Image default
Events

I C C R Every Friday Cultural Program- Natanam Institute of Dance

ಐ. ಸಿ. ಸಿ. ಆರ್ ಸಾಂಸ್ಕೃತಿಕ ಕಾರ್ಯಕ್ರಮ- ನಟನಂ ನೃತ್ಯಶಾಲೆ

ಆಚಾರ್ಯ ಡಾ. ರಕ್ಷಾ ತಮ್ಮ ‘ನಟನಂ ಇನ್ಸಿಟ್ಯೂಟ್ ಆಫ್ ಡಾನ್ಸ್’’ -ಶಿಷ್ಯರೊಂದಿಗೆ ಇದೇ ತಿಂಗಳ 31 ನೇ ತಾ. ಶುಕ್ರವಾರ ನಗರದ ಭಾರತೀಯ ವಿದ್ಯಾಭವನದ ವೇದಿಕೆಯ ಮೇಲೆ ತಮ್ಮ ಕಲಾಪ್ರದರ್ಶನವನ್ನು ಮಾಡಲಿದ್ದಾರೆ. ಐ. ಸಿ. ಸಿ. ಆರ್ ಪ್ರತಿ ಶುಕ್ರವಾರದ ಸಾಂಸ್ಕೃತಿಕ ಕಾರ್ಯಕ್ರಮದಡಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಸುಂದರ ನೃತ್ಯವೈಭವವನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಆದರದ ಸ್ವಾಗತ.

ಖ್ಯಾತ ‘ನಟನಂ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್’ ನೃತ್ಯಶಾಲೆಯ ನಾಟ್ಯಾಚಾರ್ಯ, ಅಂತರರಾಷ್ಟ್ರೀಯ ನೃತ್ಯ ಕಲಾವಿದೆ ‘ಅಭಿನಯ ನಾಟ್ಯಚತುರೆ’ ಡಾ. ರಕ್ಷಾಕಾರ್ತೀಕ್ ವೃತ್ತಿಯಿಂದ ದಂತವೈದ್ಯರು ಪ್ರವೃತ್ತಿಯಿಂದ ಭರತನಾಟ್ಯ ಕಲಾವಿದೆ. ನೃತ್ಯ ಅವರ ಅದಮ್ಯ ಒಲವು. ದಿನವಿಡೀ ನೃತ್ಯಾಕಾಂಕ್ಷಿಗಳಿಗೆ ಬದ್ಧತೆಯಿಂದ ತರಬೇತಿ ನೀಡುವುದು, ಹೊಸಪ್ರಯೋಗಗಳ ಚಿಂತನೆ, ನೂತನ ನೃತ್ಯ ಸಂಯೋಜನೆಗಳ ರಚನೆಯಲ್ಲಿ ತೊಡಗಿಕೊಂಡಿರುವುದು- ಇವೇ ಮುಂತಾಗಿ ರಕ್ಷಾ ಅವರ ಪ್ರೀತಿಯ ಕಾಯಕ.

ಅಂದಿನ ಉದಯೋನ್ಮುಖ ನೃತ್ಯಕಲಾವಿದೆ ರಕ್ಷಾ ಜಯರಾಂ, ಇಂದು ನಾಟ್ಯರಂಗದಲ್ಲಿ ಡಾ.ರಕ್ಷಾ ಕಾರ್ತೀಕ್ ಆಗಿ ಖ್ಯಾತ ನ್ರುತ್ಯಗಾರ್ತಿಯಾಗಿ, ಉತ್ತಮ ಅಭಿನಯ ಪರಿಣತಿಗೆ ಹೆಸರುವಾಸಿಯಾಗಿದ್ದಾರೆ. ಅನೇಕ ವರ್ಷಗಳ ಅವಿರತ ನೃತ್ಯ ಕಲಿಕೆ, ಪರಿಶ್ರಮ-ಸಾಧನೆಗಳ ಹಾದಿಯಲ್ಲಿ ಅವರು ಕಾಲಿಗೆ ಗೆಜ್ಜೆಕಟ್ಟಿ ಸುಮಾರು ಮೂರುದಶಕಗಳಿಗೂ ಹೆಚ್ಚಾಗಿದೆ.

ಬಾಲ್ಯದ ತಮ್ಮ ಏಳನೆಯ ವರ್ಷಕ್ಕೆ ನೃತ್ಯ ಕಲಿಯಲಾರಂಭಿಸಿದ ರಕ್ಷಾ, ಮುಂದೆ- ‘ನೃತ್ಯ ಕಲಾಮಂದಿರ’ದ ಪ್ರಸಿದ್ಧ ನಾಟ್ಯಗುರು ಬಿ.ಭಾನುಮತಿ ಮತ್ತು ಶೀಲಾ ಚಂದ್ರಶೇಖರ್ ಅವರ ಬಳಿ ಹೆಚ್ಚಿನ ಶಿಕ್ಷಣ ಪಡೆದರು. ಅಭಿನಯದ ವಿಭಿನ್ನ ಬಗೆಗಳು ಮತ್ತು  ಕೌಶಲ್ಯತಂತ್ರ ಒಳನೋಟಗಳ ಸಾರವನ್ನು ಗ್ರಹಿಸಿ ಬೆಳೆದ ಪ್ರಬುದ್ಧ ಕಲಾವಿದೆಯಾದ  ರಕ್ಷಾರ ಭಾವಪೂರ್ಣ ಅಭಿನಯವನ್ನು ಕಲಾರಸಿಕರು ಮೆಚ್ಚಿಕೊಂಡಿದ್ದಾರೆ.

ಇಂದಿಗೂ ದಂತವೈದ್ಯೆಯ ವೃತ್ತಿಯನ್ನು ಬಿಡದೆ, ಸಮಾನವಾಗಿ ವೃತ್ತಿ-ಪ್ರವೃತ್ತಿಗಳನ್ನು ತೂಗಿಸಿಕೊಂಡು ಹೋಗುತ್ತ ಎರಡೂ ಕಡೆ ನ್ಯಾಯ ಒದಗಿಸುತ್ತಿರುವಂಥ ಕ್ರಿಯಾಶೀಲೆ. ಕೋರಮಂಗಲದಲ್ಲಿ ತಮ್ಮದೇ ಆದ ‘’ ನಟನಂ ಇನ್ಸಿಟ್ಯೂಟ್ ಆಫ್ ಡಾನ್ಸ್’’ ಎಂಬ ನೃತ್ಯಶಾಲೆಯನ್ನು ಸ್ಥಾಪಿಸಿ ನೂರಾರು ಮಕ್ಕಳಿಗೆ ಭರತನಾಟ್ಯ, ಜಾನಪದ ಮತ್ತು ಕಾನ್ಟೆಂಪೊರರಿ ನೃತ್ಯಗಳಲ್ಲಿ ತರಬೇತಿ ನೀಡುತ್ತಿದ್ದಾರೆ. ದೃಷ್ಟಿ ವಿಶೇಷಚೇತನ ಮಕ್ಕಳಿಗೆ ಹಾಗೂ ಅಂಗವಿಕಲತೆಯುಳ್ಳ, ಮಾತುಬಾರದ, ಕಿವಿ ಕೇಳಿಸದ ಮಕ್ಕಳಿಗೆ ವಿಶೇಷ ರೀತಿಯ ನೃತ್ಯಪಾಠ ಹೇಳುವ ಕೌಶಲ್ಯ ಇವರದಾಗಿದೆ. ಜೊತೆಗೆ, ರಕ್ಷಾ ಈಗಾಗಲೇ ಅಸಂಖ್ಯ ಸೋಲೋ ನೃತ್ಯ ಪ್ರದರ್ಶನಗಳನ್ನು ನೀಡುತ್ತಾ ಸಕ್ರಿಯರಾಗಿದ್ದಾರೆ. ಇಂಟರ್ ನ್ಯಾಷನಲ್ ಡಾನ್ಸ್ ಕೌನ್ಸಿಲ್, ಯುನೆಸ್ಕೋ ಮತ್ತು ಅಮೇರಿಕಾದ ಡಾನ್ಸ್ ಥೆರಪಿ ಸಂಸ್ಥೆಗಳ ಸದಸ್ಯೆಯಾಗಿದ್ದಾರೆ.  ದೇಶ-ವಿದೇಶಗಳಲ್ಲಿ ಇವರ ನೃತ್ಯಪ್ರತಿಭೆ ಗುರುತಿಸಲ್ಪಟ್ಟಿದೆ. ನವರಸಗಳ ಅಭಿನಯಕ್ಕೆ ಹೆಸರಾದ ರಕ್ಷಾಗೆ ಅಭಿನಯ ಪ್ರಾಧಾನ್ಯ ಕೃತಿಗಳ ಬಗ್ಗೆ ಹೆಚ್ಚು ಪ್ರೀತಿ.

ತಿರುಮಲೆ ತಿರುಪತಿ ದೇವಸ್ಥಾನದ ಬ್ರಮ್ಹೋತ್ಸವ, ಮೈಸೂರು ದಸರಾ, ಒರಿಸ್ಸಾ ರಾಜ್ಯದ ಭುವನೇಶ್ವರದ `ಜೈದೇವ್ ಸಮಾರೋಹ್’, ತಂಜಾವೂರಿನ `ಬೃಹತ್ ನೃತ್ಯಾಂಜಲಿ’, ಹಂಪಿ-ಕೊನಾರ್ಕ್ ಉತ್ಸವಗಳು, ಇಸ್ಕಾನ್ ಮುಂತಾದ ಅನೇಕ ಪ್ರತಿಷ್ಠಿತ ಉತ್ಸವಗಳಲ್ಲಿ ಪಾಲ್ಗೊಂಡ ಕೀರ್ತಿ ಇವರದು.

ವಿದೇಶಗಳಲ್ಲೂ ತಮ್ಮ ಪ್ರತಿಭಾ ಪ್ರದರ್ಶನ ಮಾಡಿರುವ ರಕ್ಷಾ, ಸ್ವಿರ್ಜರ್ಲಾಂಡ್ ಜಿನಿವಾದಲ್ಲಿ ಓಣಂ ಉತ್ಸವ, ಬರ್ನ್ ನ ಇಂಡಿಯನ್ ಎಂಬೆಸಿ,ಅಮೆರಿಕಾದ ಅಕ್ಕ ಸಮ್ಮೇಳನ (೨೦೧೦) , ನ್ಯೂಯಾರ್ಕ್ ಇಂಡಿಯನ್ ಎಂಬೆಸಿ. ಲಾಸ್ ಏಂಜೆಲಿಸ್ ಕೃಷ್ಣ ಬೃಂದಾವನಂ, ಬಾಸ್ಟನ್,ಬ್ಯಾಂಕಾಕ್ ಮತ್ತು ಥೈಲ್ಯಾಂಡ್ ನಲ್ಲಿ ನಡೆದ ರೋಟರಿ ಸಮಾವೇಶದಲ್ಲಿ ಭಾಗವಹಿಸಿದ ಹಿರಿಮೆ ಇವರದು.

ದೂರದರ್ಶನದ ಗ್ರೇಡೆಡ್ ಆರ್ಟಿಸ್ಟ್ ಆಗಿರುವ ರಕ್ಷಾಗೆ ಅನೇಕ ಬಿರುದು, ಗೌರವಗಳು ದೊರೆತಿವೆ. `ಆಚಾರ್ಯ ದೇವೋ ಭವ’, ಯುವಕಲಾ ಗುರುಸತ್ಕಾರ್, ಕರುನಾಡ ಲಲಿತ ಕಲಾತಿಲಕ ಮತ್ತು ಪದ್ಮಾವತಿ ಪ್ರತಿಭಾ ಪುರಸ್ಕಾರಗಳು ದೊರೆತಿವೆ. ಇವರ ನೃತ್ಯಸಂಯೋಜನೆಯ ಖ್ಯಾತ ನೃತ್ಯರೂಪಕಗಳೆಂದರೆ ಅಷ್ಟ ದಿಕ್ಪಾಲಕ ವಂದನಂ,ದಶಾವತಾರಂ, ಕೃಷ್ಣ ದರ್ಶನಂ ಮತ್ತು ಕೃಷ್ಣ-ಕುಬ್ಜ ಮುಂತಾದವು. ಜಾನಪದ ನೃತ್ಯಶೈಲಿಯಲ್ಲಿ ಕೋಲಾಟ, ಕಂಸಾಳೆ ಮತ್ತು ಚೆರಾ (ಬೊಂಬು ಡಾನ್ಸ್) ಮುಂತಾದ ಕಲೆಗಳಲ್ಲೂ ನಿಪುಣೆ ಈಕೆ. ಇವರ ನುರಿತ ಗರಡಿಯಲ್ಲಿ ಅನೇಕ ಶಿಷ್ಯೆಯರು ಗೆಜ್ಜೆಪೂಜೆ ಮತ್ತು ರಂಗಪ್ರವೇಶ ಮಾಡಿ ನಾಡಿನಾದ್ಯಂತ ಅನೇಕ ವೇದಿಕೆಗಳ ಮೇಲೆ ತಮ್ಮ ನೃತ್ಯ ಪ್ರದರ್ಶನ ನೀಡಿ ಕಲಾರಸಿಕರ ಗಮನ ಸೆಳೆದಿದ್ದಾರೆ.

                                         

Related posts

Sri Lalitha Kalaniketana

YK Sandhya Sharma

Sadhana Dance Centre – Dhruthi Ramachandra Rangapravesha

YK Sandhya Sharma

Vishvapatha Kala Sangama

Editor

Leave a Comment

This site uses Akismet to reduce spam. Learn how your comment data is processed.