Image default
Dance Reviews

Yashasvi Jaana Rangapravesha Review

‘ಯಶಸ್ವೀ’ ರಂಗಪ್ರವೇಶದ ಒಂದು ಸುಂದರ ಅವಲೋಕನ

ನಾಲ್ಕಾಳೆತ್ತರದ ಮನ್ಮಥಸ್ವರೂಪಿ ಸಾಕ್ಷಾತ್ ಶಿವ ಅರ್ಥಾತ್ ನಾಗಾಭರಣ ತನ್ನ ಜಟಾ  ಜೂಟಗಳನ್ನು ಬಿಚ್ಚಿಕೊಂಡು ಕೈಯಲ್ಲಿ ಢಮರುಗ-ತ್ರಿಶೂಲ ಹಿಡಿದು ತಾಂಡವ ನೃತ್ಯವಾಡಲು ಸನ್ನದ್ಧನಾದಂತೆ ಆವಿರ್ಭವಿಸಿರುವ ಭವ್ಯ ಸನ್ನಿವೇಶದಲ್ಲಿ ಎದುರಿಗೆ ನಿಂತ ಭಕ್ತ, ದೇವನ ಅದ್ಭುತರೂಪವನ್ನು ಕಂಡು, ರೋಮಾಂಚಿತನಾಗಿ, ಅಷ್ಟೇ ಭಕ್ತಿ ಪರವಶನಾಗಿ ‘ರೂಪಮು ಚೂಚಿ ವಚ್ಚಿತೆನಿ…’-ಎಂದು ಮೈಮರೆತು ಹಾಡುತ್ತ-ಕುಣಿಯುತ್ತ ಮೈಮರೆಯುವ ದೃಶ್ಯ ಕಣ್ಣಾರೆ ಕಂಡಾಗ ನೋಡುಗರ ಕಣ್ಣಲ್ಲೂ ಭಾವಪರವಶತೆಯಿಂದ ನೀರಾಡಿತು.

ಇದು-ಬೆಂಗಳೂರಿನ ಪ್ರಖ್ಯಾತ ‘ವೈಷ್ಣವಿ ನಾಟ್ಯಶಾಲೆ’ಯ ಅಂತರರಾಷ್ಟ್ರೀಯ ನೃತ್ಯಪಟು-ನಾಟ್ಯಾಚಾರ್ಯ ವಿದ್ವಾನ್ ಮಿಥುನ್ ಶ್ಯಾಂ ಅವರ ನುರಿತ ಗರಡಿಯಲ್ಲಿ ಪಳಗಿದ ಶಿಷ್ಯ ಯಶಸ್ವಿ ಜಾಣ ಇತ್ತೀಚೆಗೆ ನಗರದ ಎ.ಡಿ.ಎ. ರಂಗಮಂದಿರದಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಿ ತನ್ನ ಅಂಗಶುದ್ಧ ಲವಲವಿಕೆಯ ನೃತ್ಯದೈಸಿರಿಯಿಂದ, ಪ್ರೌಢ ಅಭಿನಯದಿಂದ  ನೆರೆದ ರಸಿಕರೆಲ್ಲರ ಮನಸೆಳೆದು ‘ಭೇಷ್ ಜಾಣ ಕಲಾವಿದ’ ಎಂಬ ಮೆಚ್ಚುಗೆಗೆ ಪಾತ್ರನಾದ.

ಬಹುಮುಖ ಪ್ರತಿಭೆಯ ನೃತ್ಯಕಲಾವಿದ ಯಶಸ್ವಿ, ಅಂದು ಪ್ರಸ್ತುತಪಡಿಸಿದ ಕೃತಿಗಳೆಲ್ಲವೂ ವಿಶಿಷ್ಟವಾಗಿದ್ದವು ಹಾಗೂ ಅವನ ಪರಿಶ್ರಮ-ಬದ್ಧತೆಯ ನೃತ್ಯಾಭ್ಯಾಸಕ್ಕೆ ಕನ್ನಡಿ ಹಿಡಿದಿದ್ದವು. ಕಾಲಭೈರವಾಷ್ಟಕಂ, ಅಷ್ಟದಿಕ್ಕುಗಳಿಗೂ ಸಲ್ಲಿಸಿದ ನೃತ್ಯ ಸೂರ್ಯನಮಸ್ಕಾರಗಳು ಆಕರ್ಷಕವೆನಿಸಿದರೆ, ಯೋಗಭಂಗಿಗಳ ನೃತ್ಯವೈಖರಿ, ಗಣೇಶಸ್ತುತಿಯ ಆಂಗಿಕಾಭಿನಯ, ಅಲ್ಲರಿಪುವಿನ ಹಸ್ತಮುದ್ರೆ, ಜಾಮಿತ್ರಿಯ ಸಮಾನಕೋನಗಳಲ್ಲಿ ಬಿಂಬಿತವಾದ ಸುಮನೋಹರ ಭಂಗಿಗಳ ಸುಂದರನೋಟ, ಲೀಲಾಜಾಲ ಆಕಾಶಚಾರಿಗಳು, ಸಲೀಸಾದ ಮಂಡಿಯ  ಅಡವುಗಳು ಮತ್ತು ಪಾದವೈವಿಧ್ಯದ ಖಾಚಿತ್ಯ ಬೆರಗುಗೊಳಿಸಿತು. ಇಡೀರಂಗವನ್ನು ಬಳಸಿಕೊಂಡು ಶಾಸ್ತ್ರೀಯ ಚೌಕಟ್ಟಿನಲ್ಲಿ ಒಡಮೂಡಿದ ಕರಾರುವಾಕ್ಕಾದ ನೃತ್ಯಜಾಲಗಳ ಪರಿವೇಷದಲ್ಲಿ ಲೀಲಾಜಾಲವಾಗಿ ನರ್ತಿಸಿ, ತನ್ನ ತುಂಬು ಆತ್ಮವಿಶ್ವಾಸವನ್ನು ಮೆರೆದ ಯಶಸ್ವಿ, ನೋಡುಗರು ಕಣ್ಮಿಟುಕಿಸದಂತೆ ಅವರ ಗಮನವನ್ನು ಸೆರೆಹಿಡಿದುಕೊಂಡಿದ್ದನೆಂದರೆ ಅತಿಶಯೋಕ್ತಿಯಲ್ಲ.

ಸಂಕೀರ್ಣ ಜತಿಗಳು ಮೇಳೈವಿಸಿದ ‘ಜತಿಸ್ವರ’ವನ್ನು, ಲಯಪೂರ್ಣವಾಗಿ ಅತ್ಯಂತ ಸಮರ್ಥವಾಗಿ-ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಆನಂದದಾಯಕವಾಗಿತ್ತು. ಅಭಿನಯ ಪರಿಣತಿ ಮತ್ತು ತಾಳ-ಲಯಗಳ ಜ್ಞಾನಗಳನ್ನು ಪರೀಕ್ಷೆಗೆ ಒಡ್ಡುವ ಕ್ಲಿಷ್ಟಜತಿಗಳ ‘ವರ್ಣ’ದ ಸಾಕ್ಷಾತ್ಕಾರದಲ್ಲಿ ಯಶಸ್ವಿ, ಮಾರಕೋಟಿ ಸುಂದರನಾದ ಮನ್ಮಥರೂಪದ ಶಿವನನ್ನು ಸಾಕ್ಷಿಯಾಗಿರಿಸಿಕೊಂಡು ತನ್ನ ಭಕ್ತಿ ತಾದಾತ್ಮ್ಯವನ್ನು ಓತಪ್ರೋತವಾಗಿ ನಿವೇದಿಸುತ್ತ, ಭಕ್ತಿತುಂದಿಲನಾಗಿ ಶರಣ್ಯಭಾವವನ್ನು ಮನಮುಟ್ಟುವಂತೆ ಪ್ರದರ್ಶಿಸಿದ. ಶಿವನ ರೂಪವೈಶಿಷ್ಟ್ಯ-ಮಹಿಮೆಗಳನ್ನು ಬಿತ್ತರಿಸುವ ಸಂಕ್ಷಿಪ್ತ ಸಂಚಾರಿ ಕಥಾನಕಗಳಲ್ಲಿ ಸುಂದರೇಶ್ವರ, ಮಧುರೆ ಮೀನಾಕ್ಷಿಯರ ವಿವಾಹ, ಪರ್ವತ ನಂದಿನಿ ಪಾರ್ವತಿಯನ್ನು ಒಲಿದ ಪ್ರಸಂಗಗಳ ಸಂದರ್ಭದಲ್ಲಿ ಅಭಿವ್ಯಕ್ತವಾದ ಕಲಾವಿದನ ಪರಿಣಾಮಕಾರಿ ಅಭಿನಯ, ತೀವ್ರ ಸಂವೇದನಾ ಭಾವಪ್ರದರ್ಶನ ಆನಂದದಾಯಕವಾಗಿತ್ತು.

ಸಾಕ್ಷಾತ್ ನಟರಾಜನೇ ಕಲಾವಿದನಲ್ಲಿ ಆವಾಹನೆಗೊಂಡಂತೆ ಯಶಸ್ವಿ, ಢಮರುಗವನ್ನು ಗಡಗಡನೆ ಅಲುಗಾಡಿಸುತ್ತ ರಂಗದ ಉದ್ದಗಲಕ್ಕೂ ಆವೇಶದಿಂದ ತಾಂಡವ ನೃತ್ಯವನ್ನಾಡುತ್ತ ಶಿವ ಸಾಕ್ಷಾತ್ಕಾರ ಪಡೆದದ್ದು ನಿಜಕ್ಕೂ ರೋಚಕವಾಗಿತ್ತು. ಪ್ರತಿಹಂತದಲ್ಲೂ ಗುರು ಮಿಥುನರ ಶಕ್ತಿಶಾಲಿ ನಟುವಾಂಗದ ಝೇಂಕಾರ, ಕಲಾವಿದನಿಗೆ ಸ್ಫೂರ್ತಿ-ಪ್ರೇರಣೆಯನ್ನು ಒದಗಿಸಿತ್ತು. ಗಾಯಕ ಕಾರ್ತೀಕ್ ಹೆಬ್ಬಾರರ ಭಾವಪೂರ್ಣ ಗಾಯನ ಅನ್ಯಾದೃಶ ಅನುಭವವನ್ನು ಕಟ್ಟಿಕೊಟ್ಟರೆ, ಕಲಾವಿದನ ಸಂಪೂರ್ಣ ಪ್ರತಿಭೆಯ ಅನಾವರಣಕ್ಕೆ ಇಂಥ ಒಂದು ‘ವರ್ಣ’ ಸರಿಮಿಗಿಲೆನಿಸಿತು.

ಮುಂದೆ- ದಾಸಶ್ರೇಷ್ಠ ಶ್ರೀ ಪುರಂದರದಾಸರ ‘ದಾಸನ ಮಾಡಿಕೊ ಎನ್ನ’–ಭಾವತೀವ್ರತೆಯ ಗಾನಕ್ಕೆ ಹೆಜ್ಜೆಯಾದ ಯಶಸ್ವಿ, ಮೈಮರೆತು ಕುಣಿದು, ದಾಸರ ದಾಸನಾಗಿ ವಿನಮ್ರ ನೃತ್ಯಾರ್ಪಣೆ ಮಾಡಿದ್ದು ವಿಶೇಷವೆನಿಸಿತು. ತಂಬೂರಿಯನ್ನಾವರಿಸಿದ ಧೂಮ್ರ ಅಲೆಗಳ ಮಧ್ಯದಲ್ಲಿ ತೇಲುತ್ತ ನರ್ತಿಸಿದ ಕಲಾವಿದನ ಭಕ್ತಿಪಾರಮ್ಯ ರೋಮಾಂಚಗೊಳಿಸಿತು. ಭಕ್ತ ಪ್ರಹ್ಲಾದ ಮತ್ತು ಗಜೇಂದ್ರ ಮೋಕ್ಷದ ಪುಟ್ಟಸಂಚಾರಿಗಳು ಆಪ್ತವೆನಿಸಿದವು.

ಅನಂತರ-‘ದತ್ತಾತ್ರೇಯ’ನ ಮುಕುಟಪ್ರಾಯ ಸ್ತುತಿಗೆ ಒಂದು ಸುಂದರ ರೂಪಕದಂತಿದ್ದ ಸತೀ ಶಿರೋಮಣಿ ಅನಸೂಯದೇವಿಯ ಕಥಾಪ್ರಕರಣ ಹೃದಯಸ್ಪರ್ಶಿಯಾಗಿತ್ತು. ನೃತ್ಯಸಂಯೋಜಕ ಮಿಥುನರ ಪರಿಕಲ್ಪನೆ ಸೊಗಸನ್ನು ಚಿಮ್ಮಿದರೆ, ಕಲಾವಿದನ ಹೃದ್ಯ ಅಭಿನಯ ಪ್ರತಿಭೆ ಮಿಗಿಲೆನಿಸಿತು. ಅಂತ್ಯದಲ್ಲಿ ಸಂಭ್ರಮ-ಖುಷಿಗಳ ಆಗರ ‘ತಿಲ್ಲಾನ’ – ಕಲಾವಿದನ ಸಡಗರಾಭಿವ್ಯಕ್ತಿಗೆ ಆಡುಂಬೊಲವಾಗಿ ಪರಿಣಮಿಸಿತ್ತು. ಯಾಂತ್ರಿಕತೆಯನ್ನು ಮುರಿದ ಕಲಾವಿದ ಯಶಸ್ವಿಯ ನೃತ್ಯವಲ್ಲರಿಯ ಚೆಲುವು ಕಾರಂಜಿಯಾಗಿ ಮೇಲ್ಚಿಮ್ಮಿ ಸುತ್ತ ಆನಂದವರ್ಷವನ್ನು ಸುರಿಮಳೆಗರೆದಿತು. ಶಿಷ್ಯನ ಸಾಧನೆಯ ಹೆಜ್ಜೆಗಳನ್ನು ರೂಪಿಸುತ್ತ ಉತ್ಸಾಹ ತುಂಬುತ್ತಿದ್ದ ಗುರುಗಳ ಕಣ್ಣುಗಳಲ್ಲಿ ಆನಂದಾಶ್ರು ಸಾರ್ಥಕ್ಯದ ಭಾವವನ್ನು ಆಭಿವ್ಯಕ್ತಿಸಿತ್ತು.

‘ರಘುಪತಿ ರಾಘವ ರಾಜಾರಾಮ’-ನಿಗೆ ಸಮರ್ಪಿಸಿದ ‘ಮಂಗಳ’ದ ಚೆಂಬೆಳಕು ನೃತ್ಯ-ಗಾನಲಹರಿಯಲ್ಲಿ ಪಸರಿಸಿದ ಮನೋಜ್ಞ ನೋಟವನ್ನು ಕಣ್ತುಂಬಿಕೊಳ್ಳುತ್ತಿದ್ದ ರಸಿಕರು ಕೊನೆಯಲ್ಲಿ ಮೆಚ್ಚುಗೆಯಿಂದ ಮೇಲೆದ್ದು ನಿಂತು ಚಪ್ಪಾಳೆಯೊಂದಿಗೆ ದನಿಗೂಡಿಸಿದ್ದು ಅವಿಸ್ಮರಣೀಯ.                    *****************             

Related posts

Nrutyantar-Naman 22

YK Sandhya Sharma

ಹರ್ಷಿತಳ ಕಣ್ಮನ ತುಂಬಿದ ಆಹ್ಲಾದಕರ ‘ಕಥಕ್’ ವಿಲಾಸ

YK Sandhya Sharma

Sri Raksha Hegde- Rangapravesha Review

YK Sandhya Sharma

Leave a Comment

This site uses Akismet to reduce spam. Learn how your comment data is processed.