯಾಗರಾಜರ ಪ್ರತಿಯೊಂದು ಕೃತಿಗಳೂ ಕಥಾ ಬೆಳವಣಿಗೆಗೆ ಸೂಕ್ತವಾಗಿ ಒದಗಿದವು. ನೃತ್ತ-ನೃತ್ಯ-ರಸಾಭಿನಯದ ಒಡಲಲ್ಲಿ ಮಿಂದೆದ್ದ ನೃತ್ಯರೂಪಕ ಪ್ರೇಕ್ಷಕನನ್ನು ರೆಪ್ಪೆ ಮಿಟುಕಿಸದಂತೆ ಕುತೂಹಲದಿಂದ ರಂಗದ ಮೇಲಿನ ದೃಶ್ಯಾವಳಿಗಳ ಸೊಗಡಿನಲ್ಲಿ ಕಟ್ಟಿಹಾಕಿತ್ತು. ಹಿನ್ನಲೆಯಲ್ಲಿ ನರ್ತನಕ್ಕೆ ಇಂಬು ನೀಡಿದ ಸುಶ್ರಾವ್ಯ ನಿನಾದದ ವೀಣಾಲಹರಿ, ವಯೊಲಿನ್ ವಾದನ, ವಿವಿಧ ಧ್ವನಿ ಪರಿಣಾಮದಲ್ಲಿ ಪ್ರಭಾವ ಬೀರಿದ ಬಹುವಾದ್ಯಘೋಷದ ಸುಸ್ವನ ಮನತಣಿಸಿದವು.
ಮೂರನೆಯ ಭಾಗದಲ್ಲಿ ಕಿಷ್ಕಿಂಧ ಕಾಂಡ, ಸುಂದರ ಕಾಂಡ, ಯುದ್ಧ ಕಾಂಡ ಮತ್ತು ಉತ್ತರಕಾಂಡಗಳಲ್ಲಿ ಹನುಮಂತನ ಭೇಟಿ, ಸಮುದ್ರ ಲಂಘನ, ಅಶೋಕವನದಲ್ಲಿ ಸೀತೆಗೆ ಮುದ್ರೆಯುಂಗುರ ನೀಡುವುದು, ಲಂಕಾ ದಹನ, ಮುಂದೆ ರಾಮ-ರಾವಣರ ಯುದ್ಧ ಮುಂತಾದ ಘಟನೆಗಳ ಸಾದ್ಯಂತ ನಿರೂಪಣೆ ಕಡೆಯಲ್ಲಿ ಉತ್ತರ ಕಾಂಡದಲ್ಲಿ ಸೀತಾ ಪರಿತ್ಯಾಗ , ಲವಕುಶ ಜನನ, ಸೀತೆ ಭೂಗರ್ಭ ಸೇರಿದ ನಂತರ ಲಕ್ಷ್ಮಣ ಸರಯು ನದಿಯನ್ನು ಪ್ರವೇಶಿ ಸಿದಾಗ ಮನನೊಂದ ರಾಮ ತಮ್ಮನನ್ನು ಹಿಂಬಾಲಿಸ ಹೊರಟಾಗ ವಿಷ್ಣು ಪ್ರತ್ಯಕ್ಷನಾಗಿ ಇಲ್ಲಿಗೆ ರಾಮಾವತಾರ ಸಮಾಪ್ತಿಯಾಯಿತೆಂದು ರಾಮನನ್ನು ತನ್ನೊಳಗೆ ಸೇರಿಸಿಕೊಳ್ಳುವ ದೃಶ್ಯದೊಂದಿಗೆ ನೃತ್ಯರೂಪಕ ಸಂಪನ್ನವಾಗುತ್ತದೆ.
ನೂರಾರು ದೃಶ್ಯಗಳನ್ನು ಒಳಗೊಂಡ ‘ತ್ಯಾಗರಾಜರ ರಾಮಾಯಣ’ ದೈವೀಕ ನೆಲೆಯಲ್ಲಿ ಪ್ರಸ್ತುತಗೊಂಡು, ಕಲಾತ್ಮಕ ನೃತ್ಯಸಂಯೋಜನೆ, ಸೃಜನಶೀಲ ಸನ್ನಿವೇಶ ರಚನೆಗಳ ಆಯಾಮದಲ್ಲಿ ಕಿಂಚಿತ್ತೂ ಬೇಸರ ಬಾರದಂತೆ ಚುರುಕಿನ ನಡೆಯಲ್ಲಿ ಸಾಗಿ ನೋಡುಗರನ್ನು ಮಂತ್ರಮುಗ್ಧಗೊಳಿಸಿತು. *******************