Image default
Dance Reviews

Ramya Sabhapathi Rangapravesha Review article

ನೃತ್ಯದಲ್ಲಿ ವಾಚಿಕಾಭಿನಯದ ಪ್ರಥಮ ಪ್ರಯೋಗ -ವೈಶಿಷ್ಟ್ಯ ಮೆರೆದ ರಮ್ಯನರ್ತನ

        ಭರತನಾಟ್ಯದ ಪ್ರಮುಖ ಲಕ್ಷಣವೆಂದರೆ  ಚತುರ್ವಿಧ ಅಭಿನಯದ ಅಭಿವ್ಯಕ್ತಿ. ಅವುಗಳೆಂದರೆ, ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕವೆಂಬ 4 ರೀತಿಯ ಅಭಿನಯವೇ ಆಗಿದ್ದು, ಇದನ್ನು ಚತುರ್ವಿಧ ಅಭಿನಯವೆನ್ನುತ್ತಾರೆ. ಇವುಗಳಲ್ಲಿ ನರ್ತಕರು ವೇದಿಕೆಯ ಮೇಲೆ ಮೂರು ರೀತಿಯ ಅಂಶಗಳನ್ನು ಮಾತ್ರ ಪ್ರದರ್ಶಿಸುತ್ತಾರೆ. ತಮ್ಮ ದೇಹದ ಅಂಗಾಗಳಿಂದ ಆಂಗಿಕಾಭಿನಯವನ್ನು, ವೇಷಭೂಷಣಗಳ ಸಹಾಯದಿಂದ ಆಹಾರ್ಯಾಭಿನಯವನ್ನು ಮತ್ತು ಆಂತರ್ಯದ ಭಾವ, ರಸಗಳಿಂದ ಕೃತಿಗಳನ್ವಯ ಸಾತ್ವಿಕಾಭಿನಯವನ್ನು ಪ್ರದರ್ಶಿಸುತ್ತಾರೆ. ಆದರೆ ವಾಚಿಕಾಭಿನಯವನ್ನು ಮಾತ್ರ ನರ್ತಕರು, ಸಂಗೀತ ವಾದ್ಯಗೋಷ್ಠಿಯ ಸಹಕಾರದಿಂದ ಅಂದರೆ ತಮ್ಮ ನೃತ್ಯವನ್ನು ಗಾನಮಾಧುರ್ಯದ ಸಾಂಗತ್ಯದಿಂದ ಸಾಕಾರಗೊಳಿಸುತ್ತಾರೆ. ಹೀಗಾಗಿ ವಾಚಿಕಾಭಿನಯದಲ್ಲಿ ಬಾಹ್ಯ ಸಹಾಯದ ಮೇಲೆ ಅವರು ಅವಲಂಬಿತರು. ಇದು ನಡೆದುಕೊಂಡು ಬಂದಿರುವ ರೀತಿ. ಇದು ಸಂಪ್ರದಾಯದಲ್ಲಿ ಒಪ್ಪಿತ ಕ್ರಮ ಕೂಡ. ನೃತ್ಯ ಕಲಾವಿದರು ಬಾಯಿ ಚಲನೆ ಅಥವಾ ಸಂಗೀತ ಹಾಡಿಕೊಂಡು ನರ್ತಿಸುವುದಿಲ್ಲ ಮಾತ್ರವಲ್ಲ, ತುಟಿಗಳನ್ನೂ ಚಲಿಸುವುದಿಲ್ಲ.

ಇಂಥ ಒಂದು ವಿಶಿಷ್ಟ ಸಂದರ್ಭ ಸೃಷ್ಟಿಯಾದದ್ದು, ಇತ್ತೀಚಿಗೆ ‘ಶ್ರೀಕೃಷ್ಣ ದೇವರಾಯ ಕಲಾಮಂದಿರ’ದಲ್ಲಿ ನಡೆದ ನಾಟ್ಯಗುರು ಪುಲಿಕೇಶೀ ಕಸ್ತೂರಿ ಅವರ ಶಿಷ್ಯೆ ರಮ್ಯಾ ಸಭಾಪತಿಯ ರಂಗಪ್ರವೇಶದಲ್ಲಿ ಮಿಂಚಿದ ‘ಪಾಂಚಾಲಿ ಶಪಥಂ’- ಕುರುಕ್ಷೇತ್ರ ಯುದ್ಧಕ್ಕೆ ನಾಂದಿಯಾದ ನಾಟಕೀಯ ಪ್ರಸಂಗದ ಆಯಾಮವೊಂದರಲ್ಲಿ ಕಲಾವಿದೆಯಿಂದ ವಾಚಿಕದ ಪ್ರಪ್ರಥಮ ಪ್ರಯೋಗ ಸಾಕ್ಷಾತ್ಕಾರಗೊಂಡು ರಸರೋಮಾಂಚವನ್ನು ಉಂಟುಮಾಡಿತು.

ಇದು ರಂಗಪ್ರವೇಶದ ‘ಹೈಲೈಟ್’ ಆಗಿತ್ತು. ಪ್ರಸ್ತುತಿಯ ಉತ್ತರಾರ್ಧದಲ್ಲಿ ರಮ್ಯಳ ಅಭಿನಯ ಚಾತುರ್ಯಕ್ಕೆ ಕನ್ನಡಿ ಹಿಡಿದ ದಿಟ್ಟನಾರಿ ‘ಪಾಂಚಾಲಿ ಶಪಥಂ’ -ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂತು.  ಪಾಂಡವರು-ಕೌರವರ ನಡುವೆ ಪಗಡೆಯಾಟದ ಪಂದ್ಯದ ದೃಶ್ಯವು ಕಣ್ಣಿಗೆ ಕಟ್ಟುವಂತೆ ಅಭಿನಯಿಸಿದ ಕಲಾವಿದೆ, ದುಶ್ಶಾಸನ ದ್ರೌಪದಿಯ ಮುಂದೆಲೆಯನ್ನು  ಹಿಡಿದು ಸಭೆಗೆ ಎಳೆತಂದಾಗ ಕ್ರೋಧಿತಳಾದ ಪಾಂಚಾಲಿ, ತನ್ನನ್ನು ಸೋತ ಗಂಡಂದಿರ ಷಂಡತನವನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಪ್ರತಿರೋಧದ ಬಗೆ ಬಹು ಶ್ಲಾಘನೀಯವಾಗಿದ್ದರೆ, ತುಂಬಿದ ಸಭೆಯಲ್ಲಿ ಆಕೆಯ ಬಾಯಿಂದ ಹೊರಟ ರೋಷಾವೇಷದ ಸಂಭಾಷಣೆಗಳು-ಆರ್ಭಟ ಅರಣ್ಯರೋಧನವೆನಿಸದೆ ಸಿಡಿದೆದ್ದ ಸ್ತ್ರೀಹೃದಯದ ಅಭಿವ್ಯಕ್ತಿ ಎಲ್ಲ ರಸಿಕರ ಮೆಚ್ಚುಗೆಯ ಉದ್ಗಾರ ಪಡೆದಿತ್ತು. ಪಾತ್ರವೇ ತಾನಾಗಿ ಆವಿರ್ಭಾವಗೊಂಡಿದ್ದ ಕಲಾವಿದೆ ಅತ್ಯುತ್ತಮ ಅಭಿನಯ ನೀಡಿದ್ದಳು. ನಾಟಕೀಯ ಆಯಾಮದಲ್ಲಿ ಮಿಂಚಿದ ದ್ರೌಪದಿಯ ಸುತ್ತ ಹೆಣೆದ ಕೃತಿ ಕಲಾವಿದೆಯ ವಿಶೇಷ ಪ್ರತಿಭೆಯನ್ನು ಎತ್ತಿ ಹಿಡಿಯಿತು.

ರಂಗದ ಮೇಲೆ ರಮ್ಯಳ ಪ್ರಥಮ ಪ್ರವೇಶ ಇದು ಎನಿಸದಷ್ಟು ಪಳಗಿದ ಸುಮನೋಹರ ನರ್ತನ ಅವಳದಾಗಿತ್ತು. ಕೃತಿಗಳ ಆಯ್ಕೆಯೂ ವಿಶಿಷ್ಟವಾಗಿತ್ತು. ನೃತ್ಯ ಪ್ರಸ್ತುತಿಯ ಶುಭಾರಂಭದಲ್ಲಿ ವಿಶೇಷವಾದ ‘ಮಲ್ಲಾರಿ’ಯನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದಳು. ‘ಮಲ್ಲಾರಿ’ ಎಂಬುದು ಸಾಮಾನ್ಯವಾಗಿ ಹಿಂದೆ ದೇವಾಲಯಗಳ ಉತ್ಸವಗಳಲ್ಲಿ ನರ್ತಕಿಯರು ಸಾಂಪ್ರದಾಯಕವಾಗಿ ಮೆರವಣಿಗೆಯಲ್ಲಿ ಸಾಗುತ್ತಲೇ ನರ್ತಿಸುತ್ತ ದೇವಾಲಯದ ಅಷ್ಟದಿಕ್ಕುಗಳಿಗೂ ನಾದಸ್ವರದ ಜೊತೆ ನೃತ್ತನಮನಗಳನ್ನು ಸಲ್ಲಿಸುತ್ತಿದ್ದ ನೃತ್ಯಸೇವೆ ಇದಾಗಿತ್ತು. ರಮ್ಯಾ, ಒಂದೇ ಪಲ್ಲವಿಯನ್ನು 1, 2 ಮತ್ತು 3 ನೇ ಕಾಲದಲ್ಲಿ ನಗುಮೊಗದಿಂದ ನಿರೂಪಿಸಿದ್ದು ವಿಶೇಷವಾಗಿತ್ತು. ಎಲ್ಲ ಕೃತಿಗಳ ನರ್ತನದಲ್ಲೂ ಕಲಾವಿದೆಯ ನವಿರಾದ ಧಾವಂತವಿಲ್ಲದ ನಾಜೂಕಿನ ಹೆಜ್ಜೆಗಳು, ರಮ್ಯ, ಲಾಸ್ಯಭಾವ -ಕೋಮಲತೆ ಎದ್ದುಕಂಡವು.

ಆತ್ಮವಿಶ್ವಾಸದಿಂದ ನರ್ತಿಸುತ್ತಿದ್ದ ಕಲಾವಿದೆ, ಶಾಸ್ತ್ರೀಯ ಚೌಕಟ್ಟಿನಲ್ಲಿ ಅಂಗಶುದ್ಧತೆಯ ಮೆರುಗಿನಲ್ಲಿ, ವಿಭಿನ್ನತೆಯಿಂದ ಕೂಡಿದ ಚಂದ್ರಕೌನ್ಸ್ ರಾಗದ ಪುಲಿಕೇಶೀ ಸಂಯೋಜಿತ ಜಟಿಲವಾದ ‘ಜತಿಸ್ವರ’ವನ್ನು ಸರಾಗವಾಗಿ ನಿಭಾಯಿಸಿದಳು. ಆಕೆಯ ಒನಪಿನ ಅಂಗಚಲನೆ, ಕಣ್ಮನ ಸೆಳೆದ ಹಸ್ತಮುದ್ರಿಕೆ, ಮನಮೋಹಕ ನೃತ್ತಮಂಜರಿಗಳು ಸೊಬಗಿನಿಂದ ಕೂಡಿದ್ದವು. ಸ್ವರಗಳ ಅಭಿವ್ಯಕ್ತಿಗೆ ಇರುವ ಸಾಧ್ಯತೆಗಳನ್ನೆಲ್ಲ ಬಳಸಿಕೊಂಡಳು. ಮುಂದೆ ತ್ಯಾಗರಾಜ ವಿರಚಿತ ಕೃತಿ – ‘ಕಮಲಾಬ್ಧ ಕುಲ ಕಲಶಾಬ್ಧಿಚಂದ್ರ’ನನ್ನು ಆಹ್ಲಾದಕರವಾಗಿ, ದೈವೀಕ ಪ್ರಭೆಯಿಂದ ಸಾಕಾರಗೊಳಿಸಿದಳು. ಶ್ರೀರಾಮನ ಸಾತ್ವಿಕ ವ್ಯಕ್ತಿತ್ವವನ್ನು ಕಮನೀಯವಾಗಿ ಕಟ್ಟಿ ಕೊಟ್ಟ ಕಲಾವಿದೆ, ಅವನ ಸೌಮ್ಯರೂಪದ ಅನುಪಮ ಭಂಗಿಯನ್ನು ಕಣ್ಮುಂದೆ ತಂದು ನಿಲ್ಲಿಸಿದಳು.

ಪ್ರಸ್ತುತಿಯ ಹೃದಯ ಭಾಗ, ಅಷ್ಟೇ ಹೃದ್ಯವೂ ಆದ ‘ವರ್ಣ’ ( ರಚನೆ- ಮಧುರೈ ಮುರಳೀಧರನ್) ವನ್ನು ರಮ್ಯಾ, ತನ್ನ ಸುಮನೋಹರ ಅಭಿನಯ ಮತ್ತು ನೃತ್ತಾಭರಣಗಳಿಂದ ಸಿಂಗರಿಸಿ ಭಕ್ತಿ ತಾದಾತ್ಮ್ಯದಿಂದ ಅರ್ಪಿಸಿದಳು. ‘ಕೊಂಜು ಸಲಂಗೈ …’ಎಂದು ಸ್ತುತಿಗೊಂಡ ನಟರಾಜನನ್ನು ಕುರಿತ ಭಕ್ತಿಪ್ರಧಾನ ವರ್ಣವನ್ನು ಪರಿಣಾಮಕಾರಿಯಾಗಿ ನಿರೂಪಿಸಿದಳು. ಶಂಕರನ ಸ್ವರೂಪ ವೈಶಿಷ್ಟ್ಯ-ವಿಶೇಷತೆಗಳನ್ನು, ಶಂಕರನ ತಾಂಡವ ಹೆಜ್ಜೆಗಳ ಭೈರವತೆ ಹಾಗೂ ಪಂಚಭೂತದ ತನ್ನ ಸೊಬಗಿನ ಆಂಗಿಕಾಭಿನಯ -ಅಭಿನಯ ಪ್ರತಿಭೆಯನ್ನು ಪ್ರದರ್ಶಿಸಿದಳು. ನಡುನಡುವೆ ಝೇಂಕರಿಸಿದ ಗುರು ಪುಲಿಕೇಶಿಯವರ ಸ್ಫುಟವಾದ ಕಂಠಸಿರಿಯ ನಟುವಾಂಗಕ್ಕನುಗುಣ ಅವಳ ನೃತ್ತ ಸಲಿಲ ಭೋರ್ಗರೆಯಿತು.   

ಅನಂತರ-ಮೈಸೂರು ವಾಸುದೇವಾಚಾರ್ಯರು ರಚಿಸಿದ ‘ಜಾವಳಿ’- ನಾಯಕ-ನಾಯಕಿಯರ ಶೃಂಗಾರ- ಹುಸಿಮುನಿಸ ಭಾವಪೂರಿತ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬಂತು. ಮುಂದೆ- ನಟನಂ ನಟೇಶನ ವಿವಿಧ ನೃತ್ಯವೈಭವದ ಮಜಲುಗಳನ್ನು ತನ್ನ ಹರಿತ ನೃತ್ತಗಳ ಓಳಿಯಿಂದ, ಸಲೀಸಾದ ಆಕಾಶಚಾರಿಗಳಿಂದ ನಿರೂಪಿಸಿದಳು. ಮಿಂಚಿನ ಸಂಚಾರದ ನೃತ್ತಗಳ ಮೇಳ, ಪಾದಭೇದಗಳ ಸೊಗಸಿನಿಂದ ಕೂಡಿದ ‘ತಿಲ್ಲಾನ’ದೊಂದಿಗೆ ಪ್ರಸ್ತುತಿ ಸಂಪನ್ನವಾಯಿತು. ರಂಗಪ್ರವೇಶದ ಉತ್ತಮ ವೇದಿಕೆಯ ಮೇಲೆ  ರಮ್ಯಾ ಸಭಾಪತಿ ಭರವಸೆಯ ಕಲಾವಿದೆಯಾಗಿ ಹೊರಹೊಮ್ಮಿದಳು.

ರಮ್ಯಳ ನೃತ್ಯದ ಸೊಬಗನ್ನು ಕಂಗೊಳಿಸಿದ ಗಾಯನ-ವಾದ್ಯಗೋಷ್ಠಿ ಸ್ತುತ್ಯಾರ್ಹ. ಗಾಯನ- ನಂದಕುಮಾರ್ ಉನ್ನಿ ಕೃಷ್ಣನ್, ಮೃದಂಗ- ಭವಾನಿ ಶಂಕರ್, ವಯೊಲಿನ್- ಹೇಮಂತ್ ಕುಮಾರ್, ಕೊಳಲು- ನಿತೀಶ್ ಅಮ್ಮಣ್ಣಯ್ಯ, ರಿದಂ ಪ್ಯಾಡ್-ಕಾರ್ತೀಕ್ ವೈಧಾತ್ರಿ ಮತ್ತು ನಟುವಾಂಗದ ಸಾಂಗತ್ಯ-ಗುರು ಪುಲಿಕೇಶೀ ಕಸ್ತೂರಿ.

                               ****************  

Related posts

Natarang School of Dance-Nrityaavishkaar-

YK Sandhya Sharma

ಪ್ರೌಢ ಅಭಿನಯದ ಸೊಗಸಾದ ನರ್ತನ

YK Sandhya Sharma

ಕಣ್ಮನ ತುಂಬಿದ ಪವಿತ್ರ ಪ್ರಿಯಳ ಭಾವಸ್ಫುರಣ ನೃತ್ಯ

YK Sandhya Sharma

Leave a Comment

This site uses Akismet to reduce spam. Learn how your comment data is processed.